ಭಕ್ತಿ-ಜ್ಯೋತಿಷ್ಯ

ಎಂಥ ಮಹಿಮನೋ ಇವನು

॥ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೆ॥


'ಕಲಿಯುಗದ ಕಲ್ಪತರು', 'ಕಾಮಧೇನು' ಎಂದೇ ಹೆಸರಾಗಿ ಭಕ್ತರ ಇಷ್ಟಾರ್ಥಗಳನ್ನು ಇಂದಿಗೂ ವೃಂದಾವನಸ್ಥ್ಥರಾಗಿಯೇ ಈಡೇರಿಸುತ್ತಿರುವ ಮಹಾಮಹಿಮರು ರಾಘವೇಂದ್ರ ಸ್ವಾಮಿಗಳು. ಅವರು ಯತಿಗಳಾಗಿ ದಾಸ ಸಾಹಿತ್ಯವನ್ನು ಪೋಷಿಸಿದವರಾಗಿದ್ದಾರೆ. 'ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲಿ ರಾಘಪ್ಪ' ಎಂಬೊಂದು ನುಡಿ ಜನಜನಿತವಾಗುವಷ್ಟು ಜಾತ್ಯಾತೀತ ಜನಪ್ರಿಯತೆಯನ್ನು ಪಡೆದ ಈ ಗುರುಗಳ ವಂಶಸ್ಥರು ಕುಂಭಕೋಣಂನವರು. ಇವರ ಪೂರ್ವಜರಲ್ಲೊಬ್ಬರಾದ ವೀಣಾ ಕೃಷ್ಣಭಟ್ಟರೆಂಬ ವಿದ್ವಾಂಸರು ಕೃಷ್ಣ ದೇವರಾಯನ ಆಸ್ಥಾನದಲ್ಲಿ (ಕ್ರಿ.ಶ. 1519-30) ವಿದ್ವಾಂಸರಾಗಿ ನೆಲೆನಿಂತವರು. ಅವರ ಮಗ ಕನಕಾಚಲಭಟ್ಟ, ಇವರ ಮಗ ತಿಮ್ಮಣ್ಣ ಭಟ್ಟನೇ ರಾಘವೇಂದ್ರ ಸ್ವಾಮಿಗಳ ತಂದೆ, ತಾಯಿ ಗೋಪಮ್ಮ, ತಿರುಪತಿ ವೆಂಕಟೇಶನ ಕೃಪೆಯಿಂದ ಜನಿಸಿದ ಮಗನಿಗೆ ವೆಂಕಟ ಭಟ್ಟನೆಂದು ನಾಮಕರಣ ಮಾಡುತ್ತಾರೆ.
ಮಾಧ್ವರಲ್ಲಿಯೂ ಭಟ್ಟ, ಶಾಸ್ತ್ರಿಗಳೆಂಬ ಹೆಸರುಗಳು ಆಗ ಚಾಲ್ತಿಯಲ್ಲಿದ್ದವು. ಮಧ್ವಾಚಾರ್ಯರ ತಂದೆ ಹೆಸರು ಕೂಡಾ ಮಧ್ಯಗೇಹ ಭಟ್ಟ. ಭಟ್ಟ, ಶಾಸ್ತ್ರಿ, ಅವಧಾನಿ, ಆಚಾರ್ಯ ಮುಂತಾದ ಹೆಸರಗಳಲ್ಲಿ ಆಚಾರ್ಯ ಎಂಬುದು ಈಗ ಮುಂದುವರೆದುಕೊಂಡು ಬಂದಿದೆ.
ತಿಮ್ಮಣ್ಣ ಭಟ್ಟರು ಭುವನಗಿರಿಯಲ್ಲಿ ನೆಲೆಸಿದ್ದಾಗ ಸುಧೀಂದ್ರ ತೀರ್ಥರು ನಡೆಸುತ್ತಿದ್ದ ವಿಜಯೀಂದ್ರರ ಮಹಾಸಮಾರಾಧನೆಗೆ ಬರುತ್ತಾರೆ. ವೆಂಕಟ ಭಟ್ಟನನ್ನು ನೋಡಿದ ಗುರುಗಳು ಈತ ಮುಂದೆ ಮಹಿಮಾಪುರುಷನಾಗುತ್ತಾನೆ ಎಂದು ಭವಿಷ್ಯವನ್ನು ನುಡಿಯುತ್ತಾರೆ. ಮಧುರೆಯಲ್ಲಿ ಭಾವ ಲಕ್ಷ್ಮಿ ನರಸಿಂಹಾಚಾರ್ಯರಲ್ಲಿ ವಿದ್ಯೆ ಕಲಿಯಲು ವೆಂಕಟ ಭಟ್ಟನನ್ನು ಅಣ್ಣ ಗುರುರಾಜ ಕಳುಹಿಸಿದನು. ಅವರಲ್ಲಿ ತರ್ಕ-ವೇದಾಂತ-ವ್ಯಾಕರಣಗಳನ್ನು 18 ವರ್ಷಗಳ ತನಕ ಕಲಿತು ಸುಧಾಪಾಠಕ್ಕೆಂದು ಕುಂಭಕೋಣಂಗೆ ಸುಧೀಂದ್ರರ ಬಳಿ ಬರುತ್ತಾರೆ.
ಮಿತಭಾಷಿಯಾಗಿದ್ದ ವೆಂಕಟಭಟ್ಟರು ಅಧ್ಯಯನದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಸುಧಾಗ್ರಂಥ ಕೆಲವು ಅಂಶಗಳನ್ನೇ ಪರಿಷ್ಕರಿಸಿ 'ಪರಿಮಳಾ' ಎಂಬ ಗ್ರಂಥವನ್ನು ಆಗಿನಿಂದಲೇ ರಚಿಸತೊಡಗಿದರು. ಸಹಪಾಠಿಗಳು ಇವರ ಮೇಲೆ ವೃಥಾ ಕೋಪ ಮಾಡಿದಾಗ ಗುರುಗಳು, 'ಸಮಯ ಬಂದಾಗ ನೋಡೋಣ' ಎನ್ನುತ್ತಾರೆ. ಒಂದು ದಿನ ಸಂದಿಗ್ಧ ವಿಷಯವನ್ನು ಅರ್ಧಕ್ಕೆ ಬಿಡುತ್ತಾರೆ. ನಾಳೆ ಮುಂದುವರೆಸೋಣ ಎನ್ನುತ್ತಾರೆ. ರಾತ್ರಿ ಎಲ್ಲ ವಿದ್ಯಾರ್ಥಿಗಳ ಬಳಿ ಬಂದವರಿಗೆ ವೆಂಕಟ ಭಟ್ಟರು ಬರೆದಿಟ್ಟ ಗ್ರಂಥ ಕಣ್ಣಿಗೆ ಬೀಳುತ್ತದೆ. ತಾವು ಅರ್ಧಕ್ಕೆ ಬಿಟ್ಟ ವಾಕ್ಯವನ್ನು ಪೂರ್ಣಗೊಳಿಸಿದ್ದನ್ನು ಕಾಣುತ್ತಾರೆ. ಮರುದಿನ ಪಾಠದ ಸಮಯದಲ್ಲಿ ಶಿಷ್ಯನ ಪಾಂಡಿತ್ಯವನ್ನು ಉಳಿದ ಶಿಷ್ಯರಿಗೆ ಪರಿಚಯಿಸಿ ಅವರ ಬಾಯಿ ಮುಚ್ಚಿಸುತ್ತಾರೆ. ಮುಂದೆ ಸುಧಾ ಮಂಗಳ ಕಾಲದಲ್ಲಿ 'ಪರಿಮಳಾಚಾರ್ಯ' ಬಿರುದನ್ನಿತ್ತು ಅನುಗ್ರಹಿಸುತ್ತಾರೆ. ವ್ಯಾಕರಣ ಮಹಾಭಾಷ್ಯದಲ್ಲಿ ಪಡೆದ ಪಾಂಡಿತ್ಯವನ್ನು ಕಂಡು 'ಮಹಾಭಾಷ್ಯಾಚಾರ್ಯ' ಎಂಬ ಬಿರುದನ್ನು ಕೊಡುತ್ತಾರೆ.
ವಾಗ್ದೇವಿಯ ಪ್ರೇರಣೆ
ಸರಸ್ವತಿ ಎಂಬುವವಳನ್ನು ವಿವಾಹವಾದ ವೆಂಕಟಭಟ್ಟರು ವಿದ್ವಾಂಸರಾದರೂ ಬಡತನದ ಬದುಕನ್ನು ಸಾಗಿಸಿದವರು. ತಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿಷ್ಯರ ಜವಾಬ್ದಾರಿಯೂ ಇವರದಾಗಿತ್ತು. ಆದ್ದರಿಂದ ದ್ರವ್ಯಾರ್ಜನೆಗೆಂದು ಸಂಚಾರ ಹೊರಟಾಗ ಒಂದು ಊರಿನ ನ್ಯಾಯಾಧಿಪತಿಯ ಮನೆಯಲ್ಲಿ ಸಮಾರಾಧನೆ ನಡೆಯುತ್ತಿರುತ್ತದೆ. ಇವರ ವೇಷ ನೋಡಿ ಆಕಸ್ಮಿಕವಾಗಿ ಗಂಧ ತೇಯುವಾಗ ಅಗ್ನಿ ಸೂಕ್ತ ಪಠಿಸಿ ಗಂಧವನ್ನು ತೇಯ್ದು ಕೊಟ್ಟಾಗ ಅದನ್ನು ಲೇಪಿಸಿಕೊಂಡವರ ಮೈಮೇಲಿನ ಬೊಬ್ಬೆಗಳು ಇಲ್ಲವಾಗುತ್ತವೆ.
ಮುಂದೆ ಜೀವನ ನಿರ್ವಹಣೆ ಅಸಾಧ್ಯವಾದಾಗ ಭುವನಗಿರಿಯನ್ನು ಬಿಟ್ಟು ಕುಂಭಕೋಣಂಗೆ ಸುಧೀಂದ್ರರ ಬಳಿ ಬರುತ್ತಾರೆ. ಗುರುಗಳು ಆಶ್ರಮ ಸ್ವೀಕರಿಸುವಂತೆ ಸೂಚಿಸಿದಾಗ ನಿರಾಕರಿಸುತ್ತಾರೆ. ಆದರೆ ಸ್ವಪ್ನದಲ್ಲಿ ವಾಗ್ದೇವಿ ಬಂದು ಒಪ್ಪಿಕೊಳ್ಳುವಂತೆ ಸೂಚಿಸುತ್ತಾಳೆ.
ಶಾಲಿವಾಹನ ಶಕೆ 1545 (ಕ್ರಿ.ಶ 1613) ರುಧಿರೋದ್ಗಾರಿ ಸಂವತ್ಸರ ಫಾಲ್ಗುಣ ಶುದ್ಧ ದ್ವಿತೀಯಾದಂದು ಸನ್ಯಾಸಾಶ್ರಮ ನೀಡಿದ ಸುಧೀಂದ್ರರು,  ರಾಘವೇಂದ್ರತೀರ್ಥರೆಂದು ನಾಮಕರಣ ಮಾಡಿದರು. ತಂಜಾವೂರಿನಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ನಂತರ ಸುಧೀಂದ್ರರು ಹಂಪೆಗೆ ಬಂದು ಕೊನೆ ದಿನಗಳನ್ನು ಆನೆಗುಂದಿ ಬಲಿ ಕಳೆದು ಅಲ್ಲಿಯೇ ವೃಂದಾವನಸ್ಥರಾದರು. ಅಂದಿನಿಂದ ಆ ನಡುಗಡ್ಡೆಗೆ ನವವೃಂದಾವನವೆಂಬ ಹೆಸರು ಬಂತು. 9 ಯತಿಗಳು ವೃಂದಾವನಸ್ಥರಾದ ಪವಿತ್ರ ಸ್ಥಳ ಅದು. ಅವರೆಂದರೆ 1.ಪದ್ಮನಾಭತೀರ್ಥರು 2. ಮಾಧವತೀರ್ಥರು 3. ಕವೀಂದ್ರರು 4. ವಾಗೀಶರು 5. ಜಯತೀರ್ಥರು 6. ಗೋವಿಂದತೀರ್ಥರು 7. ವ್ಯಾಸತೀರ್ಥರು, 8. ಶ್ರೀನಿವಾಸತೀರ್ಥರು, 9. ಶ್ರೀಸುಧೀಂದ್ರ ತೀರ್ಥರು.

ಹರಿದಾಸ ಸಾಹಿತ್ಯದ ಪ್ರೇರಕ
ಪತಿಯ ಆಶ್ರಮ ಸ್ವೀಕಾರದ ಸುದ್ದಿ ಕೇಳಿದ ಪತ್ನಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಪಿಶಾಚಿಯಾಗಿ ಅಲೆಯುತ್ತಾಳೆ. ರಾಘವೇಂದ್ರರೇ ಅವಳಿಗೆ ಆ ಸ್ಥಿತಿಯಿಂದ ಮುಕ್ತಿ ಕೊಡುತ್ತಾರೆ. ಇಂಥ ರಾಘವೇಂದ್ರ ತೀರ್ಥರು ಹರಿದಾಸ ಸಾಹಿತ್ಯ ಉಳಿದು ಬೆಳೆದುಕೊಂಡು ಬರಲು ಪ್ರೇರಕ ಶಕ್ತಿಯಾಗಿ ನಿಂತರು. 'ಧೀರವೇಣುಗೋಲ' ಅಂಕಿತದಿಂದ ತಾವೇ ಸ್ವತಃ 'ಇಂದು ಎನಗೆ ಗೋವಿಂದ' ಎಂಬ ಕೀರ್ತನೆಯನ್ನು ರಚಿಸಿ, ಹಾಡಿದರು. ವಿಜಯದಾಸರಾದಿಯಾಗಿ ಮುಂದಿನ ಎಲ್ಲ ಹರಿದಾಸರಿಗೂ ರಾಯರ ಅನುಗ್ರಹ, ಪ್ರೇರಣೆಗಳು ದೊರೆತು ದಾಸಸಾಹಿತ್ಯ ವಾಹಿನಿ ಮೈತುಂಬಿಕೊಂಡು ಹರಿಯಲಾರಂಭಿಸಿತು.

ಮಹಿಮೆಗಳು ಒಂದೆರಡಲ್ಲ
ರಾಯರ ಕುರಿತು ಮಹಿಮಾ ವೃತ್ತಾಂತಗಳು ಇಂದಿಗೂ ಕೇಳಿ ಬರುತ್ತವೆ. ವೆಂಕಣ್ಣ ಎಂಬ ಅನಕ್ಷರಸ್ಥ ಗುರುಗಳ ಅನುಗ್ರಹದಿಂದ ಅಸದುಲ್ಲಾಖಾನ ಎಂಬ ಸುಬೇದಾರ ಕೊಟ್ಟ ಪತ್ರವನ್ನು ತನಗರಿಯದಂತೆ ಓದಿ ಬಿಡುತ್ತಾನೆ. ಬ್ರಾಹ್ಮಣನಾಗಿ ಓದದಿದ್ದರೆ ಆನೆಯ ಕಾಲಿನಿಂದ ತುಳಿಸಿ ಬಿಡುತ್ತೇನೆ ಎಂಬ ಬೆದರಿಕೆ ಬೇರೆ ಆ ಸುಬೇದಾರನಿಂದ ಬಂದಿರುತ್ತದೆ. ನವಾಬ ಯುದ್ಧದಲ್ಲಿ ಗೆದ್ದ ಶುಭ ಸುದ್ದಿ ಓದಿದ್ದರಿಂದ ವೆಂಕಣ್ಣನನ್ನು ದಿವಾನನಾಗಿಸಿಬಿಡುತ್ತಾನೆ.
ಮತ್ತೊಬ್ಬ ಬ್ರಾಹ್ಮಣ ರಾಯರು ಕೊಟ್ಟ ಮೃತ್ತಿಕೆಯಿಂದ ಭೂತವನ್ನು ಓಡಿಸಿ, ಜಮೀನ್ದಾರನ ಸಂತಾನಕ್ಕೆ ಬಂದಿದ್ದ ಗಂಡಾಂತರವನ್ನು ದೂರ ಮಾಡಿ ಅವನ ಅಣ್ಣನ ಮಗಳನ್ನೇ ಮದುವೆಯಾಗಿ ತನ್ನ ಬಯಕೆಯಂತೆ ಶ್ರೀಮಂತನಾಗುತ್ತಾನೆ. ಅಚಲವಾದ ಶ್ರದ್ಧೆ-ನಂಬಿಕೆ-ವಿಶ್ವಸ ಹಾಗೂ ಗುರುಗಳ ಕರುಣೆ ಸೇರಿದರೆ ದೈವಾನುಗ್ರಹ ಪ್ರಾಪ್ತಿ ಖಂಡಿತ ಎಂಬುದಕ್ಕೆ ಇಂತ ಹಲವಾರು ಉದಾಹರಣೆಗಳು ನಮ್ಮಲ್ಲಿ ಕಂಡುಬರುತ್ತವೆ. ಸೀಕರಣೆಯ ತೊಟ್ಟಿಯಲ್ಲಿ ಬಿದ್ದ ದೇಸಾಯಿಯ ಮಗನನ್ನು ರಾಘವೇಂದ್ರರು ಬದುಕಿಸಿದ ಬಗ್ಗೆ ಕೂಡಾ ವಿವರಗಳು ಲಭ್ಯವಿವೆ.
ಚೂತಫಲರಸದಿ ಪೋತ ಮುಳುಗೆ ಮೃತಿ
ಭೀತಿಯ ಬಿಡಿಸಿದ ನಾಥಜನಾಪ್ತ ರಾಘವೇಂದ್ರ
ಎಂಬ ಜಗನ್ನಾಥದಾಸರ ರಚನೆ ಇದನ್ನು ಸ್ಪಷ್ಟಪಡಿಸುತ್ತದೆ.
ಅಸದುಲ್ಲಾ ಖಾನನು ಗುರುಗಳ ದರ್ಶನಕ್ಕೆ ದಿವಾನ ವೆಂಕಣ್ಣನ ಅಪೇಕ್ಷೆಯ ಮೇರೆಗೆ ಬರುತ್ತಾನೆ. ಗುರುಗಳನ್ನು ಪರೀಕ್ಷಿಸಲೆಂಬಂತೆ ಕುರಿ ಮಾಂಸವನ್ನು ತಟ್ಟೆಯಲ್ಲಿ ಮುಚ್ಚಿಡಿಸಿ ತರುತ್ತಾನೆ. ತಮ್ಮ ಕಮಂಡಲದಲ್ಲಿನ ನೀರನ್ನು ಪ್ರೋಕ್ಷಿಸುತ್ತಾರೆ, ರಾಘವೇಂದ್ರರು. ತಟ್ಟೆಯನ್ನು ತೆರೆದಾಗ ಅವೆಲ್ಲ ಫಲ-ಪುಷ್ಪಗಳಾಗಿರುತ್ತವೆ. ಗುರುಗಳು ಕೇಳಿದ್ದನ್ನು ಹೇಳುತ್ತಾರೆ. ಮಂಚಾಲಮ್ಮ ನಮ್ಮ ಕುಲ ದೇವತೆ, ಪ್ರಲ್ಹಾದರು ಯಾಗ ಮಾಡಿದ ಸ್ಥಳ, ಆ ಯಜ್ಞಕುಂಡವಿದ್ದ ಸ್ಥಳದಲ್ಲೇ ನನ್ನ ವೃಂದಾವನವಾಗಬೇಕು ಎಂದು ವೆಂಕಣ್ಣನಿಗೆ ಹೇಳುತ್ತಾರೆ.
ಶಾಲಿವಾಹನ ಶಕೆ 1593 (ಕ್ರಿ.ಶ 1671) ಶ್ರಾವಣ ಬಹುಳ ದ್ವಿತೀಯಾ ಗುರುವಾರದಂದು ವೃಂದಾವನಸ್ಥ್ಥರಾಗುತ್ತಾರೆ. ಯೋಗೀಂದ್ರರನ್ನು ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ. ಸಜೀವವಾಗಿ ವೃಂದಾವನ ಪ್ರವೇಶ ಮಾಡಿದ ಗುರುಗಳು, ಇಂದಿಗೂ ನಂಬಿದ ಭಕ್ತರನ್ನು ಉದ್ದರಿಸುತ್ತಿದ್ದಾರೆ.
700 ವರ್ಷಗಳ ಕಾಲ ವೃಂದಾವನದೊಳಗಿನಿಂದಲೇ ಭಕ್ತರ ಉದ್ಧಾರ ಮಾಡುವರೆಂಬುದಕ್ಕೆ ಸಾಕ್ಷಿಯಾಗಿ 700 ಸಾಲಿಗ್ರಾಮಗಳನ್ನು ವೃಂದಾವನದಲ್ಲಿ ಇರಿಸಲು ಹೇಳುತ್ತಾರೆ. ಅವರ ಪಟ್ಟ ಶಿಷ್ಯರಾದ ಬಿಚ್ಚಲೆ ಅಪ್ಪಣ್ಣಾಚಾರ್ಯರು ಗುರುಗಳು ವೃಂದಾವನ ಪ್ರವೇಶ ಮಾಡುವ ಸುದ್ದಿ ಕೇಳಿದೊಡನೆ ಶ್ರೀಪೂರ್ಣಬೋಧ ಗುರುತೀರ್ಥ ಎಂದು ಗುರುಗಳನ್ನು ಸ್ತುತಿಸುತ್ತಾ ಬರುತ್ತಾರೆ. ಬೃಂದಾವನದ ದರ್ಶನವಾಗುತ್ತಲೇ ಸ್ತೋತ್ರವು ಕೀರ್ತಿದಿಗ್ವಿದಿತಾ ವಿಭೂತಿರತುಲಾ ಎಂಬಲ್ಲಿಗೆ ನಿಂತುಬಿಡುತ್ತದೆ. ಗುರುಗಳು 'ಸಾಕ್ಷಿ ಹಯಾಸ್ಸೋತ್ರಹಿ' ಎಂದು ವೃಂದಾವನದ ಒಳಗಿನಿಂದಲೇ ಆ ಸ್ತೋತ್ರವನ್ನು ಪೂರ್ತಿ ಮಾಡುತ್ತಾರೆ.
ಇಂಥ ರಾಘವೇಂದ್ರ ತೀರ್ಥರು ದಾಸಸಾಹಿತ್ಯದ 2ನೇ ಹಂತದ ಮೂಲ ಪ್ರೇರಕ ಶಕ್ತಿಯಾಗಿದ್ದಾರೆ. ನಂತರದ ಪ್ರತಿಯೊಬ್ಬ ಹರಿದಾಸರೂ ಇವರನ್ನು ಹಾಡಿಹೊಗಳಿದ್ದಾರೆ, ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. 'ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ' ಎಂಬ ಜಗನ್ನಾಥದಾಸರ ರಚನೆಯ ಸಾಲು ಅವರಿಗೆ ಈ ಗುರುಗಳು ದರ್ಶನ ಕೊಟ್ಟದ್ದನ್ನು ಸೂಚಿಸುತ್ತದೆ. ಪ್ರಲ್ಹಾದ-ವ್ಯಾಸ-ರಾಘವೇಂದ್ರ ಎಂದು ಮೂರು ಅವತಾರಗಳಲ್ಲಿ ಬಂದು ಭಕ್ತರನ್ನು ಉದ್ಧರಿಸಿ ಧರ್ಮರಾಜ್ಯ ಸ್ಥಾಪಿಸಿದ ಮಹಾಮಹಿಮರು ಇವರಾಗಿದ್ದಾರೆ.

ಮನ್ರೊ ವೃತ್ತಾಂತ
ಬ್ರಿಟಿಷ್ ಅಧಿಕಾರಿಯಾದ ಮನ್ರೊ ಮಠದ ಜಹಗೀರನ್ನು ಕಿತ್ತುಕೊಳ್ಳಲು ಬಂದಾಗ ಅವನಿಗೆ ದರ್ಶನ ನೀಡಿದ ಗುರುಗಳು (ಕ್ರಿ.ಶ. 1800ರಲ್ಲಿ) ಅವನ ಮನಸ್ಸನ್ನು ಪರಿವರ್ತಿಸುತ್ತಾರೆ. ಈ ಬಗ್ಗೆ ಆ ಅಧಿಕಾರಿಯೇ ಬರೆದದ್ದು ಬಳ್ಳಾರಿ ಜಿಲ್ಲೆಯ ಗೆಜೆಟಿಯರ್‌ನಲ್ಲಿ ದಾಖಲಾಗಿದೆ. 'ಭರತ ಖಂಡವು ಮರಣವನ್ನು ಜೈಸಿದ ಪುಣ್ಯಾತ್ಮರ ದೇಶ' ಎಂದು ಮತ್ತೊಬ್ಬ ಬ್ರಿಟಿಷ್ ಅಧಿಕಾರಿ ಸರ್ ವಿಲಿಯಂ ಟೆಂಪಲ್ ಉದ್ಗರಿಸಿದ್ದಾನೆ.


ಯಾತ್ರಿಕರಿಗೆ ಪ್ರಯಾಸವಿಲ್ಲ
ತುಂಗಭದ್ರಾ ತೀರದ ಮಂತ್ರಾಲಯದಲ್ಲಿ ಈಗ ಅಭಿವೃದ್ಧಿ ಪರ್ವ. ಮಹಾಪ್ರವಾಹದ ನಂತರ ಈ ಪುಣ್ಯಕ್ಷೇತ್ರ ಮೈ ಕೊಡವಿ ಎದ್ದು ನಿಂತಿದೆ. ಇದು ಸಾಧ್ಯವಾದದ್ದು ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಸುಯತೀಂ ದ್ರ ತೀರ್ಥರು ಹಾಗೂ ಅವರ ಉತ್ತರಾಧಿಕಾರಿ ಸುಭುದೇಂದ್ರತೀರ್ಥರ ಸಂಕಲ್ಪ ಶಕ್ತಿಯಿಂದಾಗಿ. ಮಠದ ಸುತ್ತಮುತ್ತಲಿನ ಪ್ರದೇಶ ಮಾತ್ರವಲ್ಲ, ಇಡೀ ಮಂತ್ರಾಲಯ ಗ್ರಾಮವನ್ನು ಹಸಿರಾಗಿಸುವುದು, ಗ್ರಾಮಸ್ಥರಿಗೂ ಶುದ್ಧ ಕುಡಿಯುವ ನೀರು ಪೂರೈಸುವುದು, ಒಳ್ಳೆಯ ಆರೋಗ್ಯ ಸೇವೆ ಇತ್ಯಾದಿ ಸೌಲಭ್ಯಗಳನ್ನು ಮಠ ಒದಗಿಸುತ್ತಿದೆ.
ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಸುಸಜ್ಜಿತ ವಸತಿ ಗೃಹಗಳು, ಭೋಜನಾಲಯಗಳು ಎದ್ದು ನಿಂತಿವೆ. ಈಗ ಉಭಯ ಶ್ರೀಗಳ ಆಶಯದಂತೆ ಮಠದ ಕೇಂದ್ರ ಸ್ವಾಗತ ಕಚೇರಿಯಿಂದ ಅವರಿಗೆ ನೀಡಲಾದ ವಸತಿಗೃಹದವರೆಗೆ ಉಚಿತವಾಗಿ ಕರೆದೊಯ್ಯಲು ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇವು ಒಮ್ಮೆ 13 ಜನರನ್ನು ಕರೆದೊಯ್ಯಬಲ್ಲವು. ವಾಹನದ ಹಿಂಭಾಗದಲ್ಲಿ ಲಗೇಜ್ ಇಡಲು ವ್ಯವಸ್ಥೆ ಇದೆ. ಹೀಗಾಗಿ ಇನ್ನು ಸ್ವಾಗತ ಕಚೇರಿಯಿಂದ ವಸತಿಗೃಹಗಳಿಗೆ ತೆರಳಲು ಪ್ರಯಾಸಪಡಬೇಕಿಲ್ಲ. ಬೆಳಗ್ಗೆ 4ರಿಂದ ಮಧ್ಯಾಹ್ನ 12, ಸಂಜೆ 5ರಿಂದ ರಾತ್ರಿ 11ರವೆಗೆ ಈ ಸೇವೆ ಲಭ್ಯ.

= ಡಾ.ಮಧುಸೂಧನಾಚಾರ್ಯ ಜೋಶಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!