ಉದ್ಬುದ್ಧ ಬುದ್ಧ...
ಶಾಕ್ಯಮುನಿ ಗೌತಮನ ಪ್ರಾದುರ್ಭಾವ ದೇಶದ ಬಹುದೊಡ್ಡ ತಿರುವು. ಭಾರತೀಯ ದರ್ಶನಶಾಸ್ತ್ರ ಆಗ ಹಲವು ಶಾಖೆಗಳಾಗಿ ಬೆಳೆದಿತ್ತು. ಸಾಂಖ್ಯ, ಮೀಮಾಂಸಾ, ಜೈನ, ವೈದಾಂತ, ಚಾರ್ವಾಕ, ಅಜೀವಕ- ಈ ದರ್ಶನಗಳು ಆಗಲೇ ಖಚಿತ ರೂಪ ಪಡೆದಿದ್ದವು. ಪ್ರಮುಖ ಉಪನಿಷತ್ತುಗಳು- ಛಾಂದೋಗ್ಯ, ಕಠ, ಕೇನ, ಈಶ, ಪ್ರಶ್ನ, ಮಾಂಡೂಕ್ಯ, ಮುಂಡಕ, ಬೃಹದಾರಣ್ಯಕ ಇತ್ಯಾದಿ ಬುದ್ಧಪೂರ್ವ ರಚನೆಗಳು ಸರಳವಾಗಿದ್ದು, ದಾರ್ಶನಿಕ-ಸಾಮಾಜಿಕ ಸ್ಥಿತಿ ಸಂಕೀರ್ಣತೆಯ ಹಂತ ತಲುಪಿತ್ತು.
ಮುಖ್ಯವಾಗಿ ಸಾಂಖ್ಯದ ಸರ್ವತ್ರ ಪ್ರಭಾವ, ವೈದಿಕ ಕರ್ಮಕಾಂಡಗಳ ಸಾರ್ವತ್ರಿಕತೆ ಮತ್ತು ಅವುಗಳಿಗೆ ವಿರೋಧ, ನಿರೀಶ್ವರವಾದದ ಧ್ವನಿಗಳ ಉದ್ಭವ ಮತ್ತು ಅಧಿಕಾರಾಧಾರಿತ ಜಾತಿ ವ್ಯವಸ್ಥೆಯ ಪುನರ್ನವೀಕರಣ ಇವು ಕ್ರಿ.ಪೂ. 6ನೇ ಶತಮಾನದ ಉತ್ತರ ಭಾರತದ ಕೆಲವು ಸ್ಥಿತಿ ಚಿತ್ರ. ಇವುಗಳ ವಿರುದ್ಧವಾಗಿ ವೈದಿಕ ಮತ್ತು ವೈದಿಕೇತರ ಸಮುದಾಯಗಳಲ್ಲಿದ್ದ ಅತೃಪ್ತಿಗಳ ಒಂದು ಫಲವೇ ಬುದ್ಧ. ಹಾಗೆಂದೇ ಅವನನ್ನು ಬಂಡಾಯಗಾರ ಎನ್ನುತ್ತೇವೆ. ಅವನು ನಿಜವಾಗಿ ಹಿಂದೂ ಪ್ರೊಟೆಸ್ಟೆಂಟ್!
ದೇವರ ಅಸ್ತಿತ್ವಕ್ಕಿಂತ ದುಗುಡಕ್ಕೆ, ಗಹನ ಚರ್ಚೆಗಳಿಗಿಂತ ನೈತಿಕತೆ ಉಪದೇಶಕ್ಕೆ ಕರ್ಮಕ್ಕಿಂತ ಜ್ಞಾನ- ವಿಚಾರಗಳಿಗೆ ಹೆಚ್ಚು ಮಹತ್ವವನ್ನು ಆತ ಕಲ್ಪಿಸಿದ. ದುಃಖ, ಶೂನ್ಯತ್ವ, ಸದಾಚಾರ ಅವನ ಉಪದೇಶದ ಕೇಂದ್ರಾಂಶಗಳು. ಬುದ್ಧನು ಮುಖ್ಯವಾಗಿ ದಾರ್ಶನಿಕಗಿಂತಲೂ ಹೆಚ್ಚಾಗಿ ನೀತಿ ಉಪದೇಶಕ, ಸುಧಾರಕ. ಅವನು ಹೇಳಿದ 'ಜಗತ್ತು ಶೂನ್ಯ' 'ದುಃಖಮಯ'- ಎಂಬುದನ್ನು ಮುಂದೆ ದಾರ್ಶನಿಕರು ಬೆಳೆಸಿ ಬೆಳೆಸಿ ತರ್ಕ ಕೋಟೆಯನ್ನು ಕಟ್ಟಿ 'ಶೂನ್ಯ'ವೇ ನಿಜವೆಂಬಂತೆ ಚಿತ್ರಿಸಿದರು.
ಬುದ್ಧನ ಉಪದೇಶಗಳು ತ್ರಿಪಿಟಕಗಳಾಗಿ ಸಂಗ್ರಹಗೊಂಡು, ಬೌದ್ಧಧರ್ಮ ದರ್ಶನವಾಗಿ ಮತ್ತು ಮತವಾಗಿ ಬಹಳ ಮುಖಗಳಲ್ಲಿ ಬೆಳೆಯಿತು. ಕವಲುಗಳಲ್ಲಿ ಹರಿಯಿತು. ಉಪದೇಶಕ ಬುದ್ಧ ದೇವರೇ ಆದ. ಹಿಂಸಾತ್ಮಕ ಯಜ್ಞಗಳ ವಿರೋಧ, ಜಾತಿಯನ್ನು ಮೀರಿದ ಸಾಮಾಜಿಕ ಧೋರಣೆ- ಇವುಗಳಲ್ಲಿ ಬುದ್ಧನು ಒಬ್ಬ ಮುಂದಾಳು ಎಂಬುದು ನಿಜ. ಅದೇ ರೀತಿ ಆತನು ಕಂಡು ಹೇಳಿದ ಆರ್ಯ ಸತ್ಯ, ದ್ವಾದಶಾಯತನ ಮೊದಲಾದವುಗಳೂ ದಾರ್ಶನಿಕವಾಗಿ ವಿಶಿಷ್ಟವಾದ ಕಾಣ್ಯೆಗಳೇ ಸರಿ.
ಆದರೆ, ದರ್ಶನ ಮತ್ತು ಸಮಾಜ ದೃಷ್ಟಿಗಳಲ್ಲಿ ಈ ಬದಲಾವಣೆ ಅವನೊಬ್ಬನಿಂದಲೇ ಆಯಿತು. ಜಾತಿ ವಿರೋಧಿ ಕ್ರಾಂತಿ, ಯಜ್ಞವಿರೋಧಿ, ದಾರ್ಶನಿಕ ವೈಚಾರಿಕತೆ, ನಿರೀಶ್ವರವಾದ 'ಜನಪರ' ಧಾರ್ಮಿಕತೆ- ಎಲ್ಲವೂ ಅವನಿಂದಲೇ ಆರಂಭ. ಅವನೇ ಅದರ ಏಕೈಕ ಪ್ರತಿನಿಧಿ ಎಂಬಂತೆ ಹೇಳಲಾಗುತ್ತದೆ. ಇಂಥ ಅಸಂಖ್ಯ ಬರಹಗಳೂ ಬಂದಿವೆ. ಇದು ಮಾತ್ರ- ಸತ್ಯಕ್ಕೆ ದೂರ ಮತ್ತು ಬುಧ್ಯಪರಾಧ.
ದರ್ಶನ ಶಾಸ್ತ್ರದ ಚರಿತ್ರೆ ಪರಿಶೀಲನೆಯಲ್ಲಿ ಅಳತೆ ಮೀರಿದ ಮತ್ತು ಅಸಮರ್ಥನೀಯ ರಾಜಕೀಯ, ಜಾತಿದ್ವೇಷ, ಬ್ರಾಹ್ಮಣ ವಿರೋಧದ ಪ್ರಯೋಗಗಳಿಂದ ಈ ರೀತಿಯ ತೀರ್ಮಾನ ಬಂದಿದ್ದು. ಬುದ್ಧನೆಂದರೆ ಜನರಪರ, ವೈದಿಕವೆಲ್ಲ ಮೌಢ್ಯ, ಜನವಿರೋಧಿ, ಶಂಕರ ತತ್ವವು ಹುನ್ನಾರ ಮೊದಲಾದ ಅಪಸಿದ್ಧಾಂತಗಳು ಸ್ಥಾಪಿತವಾಗಿದ್ದು, ಅನಧ್ಯಾಯಿಗಳು ದಿಕ್ಕು ತಪ್ಪಿಸುತ್ತಿವೆ.
ಹೀಗೆ ಹೇಳುವುದು ಬುದ್ಧ ವಿರೋಧವಲ್ಲ. ವಾಸ್ತವ ಪ್ರತಿಪಾದನೆ ಮಾತ್ರ. ಬುದ್ಧನ ಜೀವನವೂ, ಉಪದೇಶವೂ ಇತರ ಅನೇಕಾನೇಕ ಭಾರತೀಯ ಮಹಾತ್ಮರಂತೆ ಇದ್ದು, ಅಧ್ಯಯನ, ರಾಜತ್ವ, ರಾಜ್ಯತ್ಯಾಗ, ತಪಸ್ಸು, ಸನ್ಯಾಸ ಸಾಕ್ಷಾತ್ಕಾರ, ಉಪದೇಶ, ಮೋಕ್ಷ- ಹೀಗೆಯೇ ಇದೆ.
ಬ್ರಾಹ್ಮಣ ಢ/ಡ ಬುದ್ಧ ಎಂದು ಸರಳ ಸಮೀಕರಣ ಮಾಡುವವರು ಬುದ್ಧನೂ, ಬೌದ್ಧ ಆಕರಗಳೂ ಬ್ರಾಹ್ಮಣ ಪ್ರಶಂಸೆ ಮಾಡಿದುದನ್ನು, ವೇದವನ್ನು ಹೊಗಳಿದ್ದನ್ನು ಮರೆಮಾಚುತ್ತಾರೆ. ಸುಧಾರಣೆ ಬುದ್ಧ ಎಂದು ಸರಳ ಮೂಲಭೂತವಾದಿ ಸಮೀಕರಣ ಮಾಡುವವರು ನಾರದ, ಕಪಿಲ, ಕೃಷ್ಣ, ಋಷಭ, ಮಹಾವೀರರು ತಂದ ಸುಧಾರಣೆ ಬಗ್ಗೆ ಜಾಣ ಮೌನ ವಹಿಸುತ್ತಾರೆ. ಇದಲ್ಲದೆ 'ಫಿಲಾಸಫಿಕಲ್ ಪಾಲಿಟಿಕ್ಸ್- ಪಾಲಿಟ್ರಿಕ್ಸು?'
ವೈದಿಕ ಎಂದರೆ ಜೀವನ ವಿರೋಧಿ (ನಿಜವಲ್ಲ, ವೇದವು ಜೀವನಪರ, ವೇದಾಂತವು ಸನ್ಯಾಸ ಪರ ಇರಲಿ) ಎಂದು ಹೇಳುವವರು. ದುಃಖ ದುಃಖ ಎಂದ ಬುದ್ಧನೇ ಜೀವನ ಪರಾಙ್ಮುಖತೆಗೆ, ಸನ್ಯಾಸಕ್ಕೆ ಪುರುಷನೆಂಬುದನ್ನೂ ಗಣಿಸಬೇಕು. ಬುದ್ಧ ಚರಿತ್ರೆಯಲ್ಲಿ ಜೀವನ ವಿರೋಧಿ, ಸ್ತ್ರೀ ವಿರೋಧಿ ನಿಲುವುಗಳೂ ಇವೆಯಲ್ಲ! ಬುದ್ಧ ಬದುಕಿದ್ದಾಗಲೇ ಸಂಘದಲ್ಲಿ ಜಗಳವಾಯಿತಲ್ಲ? ಇದು ಸಹಜ.
ಹಿನ್ನೆಲೆ ಗೊತ್ತಾ?
ಬುದ್ಧನೇನೂ ನಿರ್ವಾತದಿಂದಲೋ, ಆಕಾಶದಿಂದಲೋ ಬಂದವನಲ್ಲ. ಹಿಂದೆ ಮುಂದೆ ಇರುವ ಸನ್ನಿವೇಶದಲ್ಲಿ ಅವನು ಉದ್ಬುದ್ಧನಾಗಿ ಒಡಮೂಡಿದ ಮಹಾತ್ಮ. ಉಪನಿಷತ್ತುಗಳಲ್ಲಿ ರೂಪುಗೊಂಡಿದ್ದ 'ಬ್ರಹ್ಮ' ಚಿಂತನವು ಅವನಗೆ ಪ್ರೇರಣೆ. ಸಾಂಖ್ಯವು ಆತನಿಗೆ ಗೊತ್ತಿತ್ತು. ಸಾಂಖ್ಯದ ಸೃಷ್ಟಿ ವಿಕಾಸ ಕ್ರಮವಾದ ಪ್ರಕೃತಿ- ಮಹತ್- ಬುದ್ಧಿ- ಅಹಂಕಾರ ತನ್ಮಾತ್ರಗಳಿಗೂ ಬುದ್ಧನ ದ್ವಾದಶನಿದಾನ, ಪ್ರತೀತ್ಯ ಸಮುತ್ಪಾದಕ್ಕೂ ಸಂಬಂಧವಿದೆ. ರಾಜರೂ ಉಪದೇಶಕರಾದ ಉನಿಷತ್ತುಗಳ ಪರಂಪರೆ (ಜನಕರಾಜ). ಮಹಾವೀರ ಪರಂಪರೆ, ಕನಕ ಕೋಣಾಗಮನಾದಿ ಬುದ್ಧರು- ಸೇರಿ ಗೌತಮ ಬುದ್ಧನ ಸಿದ್ಧಾಂತ ರೂಪಿತವಾಗಿದೆ.
ಕುತರ್ಕ ಮಾಡಿದರೆ ಬುದ್ಧನೆಂಬುದು ಶೂನ್ಯ ಎಂದೂ ವಾದಿಸಬಹುದು. ಆದರೆ, ಬುದ್ಧನಿಗೆ ಸೂಕ್ತ ನ್ಯಾಯ ಒದಗಿಸುವುದಾದರೆ ಭಾರತೀಯ ದರ್ಶನದ ಕೆಲವೊಂದು ವಿಶಿಷ್ಟ ಉದ್ಭವವಗಳಿಗೆ ಬುದ್ಧನು, ಬೃಹಸ್ಪತಿಯೂ, ಪಾರ್ಶ್ವ ಮಹಾವೀರರೂ ಮುಖ್ಯ ಕಾರಣರು ಎಂದೊಪ್ಪುವುದು ನ್ಯಾಯ.
ಬುದ್ಧ- ಬೌದ್ಧ; ಜ್ಯೋತಿಕೇಂದ್ರ
ಬುದ್ಧಾನಂತರ ಬೌದ್ಧ ಶಾಸ್ತ್ರಗಳಲ್ಲಿ ಪಂಥ, ಪಂಗಡಗಳಲ್ಲಿ ಎಲ್ಲ ಬಗೆಯ ಮಠೀಯತೆಗಳು, ಪವಾಡ ಪ್ರಾಧಾನ್ಯ, ಅನೀತಿ ಕರ್ಮಠ ಕಾಂಡಗಳು, ಈರ್ಷೆ ಅಸೂಯೆಗಳು ಬಂದೇ ಬಂದುವು. (ಶ್ರೇಷ್ಠ ದಾರ್ಶನಿಕ ಕೃತಿಗಳೂ ಬಂದವು). ಇದೆಲ್ಲ ಸಾಮಾನ್ಯ. ಆದರೆ, ಅನಿರಾಕರಣೀಯ.
ಮುಂದಿನ ಟೀಕಾಕಾರರಿಗೆ ಬುದ್ಧ- ಬೌದ್ಧರಲ್ಲಿ ವ್ಯತ್ಯಾಸವಿಲ್ಲ. ನಮ್ಮ ಪರಂಪರೆ ಹಾಗೆಯೇ. ಖಂಡನೆ ಮತ್ತು ಸ್ವೀಕಾರದಲ್ಲಿ ಒಂದು ಪದ್ಧತಿಯನ್ನು ಒಟ್ಟಾಗಿ ತೆಗೆದುಕೊಂಡು ಹೇಳುವುದು ಕ್ರಮ. 'ನೈತದುಬದ್ಧೇನ ಭಾಷಿತಮ್' ಎಂದು ಗೌಡಪಾದರು ಹೇಳುವಾಗ, ಅವರು ಬುದ್ಧನೆಂದದ್ದು ಇಡಿಯ ಬೌದ್ಧ ಪರಂಪರೆಯನ್ನೇ ಹೊರತು ಬುದ್ಧನೊಬ್ಬನನ್ನಲ್ಲ.
ಶಂಕರರ ಕಾಲಸಂಧಿ
ಶಂಕರರಾಚಾರ್ಯರು (ಕ್ರಿ. 788-820) ಬುದ್ಧನಿಗಿಂತ ಸಾವಿರಾರು ವರ್ಷ ಬಳಿಕ ಹುಟ್ಟಿದವರು. ಆ ಕಾಲಕ್ಕೆ ಬೌದ್ಧ ದರ್ಶನ ಪಂಡಿತ ಮಂಡಲಿಯಲ್ಲಿ ಚರ್ಚಿತವಾಗುತ್ತಿದ್ದರೂ, ಬೌದ್ಧ ಸನ್ಯಾಸಿ ಪರಂಪರೆ, ಬೌದ್ಧಮತ ವಿಕೃತಿ ಹೊಂದಿತ್ತು. ಮೀಮಾಂಸಕ, ಸಾಂಖ್ಯ, ಪ್ರಾಚೀನ ವೇದಾಂತಗಳು, ಜತೆಗೆ ಶೈವ ವೈಷ್ಣವಾದಿ ಭಕ್ತಿಪಂಥಗಳೂ ಇದ್ದವು.
ಜೈನಧರ್ಮ ದರ್ಶನಗಳೂ ಸಕ್ರಿಯವಾಗಿದ್ದವು. ಬುದ್ಧನಿಗೆ ಪ್ರತಿಷ್ಠೆ ಇತ್ತು. ಅವನ ಹೆಸರುಗಳಲ್ಲೊಂದು 'ಅದ್ವಯವಾದಿ'! ಅದ್ವೈತ ಎಂದೇ ಅರ್ಥ. ಈ ಎಲ್ಲವನ್ನು ಒಂದು ದರ್ಶನವಾಗಿ ಮತ್ತು ಮತ ರಿಲಿಜನ್ ಆಗಿ ರೂಪಿಸುವ ಅವಶ್ಯ ಅವರಿಗೆ ಕಂಡಿತು. ಅದಕ್ಕೆ ಯಾವ್ಯಾವುದು ಸೂಕ್ತವೋ, ಅದನ್ನೆಲ್ಲ ಅವರು ಸ್ವೀಕರಿಸಿದರು. ತನ್ನ ಮಾಯಾವಾದಕ್ಕೂ, ಬೌದ್ಧ ತಾರ್ಕಿಕದ ಸಂವೃತಿ ವಾದಕ್ಕೂ ಇರುವ ಸಾಮ್ಯವನ್ನು ಶಂಕರರೇ ಒಪ್ಪಿದ್ದಾರೆ. ಶೂನ್ಯವಾದ, ಕ್ಷಣಿಕವಾದಗಳ ಅತಿಯನ್ನು ಅವರು ಒಪ್ಪಿಲ್ಲ ಅಷ್ಟೇ.
ಪ್ರಚ್ಛನ್ನ ಬೌದ್ಧ!
ಶಂಕರರನ್ನು ವಿವಿಧ ದ್ವೈತಿಗಳೂ, ಇತರ ವೇದಾಂತಿಗಳೂ ಪ್ರಚ್ಛನ್ನ ಬೌದ್ಧ (ಮಾರು ವೇಷದ ಬೌದ್ಧ, ಬುದ್ಧ ದರ್ಶನದ ರೂಪಾಂತರವಾದಿ) ಕರೆದಿರುವುದು ಗಮನಾರ್ಹ. 'ಮಾಯಾ ವಾದಂ ಅಸತ್ ಶಾಸ್ತ್ರಂ! ಪ್ರಚ್ಛನ್ನಂ ಬೌದ್ಧಮೇವಚ' ಎಂದು ಪದ್ಮಪುರಾಣದ ವಚನ. ಅದ್ವೈತ- ಮಾಯಾವಾದವು ತಪ್ಪುಶಾಸ್ತ್ರ. ಬೌದ್ಧದ ಇನ್ನೊಂದು ರೂಪವೇ ಅದು ಎಂದು ಆಕ್ಷೇಪ. ಇದರ ಅರ್ಥ ಏನು? ಪ್ರಚ್ಛನ್ನ ಬೌದ್ಧ ಎಂಬುದು ಪ್ರಶಂಸೆಯೂ ಹೌದು. ವೈದಿಕ- ಅವೈದಿಕಗಳನ್ನು ಒಗ್ಗೂಡಿಸಿದರೆಂದು ತಾನೆ?- (ಲಕ್ಷ್ಮೀಶ ತೋಳ್ಪಾಡಿ).
ವೇದಾಂತವನ್ನು ಗಟ್ಟಿಯಾಗಿ ಸ್ಥಾಪಿಸಿ, ಅದಕ್ಕೆ ವ್ಯವಸ್ಥಿತವಾಗಿ ಬೌದ್ಧ ಚಿಂತನವನ್ನೂ ಹೊಂದಿಸಿ, ವಿವಿಧ ಕರ್ಮಕಾಂಡ, ಭಕ್ತಿ ಆಚರಣೆಗಳನ್ನೂ ಅಂಗೀಕರಿಸಿ ಒಂದು ತ್ರಿಸ್ತರ ಚಿಂತನವನ್ನು ರೂಪಿಸುವುದು ಅವರ ಉದ್ದೇಶ. ಅದೇ ಮಾಯಾವಾದಿ ಅದ್ವೈತ, ಮಠಸ್ಥಾಪನೆ, ಪಂಚಾಯತನ ವ್ಯವಸ್ಥೆ, ದೇಗುಲದ ಸ್ತೋತ್ರ ಸಾಹಿತ್ಯ ರಚನೆಗಳಲ್ಲಿ ಕಾಣಿಸಿದ ಸಮಗ್ರ ರೂಪೀಕರಣ.
ವಿದ್ವಾಂಸ- ಸಾಮಾನ್ಯ ರಂಜಕ ದೃಷ್ಟಿ. ಇದನ್ನು ತಿಳಿಯದೆ, ತಿಳಿದರೂ ನೋಡದೆ- ಶಂಕರರದು ಪುನರುತ್ಥಾನವಾಗಿ ಹುನ್ನಾರ ಅನ್ನುವುದು ಪಾಮರ ರಂಜಕ ಮಾತ್ರ. ಪ್ರಚ್ಛನ್ನ ಬೌದ್ಧನೆಂಬ ಕೆಲವರ ಬೈಗಳನ್ನು ಹೊತ್ತುಕೊಂಡದಾದರೂ, ಆಗಲೇ ಮರೆಯಾಗಿದ್ದ ಬೌದ್ಧವನ್ನೂ ಅವರು ಉಳಿಸಿದರೆಂದು ಅರ್ಥ ಮಾಡಬೇಕೋ? ಮುಗಿಸಿದರೆಂದೂ?
ಬೌದ್ಧ ವಿರೋಧ
ಶಂಕರರಲ್ಲಿ ಬೌದ್ಧ ವಿರೋಧವಿಲ್ಲವೇ? ಎಂದರೆ ಉಂಟು ಖಂಡಿತ. ಆದರೆ ಯಾವುದು, ಎಷ್ಟು? ನೋಡಬೇಕು. ಪ್ರತಿ ಪಂಥವೂ, ಆಚಾರ್ಯನೂ ಮತ್ತೊಂದನ್ನು ವಿಮರ್ಶಿಸದೆ ಇರನು. ಅದು ಆ ಪಂಥದ ಒಂದು ಮುಖ್ಯ ಅಂಶ. ಶಂಕರರು ವಿರೋಧಿಸಿದ್ದು ಬುದ್ಧನು (ಅರ್ಥಾತ್ ಬೌದ್ಧ ದರ್ಶನವು) ಸ್ಥೂಲವಾಗಿ ಹೇಳಿದ ಸತ್ಯದ ಸ್ತರಗಳನ್ನಲ್ಲ. ಚೈತನ್ಯವಾದ, ಚಿದ್ವಾತ್ಪಾಗಳನ್ನಲ್ಲ. ಅದರ ಅತಿರೇಕಗಳನ್ನು ಮಾತ್ರ. ನಾಗಾರ್ಜುನ, ಧರ್ಮಕೀರ್ತಿ, ಅಸಂಗ ಮೊದಲಾದವರು ಶೂನ್ಯವಾದ, ದಕ್ಷಿಣವಾದವನ್ನು ಅತಿರೇಕಕ್ಕೆ ಒಯ್ದಿದ್ದರು. 'ಬಾಹ್ಯ ವಸ್ತುಗಳೂ ಸುಳ್ಳು, ಆತ್ಮವೂ ಇಲ್ಲ. ಚಿತ್ತವೊಂದೇ ಸತ್ಯ' ಎಂಬ ಒಂದು ಬಗೆಯ ಸರ್ವನಾಸ್ತಿವಾದ ಆಗಿದ್ದ ಅದಕ್ಕೆ ಶಂಕರರು ಹೇಳಿದ್ದು- ಇದು ಮುರ್ಖತನ. ಈ ವಾದವೂ ಖಂಡನೆಗೂ ಅರ್ಹವಾಗಿಲ್ಲ. ಯಾವ ಗಂಭೀರ ದಾರ್ಶನಿಕನೂ ಹಾಗೆಯೇ ಹೇಳಬೇಕಲ್ಲವೇ?
ಶಂಕರರ ದೊಡ್ಡ ಗ್ರಂಥ ರಾಶಿಯಲ್ಲಿ ಬೌದ್ಧ ಖಂಡನೆ ಇರುವುದು ಅತ್ಯಲ್ಪ. ಅವರು ಬಹುವಾಗಿ ಆಕ್ಷೇಪಿಸಿದ್ದು ವೈದಿಕವೇ ಆದ ಸಾಂಖ್ಯವನ್ನು! ಅದನ್ನವರು ಪ್ರಧಾನಮಲ್ಲ (ಮುಖ್ಯ ವಿರೋಧಿ) ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮೀಮಾಂಸಕ, ಪ್ರಾಚೀನ ಅದ್ವೈತ, ದ್ವೈತಗಳನ್ನು ವೈಷ್ಣವ ಪಾಂಚರಾತ್ರ, ಶೈವಗಳನ್ನು ಖಂಡಿಸಿದ್ದಾರೆ. ಶಂಕರರನ್ನು ಹಿಂದೂ ಹುನ್ನಾರಗಾರನಾಗಿ ಚಿತ್ರಿಸುವವರಿಗೆ ಇದುಬೇಕಾಗಿಲ್ಲ. ಜೈನರೂ ಬೌದ್ಧವನ್ನು ಬಲವಾಗಿ ಖಂಡಿಸಿದ್ದಾರೆ.
ಒಂದು ದರ್ಶನವಾಗಿ ಬೌದ್ಧವನ್ನು ಅವನತಿಗೊಳಿಸಲು- ತರ್ಕವೂ ಬೇಡ. ಬೌದ್ಧರೇ ಸಾಕು. ಬಾಹ್ಯ ವಸ್ತುಗಳಿಲ್ಲ. ಜಗತ್ತು ಮಾನಸಿಕ ರಚನೆ, ಜಕತ್ತು ಮಿಥ್ಯೆ, ಆತ್ಮವು ಇಲ್ಲ. ಚಿತ್ತವು ಆಲಯ ವಿಜ್ಞಾನವೆಂದೂ, ನೆನಪುಗಳ ಸರಣಿ ಮಾತ್ರ ಎಂದು ಹೇಳುವುದು. ಕರ್ಮ, ಪುನರ್ಜನ್ಮಗಳಿವೆ ಎಂದೂ ಹೇಳುವುದು! ಈ ವೈರುಧ್ಯವು ಸಾಮಾನ್ಯ ಮತಧರ್ಮವಾಗಿ ಹೇಗೆ ಉಳಿದೀತು? ಸೂಕ್ಷ್ಮ ತರ್ಕಗಳಿಂದ ಅದನ್ನು ಸಮರ್ಥಿಸಿದರೂ, ಅದು ವಿದ್ವಾಂಸರ ವಿನೋದವಾದೀತೆ ಹೊರತು ಸ್ಥಾಪಕವಾಗಲಾರದು. ಶೂನ್ಯವಾದವು ಬೌದ್ಧ ದರ್ಶನವು ದೊಡ್ಡ ದೌರ್ಬಲ್ಯ.
ಅದಕ್ಕಾಗಿಯೇ ಶಂಕರರು ಅದನ್ನು ಪರಿಷ್ಕರಿಸಿ ಮಿಥ್ಯೆ ಎಂದರೆ ಇಲ್ಲವೇ ಇಲ್ಲ ಎಂದಲ್ಲ. ಪರಿವರ್ತನಶೀಲ. ಆತ್ಮವು (ಬ್ರಹ್ಮ) ಶಾಶ್ವತ ಎಂದದ್ದು. ಬೌದ್ಧರದ್ದು ಶೂನ್ಯ ಬ್ರಹ್ಮವಾದ, ಶಂಕರರದು ಪೂರ್ಣಬ್ರಹ್ಮವಾದ, ತನ್ಮೂಲಕ ವೇದ- ಪುರಾಣ, ಉಪನಿಷತ್, ಬೌದ್ಧ, ಸಕಲ ಸಮನ್ವಯ ಸಾಧನೆ! ಇದು ಹುನ್ನಾರವೇ? ಬಂಡಾಯವೆ? ನಿಗುರ್ಣ ಬ್ರಹ್ಮವನ್ನು ಸುಗುಣವಾಗಿ ಉಪಾಸಿಸಿದರೂ ಮೋಕ್ಷವು ಸಾಧ್ಯವೆಂದರೆ- ಇದಕ್ಕಿಂತ ಧಾರ್ಮಿಕ ಔದಾರ್ಯವೇನುಂಟು?
ವೇದ ಓದಲು ಅಧಿಕಾರ (ಬ್ರಾಹ್ಮಣ) ಬೇಕು ನಿಜ. ವೇದಾಂತಕ್ಕೆ ಜಾತಿ ಅಧಿಕಾರ ಪ್ರಶ್ನೆ ಇಲ್ಲ. ಸಕಲರಿಗೂ ಮುಕ್ತ. ವೇದದ ಹಂಗಿಲ್ಲದೆ ಪುರಾಣಕ್ಕೆ, ವೇದಾಂತಕ್ಕೆ ಬನ್ನಿ. ಇದಲ್ಲವೆ ಬಂಡಾಯ? ವೈದಿಕ ಕರ್ಮಕಾಂಡವನ್ನು ಸದ್ದಿಲ್ಲದೆ ಅಪ್ರಸ್ತುತಗೊಳಿಸಿದ್ದೇನು ಸಣ್ಣದೆ?
ಶಂಕರರು ವೈದಿಕರೂ, ಬೌದ್ಧರನ್ನು ಈ ದೇಶದಿಂದ ಹೊರದಬ್ಬಿದರಂತೆ! ಹಾಗಿದ್ದರೆ, ಅಷ್ಟೇ ಅವೈದಿಕವಾದ ಜೈನ ಮತವೂ, ಜೈನ ದರ್ಶನವೂ ಈ ದೇಶದಲ್ಲಿ ಉಳಿದು ಬಂದುದು ಹೇಗೆ? ಬ್ರಾಹ್ಮಣ ವೈದಿಕರ ಅಧ್ಯಯನ ವ್ಯವಸ್ಥೆಯಲ್ಲೇ ಬೌದ್ಧದರ್ಶನವೂ ಸಿಲೆಬಸ್‌ನಲ್ಲೇ ಉಂಟಲ್ಲ? ಎಂದರೆ- ಉತ್ತರ ಸುಲಭ. ಅದೂ ಹುನ್ನಾರ!
ಶಂಕರ- ಶಂಕರ ಪೂರ್ವ- ಶಂಕರೋತ್ತರ ಭಾರತೀಯ ಧರ್ಮ ದರ್ಶನಗಳ ಚಿತ್ರಣ ಅರ್ಥವಾಗಬೇಕಾದರೆ ಒಟ್ಟಾಗಿ ನೋಡಬೇಕು. ಬೌದ್ಧ- ಜನಪರ, ಶಂಕರ- ಜನವಿರೋಧಿ ಎಂದೋ, ಇಡೀ ದಾರ್ಶನಿಕ ಧಾರ್ಮಿಕ ಚರಿತ್ರೆಯನ್ನು ಶಂಕರ- ಬುದ್ಧರೊಳಗಿನ ಸಂಘರ್ಷವೆಂದೋ ನೋಡಿದರೆ ಜ್ಞಾನಕ್ಕಾಗಲಿ, ಚಳವಳಿಗಾಗಲಿ ಪ್ರಯೋಜನಕಾರಿಯಾಗದು.
ಗೌಡಪಾದ-ಶಂಕರ
ಬೌದ್ಧರೂ ಬೇರೆಯವರನ್ನು ಬಂಧಿಸಿದ್ದಾರೆ. ಅದರಲ್ಲಿ ವೇದಾಂತಕ್ಕೆ ಸಾಮಾನ್ಯ ಖಂಡನೆ! ಬೌದ್ಧ ಶಾಸ್ತ್ರಗಳನ್ನು ಅರಿತು, ಪ್ರಾಯಃ ಬೌದ್ಧ ವೇದಾಂತವೊಂದರ ನಾಯಕರಾಗಿದ್ದ, ಗೌಡಪಾದರ ದಾರ್ಶನಿಕ ಉದಾರತೆ, ಮೂಲೆಗೆ ಸಂದುದು ಖೇದಕರ. ಅವರ ಮಾಂಡೂಕ್ಯಕಾರಿಕಾ ಒಂದು ಸ್ವತಂತ್ರ ಸುಂದರ ವೇದಾಂತ ಗ್ರಂಥ. ಅದರಲ್ಲಿ ಬೌದ್ಧರ ಆಲಯ ವಿಜ್ಞಾನ- ಸತ್ಯ ಸ್ವರೂಪ ಮತ್ತು ಉಪನಿಷತ್ತಿನ ಕೇವಲ ಬ್ರಹ್ಮಪಾದದ ಸಮನ್ವಯವಿದೆ. ಇವರು ಶಂಕರರ ಗುರುಗಳಾದ ಗೋವಿಂದ ಭಗವತ್ಪಾದರ ಗುರುಗಳು. ಬೌದ್ಧರ ಪರಿಭಾಷೆಗಳನ್ನು ಆರ್ಷ ಭಾರತೀಯ ದರ್ಶನದ ಭಾಗವಾಗಿ ಗ್ರಹಿಸಿ ವೇದಾಂತ ಪ್ರತಿಪಾದನೆಗೆ ಬಳಸಿದವರು ಅವರು. ಗೌಡಪಾದರ ಕಾರಿಕಾ ಗ್ರಂಥವು ಶಂಕರರಿಗೆ ಒಂದು ಮುಖ್ಯ ಆಕರವಾಗಿದೆ.
ಜ್ಞಾನೇನಾಕಾಶಕಲ್ಪೇನ ಯೊಧರ್ವಾನ್ ಗಗನೋಪಮಾನ್
ಜ್ಞೇಯಾಭಿನ್ನೇನ ಸಂಬುದ್ಧಸ್ತಂ ವಂದೇ ದ್ವಿಪದಾಂ ವರಂ॥
ಆಕಾಶ ಕಲ್ಪವಾದ, ಗಗನದಂತೆ ಮಿತಿಯಿಲ್ಲದ ಎತ್ತರವಾದ, ಜ್ಞೇಯಕ್ಕಿಂತ ಅಭಿನ್ನವಾದ (ಅರಿವು ಮತ್ತು ವಸ್ತು ಒಂದೇ ಎಂಬ ಅದ್ವೈತ) ಧರ್ಮಗಳನ್ನು ಸಂಬುದ್ಧಗೊಳಿಸಿದನೋ ಆ ಮಹಾತ್ಮನಿಗೆ ವಂದನೆ!- ಇದು ವೇದ ಪುರುಷ, ನಾರಾಯಣ, ಭಗವಾನ್ ಬುದ್ಧ ಮತ್ತು ಗುರುಗೋವಿಂದರೆಲ್ಲರ ವಂದನೆಯಾಗಿದೆ.
ಆಕಾಶ, ಗಗನ, ಧರ್ಮ (ಧಮ್ಮ) ಬುದ್ಧ ಶಬ್ದಗಳಿಂದ ಶೂನ್ಯವಾದ, ಬೌದ್ಧ ಧರ್ಮಗಳನ್ನು ಸ್ಪಷ್ಟವಾಗಿ ಹೇಳಿದೆ. ಉಪನಿಷದ್ಧರ್ಮವನ್ನು ಬೌದ್ಧಕ್ಕೆ ಸಮನ್ವಿತಗೊಳಿಸಿದ ಈ ಕ್ರಿಯೆಯ ಮುಂದೆ ಅದ್ವೈತ ವೇದಾಂತಕ್ಕೆ ಅಡಿಪಾಯವಾಯಿತು. ಶಂಕರಾಚಾರ್ಯರ ಪ್ರಾದುರ್ಭಾವವನ್ನು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕು.
= ಡಾ. ಎಂ. ಪ್ರಭಾಕರ ಜೋಶಿ