ಆಯುರ್ವೇದದಲ್ಲಿ 7 ಬಗೆಯ ನಿದ್ದೆಯನ್ನು ಹೇಳಲಾಗಿದೆ. ಮನಃ ಶ್ರಮ ನಿದ್ದೆ- ಇದು ಮನಸ್ಸಿಗೆ ದಣಿವಾದಾಗ ಬರುವ ನಿದ್ದೆ. ಆಗಂತುಕಿ ನಿದ್ದೆ- ಇದು ಕೆಲಸವಿಲ್ಲದೆ ಬೇಸರ, ಆಲಸ್ಯ ಹಾಗೂ ನಶೆಯಿಂದ ಉಂಟಾಗುವ ನಿದ್ದೆ.
ಶ್ಲೇಷ್ಮ ಸಮುದ್ಭವ ನಿದ್ದೆ- ಇದು ಕಫ ದೋಷದಿಂದ ಉಂಟಾಗುವ ನಿದ್ದೆ. ತಪೋಭವನ ನಿದ್ದೆ- ದೇಹದಲ್ಲಿ ತಮಸ್ಸು ಹೆಚ್ಚಾದಾಗ ಬರುವ ನಿದ್ದೆ.
ರಾತ್ರಿ ಸ್ವಭಾವ ನಿದ್ದೆ- ಇದು ರಾತ್ರಿಯಲ್ಲಿ ಸ್ವಾಭಾವಿಕವಾಗಿ ಬರುವ ನಿದ್ದೆ. ಶರೀರ ಶ್ರಮ ಸಂಭವ ನಿದ್ದೆ- ಇದು ಶರೀರಕ್ಕೆ ಆಯಾಸವಾದಾಗ ಬರುವ ನಿದ್ದೆ. ವ್ಯಾದಿ ನಿದ್ದೆ- ಇದು ಕಾಯಿಲೆಗಳಿಂದ ಉಂಟಾಗುವ ನಿದ್ದೆ.
ನಿದ್ರಾ ಹೀನತೆಗೆ ಕಾರಣ
ಪುರುಷ ಸೂಕ್ತದಲ್ಲಿ ಚಂದ್ರ ಮನಸೋ ಜಾತಃ ಎಂದು ಹೇಳಿರುವುದು. ಅಂದರೆ ಚಂದ್ರ ಮನಃಕಾರಕ ಎಂದು, ಶುಕ್ರ ಕಳತ್ರ ಹಾಗೂ ಸುಖ ಕಾರಕ, ಚಿಂತೆ, ಸಿಟ್ಟು, ದುಃಖ, ವೃದ್ಯಾಪ್ಯ, ವಾತ- ಪಿತ್ತ, ಮಾನಸಿಕ ರೋಗದಿಂದ ಬಳಲುತ್ತಿದ್ದಾಗ ನಿದ್ರಾಹಿನತೆಗೆ ಕಾರಣ.
ಅಲ್ಲದೆ ಮಲಗಿದ 20 ನಿಮಿಷದ ಒಳಗೆ ನಿದ್ರೆ ಬರದೇ ಇದ್ದರೆ, ಪದೇಪದೆ ಎಚ್ಚರವಾಗುತ್ತಿದ್ದರೆ ತುಂಬಾ ಬೇಗ ಎಚ್ಚರವಾಗಿ ನಿದ್ದೆ ಬಾರದೆ ಇದ್ದರೆ ಅದೇ ನಿದ್ರಾಹೀನತೆ. ವ್ಯಕ್ತಿಯ ಸುಖನಿದ್ರೆಗೆ ಜಾತಕದಲ್ಲಿ ಶುಭ ಗ್ರಹಗಳಾದ ಶುಕ್ರ, ಚಂದ್ರ ಗ್ರಹಗಳು ಅತಿ ಮುಖ್ಯ.
ಲಗ್ನದಲ್ಲಿ ಚಂದ್ರ ಹಾಗೂ ಶುಕ್ರ ಗ್ರಹಗಳು ಇದ್ದರೆ ಸುಖ ನಿದ್ದೆ. ಲಗ್ನದಿಂದ 2,9,11ರಲ್ಲಿ ಶುಕ್ರ ಹಾಗೂ ಚಂದ್ರನಿದ್ದರೆ ಸುಖ ನಿದ್ದೆ. ಚಂದ್ರ ಹಾಗೂ ಶುಕ್ರನಿಗೆ ಗುರುಗ್ರಹದ ದೃಷ್ಟಿಯಿದ್ದರೆ ಸುಖ ನಿದ್ದೆ. ಶುಕ್ರ ಉಚ್ಚ ಸ್ಥಾನ ಮತ್ತು ಸ್ವಂತ ಮನೆಯಲ್ಲಿದ್ದರೆ ಸುಖ ನಿದ್ದೆ. ಚಂದ್ರ ಕಟಕ ರಾಶಿಯಲ್ಲಿದ್ದರೆ ಸುಖ ನಿದ್ದೆ.
ಲಗ್ನದಿಂದ 3,6,12ರಲ್ಲಿ ಶುಕ್ರ ಹಾಗೂ ಚಂದ್ರ ಇದ್ದರೆ ನಿದ್ದೆ ಕಡಿಮೆ. ಚಂದ್ರ ಹಾಗೂ ಶುಕ್ರನಿಗೆ ಪಾಪಗ್ರಹಗಳ ದೃಷ್ಟಿಯಿದ್ದರೆ ನಿದ್ದೆ ಕಡಿಮೆ, ಚಂದ್ರ ಹಾಗೂ ಶುಕ್ರ ಅಶುಭ ಗ್ರಹವಾದ ಶನಿ, ರಾಹು, ಕೇತು, ಕುಜ, ರವಿ ಜೊತೆಯಿದ್ದರೆ ನಿದ್ದೆ ಕಡಿಮೆ. ಶುಕ್ರನು ನೀಚ ಸ್ಥಾನದಲ್ಲಿದ್ದರೆ ನಿದ್ದೆ ಕಡಿಮೆ, ವ್ಯಕ್ತಿಗೆ ಸಾಡೇಸಾತ್ ನಡೆಯುತ್ತಿದ್ದರೆ ನಿದ್ದೆ ಕಡಿಮೆ.
ಅತಿ ನಿದ್ದೆ ಒಳ್ಳೆಯದಲ್ಲ
ಕುಂಭಕರ್ಣನಂತಹ ನಿದ್ದೆ ಒಳ್ಳೆಯದಲ್ಲ. ಏಕೆಂದರೆ ಅದರಿಂದ ದೈನಂದಿನ ಕಾರ್ಯಗಳಿಗೆ ತೊಂದರೆ ಉಂಟಾಗುವುದು. ಆಹಾರ ಜೀರ್ಣವಾಗುವುದಿಲ್ಲ. ಶರೀರ ಭಾರವಾದತೆ ಅನಿಸುವುದು ಹಾಗೂ ಆಲಸ್ಯ.
ಉತ್ತಮ ನಿದ್ರೆಗೆ ಹೀಗೆ ಮಾಡಿ...
ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳಿ. ಮಲಗುವ ಒಂದು ಗಂಟೆ ಮೊದಲು ಕಾಫಿ, ಟೀ ಸೇವಿಸಬಾರದು.
ಹಾಸಿಗೆಯಲ್ಲಿ ಮಲಗಿ ಓದುವುದು, ಬರೆಯುವುದು ಹಾಗೂ ಟಿ.ವಿ. ನೋಡುವುದು ಮಾಡಬಾರದು. ಯಾವುದೇ ಕಾರಣಕ್ಕೆ ನಿದ್ರಾಮಾತ್ರೆ ತೆಗೆದುಕೊಳ್ಳಬೇಡಿ.
ಮಲಗುವ ಮೊದಲು 15 ನಿಮಿಷ ಧ್ಯಾನ, ಜಪ ಮಾಡಿ. ಹಗಲಿನಲ್ಲಿ ನಿದ್ದೆ ಮಾಡಬಾರದು. ಅಕಸ್ಮಾತ್ ಮಾಡಿದರೆ ಒಂದು ಗಂಟೆ ಮಾಡಿದರೆ ರಾತ್ರಿ 2 ಗಂಟೆ ನಿದ್ದೆ ಬರುವುದಿಲ್ಲ. ಅತಿಯಾದ ಆಹಾರ ಸೇವಿಸಿ ಅಥವಾ ಮದ್ಯಪಾನ, ಧೂಮಪಾನ ಮಾಡಿ ಮಲಗಬೇಡಿ.
ಮಲಗುವ ಕೋಣೆಯಲ್ಲಿ ಬೆಳಕು ಕಡಿಮೆಯಿರಲಿ. ಸಮತಟ್ಟವಾದ ಜಾಗದಲ್ಲಿ ಚಾಪೆ ಮೇಲೆ ಮಲಗುವುದು ಉತ್ತಮ. ಮಲಗುವ ಮೊದಲು ಜಗಳ ಗಲಾಟೆ ಮಾಡಿ ಮಲಗಬೇಡಿ. ನಿತ್ಯ ಯೋಗ, ವ್ಯಾಯಾಮ, ಸೂರ್ಯ ನಮಸ್ಕಾರ ಅಭ್ಯಸಿಸಿಕೊಳ್ಳಿ. 5 ವರ್ಷದಿಂದ 24 ವರ್ಷದವರಿಗೆ 10 ಗಂಟೆ ನಿದ್ದೆ ಅವಶ್ಯ. 25 ರಿಂದ 60 ವರ್ಷದವರೆಗೆ 8 ಗಂಟೆ ನಿದ್ರೆ ಅವಶ್ಯ. 61 ವರ್ಷದ ಮೇಲಿನವರಿಗೆ 6 ಗಂಟೆ ನಿದ್ರೆ ಅವಶ್ಯ ಎನ್ನುತ್ತದೆ ಆಯುರ್ವೇದ.
ಮಂಡಗದ್ದೆ ಪ್ರಕಾಶ ಬಾಬು