ಅಡ್ಡಗೆರೆ ದಾಟಿಬಿಡಿ...
ಶಕ್ತಿಯನ್ನು ಸೃಷ್ಟಿಸಲೂ ಅಸಾಧ್ಯ. ನಾಶ ಮಾಡುವುದೂ ಅಸಾಧ್ಯ. ದಶಸಾವಿರ ವರ್ಷಗಳ ಹಿಂದೆಯೇ ವೇದ ಕಾಲದ ಋಷಿಗಳು ಹೇಳಿರುವ ಹಾಗೆ ಇಡೀ ಸೃಷ್ಟಿಯೇ ಒಂದು ಶಕ್ತಿಘಟಕ. ಯೋಗಿಗಳ ಮಾತಿನಂತೆ ಈ ಸೃಷ್ಟಿಯ ಪ್ರತಿ ವಸ್ತುವೂ, ಪ್ರತಿ ಲೋಕವೂ, ಪ್ರತಿ ಯುಗವೂ ಶಕ್ತಿಯ ಒಂದು ರೂಪ. ಭೂಮಿಯ ಚಲನೆಯು ಯುಗಗಳ ಬದಲಾವಣೆಗೆ, ಸಮಯದ ಬದಲಾವಣೆಗೆ ಕಾರಣ. ನಿಮಗೆ ಗೊತ್ತಿರೋ ಹಾಗೆ ಭೂಮಿಯು ತನ್ನ ಅಕ್ಷದ ಮೇಲೆ ವಾಲಿಕೊಂಡಿದೆ. ಅದು ಅಕ್ಷದ ಮೇಲೆಯೇ ವೃತ್ತಾಕಾರವಾಗಿ ಸುತ್ತಲಾರಂಭಿಸಿದಾಗ, ಋತುಗಳು ಬದಲಾಗುತ್ತವೆ. ಅಕ್ಷವನ್ನೇ ಬದಲಿಸಿದಾಗ ಯುಗಗಳ ಬದಲಾವಣೆಯಾಗುತ್ತದೆ. ಒಂದು ಆಯಾಮದಿಂದ ಇನ್ನೊಂದು ಆಯಾಮಕ್ಕೆ ಚಲಿಸಿದಂತೆಲ್ಲ ಬದಲಾವಣೆಗಳು ಗೋಚರವಾಗುತ್ತವೆ. ಆ ಕಾರಣಕ್ಕೆ ನಿತ್ಯವೂ ಒಂದು ವಿಶಿಷ್ಟ ಶಕ್ತಿ ವಿನ್ಯಾಸವಿರುತ್ತದೆ.
ಆತ್ಮದ ಪಯಣ ಎಂದು ಕರೆಯಲ್ಪಡುವ ಜೀವಕ್ಕೆ, ಒಳ ಮನಸ್ಸನ್ನು ಜಾಗೃತಗೊಳಿಸಿ ಉದಾತ್ತ ಶಕ್ತಿಯನ್ನು ತುಂಬುವ ಒಬ್ಬ ಯೋಗಿಯ ಅವಶ್ಯವಿದೆ. ಆತನಿಂದ ಸತತ ಪರಿಶುದ್ಧತೆ ಹಾಗೂ ತಪಸ್ಸನ್ನು ಕಲಿಯುವ ಅಗತ್ಯವಿದೆ. ಸನಾತನ ಕ್ರಿಯೆ ಮತ್ತು ತಂತ್ರ ಸಾಧನವನ್ನು ಅಭ್ಯಸಿಸುವ ಮೂಲಕ ಕೆಲವು ನಿರ್ದಿಷ್ಟ ದಿನಗಳಲ್ಲಿ ಈ ಶಕ್ತಿಗಳಲ್ಲಿರುವ ಪ್ರಬಲ ಅಂಶಗಳನ್ನು ಹಿಡಿದಿಟ್ಟುಕೊಂಡು ಆತ್ಮಕ್ಕೆ ಶಕ್ತಿ ತುಂಬಬಹುದು.
ಹುಣ್ಣಿಮೆಯ ರಾತ್ರಿಯಂದು, ಎಲ್ಲ ಥರದ ಶಕ್ತಿಗಳು ಒಂದೇ ಸಮನೆ ಹೊರ ಹೊಮ್ಮುವ ಸ್ಥಿತಿಯಲ್ಲಿರುತ್ತವೆ. ನೀವೇ ಒಮ್ಮೆ ಎಚ್ಚರಿಕೆಯಿಂದ ಗಮನಿಸಿ ನೋಡಿ. ಆ ದಿನದಂದು ಎಲ್ಲ ಜೀವಿಗಳ ವರ್ತನೆಗಳಲ್ಲಿ ಒಂದು ಬದಲಾವಣೆ ಕಾಣುತ್ತಿರುತ್ತದೆ. ಹುಣ್ಣಿಮೆಯಂದು ಪ್ರಕೃತಿಯೇ ವಿಭಿನ್ನವಾಗಿ ವರ್ತಿಸುತ್ತದೆ. ಸಮುದ್ರಗಳು ಉಬ್ಬರ ಹೆಚ್ಚಿಸಿಕೊಂಡು ಗಡಸಾಗುತ್ತವೆ. ಪ್ರಾಣಿಗಳು ಉಗ್ರವಾಗುತ್ತವೆ. ಮಾನಸಿಕ ಸಂತುಲನವಿಲ್ಲದ ವ್ಯಕ್ತಿಗಳು ವಿಪರೀತವಾಗಿ ವರ್ತಿಸುತ್ತಾರೆ. ರಸ್ತೆಗಳಲ್ಲಿ ಹೆಚ್ಚು ಜಗಳಗಳು, ಹಿಂಸಾತ್ಮಕ ಚಟುವಟಿಕೆಗಳು ಸಂಭವಿಸುತ್ತವೆ. ಕಾರಣ ಇಷ್ಟೇ. ಈ ಹೊತ್ತಿನಲ್ಲಿ ಶಕ್ತಿಗಳು ರೂಪಾಂತರಗೊಳ್ಳುತ್ತಿರುತ್ತವೆ. ಚಂದ್ರನ ಕಾಂತಶಕ್ತಿ ಉನ್ನತ ಸ್ಥಾನದಲ್ಲಿ ಇರುತ್ತದೆ. ಹಾಗಾಗಿ ಶಕ್ತಿ ವಿನ್ಯಾಸವು ಸೂಕ್ಷ್ಮವಾಗಿರುತ್ತದೆ.
ದೇಶಾದ್ಯಂತ ಬುದ್ಧ ಪೂರ್ಣಿಮೆಯನ್ನು ವೈಶಾಖದಲ್ಲಿ ಆಚರಿಸಲಾಗುತ್ತದೆ. ಬುದ್ಧ ಎಂದರೆ ಎಲ್ಲ ಬುದ್ಧಿಮತ್ತೆಯ ಗಡಿಗಳನ್ನು ದಾಟಿದಾತ ಎಂದರ್ಥ. ತನ್ನ ಐದೂ ಇಂದ್ರಿಯಗಳನ್ನು ತೆರೆದಿಡುವ ಶಕ್ತಿ ಗುರುವಿಗೆ ಮಾತ್ರ ಇರುತ್ತದೆ. ಆತ ಮಾತ್ರ ತನ್ನ ಶಕ್ತಿಗಳನ್ನು ಶಿಷ್ಯರಿಗೆ ಧಾರೆ ಎರೆಯಬಲ್ಲ. ಅವರನ್ನು ನೋವು ಮತ್ತು ಕಷ್ಟಗಳಿಂದ ದೂರ ಕೊಂಡೊಯ್ಯಬಲ್ಲ. ಗುರು ಎಂಬುದು ದೈಹಿಕ ಅಂಶವಲ್ಲ ಅದೊಂದು ಶಕ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆ ಶಕ್ತಿ ಮಾತ್ರ ಎಲ್ಲವನ್ನೂ ನಿಯಂತ್ರಿಸಬಲ್ಲದು. ನೀವು ಈಗ ಮಾಡಬೇಕಿರುವುದು ಇಷ್ಟೇ. ನಿಮ್ಮ ಬುದ್ಧಿಗೆ ಹಾಕಿಕೊಂಡಿರುವ ಅಡ್ಡಗೆರೆಯನ್ನು ದಾಟಿ ಎತ್ತರವಾಗುವುದು.
-ಯೋಗಿ ಅಶ್ವಿನಿ