ಆರೋಗ್ಯದ ಮೇಲೆ ಗ್ರಹದ ಪರಿಣಾಮ
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. ಜನ್ಮ ಕುಂಡಲಿಯ ಲಗ್ನದಿಂದ ಮತ್ತು ಷಷ್ಠ ಸ್ಥಾನದಿಂದ ವ್ಯಕ್ತಿಯ ಆರೋಗ್ಯದ ಬಗ್ಗೆ ತಿಳಿಯಬಹುದು. ಕೆಲವರು ಹುಟ್ಟಿದಾಗಿನಿಂದ ಸದಾ ಯಾವುದಾದರೂ ಒಂದು ಕಾಯಿಲೆಯಿಂದ ನರಳುತ್ತಲೇ ಇರುತ್ತಾರೆ.
ಒಂದು ದಿನ ತಲೆನೋವು ಬಂದರೆ ಮತ್ತೊಂದು ದಿನ ಎದೆನೋವು. ಹೀಗೇ ನಿತ್ಯವೂ ಒಂದಿಲ್ಲೊಂದು ಕಾಯಿಲೆಯಿಂದ ನರಳುತ್ತಿರುತ್ತಾರೆ. ಇದಕ್ಕೆ ಕಾರಣ ಜಾತಕ ಕುಂಡಲಿಯ ಲಗ್ನದಲ್ಲಿ ಅಥವಾ ಷಷ್ಠ ಸ್ಥಾನದಲ್ಲಿ ಪಾಪ ಗ್ರಹಗಳಾಗಲೀ, ನೀಚಗ್ರಹಗಳಾಗಲೀ, ನೀಚ ಗ್ರಹದ ದೃಷ್ಟಿಯಾಗಲೀ ಇರುವುದು ಮತ್ತು ಲಗ್ನಾಧಿಪತಿಯಾಗಲೀ ಷಷ್ಟ ಸ್ಥಾನಾಧಿಪತಿಯಾಗಲೀ ನೀಚನಾಗಿದ್ದಾಗ ಆ ವ್ಯಕ್ತಿ ಆರೋಗ್ಯದಿಂದಿರಲು ಸಾಧ್ಯವಿಲ್ಲ. ದುರ್ಬಲ ಲಗ್ನಾಧಿಪತಿ ದಶಾಭುಕ್ತಿಗಳಲ್ಲಾಗಲೀ ಅಥವಾ ದುರ್ಬಲ ಷಷ್ಟ ಸ್ಥಾನಾಧಿಪತಿಯ ದಶಾಭುಕ್ತಿಗಳಲ್ಲಾಗಲೀ ಇದ್ದರೆ ಆರೋಗ್ಯ ಹದಗೆಡುವುದು.
ಗೋಚಾರದಲ್ಲಿ ಏಳೂವರೆ ಶನಿಕಾಟವಿದ್ದಾಗಲೂ, ಅರ್ಧಾಷ್ಟಮ ಶನಿಕಾಟವಿದ್ದಾಗಲೂ ಹಲವು ರೀತಿಯಲ್ಲಿ ವ್ಯಾಧಿಗಳಿಂದ ನರಳುವಂತಾಗುತ್ತದೆ.
ಪ್ರತಿ ಸಮಸ್ಯೆಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಅನಾರೋಗ್ಯ ಉಂಟಾದಾಗ ಮೃತ್ಯುಂಜಯ ಜಪ ಮಾಡಿಸುವುದು, ನವಗ್ರಹಗಳ ಮಂತ್ರ ಪಠಿಸುವುದು, ನವಧಾನ್ಯ ದಾನ ಮಾಡುವುದರಿಂದ ಹೋಮ ಮಾಡಿಸುವುದರಿಂದ, ಸೂಕ್ತ ರತ್ನಗಳನ್ನು ಧರಿಸುವುದರಿಂದ ಆರೋಗ್ಯ ಸುಧಾರಿಸುವುದು. ಯಾವುದಕ್ಕೂ ನಂಬಿಕೆ ಇರಬೇಕು. ಭಕ್ತಿಯಿಂದ ಪೂಜಿಸಿಸುವುದರಿಂದ ಸಕಲ ದೋಷಗಳಿಂದ ಮುಕ್ತರಾಗಬಹುದು.
-ಡಾ. ಹನುಮಂತರಾವ್ ಸಬನೀಸ್