ಪ್ರಶಾಂತ ಮಾತು
ರಾಮ-ರಾವಣರ ಮಹಾಯುದ್ಧ ಮುಗಿದು, ರಾವಣ ವಧೆಯಾದ. ಆ ಸಂದರ್ಭದಲ್ಲಿ ಸೀತೆಯನ್ನು ರಾಮನ ಬಳಿಗೆ ಕರೆತಂದಾಗ ರಾಮನು ಆಕೆಗೆ ಕ್ರೂರ ಮಾತುಗಳನ್ನು ಹೇಳುತ್ತಾನೆ. ಆಗ ಸೀತೆ ಸಿಡಿಮಿಡಿಗೊಂಡು ಹೀಗೆ ಹೇಳುತ್ತಾಳೆ.
ಕಿಂ ಮಾಂ ಅಸದೃಶಂ ವಾಕ್ಯಂ ಈದೃಶಂ ಶ್ರೋತ್ರ ದಾರುಣಂ
ರೂಕ್ಷಂ ಶ್ರಾವಯಸೇ ವೀರ ಪ್ರಾಕೃತಃ ಪ್ರಾಕೃತಾಮಿವ॥
ಅಸಂಸ್ಕೃತನಾದ ಗಂಡ, ಅಸಂಸ್ಕೃತ ಹೆಂಡತಿಗೆ ಹೇಳುವಂತೆ ಇಂಥ ಕಠಿಣವಾದ, ಅಯೋಗ್ಯವಾದ ಮಾತನ್ನು ಯಾಕೆ ಹೇಳುತ್ತೀಯೆ? ಎನ್ನುವುದು ಮೇಲಿನ ಶ್ಲೋಕದ ಅರ್ಥ. 'ಪ್ರಾಕೃತ' ಅಂದರೆ ಸಂಸ್ಕೃತಿ ಇಲ್ಲದ್ದು, 'ಸಂಸ್ಕೃತ' ಎಂದರೆ ಸಂಸ್ಕೃತಿ ಉಳ್ಳದ್ದು. ಅದು ಅರಿವು ಮತ್ತು ಶಿಸ್ತುಗಳ ಫಲ. ಸುಸಂಸ್ಕೃತನು ಕ್ರೂರವಾಗಿ ಮಾತನಾಡನು. ಒಬ್ಬಾತನು ಸುಸಂಸ್ಕೃತನು ಎನ್ನುವುದಕ್ಕೆ ಆತನ ಮೃದುವಾದ ಮಾತು ಸ್ಪಷ್ಟ ಲಕ್ಷಣ.
ನಾವು ಪ್ರೀತಿ ಮತ್ತು ನಿರ್ವಂಚನೆಗಳಿಂದ ಕೂಡಿದ ಸವಿನುಡಿಗಳನ್ನಾಡಬೇಕು. ದಾನಕ್ಕಿಂತ ನಗುಮೊಗದ ಸವಿನುಡಿ ಹೆಚ್ಚು ಸಂತೋಷ ನೀಡುತ್ತದೆ. ಮುಖವನ್ನರಳಿಸಿ ಹಿತದಿಂದ ನೋಡಿ ಎದೆ ತುಂಬಿ ಸವಿನುಡಿಯನ್ನು ನಡಿಯುವುದೇ ಮಾನವ ಧರ್ಮ.
ಸವಿನುಡಿಯನ್ನು ಎಲ್ಲರೊಡನೆಯೂ ಆಡುವವರು ಬಡತನದ ಕೋಟಲೆಗೆ ಸಿಲುಕಿದರೂ ದುಃಖಿಸುವುದಿಲ್ಲ. 'ಸವಿನುಡಿಯನ್ನು ಆಡಲು ಸಾಧ್ಯವಿರುವಾಗ ಕಹಿ ನುಡಿಯನ್ನಾಡುವುದೆಂದರೆ ಫಲಿತ ಹಣ್ಣಿರುವಾಗ ಕಸುಗಾಯನ್ನು ತಿಂದಂತೆ' ಎನ್ನುತ್ತಾರೆ ತಿರುವಳ್ಳುವರ್.
ಪ್ರಿಯ ವಾಕ್ಯ ಎಲ್ಲರಿಗೂ ಸಂತೋಷ ನೀಡುವುದರಿಂದ ಅಂಥ ಮಾತುಗಳನ್ನೇ ಆಡಬೇಕು. ಒಳ್ಳೆಯ ಮಾತುಗಳಿಗೆ ಬಡತನ ಇರಬಾರದು. ಮೃದು ವಚನ ಮೂರು ಲೋಕಗಳನ್ನೂ ಮುಟ್ಟುತ್ತದೆ. ಮೂರು ದಿನಗಳ ಮನುಷ್ಯನ ಬದುಕಿನಲ್ಲಿ ಮಾತು ಬಲ್ಲವನು ಮಾಣಿಕ್ಯ ತರುತ್ತಾನೆ. ಸರಿಯಾದ ಮಾತರಿಯದವನು ಜಗಳವನ್ನು ತರುತ್ತಾನೆ.
ನಮ್ಮ ನಾಲಗೆಯ ತುದಿಯಲ್ಲೇ ಗೆಳೆಯರೂ ಬಂಧುಗಳೂ ಇದ್ದಾರೆ. ಎಚ್ಚರವಿಲ್ಲದೆ ನಾಲಗೆ ವರ್ತಿಸಿದರೆ ಹಗೆಗಳೂ ಹುಟ್ಟಿಕೊಳ್ಳುತ್ತವೆ. ಅದಕ್ಕಾಗಿಯೇ ನಮ್ಮ ಹಿರಿಯರು 'ಅರಿತರೆ ಮಾತನಾಡು, ಮರೆತರೆ ಕೂತು ನೋಡು' ಎಂಬ ಅನುಭವದ ಮಾತನ್ನು ಹೇಳಿದುದು.
ಭಾಷಣ ಮತ್ತು ಭೋಜನಗಳಲ್ಲಿ ನಾಲಗೆಯ ಪಾತ್ರ ಮುಖ್ಯವಾದುದು. ಈ ಎರಡು ಕ್ರಿಯೆಗಳಲ್ಲೂ ನಾಲಗೆಯನ್ನು ಹೆಚ್ಚು ಚಾಚಿದರೆ ಕ್ರಿಯೆ ವಿಕ್ರಿಯೆಯಾಗುತ್ತದೆ. 'ಮಾತು ಮನೆ ಕೆಡಿಸಿತು' ಎನ್ನುವ ಗಾದೆಯಿದೆ. ದೈನಂದಿನ ವ್ಯವಹಾರ, ವಾಗ್ಮಿತೆ, ಭಾಷಣಗಳಿಗೂ ಈ ಗಾದೆ ಅನ್ವಯಿಸುತ್ತದೆ. ಅರ್ಥವಿಲ್ಲದ ಶಬ್ದಗಳನ್ನು ಹೊರಸೂಸುವರು ಜನರನ್ನು ದೂರವಾಗಿಸುತ್ತಾರೆ. ಹಿತಮಿತವಾದ ಮಾತು ಮಾಣಿಕ್ಯದಂತೆ ಸದ್ವಿನಯ ಮತ್ತು ವಿವೇಕ ಆ ಮಾಣಿಕ್ಯಕ್ಕೆ ಕುಂದಣ.
ಮನುಷ್ಯನು ತನ್ನೆರಡು ಕಿವಿಗಳಿಂದಲೂ ಕೇಳಬೇಕೆನ್ನುವುದಕ್ಕೆ ದೇವರು ಒಂದೇ ನಾಲಗೆಯನ್ನು ಬಾಯಿಯಲ್ಲಿರಿಸಿದ್ದಾನೆ. ಆದುದರಿಂದ ನಾವು ಮಾತನಾಡಲೇ ಬೇಕಾದಾಗ ಸಮಯ ಮತ್ತು ಸಂದರ್ಭಗಳನ್ನರಿತು ಮಾತನಾಡಬೇಕು.
-ಶಿವರಾಮ ಭಟ್ ಹತ್ತೊಕ್ಕಲು