ಭಕ್ತಿ-ಭವಿಷ್ಯ

ನಗರ ಸಂಕೀರ್ತನೆ ಎಂಬ ಪುಣ್ಯದ ಸುತ್ತು!

ನಸುಕು..ಪ್ರಾತಃಕಾಲ…ಬ್ರಹ್ಮ ಮುಹೂರ್ತ..ಎಂದೆಲ್ಲಾ ಉಲ್ಲೇಖಿತವಾಗಿರುವ ಮುಂಜಾವಿನ ಶ್ರೇಷ್ಟ ಸಮಯದಲ್ಲಿ ಒಂದು ಆಧ್ಯಾತ್ಮ ಮತ್ತು ಆರೋಗ್ಯ ಎರಡರ...

ನಸುಕು..ಪ್ರಾತಃಕಾಲ…ಬ್ರಹ್ಮ ಮುಹೂರ್ತ..ಎಂದೆಲ್ಲಾ ಉಲ್ಲೇಖಿತವಾಗಿರುವ ಮುಂಜಾವಿನ ಶ್ರೇಷ್ಟ ಸಮಯದಲ್ಲಿ ಒಂದು ಆಧ್ಯಾತ್ಮ ಮತ್ತು ಆರೋಗ್ಯ ಎರಡರ ಸಮನ್ವಯವಾದ ಹವ್ಯಾಸವೊಂದರ ಬಗ್ಗೆ ಬೆಳಕು ಚೆಲ್ಲುತ್ತಿದ್ದೇನೆ… ಬಾಲ್ಯದಿಂದಲೂ ಸತ್ಯಸಾಯಿ ಭಜನೆಗಳಲ್ಲಿ ಪಾಲ್ಗೊಳ್ಳುತ್ತಿರುವ ನಾವು ಮುಂಜಾವು ೫ ಗಂಟೆಗೆಲ್ಲಾ ಶುಚಿರ್ಭೂತರಾಗಿ ನಮ್ಮ ಸಾಯಿ ಮಂದಿರಗಳಿಂದ  ನಗರ ಸಂಕೀರ್ತನೆ ಎಂಬ ಕಾರ್ಯಕ್ರಮಕ್ಕಾಗಿ ಸುತ್ತ ಮುತ್ತಲಿನ ಬೀದಿಯಲ್ಲಿ  ಸುಮಾರು ಒಂದು ಗಂಟೆ ಭಗವಂತನ ನಾಮಸ್ಮರಣೆ ಮಾಡುತ್ತಾ ಸಾಗುವ ಅಭ್ಯಾಸವನ್ನಿಟ್ಟುಕೊಂಡೆದ್ದೇವೆ. ಈ ಸೇವೆಯನ್ನು ಕೆಲವು ಭಾನುವಾರಗಳು ಮತ್ತು ವಾರ್ಷಿಕ ಹಬ್ಬ ಹರಿದಿನಗಳಂದು ಪುಣ್ಯಕಾರ್ಯ ಮತ್ತು ಶುಭಾರಂಭವೆಂದು ಭಾವಿಸಿ ಏರ್ಪಡಿಸುತ್ತೇವೆ
ಇನ್ನೂ ಬೆಳಕು ಹರಿಯುವ ಮೊದಲೇ ಸುತ್ತಲಿನ ಜನರಿಗೆ ಸುಪ್ರಭಾತಪ್ರದವಾದ ಈ ಗೋಷ್ಟಿಯಲ್ಲಿ ಸುಶ್ರಾವ್ಯವಾದ ರಾಮ, ಕೃಷ್ಣ , ಈಶ್ವರ, ದೇವಿ ಅಲ್ಲದೇ ಸರ್ವಧರ್ಮ ಪ್ರಿಯನಾದ ದೇವರ ಹಲವು ನಾಮಗಳಾದ ಅಲ್ಲಾ, ಯೇಸು, ಝೋರಾಷ್ಟ್ರ, ಬುದ್ಧ, ಮಹಾವೀರ ಮತ್ತು ನಾನಕರನ್ನು ನೆನೆಯುತ್ತಾ  ಸಂಗೀತ ಮತ್ತು ಉತ್ಸಾಹ ಭರಿತ ದನಿಗಳಲ್ಲಿ ಸ್ವರ ಹೊರಡಿಸುತ್ತಾ, ಪಕ್ಕ ವಾದ್ಯಗಳ ಮೇಳದೊಂದಿಗೆ ಸಾಗುವಾಗ ಅದೇನೋ ಅನುಪಮ ಆನಂದ ಮತ್ತು ತೃಪ್ತಿ ಉಂಟಾಗಿ ಕಣ್ಣಾಲಿಗಳಲ್ಲಿ  ನೀರು ತುಂಬುವುದೇನೋ ನಮಗೆ ಸಹಜ.
ಇನ್ನು ಸುತ್ತಮುತ್ತಲಿನ ಜನರ ವೈವಿಧ್ಯಮಯ ಪ್ರತಿಕ್ರಿಯೆಯೂ ವಿವರಣಾರ್ಹವೇ!
ಬೆಳಿಗ್ಗೆ ಎದ್ದು ಕೆಲಸಕ್ಕೆ ಹೊರಟಿರುವ ಮನೆ ಕೆಲಸಗಾರರ ಅಚ್ಚರಿಯ ನೋಟ… ವಾಕಿಂಗ್, ಜಾಗಿಂಗ್ ಹೊರಟವರ ಮೆಚ್ಚುಗೆಯ ನೋಟ.

 ಮುಂಜಾವಿನಲ್ಲಿ ಎದ್ದು ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ  ಚುರುಕಾದ ಮಕ್ಕಳ ಕೋಣೆಯ ಕಿಟಕಿಗಳಿಂದ ಇಣುಕುನೋಟ…ಬೇಗ ಏಳುವ ಅಭ್ಯಾಸವಿದ್ದು ಅಂಗಳದಲ್ಲಿ ತೋಟಗಾರಿಕೆ ಮಾಡುತ್ತಲೋ, ದೇವರ ಪೂಜೆಗೆ ಹೂ ಕಿತ್ತುತ್ತಲೋ ಇರುವ ನಿವೃತ್ತ ವೃದ್ಧರ ಭಕ್ತಿಯ ನೋಟ… ದೊಡ್ಡ ಬಂಗಲೆಗಳ  ದ್ವಾರಪಾಲಕರ ಕಂಗಳಲ್ಲಿ ತಮ್ಮಂತೆ ಬೇರೆಯವರೂ ಎದ್ದಿದ್ದಾರಲ್ಲ ಎಂಬ ಆಶ್ಚರ್ಯ ಮಿಶ್ರಿತ ಸ್ವಾಗತದ ನೋಟ… ರಾತ್ರಿ ಪಾಳಿಯಲ್ಲಿ ಗಸ್ತು ಹೊಡೆಯುತ್ತಿರುವ ಪೋಲಿಸ್ ಜೀಪುಗಳ ಒಳಗಿನಿಂದ  ಸಮವಸ್ತ್ರ ಧರಿಸಿದ ಸಿಬ್ಬಂದಿಯ ಕರ್ತವ್ಯ ನಿಷ್ಟ ನೋಟ.….ಹೀಗೆ ನಾವು ಭಜನೆ ಹಾಡುತ್ತಾ ಸಾಗಿದಂತೆಲ್ಲಾ ಮೆತ್ತಗೆ ಜಾಗೃತಗೊಳ್ಳುವ ಲೋಕದ ಹತ್ತು ಹಲವಾರು ಜನಜೀವನದ ದಿನಾರಂಭದ ದೃಶ್ಯಗಳು ನಮಗೆದುರಾಗುತ್ತವೆ...  ಒಟ್ಟಾರೆ ಎಲ್ಲರಿಗೂ ಇದು ಸ್ವಾಗತಾರ್ಹ ಅನುಭವವೇ ಆಗಿದ್ದು, ಯಾರೂ ಶಾಂತಿಭಂಗವೆಂದು ಭಾವಿಸದ ಹವ್ಯಾಸ ಎಂದು ತಿಳಿದು ಬರುತ್ತದೆ.

ಈ ರೀತಿ ಒಂದು ಗಂಟೆ ಅವಧಿಯಲ್ಲಿ ನಾವು ಹಾಡಿ ನೆಡೆದು ತೃಪ್ತರಾಗಿ ಹಿಂತಿರುಗಿ ಬಂದ ನಂತರ ಇಡೀ ದಿನಾ ದೈಹಿಕವಾಗಿ ಲವಲವಿಕೆಯಿಂದಲೂ ಮಾನಸಿಕವಾಗಿ ಉಲ್ಲಾಸದಿಂದಲೂ ಇರುವುದು ಸಹಜವೇ ಆದ್ದರಿಂದ ಇದು ವ್ಯಾಯಾಮ ಮತ್ತು ಸದಾಚಾರದ ಉತ್ತಮ ಸಂಗಮ ಎನ್ನಬಹುದು.

-ನಾಗೇಶ್ ಕುಮಾರ್ ಸಿ ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT