ಸಂತ ಕಬೀರರು ರಾಮದರ್ಶನಕಾಂಕ್ಷಿಯಾಗಿ ಭದ್ರಾಚಲಕ್ಕೆ ಬಂದಾಗ ಅಲ್ಲಿನ ಅರ್ಚಕರು ಪರಧರ್ಮದವನೆಂಬ ನೆಪಹೇಳಿ ದೇವರ ದರ್ಶನ ಮಾಡಲು ಅವಕಾಶ ನೀಡಲಿಲ್ಲ. ಇದರಿಂದ ಬೇಸರಪಡದ ಕಬೀರರು ಗೋದಾವರೀ ನದಿ ದಡಕ್ಕೆ ಬಂದು ಅಲ್ಲಿ ರಾಮನನ್ನು ಸ್ಮರಿಸುತ್ತಾ ಕುಳಿತರು. ಆಗ ದೇಗುಲದಲ್ಲಿನ ಶ್ರೀರಾಮನ ವಿಗ್ರಹ ಕಬೀರರ ಮುಂದೆ ಬಂದು ನಿಂತಿತು.
ಅತ್ತ ದೇಗುಲದಲ್ಲಿ ಶ್ರೀರಾಮನ ವಿಗ್ರಹ ಅರ್ಚಕರಿಗೆ ಕಾಣಲಿಲ್ಲ. ಭಯಭೀತರಾದ ಅರ್ಚಕರು ದೈವ ಭಕ್ತನಾದ ಗೊಪನ್ನನನ್ನು ಕಂಡು ವಿಷಯ ತಿಳಿಸಿದರು. ಆಗ ಅರ್ಚಕರು ಮಾಡಿದ ತಪ್ಪನ್ನು ಅರಿತ ಗೋಪನ್ನ ಗ್ರಾಮಸ್ಥರೊಂದಿಗೆ ಕಬೀರರ ಬಳಿ ಹೋಗಿ ಕ್ಷಮೆ ಯಾಚಿಸಿದ. ಆಗ ಕಬೀರರು ದೇವರ ಪ್ರಾರ್ಥನೆ ಮಾಡಿದಾಗ ವಿಗ್ರಹ ಯಥಾಸ್ಥಾನಕ್ಕೆ ಬಂತು. ರಾಮದಾಸು ಎಂದು ಕರಿಯಲ್ಪಡುವ ಗೋಪನ್ನ ಸಂತ ಕಬೀರರಿಂದ ರಾಮತಾರಕಮಂತ್ರವನ್ನು ಉಪದೇಶಪಡೆದ.
ಕ್ರಿ.ಶ. 1674ರಿಂದ 1687ರ ವರೆಗೂ ಗೋಲ್ಕೊಂಡ ಸಂಸ್ಥಾನವನ್ನು ಆಳಿದ ಅಬ್ದುಲ್ ಹಸನ್ ತಾನಿಷಾ ಅವರಿಗೆ ಭದ್ರಾಚಲಂ ತಾಲೂಕಿನಿಂದ ಆರು ಲಕ್ಷ ವರಹ ಕಂದಾಯ ಬರಬೇಕಾಗಿತ್ತು. ಅವರ ಆಸ್ಥಾನದಲ್ಲಿ ಮಂತ್ರಿಗಳಾದ ಅಕ್ಕನ್ನ, ಮಾದನ್ನರ ಸೊದರ ಅಳಿಯನಾದ, ರಾಮದಾಸುನನ್ನು ಭದ್ರಾಚಲ ಪ್ರಾಂತ್ಯಕ್ಕೆ ತಹಸೀಲ್ದಾರನನ್ನಾಗಿ ನೇಮಿಸಿ ಈ ಹಣ ವಸೂಲು ಮಾಡಿ ಸಂಸ್ಥಾನಕ್ಕೆ ಜಮಾ ಮಾಡಬೇಕೆಂದು ಸೂಚಿಸಲಾಗುತ್ತದೆ. ಗೋಪನ್ನ ಹಣವನ್ನು ನವಾಬರ ಅಪ್ಪಣೆ ಇಲ್ಲದೆ ಶ್ರೀರಾಮಚಂದ್ರನ ದೇಗುಲ ನಿರ್ಮಾಣಕ್ಕೆ ಖರ್ಚು ಮಾಡುತ್ತಾನೆ. ನವಾಬನಾದ ತಾನಿಷಾಗೆ ಈ ವಿಷಯ ತಿಳಿದು ಗೋಪನ್ನನನ್ನು ಸೆರಮನೆಗೆ ತಳ್ಳುತ್ತಾನೆ.
ಗೋಪನ್ನ ಅಥವಾ ರಾಮದಾಸು ಸೆರಮನೆಯಲ್ಲಿ ತನ್ನ ನೋವು ನಲಿವುಗಳನ್ನು ಹಾಡುಗಳ ರೂಪದಲ್ಲಿ ಬರೆಯುತ್ತಾನೆ. ಈ ಹಾಡುಗಳಲ್ಲಿ ರಾಮದಾಸು ಶ್ರೀರಾಮಚಂದ್ರನನ್ನು ದೂಷಿಸುವುದಲ್ಲದೆ ತನ್ನಿಂದ ರಾಮ ಪಡೆದ ವೈಭೋಗಗಳನ್ನು ವರ್ಣಿಸುತ್ತಾನೆ. ಈಗ ತೆಲುಗಿನ ಜನ ಲಾವಣಿ ರೂಪದಲ್ಲಿ ಈ ಹಾಡುಗಳನ್ನು ಹಾಡುವುದುಂಟು. ಗೋಪನ್ನ ದುರ್ಬಳಕೆ ಮಾಡಿದ ಎನ್ನಲಾದ ಆರು ಲಕ್ಷ ವರಹಗಳನ್ನು ಶ್ರೀರಾಮಲಕ್ಷಣರು ಒಂದು ದಿನ ರಾತ್ರಿ ರಾಮೋಜಿ, ಲಕ್ಷ್ಮೋಜಿ ಎಂಬ ಹೆಸರಿನಲ್ಲಿ ಬಂದು ತಾನಿಷಾಗೆ ಸಂದಾಯ ಮಾಡಿ ರಸೀದಿಯನ್ನು ಪಡೆಯುತ್ತಾರೆ.
ಹಣ ಸಂದಾಯ ಮಾಡಿರುವರು ದೇವತೆಗಳಾದ ರಾಮ-ಲಕ್ಷ್ಮಣರು ಎಂದು ಸಂತ ಕಬೀರರಿಂದ ತಿಳಿದು ರಾಮದಾಸುನನ್ನು ತಾನೀಷಾ ಕ್ಷಮೆ ಯಾಚಿಸಿ ಸೆರೆಮನೆಯಿಂದ ಬಿಡುಗಡೆ ಮಾಡುತ್ತಾನೆ. ಅಂದು ರಾಮೋಜಿ ಹೆಸರಿನಲ್ಲಿ ಶ್ರೀರಾಮನು ತಾನಿಷಾಗೆ ನೀಡಿದ ಶ್ರೀರಾಮನ ಕಾಲದ ನಾಣ್ಯವಾದ ರಾಮಮಾಡ ಎನ್ನುವ ನಾಣ್ಯವನ್ನು ಇಂದಿಗೂ ಭದ್ರಾಚಲದ ದೇಗುಲದಲ್ಲಿ ಕಾಣಬಹುದು. ರಾಮದಾಸು ದೇಗುಲಕ್ಕೆ ನೀಡಿದ ಚಿನ್ನದಾಭರಣಗಳು ದೇಗುಲದಲ್ಲಿ ಇಂದಿಗೂ ಭದ್ರ. ಆಂಧ್ರದ ಖಮ್ಮಂ ಜಿಲ್ಲೆಯಲ್ಲಿರುವ ಭದ್ರಾಚಲ ಶ್ರೀರಾಮ ದೇಗುಲವು ಭಾರತದ 25 ರಾಮಕ್ಷೇತ್ರಗಳಲ್ಲೊಂದು. ಈ ಕ್ಷೇತ್ರ ಗೋದಾವರಿ ನದಿ ದಡದಲ್ಲಿದೆ.
ಭದ್ರಾಚಲಕ್ಕೆ 22 ಮೈಲಿ ದೂರದಲ್ಲಿ ಪರ್ಣಶಾಲೆ ಇದೆ. ಇದು ಶ್ರೀರಾಮ ವನವಾಸ ಕಾಲದಲ್ಲಿ ವಾಸಿಸಿದ ಸ್ಥಳ. ಸೀತಾಮಾತೆಯನ್ನು ರಾವಣ ಅಪಹರಿಸಿದ್ದ ಸ್ಥಳವನ್ನು ಇಂದಿಗೂ ರಕ್ಷಣೆ ಮಾಡಲಾಗಿದೆ. ಇಲ್ಲಿ ಗೋದಾವರಿ ನದಿ ಮಧ್ಯದಲ್ಲಿ ಉಷ್ಣದ ನೀರು ಬರುತ್ತಿದೆ. ಶ್ರೀರಾಮ ನವಮಿಯಂದು ಆಂಧ್ರಪ್ರದೇಶ ಸರ್ಕಾರ ಸೀತಾರಾಮರ ಕಲ್ಯಾಣೋತ್ಸವಕ್ಕಾಗಿ ಇಂದಿಗೂ ಉಡುಗೊರೆಗಳನ್ನು ಕಳಿಸುವ ಸಂಪ್ರದಾಯ ಉಳಿಸಿಕೊಂಡಿದೆ.
- ಸಂತೋಷ ರಾವು