ಶಿವಗಂಗೆಯಲ್ಲಿರುವ ಉದ್ಭವ ಸುಬ್ರಹ್ಮಣ್ಯ ದೇವಾಲಯ (ಉದ್ಭವ ಶಿಲೆಯ ಮುಂಭಾಗದಲ್ಲಿ ವಿಗ್ರಹ ಪ್ರತಿಷ್ಠಾಪನೆ 
ಭಕ್ತಿ-ಜ್ಯೋತಿಷ್ಯ

ಶ್ರೀಕ್ಷೇತ್ರ ಶಿವಗಂಗೆಯ ಉದ್ಭವ ಸುಬ್ರಹ್ಮಣ್ಯ ದೇಗುಲದ ಮಹಿಮೆ ಹಾಗೂ ಸುಬ್ರಹ್ಮಣ್ಯ ಷಷ್ಠಿ ಆಚರಣೆ

ಶಿವಗಂಗಾ ಕ್ಷೇತ್ರದಲ್ಲಿರುವ ಶೃಂಗೇರಿ ಶಾಖಾ ಪೀಠದಲ್ಲಿದೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಸುಬ್ರಹ್ಮಣ್ಯ ಸ್ವಾಮಿ ಸ್ವಯಂ ಉದ್ಭವವಾಗಿರುವುದು ಈ ದೇವಾಲಯದ ವಿಶೇಷ.

ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಪರಮ ಶ್ರೇಷ್ಠವಾದ ವಿಚಾರಗಳನ್ನು ಅರ್ಜುನನಿಗೆ ತಿಳಿಸುತ್ತಾ ಮಾರ್ಗಶಿರ ಮಾಸದ ಬಗ್ಗೆಯೂ ಉಲ್ಲೇಖಿಸಿದ್ದಾನೆ. ಮಾಸಾನಾಂ ಮಾರ್ಗಶೀರ್ಷೋಹಂ ಋತೂನಾಂ ಕುಸುಮಾಕರಃ || ಎಂದು ಹೇಳಿದ್ದಾನೆ. ಅಂದರೆ ಮಾಸಗಳಲ್ಲಿ ಮಾರ್ಗಶೀರ್ಷ ಮಾಸವು ನಾನು, ಋತುಗಳಲ್ಲಿ ವಸಂತ ಋತು ನಾನೇ ಆಗಿದ್ದೇನೆ ಎಂದು ಹೇಳಿದ್ದಾನೆ. 
ಭಗವದ್ಗೀತೆಯ ಬೋಧನೆಯಲ್ಲಿ ಮಾಸಾನಾಂ ಮಾರ್ಗಶೀರ್ಷೋಹಂ ಎಂದು ಹೇಳುವ ಮೂಲಕ ಸಾಕ್ಷಾತ್ ಭಗವಂತನೇ ಮಾರ್ಗಶಿರ ಮಾಸದ ಶ್ರೇಷ್ಠತೆಯನ್ನು ಜಗತ್ತಿಗೆ ತಿಳಿಸಿದ್ದಾನೆ. ಮಾಸಗಳಲ್ಲೇ ಮಾರ್ಗಶೀರ್ಷ ಮಾಸವು ಶ್ರೇಷ್ಠ ಮಾಸವಾಗಿದ್ದು ಪವಿತ್ರ ಕ್ಷೇತ್ರಗಳಲ್ಲಿ, ನದಿ, ಸಂಗಮಗಳಲ್ಲಿ ಸಂಕಲ್ಪ ಮಾಡಿ ಸ್ನಾನ ಮಾಡುವುದರಿಂದ ಇಷ್ಟಾರ್ಥ ಸಿದ್ಧಿ, ಮೋಕ್ಷ ಪಡೆಯಲು ಸಾಧ್ಯವಿದೆ. ಮಾರ್ಗಶಿರ ಮಾಸದ ಪ್ರಮುಖ ಆಕರ್ಷಣೆ, ಆಚರಣೆಗಳಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಧಾನವಾದದ್ದು. ಮಾರ್ಗಶಿರ ಮಾಸದ ಷಷ್ಠಿಯಂದು ಸುಬ್ರಹ್ಮಣ್ಯನನ್ನು ವಟುವಿನ ರೂಪದಲ್ಲಿ ಆರಾಧಿಸಲಾಗುತ್ತದೆ. ಸುಬ್ರಹ್ಮಣ್ಯನನ್ನು ವಟು( ಬ್ರಹ್ಮಚಾರಿ) ಸ್ವರೂಪದಲ್ಲಿ ಆರಾಧಿಸಲಾಗುವುದರಿಂದ ಷಷ್ಠಿ ದೇವತೆಗೆ ಪ್ರೀತಿಯುಂಟಾಗಿ ಮನೆಯ ಮಕ್ಕಳನ್ನು ಕಾಪಾಡುವಳು ಎಂದು ನಂಬುಗೆ.
ಸುಬ್ರಹ್ಮಣ್ಯ ಸ್ವಾಮಿ ತಾರಕಾಸುರನ ಸಂಹಾರಕ್ಕಾಗಿಯೇ ಜನ್ಮಿಸಿದ್ದು. ತಾರಕಾಸುರನ ಸಂಹಾರಕ್ಕಾಗಿ ದೇವತೆ ಶಿವ ಹಾಗೂ ಆತನಿಗಾಗಿ ತಪಸ್ಸು ಮಾಡುತ್ತಿದ್ದ ಪಾರ್ವತಿಯರನ್ನು ಸಂಗಮಕ್ಕಾಗಿ ಪ್ರಯತ್ನಪಟ್ಟ ಫಲವಾಗಿ ಹುಟ್ಟಿದವ ಸ್ಕಂದ ಅಂದರೆ ಸಾಕ್ಷಾತ್ ಸುಬ್ರಹ್ಮಣ್ಯ. ಶಿವನಿಂದ ಹೊರಬಂದ ಪಂಚಾಗ್ನಿ ಹಿರಣ್ಯ ರೇತಸ್ಸಿನ ಬಿಸಿಯನ್ನು ತಾಳಲಾರದೇ ಅದನ್ನು ಗಂಗೆಯಲ್ಲಿ ಇಡಲಾಗುತ್ತದೆ. ಗಂಗೆಯಲ್ಲಿ 6 ಕಮಲಗಳಿಂದ ಹುಟ್ಟಿದವ ಷಣ್ಮುಖ, ಷಣ್ಮುಖನನ್ನು ಒಂದಷ್ಟು ವರ್ಷಗಳು ಕೃತ್ತಿಕಾ ಕನ್ಯೆಯರು ಸಾಕಿ ಸಲಹುತ್ತಾರೆ. ನಂತರ ಆತನನ್ನು ಶಿವ-ಪಾರ್ವತಿಯರು ಕರೆದೊಯ್ಯುತ್ತಾರೆ. ಷಣ್ಮುಖನನ್ನು ಸಾಕಿಸಲಹಿದ್ದಕ್ಕಾಗಿ ಕೃತ್ತಿಕಾ ಕನ್ಯೆಯರನ್ನು ಕೃತ್ತಿಕಾ ನಕ್ಷತ್ರವಾಗಿ ಚಿರಾಮರವಾಗಿ ನೆನೆಸಿಕೊಳ್ಳಲಾಗುವುದು ಎಂದು ಶಿವ-ಪಾರ್ವತಿಯರು ವರ ನೀಡುತ್ತಾರೆ. ಆದ್ದರಿಂದಲೇ ಸುಬ್ರಹ್ಮಣ್ಯನಿಗೆ ಕಾರ್ತಿಕೇಯ ಎಂಬ ಹೆಸರೂ ಬಂದಿದೆ. 
ಶಿವಗಂಗೆಯ ಉದ್ಭವ ಸುಬ್ರಹ್ಮಣ್ಯ ದೇವಾಲಯ ಹಾಗೂ ಸುಬ್ರಹ್ಮಣ್ಯ ಷಷ್ಠಿ ಆಚರಣೆ
ವಟು(ಬ್ರಹ್ಮಚಾರಿ)ಗಳನ್ನು ಅಗ್ನಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಸುಬ್ರಹ್ಮಣ್ಯ ಶಿವನ ಪಂಚಾಗ್ನಿ ರೇತಸ್ಸಿನಿಂದ ಜನ್ಮ ಪಡೆದವನಾದ್ದರಿಂದ  ಸುಬ್ರಹ್ಮಣ್ಯನನ್ನು ವಟುವಿನ ರೂಪದಲ್ಲಿ ಆರಾಧಿಸಲಾಗುತ್ತದೆ. ಸುಬ್ರಹ್ಮಣ್ಯ ಷಷ್ಠಿಯ ದಿನದಂದು ಬ್ರಹ್ಮಚಾರಿಗಳಿಗೆ ಆಹ್ವಾನ ನೀಡಿ ವಸ್ತ್ರಗಳನ್ನು ಫಲತಾಂಬೂಲಗಳನ್ನಿತ್ತು ನಮಸ್ಕರಿಸುವ ಮೂಲಕ ಸುಬ್ರಹ್ಮಣ್ಯನ ಸ್ವರೂಪವನ್ನು ಪೂಜಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ. ಕರ್ನಾಟಕದಲ್ಲಿರುವ ಅನೇಕ ಸುಬ್ರಹ್ಮಣ್ಯ ದೇವಾಲಯಗಳಿರುವ ಕ್ಷೇತ್ರಗಳಲ್ಲಿ ಇಂದಿಗೂ ಈ ಆಚರಣೆ ನಡೆಯುತ್ತಿದೆ. ಅಂತಹ ಕ್ಷೇತ್ರಗಳ ಪೈಕಿ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ಶಿವಗಂಗೆಯೂ ಸಹ ಒಂದು. ಶಿವಗಂಗಾ ಕ್ಷೇತ್ರದಲ್ಲಿರುವ ಶೃಂಗೇರಿ ಶಾಖಾ ಪೀಠದಲ್ಲಿದೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ.  ಸುಬ್ರಹ್ಮಣ್ಯ ಸ್ವಾಮಿ ಸ್ವಯಂ ಉದ್ಭವವಾಗಿರುವುದು ಈ ದೇವಾಲಯದ ವಿಶೇಷ. 
(ಚಿತ್ರ: ಶಿವಗಂಗೆಯಲ್ಲಿರುವ ಉದ್ಭವ ಸುಬ್ರಹ್ಮಣ್ಯ ದೇವಾಲಯ)
ಶೃಂಗೇರಿ ಶಿವಗಂಗಾ ಪೀಠದ ಗುರುಪರಂಪರೆಯಲ್ಲಿದ್ದ ಸುಬ್ರಹ್ಮಣ್ಯ ಭಾರತೀ ಸ್ವಾಮಿಗಳ ಕಾಲಾವಧಿಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಉದ್ಭವವಾಗಿತ್ತು. ಸುಬ್ರಹ್ಮಣ್ಯ ಭಾರತೀ ಸ್ವಾಮಿಗಳಿಗೆ ಬೃಹತ್ ಸರ್ಪವೊಂದು ಕಾಣಿಸಿಕೊಂಡು ಶಾರದಾಂಬೆಯ ದೇವಾಲಯದ ಬಳಿ ಇರುವ ಸಣ್ಣ ಗುಡ್ಡವೊಂದರ ಮೇಲೆ ನಿಂತಿತು. ಆ ಪ್ರದೇಶದಲ್ಲಿ ಸರ್ಪಾಕಾರದಲ್ಲಿ ಶಿಲೆಯೊಂದು ಉದ್ಭವವಾಗಿರುತ್ತದೆ. ಸುಬ್ರಹ್ಮಣ್ಯನ ಸಾನ್ನಿಧ್ಯವಿರುವುದನ್ನು ತಿಳಿದ ಯತಿಗಳು ಅಲ್ಲಿ ಸುಬ್ರಹ್ಮಣ್ಯ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಅಂದಿನಿಂದ ಅಲ್ಲಿನ ಸುಬ್ರಹ್ಮಣ್ಯ ದೇವಾಲಯ ವಿಶೇಷ ಮಹತ್ವವನ್ನು ಪಡೆದಿದೆ. ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಹಲವು ರೀತಿಯ ಸಮಸ್ಯೆಗಳು ಬಗೆಹರಿಯಲಿವೆ ಎಂಬ ನಂಬಿಕೆ ಇದೆ. ಶಿವಗಂಗಾ ಕ್ಷೇತ್ರದ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಪ್ರತಿ ಮಾರ್ಗಶಿರ ಮಾಸದ ಷಷ್ಠಿಯ ದಿನದಂದು ವಿಶೇಷ ಪೂಜಾ ಕೈಂಕರ್ಯಗಳು ನಡೆದು ವಟುಗಳನ್ನು ಆಹ್ವಾನಿಸಿ ಫಲತಾಂಬೂಲಗಳನ್ನಿತ್ತು ವಟುಗಳ ರೂಪದಲ್ಲಿ ಸುಬ್ರಹ್ಮಣ್ಯನನ್ನು ಪೂಜಿಸಲಾಗುತ್ತದೆ. 
-ಶ್ರೀನಿವಾಸ್ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!