ಭುವನೇಶ್ವರಿ, ಹೆಸರು ಹೇಳಿದೊಡನೆಯೇ ಕನ್ನಡಿಗರಲ್ಲಿ ರೋಮಾಂಚನವಾಗುತ್ತದೆ. ವಿಜಯನಗರ ಸ್ಥಾಪನೆಗೆ ವಿದ್ಯಾರಣ್ಯರು ಭುವನೇಶ್ವರಿ ದೇವಿಯನ್ನು ಅರ್ಚಿಸಿದ್ದು ನೆನಪಿಗೆ ಬರುತ್ತದೆ. ಕರ್ನಾಟಕದಲ್ಲಿ ಕನ್ನಡಾಂಬೆ ಭುವನೇಶ್ವರಿಯ ದೇಗುಲ ಇರುವುದು ಉತ್ತರ ಕನ್ನಡದ ಜಿಲ್ಲೆಯ ಸಿದ್ದಾಪುರದ ಭುವನಗಿರಿ, ಕನ್ನಡ ಸಾಮ್ರಾಜ್ಯ ಹಂಪೆಯ ವಿರೂಪಾಕ್ಷ ಸನ್ನಿಧಿ ಹಾಗೂ ಕನ್ನಡ ಸಿಂಹಾಸನ ಪ್ರತಿಷ್ಠಾಪನಾಚಾರ್ಯರ ಮಠವಿರುವ ಶೃಂಗೇರಿಯಲ್ಲಿ.
ಆದರೆ ಮಹಾರಾಷ್ಟ್ರದಲ್ಲಿಯೂ ಭುವನೇಶ್ವರಿ ದೇವಿಯ ದೇವಾಲಯವಿದೆ. ಇತಿಹಾಸದ ಪುಟಗಳನ್ನೂ ತಿರುವಿ ಹಾಕಿದರೆ ವಿಜಯನಗರ ಸಾಮ್ರಾಜ್ಯವೂ ಸೇರಿದಂತೆ ಹಲವು ಸಾಮ್ರಾಜ್ಯಗಳ ಅವಧಿಯಲ್ಲಿ ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿತ್ತೆಂಬ ಉಲ್ಲೇಖ ಇದ್ದು, ಇದಕ್ಕೆ ಮಹಾರಾಷ್ಟ್ರದಲ್ಲಿರುವ ಭುವನೇಶ್ವರಿ ದೇವಾಲಯ ಸಾಕ್ಷಿ ಎಂಬಂತಿದೆ. ತಾಯಿ ಭುವನೇಶ್ವರಿ ದೇವಾಲಯವಿರುವುದು ಸಾಂಗ್ಲಿಯಿಂದ ಸುಮಾರು 30 ಹಾಗೂ ಕೊಲ್ಹಾಪುರದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಔದುಂಬರದಲ್ಲಿ.
ಔದುಂಬರ ಕ್ಷೇತ್ರ ಗುರು ದತ್ತಾತ್ರೇಯರು ನೆಲೆಸಿದ್ದ ಪುಣ್ಯಭೂಮಿಯಾಗಿದ್ದು ದತ್ತ ಕ್ಷೇತ್ರವೆಂದೇ ಪ್ರಸಿದ್ಧಿಯಾಗಿದೆ. ಕೃಷ್ಣ ನದಿಯ ಪೂರ್ವ ತೀರದಲ್ಲಿ ಭವನೇಶ್ವರಿ ದೇವಿಯ ಪುರಾತನವಾದ ಸುಂದರ ಭುವನೇಶ್ವರಿ ಮಂದಿರವಿದೆ.
ಔದುಂಬರ ಕ್ಷೇತ್ರವನ್ನು ದತ್ತಕ್ಷೇತ್ರವೆಂದೂ ಕರೆಯುತ್ತಾರೆ. ಇಲ್ಲಿ ತ್ರಿಮೂರ್ತಿರೂಪ ದತ್ತಾತ್ರೆಯರು ನೆಲೆಸಿದ್ದರೆಂದು ಗುರುಚರಿತ್ರೆಯಲ್ಲಿಯೂ ಉಲ್ಲೇಖವಿದೆ. ಕೃಷ್ಣ ನದಿ ತೀರದ ಈ ಪುಣ್ಯಕ್ಷೇತ್ರದಲ್ಲಿ ಔದುಂಬರ ವೃಕ್ಷದ ಕೆಳಗೆ ದತ್ತಾತ್ರೇಯರ ಮಂದಿರವಿದೆ. ನದಿಯ ಪೂರ್ವ ತೀರದಲ್ಲಿ ಭವನೇಶ್ವರಿ ದೇವಿಯ ಪುರಾತನ ಮಂದಿರವಿದ್ದು, ಭವ್ಯವಾದ ಈ ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಚತುರ್ಭುಜೆ ಭುವನೇಶ್ವರಿ ಮೂರ್ತಿ ಬಹು ಸುಂದರವಾಗಿದೆ.
ಕನ್ನಡಾಂಬೆ ಭುವನೇಶ್ವರಿ ದೇವಾಲಯದ ಬಗ್ಗೆ ಪೌರಾಣಿಕ ಹಿನ್ನೆಲೆ:
ಇನ್ನು ಉತ್ತರ ಕನ್ನಡದಲ್ಲಿ ತಾಯಿ ಭುವನೇಶ್ವರಿಯ ಬಗ್ಗೆ ಪೌರಾಣಿಕ ಹಿನ್ನೆಲೆಯನ್ನು ಕಾಣಬಹುದಾಗಿದೆ. ಅರಣ್ಯ ಸಂಪತ್ತಿನಿಂದ ಕೂಡಿರುವ ಈ ಪ್ರದೇಶದಲ್ಲಿ ಭುವಣಾಸುರನೆಂಬ ರಾಕ್ಷಸನ ಉಪಟಳವನ್ನು ನಿವಾರಿಸಲು, ದುರ್ಗಾಮಾತೆ ಆ ರಾಕ್ಷಸರನ್ನು ವಧಿಸಲು ಮುಂದಾಗುತ್ತಾಳೆ, ಈ ವೇಳೆ ಭುವಣಾಸುರನೆಂಬ ರಾಕ್ಷಸ ತಾನು ಸದಾಕಾಲ ಜನರಿಗೆ ಪರಿಚಿತನಾಗಿರುವಂತಹ ವರವನ್ನು ದಯಪಾಲಿಸು ಎಂದು ದುರ್ಗಾಮಾತೆ ಬಳಿ ವಾರ ಬೇಡಿದನಂತೆ. ಭುವಣಾಸುರ ಎಂಬ ರಾಕ್ಷಸನ ಕೋರಿಕೆಯನ್ನು ಮನ್ನಿಸಿದ ದುರ್ಗಾಮಾತೆ ಆ ರಾಕ್ಷಸ ನೆಲೆಸಿದ್ದ ಕ್ಷೇತ್ರ ಭುವನಗಿರಿ ಎಂದೂ ಆತನನ್ನು ವಧಿಸಲು ಆವಿರ್ಭವಿಸಿದ ಅವತಾರ ಭುವನೇಶ್ವರಿ ಎಂದೂ ಪ್ರಸಿದ್ಧಿಪಡೆಯಲಿದೆ ಎಂದು ವರ ನೀಡುತ್ತಾಳೆ. ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವನ್ನು ಕಾಣಬಹುದಾಗಿದೆ.