ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಭಕ್ತಿ-ಜ್ಯೋತಿಷ್ಯ

ಸಂಗೀತವನ್ನು ಸಾಮವೇದದ ಉಪವೇದ ಎಂದೇಕೆ ಹೇಳುತ್ತಾರೆ?

ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದ್ದು 'ಸಾಮವೇದ' ಸಂಗೀತದ ಬೇರು ಎನ್ನಬಹುದು.

Srinivas Rao BV
Updated On : 30 May 2016, 7:16 am
ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದ್ದು 'ಸಾಮವೇದ' ಸಂಗೀತದ ಬೇರು ಎನ್ನಬಹುದು. ನಮ್ಮ ನಾಲ್ಕು ಪ್ರಮುಖ ವೇದಗಳಲ್ಲಿ ಮೂರನೇಯದಾದ ಈ ವೇದ, ಪ್ರತ್ಯೇಕವಾದ ವೇದ ಎನ್ನಿಸಿಕೊಂಡಿರುವುದೇ ಅದರಲ್ಲಿರುವ ಸಂಗೀತದ ಅಂಶಗಳಿಂದ. 
ಸಾಮವೇದದಲ್ಲಿ ಋಗ್ವೇದದ ಮಂತ್ರಗಳನ್ನು ಸ್ವರಬದ್ಧವಾಗಿ ಹಾಡಲಾಗುತ್ತದೆ. ಅದಕ್ಕಾಗಿಯೇ 'ಗೀತರೂಪ ಮಂತ್ರ- ಸಾಮಾನಿ' ಎನ್ನಲಾಗುತ್ತದೆ. ಬಹುಮಟ್ಟಿಗೆ ಋಗ್ವೇದದ ಮಂತ್ರಗಳನ್ನೇ ಒಳಗೊಂಡಿರುವ ಈ ವೇದದಲ್ಲಿ ಮಂತ್ರಗಳನ್ನೆಲ್ಲ ಸ್ವರಬದ್ಧವಾಗಿಸಿ ಹಾಡಲಾಗುತ್ತದೆ. ವೇದ ಕಾಲದಲ್ಲಿ ಯಜ್ಞ ಯಾಗಾದಿಗಳನ್ನು ಮಾಡಬೇಕಾದರೆ ಮಂತ್ರ ಪಠಣದಂತೆಯೇ ಸಾಮಗಾನವೂ ಒಂದು ಭಾಗವಾಗಿತ್ತು. ಕಾಲಕ್ರಮೇಣ ಸಾಮಗಾನಕ್ಕಾಗಿಯೇ ಒಬ್ಬ ಋತ್ವಿಜನನ್ನು ನೇಮಿಸುವ ಪದ್ಧತಿ ಬಳಕೆಗೆ ಬಂತು. ಈ ಶೈಲಿಯು ಜತಿಗಳಾಗಿ ಪರಿವರ್ತನೆಗೊಂಡು ಕೊನೆಗೆ ರಾಗಗಳಾಗಿ ಪರಿಣಮಿಸಿತು. ಭಾರತೀಯ ಶಾಸ್ತ್ರೀಯ ಸಂಗೀತ, ಅದರ ಉತ್ಪತ್ತಿಯು (ಹುಟ್ಟು) ಧ್ಯಾನದ ಸಾಧನವಾಗಿದ್ದು ತನ್ನೊಳಗಿನ ಅರಿವನ್ನು ಗಳಿಸುವುದಾಗಿದೆ. ಈ ಕಾರಣಕ್ಕಾಗಿಯೇ ಸಾಮಗಾನದಿಂದ ಹುಟ್ಟಿದ ಸಂಗೀತಕ್ಕೂ ದೇವರ ಕೀರ್ತನೆಗಳಿಗೂ ಅವಿನಾಭಾವ ಸಂಬಂಧ ಬೆಳೆದುಬಂದಿದೆ. 
ಬ್ರಹ್ಮಾಂಡದಲ್ಲಿರುವ ಪ್ರತಿಯೊಂದು ಚರಾಚರಗಳಲ್ಲಿಯೂ ಲಯ ಹಾಗೂ ಗತಿಯಿದೆ. ಬ್ರಹ್ಮಾಂಡದಲ್ಲಿರುವ ನಾದ ಹಾಗೂ ಗತಿ ನಮ್ಮ ದೇಹದ ಪಂಚೇಂದ್ರಿಯಗಳಿಗೆ ಗ್ರಹಿಕೆಯಾಗುವ ಸ್ವರ ಮತ್ತು ಲಯಗಳಿಗೆ ಹೋಲಿಕೆಯಾಗುತ್ತದೆ. ಅದಕ್ಕಾಗಿಯೇ ಮಾನವ ಪೂಜಿಸುವ ಭಗವಂತ( ಪ್ರಕೃತಿ)ಗೂ ಸಂಗೀತಕ್ಕೂ ಅವಿನಾಭಾವ ನಂಟಿದೆ. ಭಾರತೀಯರು ಸಂಗೀತದ ಸಂಬಂಧವನ್ನು ಭಗವಂತನ ಆರಾಧನೆಯ ಜೊತೆಗೆ ಹೆಚ್ಚು ಜೋಡಿಸಿದ್ದರು. ಅಷ್ಟೇ ಅಲ್ಲದೇ ಜೀವನದ ನಾಲ್ಕು ಪುರುಷಾರ್ಥಗಳಲ್ಲಿ ಒಂದಾದ ಹಾಗೂ ಪ್ರಧಾನ ಎಂದೇ ಪರಿಗಣಿಸಲಾಗುವ ಮೋಕ್ಷ ಸಾಧನೆಗೆ( ಭಗವಂತ ಅಥವಾ ಜಗತ್ತಿನ ನಿಯಾಮಕ ನಲ್ಲಿ ಮನಸ್ಸನ್ನು ಕೇಂದ್ರೀಕರಿಸಲು) ಸಂಗೀತವೂ ಒಂದು ಶ್ರೇಷ್ಠ ಮಾಧ್ಯಮ ಎಂದು ಭಾವಿಸಿದ್ದರು. 

Advertisement

Advertisement

ಸಂಗೀತದ ಮೂಲ ಸಾಮವೇದ ಎಂದು ಪರಿಗಣಿಸುವುದಾದರೆ, ಮೊದಲು ಈ ವಿದ್ಯೆಯನ್ನು ವಿಷ್ಣು ಬ್ರಹ್ಮನಿಗೆ ಉಪದೇಶ ಮಾಡಿದ್ದು, ನಂತರ ಬ್ರಹ್ಮನಿಂದ ವಿದ್ಯೆಗೆ ಅಧಿದೇವತೆಯಾದ ಸರಸ್ವತಿ ಹಾಗೂ ಶಿವನಿಗೆ ಈ ವಿದ್ಯೆ ಲಭಿಸಿತು. ಸರಸ್ವತಿಯ ನಂತರ  ನಾರದನಿಗೆ, ನಾರದನಿಂದ ತುಂಬುರು, ಗಂಧರ್ವರು, ಕಿನ್ನರರಿಗೆ ಈ ವಿದ್ಯೆ ಲಭಿಸಿತು ಎನ್ನಲಾಗಿದೆ. ಅಷ್ಟೇ ಅಲ್ಲದೇ ಸ್ವರ್ಗ ಲೋಕದಿಂದ ಭರತ, ಹನುಮಾನ, ನಾರದ ಮುಂತಾದ ಋಷಿಗಳು ಈ ಕಲೆಯ ಪ್ರಚಾರಕ್ಕಾಗಿ ಭೂಮಿಯ ಮೇಲೆ ಅವತರಿಸಿದರು ಎಂಬ ನಂಬಿಕೆಯೂ ಇದೆ. ಇನ್ನು ಸಂಗೀತದಲ್ಲಿ ವಿವಿಧ ಪ್ರಾಕಾರಗಳ ರಾಗಗಳಿದ್ದು, ಒಂದೊಂದು ರಾಗವೂ ಒಂದೊಂದು ವೈಶಿಷ್ಟ್ಯ ಹಾಗೂ ಅಚ್ಚರಿಗಳನ್ನು ಹೊಂದಿದೆ. ಸಂಗೀತಕ್ಕೆ ಮನಸ್ಸನ್ನು ಏಕಾಗ್ರತೆಯೆಡೆಗೆ ಕೊಂಡೊಯ್ಯುವ ಸಾಮರ್ಥ್ಯವಿದ್ದು, ಇದರಲ್ಲಿ ಕೆಲವು ರಾಗಗಳು ಕೇವಲ ರಂಜನೆಗೆ ಮಾತ್ರವಲ್ಲದೇ ಮೋಕ್ಷ ಸಾಧನೆಗೂ ಸಹಕಾರಿಯಾಗಬಲ್ಲವು ಎಂದೂ ನಂಬಲಾಗಿದೆ. ಇದನ್ನೇ ಭರತಮುನಿಯು ಈಶ್ವರ (ಜಗತ್ತಿನ ನಿಯಾಮಕ) ಸಾಕ್ಷಾತ್ಕಾರಕ್ಕೆ ಸಾಧನವಾಗಬಲ್ಲ ಮಾರ್ಗ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement