ಭಕ್ತಿ-ಭವಿಷ್ಯ

ವರಮಹಾ ಲಕ್ಷ್ಮಿ ವ್ರತ ವಿಶೇಷ: ಅಷ್ಟ ಐಶ್ವರ್ಯ ಅಂದರೇನು? ಇಲ್ಲಿದೆ ಅಷ್ಟಲಕ್ಷ್ಮಿಯನ್ನು ಸಿದ್ಧಿಸುವ ಕನಕಧಾರಾ ಸ್ತೋತ್ರದ ಮಹತ್ವ!

Srinivas Rao BV
ಶ್ರಾವಣ ಮಾಸದಲ್ಲಿ ಬರುವ ವ್ರತಗಳಲ್ಲಿ ವರಮಹಾಲಕ್ಷ್ಮಿ ವ್ರತ ಪ್ರಮುಖವಾದದ್ದು, ಸಮಸ್ತ ಸಂಪತ್ತಿಗೂ ಅಧಿದೇವತೆಯಾಗಿರುವ ಈ ದಿನದಂದು ಲಕ್ಷ್ಮಿಯನ್ನು ಪೂಜಿಸಿದರೆ, ಅಷ್ಟ ಐಶ್ವರ್ಯವೂ ಪ್ರಾಪ್ತಿಯಾಗುತ್ತದೆ. 
ಸಂಪತ್ತು ಮತ್ತು ಏಳಿಗೆಯ ಪ್ರತೀಕವಾದ ಲಕ್ಷ್ಮಿ ದೇವಿಯನ್ನು ಎಂಟು ರೂಪಗಳ ಸಂಪತ್ತಿಗೆ ಹೋಲಿಕೆ ಮಾಡಲಾಗಿದ್ದು, ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯ ಇವುಗಳನ್ನು ಲಕ್ಷ್ಮಿಯ ಲಕ್ಷಣಗಳೆಂದು ಹೇಳಲಾಗಿದ್ದು  ವರಮಹಾಲಕ್ಷ್ಮಿ ವ್ರತವನ್ನಾಚರಿಸಿದರೆ ಜ್ಞಾನ, ಐಶ್ವರ್ಯ, ಸುಖ, ಆರೋಗ್ಯ, ಧನ, ಧಾನ್ಯ, ಜಯ, ವಿಜಯಗಳೆಂಬ ಅಷ್ಟ ಐಶ್ವರ್ಯ ಅರ್ಥಾತ್ 8 ವಿಧಗಳ ಐಶ್ವರ್ಯ ಎಂದು ಹೇಳಲಾಗಿದೆ.  ಎಂಟೂ ರೀತಿಯ ಐಶ್ವರ್ಯಗಳು ಪ್ರಾಪ್ತಿಯಾಗಲಿವೆ ಎಂಬ ನಂಬಿಕೆ ಇದೆ. 
ಶ್ರಾವಣ ಮಾಸದಲ್ಲಿನ ಹಲವು ಪೂಜೆಗಳು ಅಥವಾ ದೇವರ ಆರಾಧನೆಗೆ ಸಂಬಂಧಪಟ್ಟಿರುವ ಸಂಗತಿಗಳು ಸಮುದ್ರಮಂಥನದ ಹಿನ್ನೆಲೆಯನ್ನೊಳಗೊಂಡಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿ ಸಹ ಸಮುದ್ರಮಂಥನದಿಂದಲೇ ಆವಿರ್ಭವಿಸಿದ್ದು, ಕ್ಷೀರಸಾಗರದಿಂದ ಅವತರಿಸಿದಳೆಂದು ಹೇಳಲಾಗಿದೆ. ಹಾಗಾಗಿಯೇ ಲಕ್ಷ್ಮಿಯನ್ನು ಕ್ಷೀರಸಾಗರತನಯೆ ಎಂದೂ ಹೇಳಲಾಗುತ್ತದೆ. 
ಲಕ್ಷ್ಮಿ ದೇವಿ ಕ್ಷೀರಸಾಗರದಲ್ಲಿ ಶ್ವೇತವರ್ಣದಲ್ಲಿ ಅವತರಿಸಿದ್ದಳಾದ್ದರಿಂದ ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮಿಗೆ ಶ್ವೇತ ವರ್ಣದ ಕೆಂಪು ಅಂಚಿನ ಸೀರೆಯನ್ನುಡಿಸುವ ಪದ್ಧತಿ ಇದೆ. ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮಿದೇವಿಯನ್ನು  ಆವಾಹನೆ ಮಾಡಿ 12 ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ ಸುಮಂಗಲಿಯರು ಅದನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. 
ಅಷ್ಟಲಕ್ಷ್ಮಿಯನ್ನು ಸಿದ್ಧಿಸುವ ಕನಕಧಾರಾ ಸ್ತೋತ್ರದ ಮಹತ್ವ
ಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕೆ ಅಥವಾ ಉಪಾಸನೆ ಮಾಡುವುದಕ್ಕೆ ಹಲವು ಸ್ತೋತ್ರಗಳಿದ್ದು, ಕನಕಧಾರಾ ಸ್ತೋತ್ರ ಮಹತ್ವದ್ದಾಗಿದೆ. ಕನಕಧಾರಾ ಸ್ತೋತ್ರವನ್ನು ಆದಿ ಶಂಕರಾಚಾರ್ಯರು ರಚಿಸಿದ್ದು, ಈ ಸ್ತೋತ್ರದಲ್ಲಿ ಅಷ್ಟ ಲಕ್ಷ್ಮಿಯರನ್ನೂ ಸ್ತುತಿಸಿದ್ದಾರೆ. 
ಬಾಲ ಬ್ರಹ್ಮಚಾರಿಯಾಗಿದ್ದ ಶಂಕರಾಚಾರ್ಯರು ಭಿಕ್ಷಾಟನೆ ತೆರಳುತ್ತಾರೆ. ಹೋಗುವ ದಾರಿಯಲ್ಲಿ ಒಬ್ಬ ಬಡವನ ಮನೆ ಸಿಗುತ್ತದೆ. ಬಡತನವಿದ್ದರೂ ಬಾಲಕ ಶಂಕರ ಬಂದಾಗ ಆ ಮನೆಯ ಮಹಿಳೆಯ ಬಳಿ ಒಣಗಿದ ನೆಲ್ಲಿಕಾಯಿ ಹೊರತುಪಡಿಸಿ ತಿನ್ನಬಹುದಾದ ವಸ್ತು ಏನೂ ಇರುವುದಿಲ್ಲ. ಭಕ್ತಿಯಿಂದ ಪ್ರಾರ್ಥಿಸಿ ಅದನ್ನೇ ಶಂಕರರಿಗೆ ನೀಡುತ್ತಾರೆ. ಆಕೆಯ ಬಡತನವನ್ನು ನೋಡಲಾಗದೇ ಶಂಕರರು ಕನಕಧಾರಾ ಸ್ತೋತ್ರವನ್ನು ರಚಿಸುತ್ತಾರೆ. ಕನಕಧಾರಾ ಸ್ತೋತ್ರ’ವನ್ನು ಪಠಿಸಿ ಸಾಕ್ಷಾತ್ ಲಕ್ಷ್ಮಿದೇವಿಯಿಂದ ಬಂಗಾರದ ನಾಣ್ಯಗಳ ಮಳೆಯನ್ನು ಸುರಿಸಿದ್ದರು ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಕನಕಧಾರಾ ಸ್ತೋತ್ರವನ್ನು ಪಠಿಸಿದರೆ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ.  
SCROLL FOR NEXT