ಧಾರ್ಮಿಕ ಕ್ರಿಯೆಗಳಲ್ಲಿ ದರ್ಭೆಯ ಬಳಕೆ
ಭಾರತೀಯ ಸಂಪ್ರದಾಯಗಳಲ್ಲಿ ಜರುಗುವ ಶುಭ ಕಾರ್ಯಕ್ರಮಗಳಲ್ಲಿ ದರ್ಭೆಗೆ ಅತಿ ಹೆಚ್ಚು ಪ್ರಾಮುಖ್ಯತೆ ಇದೆ. ಶುಭ ಕಾರ್ಯಕ್ರಮಗಳಲ್ಲಷ್ಟೇ ಅಲ್ಲದೇ ಗ್ರಹಣದ ಸಂದರ್ಭಗಳಲ್ಲೂ ದರ್ಭೆ ಅತ್ಯಂತ ಉಪಯುಕ್ತ ವಸ್ತು. ಆದ್ದರಿಂದಲೇ ದರ್ಭೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.
ದರ್ಭೆ ಹುಲ್ಲಿಗೆ ಪವಿತ್ರ ಎಂಬ ಹೆಸರೂ ಇದೆ. ಈ ಹೆಸರು ಬರಲು ಸಮುದ್ರ ಮಂಥನದ ಭಾಗವಾದ ಪೌರಾಣಿಕ ಕಥೆಯೊಂದು ಬೆಸೆದುಕೊಂಡಿದೆ. ಅದೇ ಕದ್ರು ಮತ್ತು ವಿನುತೆ (ವಿನತೆ)ಯರ ಕಥೆ. ಕದ್ರು ಮತ್ತು ವಿನುತೆ ಕಶ್ಯಪನ ಪತ್ನಿಯರು. ಕದ್ರುವಿಗೆ ಸಾವಿರಾರು ಸರ್ಪಪುತ್ರರು. ವಿನತೆಗೆ ಅರುಣ( ಸೂರ್ಯನ ಸಾರಥಿ) ಹಾಗೂ ಗರುಡ( ವಿಷ್ಣುವಿನ ವಾಹನ, ವೈನತೇಯ) ನೆಂಬ ಇಬ್ಬರು ಪುತ್ರರು. ಕದ್ರುವಿಗೆ ವಿನತೆಯನ್ನು ತನ್ನ ದಾಸಿ ಮಾಡಿಕೊಳ್ಳಬೇಕೆಂದು ತೀರ್ಮಾನಿಸುತ್ತಾಳೆ. ಹಾಗಾಗಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಕದ್ರುವಿಗೆ ಸಮುದ್ರ ಮಂಥನದ ಸಮಯದಲ್ಲಿ ಹುಟ್ಟಿದ ಬಿಳಿ ಕುದುರೆ ಉಚ್ಚೈಶ್ರವಸ್ ಇಂದ್ರ ಲೋಕಕ್ಕೆ ಹಾದು ಹೋಗುವಾಗ ತಾವು ವಾಸಿಸುತ್ತಿರುವ ಪ್ರದೇಶಕ್ಕೆ ಹತ್ತಿರದಲ್ಲೇ ಸ್ಪಷ್ಟವಾಗಿ ಗೋಚರಿಸಲಿದೆ ಎಂಬುದು ತಿಳಿಯುತ್ತದೆ. ಇದನ್ನೇ ಸರಿಯಾದ ಸಮಯ ಎಂದು ತಿಳಿದ ಕದ್ರು ವಿನತೆಯೊಂದಿಗೆ ಉಚ್ಚೈಶ್ರವಸ್ ಬಾಲದ ಬಣ್ಣದ ಕುರಿತಾಗಿ ವಾಗ್ವಾದ ನಡೆಸಿ ಬಿಳಿ ಕುದುರೆಯ ಬಾಲ ಸಂಪೂರ್ಣ ಕಪ್ಪು ಬಣ್ಣದಲ್ಲಿದೆ ಎಂದು ಹೇಳುತ್ತಾಳೆ. ಇಬ್ಬರ ನಡುವೆ ವಾದ ನಡೆಯುತ್ತದೆ. ಇಬ್ಬರೂ ಸೋತವರು ಗೆದ್ದವರ ದಾಸಿಯಾಗಬೇಕೆಂದು ಒಪ್ಪಂದಕ್ಕೆ ಬರುತ್ತಾರೆ.
ಕದ್ರು ತನ್ನ ಉದ್ದೇಶ ಸಾಧಿಸಿಕೊಳ್ಳಲು ಕುದುರೆಯ ಬಾಲವನ್ನು ಕಪ್ಪು ಬಣ್ಣದಲ್ಲಿರುವಂತೆ ತೋರಿಸಲು ತನ್ನ ಸಾವಿರಾರು ಸರ್ಪಪುತ್ರರನ್ನು ಕರೆದು ಕುದುರೆಯ ಬಾಲಕ್ಕೆ ಸುತ್ತಿಕೊಳ್ಳುವಂತೆ ಹೇಳುತ್ತಾಳೆ. ಆದರೆ ಮೊದಲ ಪುತ್ರ ವಾಸುಕಿ ಸೇರಿದಂತೆ ಪ್ರಾರಂಭದಲ್ಲಿ ಯಾರೂ ಸಹ ಕದ್ರುವಿನ ಮಾತನ್ನು ಕೇಳಲಿಲ್ಲ. ಕುಪಿತಗೊಂಡ ಕದ್ರು ಜನಮೇಜಯ ರಾಜ ನಡೆಸುವ ಸರ್ಪ ಯಜ್ಞದಲ್ಲಿ ಬಿದ್ದು ಸಾಯಿರಿ ಎಂದು ಶಾಪ ಕೊಟ್ಟಳು. ಶಾಪದಿಂದ ಹೆದರಿದ ಸರ್ಪಗಳು ಕದ್ರು ಹೇಳಿದಂತೆಯೇ ಮಾಡಲು ಮುಂದಾಗುತ್ತವೆ. ಅಂತೆಯೇ ಉಚ್ಚೈಶ್ರವಸ್ ತಮ್ಮ ವಾಸ ಪ್ರದೇಶದ ಹತ್ತಿರಕ್ಕೆ ಬರುವ ಮುನ್ನವೇ ತಾಯಿ ಹೇಳಿದಂತೆ ಕುದುರೆಯ ಬಾಲಕ್ಕೆ ಗಂಟು ಹಾಕಿಕೊಳ್ಳುತ್ತವೆ. ಉಚ್ಚೈಶ್ರವಸ್ ಬರುವ ವೇಳೆಗೆ ಸರ್ಪಗಳು ಸುತ್ತಿಕೊಂಡ ಅದರ ಬಾಲ ಕಪ್ಪು ಬಣ್ಣದಲ್ಲಿ ಕಾಣಿಸುತ್ತಿರುತ್ತದೆ. ಒಪ್ಪಂದದ ಪ್ರಕಾರ ವಿನತೆ ಕದ್ರುವಿನ ದಾಸಿಯಾಗುತ್ತಾಳೆ. ಇದೇ ಸಂದರ್ಭದಲ್ಲಿ ವಿನತೆಯ ಎರಡನೇ ಪುತ್ರ ಗರುಡ, ವೈನತೇಯ ಜನಿಸುತ್ತಾನೆ. ಆತ ಮಹಾಶಕ್ತಿ ಶಾಲಿ, ಇಂದ್ರನಿಗಿಂತಲೂ ಶಕ್ತಿಶಾಲಿಯಾದವನನ್ನು ತಯಾರಿಸುತ್ತೇವೆ ಎಂಬ ವಾಲಖಿಲ್ಯ ಮಹರ್ಷಿಗಳ ಸಂಕಲ್ಪದ, ತಪಸ್ಸಿನ ಅನುಗ್ರಹದಿಂದ ಹುಟ್ಟಿದಾತ. ಆದ್ದರಿಂದಲೇ ಆತನಿಗೆ ಖಗೇಂದ್ರ (ಪಕ್ಷಿಗಳ ರಾಜ ಎಂಬ ಹೆಸರು) ತಾಯಿ ಹಾಗೂ ತನ್ನ ದಾಸ್ಯವನ್ನು ಕಂಡು ಬೇಸರಗೊಂಡ ವೈನತೇಯ ಸರ್ಪಗಳೊಂದಿಗೆ ಸಮಾಲೋಚನೆ ನಡೆಸಿ ದಾಸ್ಯದಿಂದ ಮುಕ್ತಿ ಪಡೆಯಲು ಏನು ಮಾಡಬೇಕೆಂದು ಕೇಳುತ್ತಾನೆ.
ಸಮುದ್ರ ಮಂಥನದಿಂದ ಅಮೃತವನ್ನು ತಂದು ಕೊಟ್ಟರೆ ದಾಸ್ಯದಿಂದ ಮುಕ್ತಗೊಳಿಸುವುದಾಗಿ ತಿಳಿಸುತ್ತಾರೆ. ದಾಸ್ಯದಿಂದ ಮುಕ್ತಿ ಪಡೆಯಲು ವೈನತೇಯ ಅಮೃತವನ್ನು ರಕ್ಷಿಸಲು ಇಂದ್ರ ನಿಯೋಜಿಸಿದ್ದ ಸರ್ಪಗಳನ್ನು ವಧಿಸಿ, ಅಮೃತ ಕುಂಭವನ್ನು ಹೊತ್ತುಕೊಂಡು ಹೊರಡುತ್ತಾನೆ. ಮಾರ್ಗ ಮಧ್ಯದಲ್ಲಿ ಇಂದ್ರ ಪ್ರತ್ಯಕ್ಷನಾಗಿ ವಜ್ರಾಯುಧ ಪ್ರಯೋಗಿಸುತ್ತಾನೆ. ಆದರೂ ವಜ್ರಾಯುಧವೂ ಸಹ ವೈನತೇಯನನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಮೃತವನ್ನು ತೆಗೆದುಕೊಂಡು ಹೋಗಿ ಯಾರು ಯಾರಿಗೋ ಕೊಡದಂತೆ ಇಂದ್ರ ವೈನತೇಯನಲ್ಲಿ ಮನವಿ ಮಾಡುತ್ತಾನೆ. ತನಗೆ ಅಮೃತ ಬೇಕಿರುವುದು ಸ್ವಾರ್ಥಕ್ಕಾಗಿ ಅಲ್ಲ ತಾಯಿಯನ್ನು ದಾಸ್ಯದಿಂದ ಮುಕ್ತಗೊಳಿಸಲು. ನಾನು ಸರ್ಪಗಳ ಮುಂದಿಟ್ಟ ಮೇಲೆ ಅಮೃತವನ್ನು ನೀನೇ ತೆಗೆದುಕೊಂಡು ಹೋಗು ಎಂದು ವೈನತೇಯ ಇಂದ್ರನಿಗೆ ಹೇಳುತ್ತಾನೆ. ಇತ್ತ ವೈನತೇಯ ಅಮೃತಕಲಶವನ್ನು ನಾಗಗಳಿಗೆ ಕೊಟ್ಟು ತನ್ನ ತಾಯಿಯನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದನು. ಸರ್ಪಗಳು ಸ್ನಾನ ಮಾಡಿಕೊಂಡು ಅಮೃತವನ್ನು ಸ್ವೀಕರಿಸಲು ಬರುವ ಹೊತ್ತಿಗೆ ಇಂದ್ರ ದರ್ಭೆಯ ಮೇಲೆ ಇಟ್ಟಿದ್ದ ಅಮೃತ ಕುಂಭವನ್ನು ತೆಗೆದುಕೊಂಡು ಹೋಗಿದ್ದ. ಹತಾಷಗೊಂಡ ನಾಗಗಳು ಅಮೃತವು ಸೋರಿ ದರ್ಭೆಯ ಮೇಲೆ ಬಿದ್ದಿರಬಹುದೆಂದು ಆ ದರ್ಭೆಯನ್ನು ನೆಕ್ಕಿದವು. ಹಾಗೆ ಮಾಡಿದ್ದರಿಂದ ನಾಗಗಳ ನಾಲಿಗೆ ಸೀಳಿತು. ಅಮೃತದ ಕುಂಭದ ಸ್ಪರ್ಷವಾಗಿದ್ದರಿಂದ ದರ್ಭೆಗೆ ಅಂದಿನಿಂದ ಪವಿತ್ರ ಎಂಬ ಹೆಸರು ಬಂತೆಂಬ ಉಲ್ಲೇಖವಿದೆ.