ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದು, ಒಂದೊಂದು ದೇವರ ಒಂದೊಂದು ಅವತಾರಗಳಿಗೂ ಭಾರತದ ಉದ್ದಗಲಕ್ಕೂ ದೇವಾಲಯಗಳಿವೆ. ಆದರೆ ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಳಿಲ್ಲ. ಹಾಗಂತ ಇಲ್ಲವೇ ಇಲ್ಲ ಅಂತಲ್ಲ. ಇಡಿ ವಿಶ್ವದಲ್ಲಿರುವುದು ಒಂದೇ ಒಂದು ದೇವಾಲಯ ಮಾತ್ರ.
ರಾಜಸ್ಥಾನದಲ್ಲಿ ಬ್ರಹ್ಮನಿಗೆ ದೇವಾಲಯವೊಂದಿದ್ದು, ಪುಷ್ಕರ್ ದೇವಾಲಯ ಎಂದೇ ಪ್ರಸಿದ್ಧಿ ಪಡೆದಿದೆ. ಬ್ರಹ್ಮನಿಗೆ ಭೂಲೋಕದಲ್ಲಿ ಪೂಜೆ ತಪ್ಪುವುದಕ್ಕೆ ಹಲವು ಪುರಾಣಗಳಲ್ಲಿ ಹಲವು ರೀತಿಯ ವಿವರಣೆಗಳಿವೆ. ಈ ಪೈಕಿ ಒಂದು ವಿವರಣೆ ಪ್ರಕಾರ ವಜ್ರನಭ ಎಂಬ ರಾಕ್ಷಸ ಭೂಮಿಯಲ್ಲಿ ಅತ್ಯಂತ ಉಪಟಳ ನೀಡುತ್ತಿದ್ದ. ಬ್ರಹ್ಮ ಕಮಲದ ಹೂವನ್ನು ಆಯುಧವನ್ನಾಗಿ ಬಳಸಿಕೊಂಡು ಆತನನ್ನು ವಧೆ ಮಾಡುತ್ತಾನೆ. ಈ ಸಂದರ್ಭದಲ್ಲಿ ಕಮಲದ ಹೂವಿನ ಎಸಳುಗಳು ಭೂಮಿಯ ಮೂರು ಭಾಗಗಳಲ್ಲಿ ಬೀಳುತ್ತದೆ. ಆ ಪ್ರದೇಶಗಳಲ್ಲಿ ಜ್ಯೇಷ್ಠ, ಮಧ್ಯ, ಕನಿಷ್ಟ ಎಂಬ ಮೂರು ಸರೋವರಗಳು ಸೃಷ್ಟಿಯಾಗುತ್ತವೆ. ಬ್ರಹ್ಮನ ಕೈಯ್ಯಿಂದ ಕಮಲ ಬಿದ್ದಿದ್ದರಿಂದಾಗಿ ಅದಕ್ಕೆ ಪುಷ್ಕರ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.
ಪುರಾಣಗಳ ಪ್ರಕಾರ ಬ್ರಹ್ಮ ಯಜ್ಞ ಮಾಡಬೇಕಿರುತ್ತದೆ. ಮಡದಿ ಇಲ್ಲದೇ ಯಜ್ಞ ಮಾಡುವಂತಿಲ್ಲ. ಆದರೆ ಬ್ರಹ್ಮನ ಮಡದಿ ಸಾವಿತ್ರಿ ಆ ವೇಳೆಯಲ್ಲಿ ಅಲ್ಲಿರುವುದಿಲ್ಲ. ಯಜ್ಞ ಮಾಡಲೇಬೇಕಾದ್ದರಿಂದ ಬ್ರಹ್ಮ ಗಾಯತ್ರಿಯನ್ನು ವಿವಾಹವಾಗಿ ಯಜ್ಞವನ್ನು ಪೂರೈಸುತ್ತಾನೆ. ಸಾವಿತ್ರಿ ಬಂದು ನೋಡಿದಾಗ ಗಾಯತ್ರಿ ಬ್ರಹ್ಮನನ್ನು ವಿವಾಹವಾಗಿರುವುದು ತಿಳಿಯುತ್ತದೆ. ಇದರಿಂದ ಕೋಪಗೊಂಡ ಸಾವಿತ್ರಿ "ನಿನಗೆ ಭೂಲೋಕದಲ್ಲಿ ಪೂಜೆ ಇಲ್ಲದಂತಾಗಲಿ" ಎಂದು ಶಾಪ ನೀಡುತ್ತಾಳೆ. ಆದರೆ ಯಜ್ಞದಲ್ಲಿ ಭಾಗಿಯಾಗಿದ್ದ ಗಾಯತ್ರಿ ತನ್ನ ಶಕ್ತಿಯಿಂದ ಯಜ್ಞ ನಡೆದಿದ್ದ ಪುಷ್ಕರವನ್ನು ರಕ್ಷಿಸುತ್ತಾಳೆ, ಅದಕ್ಕಾಗಿಯೇ ಇಂದಿಗೂ ಪುಷ್ಕರದಲ್ಲಿ ಮಾತ್ರ ಬ್ರಹ್ಮನಿಗೆ ಪೂಜೆ ಸಲ್ಲುತ್ತದೆ ಎಂಬ ನಂಬಿಕೆ ಇದೆ.
ಶಿವ ಬ್ರಹ್ಮನ ಒಂದು ತಲೆ ಕತ್ತರಿಸಿದ್ದಕ್ಕೂ ಪೂಜೆ ನಿಲ್ಲುವುದಕ್ಕೂ ಇದೆ ಕಾರಣ
ಬ್ರಹ್ಮಾಂಡದ ಸೃಷ್ಟಿಯ ವೇಳೆ ಬ್ರಹ್ಮ ಶತರೂಪಳೆಂಬ ಸುಂದರ ದೇವತೆಯನ್ನು ಸೃಷ್ಟಿಸಿದ. ತಾನೇ ಸೃಷ್ಟಿಸಿದ ಈ ದೇವತೆಯಿಂದ ಬ್ರಹ್ಮ ಮೋಹಗೊಂಡ. ಬ್ರಹ್ಮನ ದೃಷ್ಟಿಯನ್ನು ತಪ್ಪಿಸಿಕೊಳ್ಳಲು ಶತರೂಪ ಶತ ಪ್ರಯತ್ನ ನಡೆಸಿದಳಾದರೂ ಎಲ್ಲಾ ದಿಕ್ಕುಗಳಲ್ಲಿ ಆಕೆಯನ್ನು ಹಿಂಬಾಲಿಸಲು ಬ್ರಹ್ಮ ತಲೆಯೊಂದನ್ನು ರೂಪಿಸಿದ. ನಾಲ್ಕು ದಿಕ್ಕುಗಳು ಮತ್ತು ಇವುಗಳ ಮೇಲೊಂದು ಹೀಗೆ ಒಟ್ಟು ಐದು ತಲೆಯನ್ನು ಬ್ರಹ್ಮ ಹೊಂದಿದ. ಬ್ರಹ್ಮನನ್ನು ನಿಯಂತ್ರಿಸಲು ಶಿವ ಮೇಲಿನ ತಲೆಯನ್ನು ಕತ್ತರಿಸಿ ಹಾಕಿದ. ತಾನು ಸೃಷ್ಟಿಸಿದವಳ ಮೇಲೆ ತಾನೇ ಅವಳನ್ನು ಮೋಹಿಸುವುದು ತಪ್ಪೆಂದು ಶಿವ ಬ್ರಹ್ಮನಿಗೆ ಹೇಳಿದ. ಹಾಗಾಗಿ ಬ್ರಹ್ಮನಿಗೆ ಯಾರೂ ಪೂಜೆ ಸಲ್ಲಿಸಬಾರದೆಂದು ಶಿವ ಶಾಪ ನೀಡಿದ ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ ತ್ರಿಮೂರ್ತಿಗಳಲ್ಲಿ ಇಬ್ಬರಾದ ವಿಷ್ಣು ಮತ್ತು ಶಿವನಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ. ಬ್ರಹ್ಮನಿಗೆ ಒಂದು ಪ್ರದೇಶವನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ಪೂಜೆ ಸಲ್ಲಿಸುವುದಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos