ಬರಹ: ಶ್ರೀಕಂಠ ಬಾಳಗಂಚಿ
ಸಾಮಾನ್ಯವಾಗಿ ಛತ್ ಪೂಜೆಯನ್ನು ಉತ್ತರ ಭಾರತದ ಮಧ್ಯಪ್ರದೇಶ, ಛತ್ತೀಸ್ ಘಡ್, ಬಿಹಾರ ಮತ್ತು ಉತ್ತರ ಪ್ರದೇಶವಲ್ಲದೇ ಕೆಲವು ಈಶಾನ್ಯ ರಾಜ್ಯಗಳು ಮತ್ತು ನೇಪಾಳದ ಕೆಲವು ಪ್ರದೇಶಗಳಲ್ಲಿ ಅತ್ಯಂತ ಸಡಗರ ಸಂಭ್ರಗಳಿಂದ ನಾಲ್ಕು ದಿನಗಳ ಕಾಲ ಆಚರಿಸುವ ಪ್ರಮುಖ ಹಬ್ಬವಾಗಿದೆ. ಕಾರ್ತೀಕ ಮಾಸದ ದೀಪಾವಳಿಯ ಬಲಿಪಾಡ್ಯಮಿ ಆದ ನಂತರದ 4ನೇ ದಿನದಂದು ಪ್ರಾರಂಭವಾಗಿ ಮುಂದಿನ ನಾಲ್ಕುದಿನಗಳ ಕಾಲ ಆಚರಿಸಲ್ಪಡುತ್ತದೆ.
ಪ್ರಾರಂಭದ ಎರಡು ದಿನಗಳು ಮನೆಯಲ್ಲಿ ಪೂಜೆ ಪುನಸ್ಕಾರಗಳಿಗೆ ಸೀಮಿತವಾಗಿದ್ದರೆ, ಛತ್ ಪೂಜೆಯನ್ನು ಮೂರನೇ ದಿನ ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ನಾಲ್ಕು ದಿನಗಳ ಈ ಹಬ್ಬದಲ್ಲಿ ಉಪವಾಸವೇ ಅತ್ಯಂತ ಪ್ರಮುಖವಾಗಿದ್ದು, ಹತ್ತಿರದ ನದಿ ಇಲ್ಲವೆ ಕಲ್ಯಾಣಿಗಳಲ್ಲಿ ಪವಿತ್ರ ಸ್ನಾನ ಮಾಡಿ ಬೆಳಿಗ್ಗೆ ಉದಯಿಸುವ ಮತ್ತು ಸಂಜೆ ಮುಳುಗುವ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿ ಧ್ಯಾನ ಮಾಡುವುದು ಸಂಪ್ರದಾಯವಾಗಿದೆ. ಇತ್ತೀಚೆಗೆ ಈ ಪ್ರಾಂತ್ಯದ ಜನರು ದೇಶಾದ್ಯಂತ ಹರಡಿರುವ ಕಾರಣ ಈ ಛಗ್ ಪೂಜೆಯು ದೇಶಾದ ಬಹುತೇಕ ಪ್ರಮುಖ ಹಬ್ಬಗಳಲ್ಲಿ ಆಚರಿಸುವ ಪ್ರದ್ದತಿ ರೂಢಿಯಲ್ಲಿದೆ.
ಈ ಹಬ್ಬವು ರಾಮಾಯಣ ಮತ್ತು ಮಹಾಭಾರತದೊಂದಿಗೆ ತಳುಕು ಹಾಕಿಕೊಂಡಿದ್ದು, ವಿಜಯದಶಮಿಯಂದು ಲಂಕೆಯಲ್ಲಿ ಬ್ರಾಹ್ಮಣನಾದ ರಾವಣನನ್ನು ಸಂಹರಿಸಿದ ಬ್ರಹ್ಮಹತ್ಯಾ ದೋಷದ ಪರಿಹಾರಾರ್ಥವಾಗಿ ದೀಪಾವಳಿ ಹಬ್ಬದಲ್ಲಿ ಅಯೋಧ್ಯೆಯ ಪುರಪ್ರವೇಶ ಮಾಡುವ ಸಂಧರ್ಭದಲ್ಲಿ ಪ್ರಭು ಶ್ರೀರಾಮ ತನ್ನ ಪತ್ನಿ ಸೀತೆದೇವಿಯೊಂದಿಗೆ ಬಿಹಾರದ ಮುಂಗೇರ್ ಎಂಬ ಪ್ರದೇಶದಲ್ಲಿ ಸೂರ್ಯ ದೇವರ ಗೌರವಾರ್ಥ ಉಪವಾಸವನ್ನು ಆಚರಿಸಿ ಸೂರ್ಯಾಸ್ತಮಾನದ ಸಮಯದಲ್ಲಿ ಸೂರ್ಯದೇವನಿಗೆ ಪೂಜಿಸಿ ಉಪವಾಸವನ್ನು ಸಂಪನ್ನಗೊಳಿಸಿದನು ಎಂದು ಹೇಳಲಾಗುತ್ತದೆ. ಈ ಪ್ರಸಂಗಕ್ಕೆ ಪುರಾವೆ ಎನ್ನುವಂತೆ ಆ ಪ್ರದೇಶದಲ್ಲಿ ಸೀತೆಯ ಪಾದಗಳ ಗುರುತುಗಳನ್ನು ಹೊಂದಿರುವ ಸೀತಾ ಚರಣ್ ಮಂದಿರವಿದ್ದು. ರಾಮ ಮತ್ತು ಸೀತೆ ಈ ರೀತಿಯಾಗಿ ಸೂರ್ಯನನ್ನು ಪೂಜಿಸಿದ ನಂತರ ದೇಶಾದ್ಯಂತ ಛತ್ ಪೂಜೆಯು ವಿಕಸನಗೊಂಡಿತು ಎನ್ನುವ ಪ್ರತೀತಿ ಇದೆ.
ಮಹಾಭಾರತದಲ್ಲಿ ಕರ್ಣನು ಸೂರ್ಯ ದೇವರ ಅನುಗ್ರಹದಿಂದ ಕುಂತಿಯ ಮಗನಾಗಿ ಜನಿಸಿದ ಕಾರಣ ಆತನನ್ನು ಸೂರ್ಯಪುತ್ರ ಎಂದೇ ಕರೆಯಲಾಗುತ್ತದೆ. ಹಾಗಾಗಿಯೇ ಕರ್ಣನು ಸಾಮಾನ್ಯವಾಗಿ ನೀರಿನಲ್ಲಿ ನಿಂತು ಸೂರ್ಯದೇವರಿಗೆ ಅರ್ಘ್ಯವನ್ನು ಕೊಡುವ ಪದ್ದತಿಯನ್ನು ರೂಢಿಯಲ್ಲಿಟ್ಟುಕೊಂಡಿದ್ದನು. ಅದೇ ರೀತಿಯಲ್ಲಿ ೧೨ ವರ್ಷ ವನವಾಸ ಮತ್ತು ೧ ವರ್ಷ ಅಜ್ಞಾತವಾಸ ಮುಗಿಸಿದ ನಂತರ ಮರಳಿ ತಮ್ಮ ರಾಜ್ಯವನ್ನು ಪಡೆಯುವ ಸಲುವಾಗಿ ದ್ರೌಪದಿ ಸಮೇತ ಪಾಂಡವರು ಈ ಛತ್ ಪೂಜೆಯನ್ನು ಆಚರಿಸಿದ್ದರು ಎನ್ನುವ ಕಥೆಯೂ ಸಹಾ ಇದೆ.
ಜನಪದವೊಂದರ ದಂತಕಥೆಯ ಪ್ರಕಾರ ಪ್ರಸ್ತುತ ಬಿಹಾರ ಮತ್ತು ಜಾರ್ಖಂಡ್ ಸುತ್ತಲಿನ ಪ್ರದೇಶವನ್ನು ರಾಜ ಪ್ರಿಯವ್ರತ ಮತ್ತು ಅವನ ರಾಣಿ ಮಾಲಿನಿ ಎಂಬುವರು ಆಳುತ್ತಿದ್ದು, ಅವರಿಗೆ ಬಹಳ ಕಾಲ ಮಕ್ಕಳು ಇರದಿದ್ದ ಕಾರಣ ಅರಮನೆಯ ಪುರೋಹಿತರ ಸಲಹೆಯಂತೆ ಮಕ್ಕಳನ್ನು ಪಡೆಯುವ ಸಲುವಾಗಿ ಬಹಳ ಶ್ರದ್ಧಾ ಭಕ್ತಿಯಿಂದ ಪುತ್ರಕಾಮೇಷ್ಠಿ ಯಾಗವನ್ನು ಮಾಡುವ ಸಂಧರ್ಭದಲ್ಲಿ ಹೋಮ ಕುಂಡದಿಂದ ಅಕ್ಕಿಯಿಂದ ಮಾಡಿದ ಖ್ಯಾದ್ಯ (ಪಾಯಸ)ವಿದ್ದ ಬಟ್ಟಲು ಕಾಣಿಸಿಕೊಳ್ಳುತ್ತದೆ. ಪುರೋಹಿತರ ಆಜ್ಞೆಯಂತೆ ಆ ಪಾಯಸವನ್ನು ಸೇವಿಸಿದ ಕೆಲವೇ ದಿನಗಳಲ್ಲಿ ರಾಣಿಯು ಗರ್ಭಿಣಿಯಾದಾಗಾಗ ಇಡೀ ದೇಶವೇ ಸಂಭ್ರಮ ಪಟ್ಟಿರುತ್ತದೆ. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ತಂಬು ಗರ್ಭಿಣಿಯ ಪ್ರಸವವಾದಾಗ ದುರಾದೃಷ್ಟವಷಾತ್ ಸತ್ತ ಮಗುವಿನ ಜನಿಸುತ್ತದೆ.
ಇದರಿಂದ ಬಹಳ ದುಃಖಿತಳಾದ ರಾಣಿ ಮಾಲಿನಿಯು ಆತ್ಮಹತ್ಯೆ ಮಾಡಿಕೊಳ್ಳವ ಸಲುವಾಗಿ ಹತ್ತಿರದ ನದಿಯ ಬಳಿ ಧಾವಿಸಿ, ಇನ್ನೇನು ಆಕೆ ನದಿಗೆ ಹಾರಬೇಕು ಎನುವಷ್ಟರಲ್ಲಿ, ಆಕೆಯನ್ನು ವಯಸ್ಸಾದ ಮಹಿಳೆಯೊಬ್ಬಳು ತಡೆದು ತಾನು ದೇವಸೇನ/ಶಾಷ್ಠಿ ಎಂದು ಪರಿಚಯಿಸಿಕೊಂಡು, ಪುನಃ ಆರೋಗ್ಯವಂತ ಮಗುವನ್ನು ಪಡೆಯುವ ಸಲುವಾಗಿ ಸೂರ್ಯ ದೇವರನ್ನು ಪೂಜಿಸಲು ತಿಳಿಸುತ್ತಾಳೆ. ಆಕೆಯ ಅಜ್ಞಾನುಸಾರ ಭಕ್ತಿಯಿಂದ ಅದೇ ನೀರಿನಲ್ಲಿ ಮಿಂದು ಸೂರ್ಯಾಸ್ತ ಸಮಯದಲ್ಲಿ ಸೂರ್ಯದೇವನಿಗೆ ಮಕ್ಕಳನ್ನು ಕೊಡು ಎಂದು ಪ್ರಾರ್ಥಿಸಿದ ಕೆಲವೇ ಸಮಯದಲ್ಲಿ ರಾಣಿ ಮಾಲಿನಿಯು ಮತ್ತೆ ಗರ್ಭಿಣಿಯಾಗಿ ನವ ಮಾಸದ ನಂತರ ಆರೋಗ್ಯಕರವಾದ ಗಂಡು ಮಗುವಿಗೆ ಜನನ ನೀಡಿದ ನಂತರ, ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಅಲ್ಲಿನ ಜನರು ಛತ್ ಪೂಜೆಯನ್ನು ಮಾಡಲು ಆರಂಭಿಸಿದರು ಎನ್ನಲಾಗುತ್ತದೆ.
ಛತ್ ಪೂಜೆಯ ನಾಲ್ಕು ದಿನಗಳ ಆಚರಣೆಗಳು
ಮೊದಲನೆಯ ದಿನ ನಹಯ್ ಖಯ್
ಈ ದಿನದಂದು ತಮ್ಮ ಹತ್ತಿರ ವಿರುವ ಕೋಸಿ, ಗಂಗಾ ಕರ್ನಾಲಿ ನದಿಗಳಲ್ಲಿ ಪ್ರವಿತ್ರ ಸ್ನಾನ ಮಾಡಿ ಸೂರ್ಯದೇವರಿಗೆ ನಮಸ್ಕರಿಸಿ ಅಲ್ಲಿನ ಪವಿತ್ರ ನೀರನ್ನು ಮನೆಗೆ ತೆಗೆದುಕೊಂಡು ಹೋಗಿ ನೈವೇದ್ಯವನ್ನು ತಯಾರಿಸಿ ಸೂರ್ಯದೇವನಿಗೆ ಸಮರ್ಪಣೆ ಮಾಡುವ ಮೂಲಕ ಮೊದಲನೇ ದಿನದ ಪೂಜೆ ಸಂಪನ್ನವಾಗುತ್ತದೆ.
ಎರಡನೇಯ ದಿನ ಲೋಹಂಡ ಅಥವಾ ಖರ್ನಾ:
ಛತ್ ಪೂಜೆಯ ಎರಡನೇ ದಿನ ಭಕ್ತರು ಉಪವಾಸವಿದ್ದು ಸೂರ್ಯಾಸ್ತವಾದ ನಂತರ ಸೂರ್ಯ ಮತ್ತು ಚಂದ್ರನನ್ನು ಪೂಜಿಸಿ ಅವರಿಗೆ ಬಾಳೆಹಣ್ಣು ಪಾಯಸ ಮತ್ತು ಅನ್ನದಿಂದ ಮಾಡಿದ ಪದಾರ್ಥಗಳನ್ನು ನೈವೇದ್ಯ ಮಾಡಿ ಆದನ್ನೇ ಪ್ರಸಾದವನ್ನು ಸೇವಿಸಿದ ನಂತರ ಮುಂದಿನ 36 ಗಂಟೆಗಳ ಕಾಲ ನೀರನ್ನೂ ಕುಡಿಯದೇ ಉಪವಾಸ ಮಾಡಲಾಗುತ್ತದೆ.
ಮೂರನೇ ದಿನ ಸಂಧ್ಯಾ ಅರ್ಘ್ಯ: ಛತ್ ಪೂಜೆಯ ಮೂರನೇ ದಿನವಿಡೀ ನೀರಿಲ್ಲದೆ ಉಪವಾಸದಿಂದ ಮಾಡುತ್ತಲೇ ದೇವರಿಗೆ ಅರ್ಪಿಸಲು ನೈವೇದ್ಯಗಳನ್ನು ತಯಾರಿಸಿ ಅದನ್ನು ಬಿದಿರಿನ ತಟ್ಟೆಯಲ್ಲಿಟ್ಟು ಕೊಂಡು ಬಾಳೇ ತೆಂಗಿನಕಾಯಿ ಬಾಳೆಹಣ್ಣು ಮತ್ತು ಆ ಕಾಲದಲ್ಲಿ ಸಿಗುವ ಇತರೇ ಹಣ್ಣುಗಳೊಂದಿಗೆ ಹತ್ತಿರದ ನದಿ ಅಥವಾ ಕಲ್ಯಾಣಿಗೆ ಬಂದು ಮತ್ತೆ ಸ್ನಾನ ಮಾಡಿ ಸೂರ್ಯಾಸ್ತದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ನೀಡಿ ತಂದ ನೈವೇದ್ಯವನ್ನು ಸಮರ್ಪಿಸುತ್ತಾರೆ.
ನಾಲ್ಕನೇಯ ದಿನ ಬಿಹಾನಿಯಾ ಅರ್ಘ್ಯ: ಛತ್ ಪೂಜೆಯ ನಾಲ್ಕನೇ ಮತ್ತು ಕೊನೆಯ ದಿನದಂದು, ಸೂರ್ಯೋದಯದ ಸಮಯದಲ್ಲಿ ಭಕ್ತರು ಮತ್ತೆ ನದಿ ಇಲ್ಲವೇ ಕಲ್ಯಾಣಿಗೆ ಬಂದು ಅಲ್ಲಿ ಪವಿತ್ರ ಸ್ನಾನವನ್ನು ಮಾಡಿ ಉದಯಿಸುತ್ತಿರುವ ಸೂರ್ಯನಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಘ್ಯವನ್ನು ನೀಡಿ ಪ್ರಾರ್ಥನೆ ಸಲ್ಲಿಸಿ ಮತ್ತು ನೈವೇದ್ಯಗಳನ್ನು ಅರ್ಪಿಸಿದ ನಂತರ ಶುಂಠಿ ಮತ್ತು ಸಕ್ಕರೆಯನ್ನು ಸೇವಿಸುವ ಮೂಲಕ ತಮ್ಮ ಉಪವಾಸವನ್ನು ಕೊನೆ ಗೊಳ್ಳಿಸುತ್ತಾರೆ.
ಛತ್ ಪೂಜೆಯ ಮೂಲಕ ದೇಹವನ್ನು ನಿರ್ವಿಷಗೊಳಿಸಲು ಉತ್ತಮ ಮಾರ್ಗವಾಗಿದೆ. ಉಪವಾಸ ಮಾಡುತ್ತಾ ನೀರಿನಲ್ಲಿ ಸ್ನಾನ ಮಾಡಿ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ದೇಹದಲ್ಲಿನ ಜೈವಿಕ ಹರಿವು ಹೆಚ್ಚಾಗಿ ದೇಹದ ಎಲ್ಲಾ ಅಂಗಾಂಗಗಳನ್ನು ಸುಧಾರಿಸುತ್ತದೆ. ಅದೇ ರೀತಿಯಲ್ಲಿ ಛತ್ ಪೂಜೆಯು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ಮುಂಬರುವ ಚಳಿಗಾಲಕ್ಕೆ ದೇಹವನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಎಂದು ಸಹಾ ಹೇಳಲಾಗುತ್ತದೆ.