ನಾವೆಲ್ಲರೂ, ಗೋದಾನ, ಭೂದಾನ, ಸುವರ್ಣದಾನ, ರತ್ನದಾನ ಕಡೆಗೆ ಅನ್ನದಾನ ಮತ್ತು ರಕ್ತದಾನವನ್ನು ಕೇಳಿದ್ದೇವೆ. ಅರೇ, ಇದೇನಿದು ಅಪೂಪ ದಾನ? ಅಂತ ಆಶ್ಚರ್ಯ ಪಡ್ತಾ ಇದ್ದೀರಾ? ಹೌದು ಈ ರೀತಿಯಾದ ಅಪರೂಪದ ಅಪೂಪ ದಾನವನ್ನು ಎಲ್ಲಾ ಸಮಯದಲ್ಲಿಯೂ ಕೊಡಲು ಬರುವುದಿಲ್ಲ. ಇದು ಕೇವಲ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕಮಾಸದಲ್ಲಿ ಮಾತ್ರವೇ ಕೊಡುವಂತಹ ಅನುರೂಪದ ಮತ್ತು ಅಪರೂಪದ ದಾನವೇ ಅಪೂಪ ದಾನ.
ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಯಾವ ಚಾಂದ್ರಮಾಸದಲ್ಲಿ ಸೂರ್ಯ ಸಂಕ್ರಾಂತಿ ಇರುವುದಿಲ್ಲವೋ ಆ ಮಾಸವನ್ನು ಅಧಿಕ ಮಾಸವೆಂದು ಪರಿಗಣಿಸಲಾಗುತ್ತದೆ. ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ವಶಿಷ್ಟ ಸಿದ್ದಾಂತ ಪ್ರಕಾರ ಅಧಿಕ ಮಾಸವು 32 ತಿಂಗಳು 16 ದಿವಸಗಳು, 3 ಗಂಟೆ 12 ನಿಮಿಷಕ್ಕೆ ಬರುತ್ತದೆ.
ಅಧಿಕಮಾಸವು ಸಹ ಖಗೋಳ ಶಾಸ್ತ್ರ ಮತ್ತು ಗಣಿತ ಸೂತ್ರಗಳನ್ನು ಆಧರಿಸಿದೆ. ಭೂಮಿಯು ಸೂರ್ಯನ ಸುತ್ತ, ಒಂದು ಸುತ್ತು ಸುತ್ತಿ ಬರಲು (1 ಆವರ್ತ) ಅಂದರೆ 365.2422 ದಿವಸಗಳು ಬೇಕು. ಇದು ಸೌರಮಾನದ ವಾರ್ಷಿಕ ಚಲನೆಯಾದರೆ, ಚಂದ್ರನು ಭೂಮಿಯ ಸುತ್ತಲೂ ಒಂದು ಸುತ್ತು ಸುತ್ತಿ ಬರಲು 27.3 ದಿವಸಗಳು ಬೇಕು.
ಹಾಗಾಗಿ ಇದು ಚಂದ್ರಮಾನದ ಮಾಸಿಕ ಚಲನೆಯಾಗಿದೆ. ಹೀಗೆ ಭೂಮಿ ಮತ್ತು ಚಂದ್ರರ 27.3 ದಿವಸಗಳ ಚಲನೆ ಲೆಖ್ಖಾಚಾರದ ಪ್ರಕಾರ ಸೂರ್ಯನ ಸುತ್ತಲೂ 1/12 ಭಾಗವನ್ನು ಚಲಿಸಿರುತ್ತದೆ. ಸೂರ್ಯನ ಸುತ್ತಲು ಚಲಿಸುವ ಭೂಮಿಯ ಪಥವು ಸಮನಾಗಿಲ್ಲವಾಗಿರುವುದರಿಂದ, ಚಂದ್ರನು ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆವರೆಗೆ ಚಲಿಸಲು 2.2 ಹೆಚ್ಚಿನ ದಿವಸಗಳನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ ಭೂಮಿಯೂ ಸಹಾ ಸೂರ್ಯನ ಸುತ್ತಲೂ ಚಲಿಸುತ್ತಿರುವುದರಿಂದ ಚಂದ್ರನು ಒಂದು ಹುಣ್ಣಿಮೆಯಿಂದ ಮತ್ತೊಂದು ಹುಣ್ಣಿಮೆಯವರೆಗೆ ಚಲಿಸಲು 29.531 ದಿವಸಗಳನ್ನು ತೆಗೆದುಕೊಳ್ಳುತ್ತದೆ.
ಹಾಗಾಗಿ ಚಾಂದ್ರಮಾನದ ಲೆಖ್ಖಾಚಾರದಂತೆ ವಾರ್ಷಿಕ ಚಲನೆ 29.531 x 12 = 354.372 ದಿನಗಳಾಗುತ್ತದೆ. ಸೌರಮಾನದ ವಾರ್ಷಿಕ ಚಲನೆ (1 ಆವರ್ತನ) = 365.2422 ದಿವಸಗಳಾಗುತ್ತದೆ.
ಚಾಂದ್ರಮಾನದ ವಾರ್ಷಿಕ ಚಲನೆ (29.531 x 12) = 354.372 ಸೌರಮಾನ ಮತ್ತು ಚಾಂದ್ರಮಾನದ ವಾರ್ಷಿಕ ವ್ಯತ್ಯಾಸ: (365.2422 – 354.372) = 10.8702 ದಿವಸಗಳಾಗುತ್ತದೆ.
ಈ ರೀತಿಯಾದ 10 ದಿನಗಳ ವ್ಯತ್ಯಾಸ 3 ವರ್ಷಗಳಲ್ಲಿ 32.6106 ದಿವಸಗಳಾಗುತ್ತದೆ. ಹಾಗಾಗಿ ಈ ವ್ಯತ್ಯಾಸ ಸರಿ ತೂಗಿಸಲು ಪ್ರತೀ 3 ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ. ಆಂದರೆ ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ಹೀಗೆ 33 ತಿಂಗಳಿಗೊಮ್ಮೆ ಒಂದು ಮಾಸವನ್ನು ಸೇರಿಸುವ ಪರಿಕಲ್ಪನೆಯೇ ಅಧಿಕ ಮಾಸ. ಈ ಹಿನ್ನೆಲೆಯಲ್ಲಿಯೇ ಅಧಿಕ ಮಾಸದಲ್ಲಿ 33 ಸಂಖ್ಯೆಯ ದಾನಗಳನ್ನು ಕೊಡುವ ಪದ್ಧತಿ ರೂಢಿಯಲ್ಲಿ ಬಂದಿದೆ ಎನ್ನಬಹುದು.
ಅದಲ್ಲದೇ ಅಧಿಕಮಾಸದಲ್ಲಿ 33 ದೇವತೆಗಳನ್ನು ಈ ರೀತಿಯಾಗಿ ವಿಂಗಡಿಸಿದ್ದಾರೆ.
ಅಷ್ಟ (8) ವಸುಗಳು, ಏಕಾದಶ (11) ರುದ್ರರು, ದ್ವಾದಶ (12) ಆದಿತ್ಯರು, (1) ಪ್ರಜಾಪತಿ, (1) ವಷಟ್ಕಾರ ಹೀಗೆ ಒಟ್ಟು 33 ದೇವತೆಗಳು.
ಈ ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನ ಕೊಟ್ಟರೆ ಹೆಚ್ಚಿನ ಫಲವಿದೆ ಎಂದು ಹೇಳಲಾಗುತ್ತದೆ. ಅಪೂಪ ಎಂದರೆ, ಅತಿರಸ ಅಥವಾ ಕಜ್ಜಾಯ ಎಂದು ಕರೆಯಲ್ಪಡುವ ಅಕ್ಕಿ, ಬೆಲ್ಲ ಮತ್ತು ತುಪ್ಪದಿಂದ ಮಾಡಿದ 33 ಭಕ್ಷ್ಯವನ್ನು ಒಂದು ತಟ್ಟೆಯಲ್ಲಿಟ್ಟು ದಾನ ಮಾಡಬೇಕು. ಅತಿರಸ ಮಾಡಲಾಗದಿದ್ದಲ್ಲಿ ಅನಾರಸ ಶ್ರೇಷ್ಠ, ಖರ್ಚಿಕಾಯಿ ಇಲ್ಲವೇ ಬೇಸನ್ ಲಾಡು ಅಥವಾ ನಿಮ್ಮ ಇಚ್ಚೆ ಮತ್ತು ಅನುಕೂಲಕ್ಕೆ ಅನುಗುಣವಾಗಿ 33 ಸಂಖ್ಯೆಯಷ್ಟು ಭಕ್ಷವನ್ನು ಮಾಡಿ ಈ ಅಪೂಪ ಶ್ಲೋಕವನ್ನು ಪಠಿಸುತ್ತಾ,
ತ್ರಯಸ್ತ್ರಿಂಶದ ಪೂಪಾನ್ನಂ ಕಾಂಸ್ಯಪಾತ್ರೇ ನಿಧಾಯ ಚ|
ಸಘೃತಂ ಹಿರಣ್ಯಂಚ ಬ್ರಾಹ್ಮಣಾಯ ನಿವೇದಯೇತ್||
33 ಅಪೂಪಗಳ ತಟ್ಟೆಯನ್ನು ದೇವರ ಎದುರಿನಲ್ಲಿ ರಂಗೋಲಿ ಅರಿಶಿನ ಕುಂಕುಮಾದಿಗಳಿಂದ ಮಂಡಲಮಾಡಿ ಮಣೆಯ ಮೇಲಿಟ್ಟು ಮೇಲೆ ತಿಳಿಸಿದ 33 ದೇವತೆಗಳನ್ನು ಆವಾಹನ ಮಾಡಿ, ತಟ್ಟೆಯ ಸಮೇತ ಬ್ರಾಹ್ಮಣರಿಗೆ ಅಥವಾ ಮನೆಯ ಅಳಿಯನಿಂಗಿಂತ ಶ್ರೇಷ್ಠವಾದ ಬ್ರಾಹ್ಮಣರಿಲ್ಲ ಎಂದು ಅಳಿಯನಿಗೋ, ಇಲ್ಲವೇ ಹೆಂಡತಿಯರ ಅಣ್ಣ ಅಥವಾ ತಮ್ಮಂದಿರಿಗೆ ದಾನ ಮಾಡಿದಲ್ಲಿ, ಹೆಚ್ಚಿನ ಫಲ ಲಭಿಸುತ್ತದೆ ಎನ್ನುತ್ತದೆ ಶಾಸ್ತ್ರ. ಈ ರೀತಿಯಾದ ಅಪೂಪ ದಾನವು ಪೃಥ್ವೀ ದಾನದಷ್ಟೇ ಫಲವನ್ನು ಕೊಡುತ್ತದೆ ಎಂದರೆ ಮತ್ತೊಂದು ಪುರಾಣದ ಪ್ರಕಾರ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ.