ಆಯುಧ ಪೂಜೆ  
ಭಕ್ತಿ-ಜ್ಯೋತಿಷ್ಯ

ಆಯುಧ ಪೂಜೆ: ಕೃತಜ್ಞತೆ, ಸಂಪ್ರದಾಯ-ಕಾಯಕದ ಘನತೆಯ ಸಂಭ್ರಮ

ಆಯುಧ ಪೂಜೆ ಕೇವಲ ಆಯುಧಗಳು ಮತ್ತು ಉಪಕರಣಗಳನ್ನು ಪೂಜಿಸುವ ಹಬ್ಬವಲ್ಲ. ಕಾಯಕದ ಘನತೆ, ಜ್ಞಾನದ ಮೌಲ್ಯ ಹಾಗೂ ಜೀವನೋಪಾಯಕ್ಕೆ ನೆರವಾಗುವ ಪ್ರತಿಯೊಂದು ವಸ್ತುವನ್ನೂ ಗೌರವಿಸಬೇಕು ಎಂಬ ಆಳವಾದ ನಂಬಿಕೆಯನ್ನು ಸಾರುವ ಹಬ್ಬವೂ ಹೌದು.

ನವರಾತ್ರಿಯ ಸಂಭ್ರಮ ಉತ್ತುಂಗಕ್ಕೇರುತ್ತಿದ್ದಂತೆ ಮನೆಗಳು, ಕಚೇರಿಗಳು, ಕೃಷಿ ಕ್ಷೇತ್ರಗಳು ಹಾಗೂ ವಾಣಿಜ್ಯ ಸಂಸ್ಥೆಗಳು ಹಬ್ಬದ ಕಳೆಯಿಂದ ಕಂಗೊಳಿಸುತ್ತವೆ. ವಾಹನಗಳನ್ನು ತೊಳೆದು ಅಲಂಕರಿಸಲಾಗುತ್ತದೆ. ಕೆಲಸಕ್ಕೆ ಬಳಸುವ ಉಪಕರಣಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗುತ್ತದೆ. ಪುಸ್ತಕಗಳು ಮತ್ತು ಸಂಗೀತ ವಾದ್ಯಗಳನ್ನು ದೇವರ ಮುಂದೆ ಇರಿಸಲಾಗುತ್ತದೆ. ಮನೆಯ ಬಾಗಿಲುಗಳು ತಾಜಾ ಹೂವು, ಮಾವಿನ ಎಲೆಗಳ ತೋರಣ ಹಾಗೂ ಬಣ್ಣಬಣ್ಣದ ರಂಗೋಲಿಗಳಿಂದ ಕಂಗೊಳಿಸುತ್ತವೆ. ಮಲ್ಲಿಗೆ ಹೂವಿನ ಕಂಪಿನೊಂದಿಗೆ ಧೂಪದ ಪರಿಮಳ ಬೆರೆತು, ದೀಪಗಳ ಮೃದು ಬೆಳಕು ಪರಿಸರಕ್ಕೆ ಪವಿತ್ರತೆಯ ಸ್ಪರ್ಶ ನೀಡುತ್ತದೆ.

ಇದೇ ಆಯುಧ ಪೂಜೆ. ಇದು ಕೇವಲ ಆಯುಧಗಳು ಮತ್ತು ಉಪಕರಣಗಳನ್ನು ಪೂಜಿಸುವ ಹಬ್ಬವಲ್ಲ. ಕಾಯಕದ ಘನತೆ, ಜ್ಞಾನದ ಮೌಲ್ಯ ಹಾಗೂ ಜೀವನೋಪಾಯಕ್ಕೆ ನೆರವಾಗುವ ಪ್ರತಿಯೊಂದು ವಸ್ತುವನ್ನೂ ಗೌರವಿಸಬೇಕು ಎಂಬ ಆಳವಾದ ನಂಬಿಕೆಯನ್ನು ಸಾರುವ ಹಬ್ಬವೂ ಹೌದು.

ನವರಾತ್ರಿಯ ಒಂಬತ್ತನೇ ದಿನ ಆಚರಿಸಲಾಗುವ ಆಯುಧ ಪೂಜೆಗೆ ಕರ್ನಾಟಕದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಬದುಕಿನಲ್ಲಿ ವಿಶೇಷ ಸ್ಥಾನವಿದೆ. ಕನ್ನಡದಲ್ಲಿ 'ಆಯುಧ ಪೂಜೆ' ಎಂದು ಕರೆಯಲಾಗುವ ಈ ಹಬ್ಬವು ಭಕ್ತಿ, ಕೃತಜ್ಞತೆ ಮತ್ತು ಜನರ ದೈನಂದಿನ ಬದುಕನ್ನು ಸುಂದರವಾಗಿ ಬೆಸೆಯುತ್ತದೆ.

ಆಯುಧಗಳಿಂದ ದೈನಂದಿನ ಉಪಕರಣಗಳವರೆಗೆ: ಆಯುಧ ಪೂಜೆಯ ಮಹತ್ವ

'ಆಯುಧ' ಎಂಬ ಪದಕ್ಕೆ ಶಸ್ತ್ರ ಅಥವಾ ಸಾಧನ ಎಂಬ ಅರ್ಥವಿದೆ. ಪ್ರಾಚೀನ ಕಾಲದಲ್ಲಿ ಯುದ್ಧಗಳಲ್ಲಿ ಬಳಸುತ್ತಿದ್ದ ಆಯುಧಗಳು ಹಾಗೂ ಸಲಕರಣೆಗಳನ್ನು ಪೂಜಿಸುವ ಸಂಪ್ರದಾಯದೊಂದಿಗೆ ಈ ಹಬ್ಬ ನಂಟು ಹೊಂದಿತ್ತು. ಕಾಲಕ್ರಮೇಣ ಈ ಆಚರಣೆಯ ವ್ಯಾಪ್ತಿ ವಿಸ್ತರಿಸಿ, ಜನರು ತಮ್ಮ ದೈನಂದಿನ ಬದುಕಿನಲ್ಲಿ ಬಳಸುವ ಉಪಕರಣಗಳು, ಯಂತ್ರಗಳು ಮತ್ತು ಸಾಧನಗಳಿಗೂ ಮಹತ್ವ ದೊರೆಯಿತು.

ರೈತರಿಗೆ ನೇಗಿಲು, ಟ್ರ್ಯಾಕ್ಟರ್, ಕೊಯ್ಲಿನ ಉಪಕರಣಗಳು ಹಾಗೂ ಕೃಷಿ ಸಲಕರಣೆಗಳನ್ನು ಗೌರವಿಸುವ ದಿನವಿದು. ಕುಶಲಕರ್ಮಿಗಳು ಮತ್ತು ಮೆಕ್ಯಾನಿಕ್‌ಗಳು ತಮ್ಮ ಕೆಲಸದ ಉಪಕರಣಗಳನ್ನು ಪೂಜಿಸುತ್ತಾರೆ. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಅಲಂಕರಿಸಿದರೆ, ಕಾರ್ಖಾನೆಗಳು ಮತ್ತು ಕೈಗಾರಿಕೆಗಳಲ್ಲಿ ಯಂತ್ರೋಪಕರಣಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಜ್ಞಾನ ಮತ್ತು ಯಶಸ್ಸು ಲಭಿಸಲಿ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳು ಪುಸ್ತಕಗಳು ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ದೇವಿಯ ಮುಂದೆ ಇರಿಸಿ ಪೂಜಿಸುತ್ತಾರೆ. ಸಂಗೀತಗಾರರು ತಮ್ಮ ವಾದ್ಯಗಳನ್ನು ಗೌರವಿಸುತ್ತಾರೆ. ಕಲಾವಿದರು ತಮ್ಮ ಕುಂಚಗಳು ಮತ್ತು ಸೃಜನಶೀಲತೆಗೆ ನೆರವಾಗುವ ಸಾಧನಗಳಿಗೆ ಪೂಜೆ ಸಲ್ಲಿಸುತ್ತಾರೆ. ಕಚೇರಿಗಳಲ್ಲಿ ಕೆಲಸ ಮಾಡುವವರು ಕಂಪ್ಯೂಟರ್, ಲ್ಯಾಪ್‌ಟಾಪ್ ಸೇರಿದಂತೆ ತಮ್ಮ ವೃತ್ತಿಗೆ ಅಗತ್ಯವಾದ ಉಪಕರಣಗಳನ್ನು ಪೂಜಿಸುತ್ತಾರೆ.

ಬೆಂಗಳೂರಿನಂತಹ ನಗರಗಳಲ್ಲಿ ಕಾರು, ಬೈಕ್, ವಾಣಿಜ್ಯ ವಾಹನಗಳಷ್ಟೇ ಅಲ್ಲದೆ, ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಬಳಸುವ ಅತ್ಯಾಧುನಿಕ ಯಂತ್ರಗಳಿಗೂ ಪೂಜೆ ಸಲ್ಲಿಸಲಾಗುತ್ತದೆ.

ಪೂಜಿಸುವ ವಸ್ತುಗಳು ಬೇರೆಬೇರೆಯಾಗಿರಬಹುದು. ಆದರೆ ಅವುಗಳ ಹಿಂದಿರುವ ಭಾವನೆ ಒಂದೇ — ಕಲಿಯಲು, ಸೃಷ್ಟಿಸಲು, ನಿರ್ಮಿಸಲು ಮತ್ತು ಜೀವನೋಪಾಯ ಗಳಿಸಲು ನೆರವಾಗುವ ಸಾಧನಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದು.

ಹೂವು, ಕುಂಕುಮ, ಅಲಂಕೃತ ವಾಹನಗಳು

ಆಯುಧ ಪೂಜೆಯಂದು ಕಾಣಸಿಗುವ ಅತ್ಯಂತ ಪರಿಚಿತ ದೃಶ್ಯವೆಂದರೆ ಹಬ್ಬದ ಸಂಭ್ರಮದಲ್ಲಿ ಕಂಗೊಳಿಸುವ ವಾಹನಗಳು, ಕಾರು, ಬಸ್, ಲಾರಿ, ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ತೊಳೆದು, ಚೆಂಡು ಹೂವಿನ ಹಾರ, ಮಾವಿನ ಎಲೆ, ಗಂಧ ಮತ್ತು ಕುಂಕುಮದಿಂದ ಅಲಂಕರಿಸಲಾಗುತ್ತದೆ. ಅನೇಕ ಮನೆಗಳಲ್ಲಿ ಕುಟುಂಬದ ವಾಹನದ ಮುಂದೆ ವಿಶೇಷ ಪೂಜೆ ಸಲ್ಲಿಸಿ, ಸುರಕ್ಷಿತ ಪ್ರಯಾಣ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.

ವಾಣಿಜ್ಯ ಸಂಸ್ಥೆಗಳು, ಸಾರಿಗೆ ನಿರ್ವಾಹಕರು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲೂ ಈ ಆಚರಣೆ ನಡೆಯುತ್ತದೆ. ಮಾರುಕಟ್ಟೆಗಳಲ್ಲಿ ಮತ್ತು ಬಡಾವಣೆಗಳಲ್ಲಿ ಹೂವಿನ ವ್ಯಾಪಾರ ಚುರುಕುಗೊಳ್ಳುತ್ತದೆ. ಜನರು ಹೂವಿನ ಹಾರ, ತೆಂಗಿನಕಾಯಿ, ಬಾಳೆಹಣ್ಣು ಹಾಗೂ ಪೂಜೆಗೆ ಅಗತ್ಯವಾದ ಇತರ ಸಾಮಗ್ರಿಗಳನ್ನು ಖರೀದಿಸುತ್ತಾರೆ.

ಬೆಂಗಳೂರಿನಲ್ಲಿ ಮನೆಗಳು, ಕಚೇರಿಗಳು ಮತ್ತು ಕಾರ್ಯಾಗಾರಗಳ ಮುಂದೆ ವಾಹನಗಳನ್ನು ಪೂಜೆಗೆ ಸಿದ್ಧಪಡಿಸುವ ದೃಶ್ಯ ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ. ರಾಜ್ಯದ ಪಟ್ಟಣಗಳು ಮತ್ತು ಹಳ್ಳಿಗಳಲ್ಲೂ ಟ್ರ್ಯಾಕ್ಟರ್‌ಗಳು ಹಾಗೂ ಕೃಷಿ ಉಪಕರಣಗಳನ್ನು ಅಲಂಕರಿಸಿ ಪೂಜಿಸಲಾಗುತ್ತದೆ. ಇದು ಹಬ್ಬಕ್ಕೂ ಜನರ ಜೀವನೋಪಾಯಕ್ಕೂ ಇರುವ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ಅನೇಕ ಕುಟುಂಬಗಳಿಗೆ ವಾಹನವನ್ನು ಅಲಂಕರಿಸುವುದು ಕೇವಲ ಆಚರಣೆಯಲ್ಲ. ಪ್ರಯಾಣಿಸಲು, ದುಡಿಯಲು ಮತ್ತು ಕುಟುಂಬವನ್ನು ಪೋಷಿಸಲು ನೆರವಾಗುವ ಆಸ್ತಿಯ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಒಂದು ಮಾರ್ಗವೂ ಹೌದು.

ಉತ್ತಮ ಫಸಲಿಗಾಗಿ ರೈತನ ಪ್ರಾರ್ಥನೆ

ಕೃಷಿ ಅನೇಕ ಸಮುದಾಯಗಳ ಬದುಕಿನ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದಲ್ಲಿ ಆಯುಧ ಪೂಜೆಗೆ ರೈತರ ಪಾಲಿಗೆ ವಿಶೇಷ ಮಹತ್ವವಿದೆ.

ನೇಗಿಲು, ಕುಡುಗೋಲು, ಟ್ರ್ಯಾಕ್ಟರ್ ಮತ್ತು ಇತರ ಕೃಷಿ ಉಪಕರಣಗಳು ಹೊಲಗಳಲ್ಲಿ ರೈತರ ನಿತ್ಯದ ಸಂಗಾತಿಗಳು. ಆಯುಧ ಪೂಜೆಯಂದು ರೈತರು ತಮ್ಮ ಕೃಷಿ ಸಲಕರಣೆಗಳನ್ನು ಸ್ವಚ್ಛಗೊಳಿಸಿ, ಹೂವುಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸುತ್ತಾರೆ.

ತಮ್ಮ ಜೀವನೋಪಾಯಕ್ಕೆ ಆಧಾರವಾಗಿರುವ ಉಪಕರಣಗಳ ಬಗ್ಗೆ ಕೃತಜ್ಞತೆ ಸಲ್ಲಿಸುವುದರ ಜತೆಗೆ, ಉತ್ತಮ ಹವಾಮಾನ, ಆರೋಗ್ಯಕರ ಬೆಳೆ ಹಾಗೂ ಸಮೃದ್ಧ ಫಸಲು ದೊರೆಯಲಿ ಎಂದು ಪ್ರಾರ್ಥಿಸುತ್ತಾರೆ. ಕೃಷಿ ಬದುಕಿನ ಭಾಗವಾಗಿರುವ ಕಠಿಣ ಪರಿಶ್ರಮ, ತಾಳ್ಮೆ ಮತ್ತು ಅನಿಶ್ಚಿತತೆಗಳನ್ನೂ ಈ ಆಚರಣೆ ನೆನಪಿಸುತ್ತದೆ.

ಗ್ರಾಮೀಣ ಕರ್ನಾಟಕದಲ್ಲಿ ಹೂವುಗಳಿಂದ ಅಲಂಕೃತಗೊಂಡ ಟ್ರ್ಯಾಕ್ಟರ್‌ಗಳು ಮತ್ತು ಕೃಷಿ ಉಪಕರಣಗಳನ್ನು ನೋಡುವುದೇ ಒಂದು ಸಂಭ್ರಮ. ಈ ದೃಶ್ಯವು ಹಬ್ಬವು ಮಣ್ಣಿನ ಬದುಕಿನೊಂದಿಗೆ ಎಷ್ಟು ಆಳವಾಗಿ ಬೆಸೆದುಕೊಂಡಿದೆ ಎಂಬುದನ್ನು ಸಾರುತ್ತದೆ. ರೈತರ ಪ್ರಾರ್ಥನೆ ಕೇವಲ ಆರ್ಥಿಕ ಸಮೃದ್ಧಿಗೆ ಸೀಮಿತವಾಗಿರುವುದಿಲ್ಲ; ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳ ನೆಮ್ಮದಿ ಮತ್ತು ಒಳಿತನ್ನೂ ಒಳಗೊಂಡಿರುತ್ತದೆ.

ಜ್ಞಾನ ಮತ್ತು ಸೃಜನಶೀಲತೆಯ ಸಾಧನಗಳಿಗೆ ಗೌರವ

ಆಯುಧ ಪೂಜೆಯು ಕಲಿಕೆ, ಕೌಶಲ ಮತ್ತು ಸೃಜನಶೀಲತೆಯ ಸಂಭ್ರಮವೂ ಹೌದು. ಅನೇಕ ಮನೆಗಳಲ್ಲಿ ಪುಸ್ತಕಗಳು, ಪೆನ್ನುಗಳು, ನೋಟ್‌ಬುಕ್‌ಗಳು ಹಾಗೂ ಇತರ ಶೈಕ್ಷಣಿಕ ಸಾಮಗ್ರಿಗಳನ್ನು ಪೂಜಿಸಲಾಗುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಶೈಕ್ಷಣಿಕ ಯಶಸ್ಸಿಗಾಗಿ ಪ್ರಾರ್ಥಿಸಿದರೆ, ಶಿಕ್ಷಕರು ತಮ್ಮ ವೃತ್ತಿಗೆ ನೆರವಾಗುವ ಸಾಧನಗಳನ್ನು ಗೌರವಿಸುತ್ತಾರೆ.

ಸಂಗೀತಗಾರರಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಪಡಿಸಲು ನೆರವಾಗುವ ವಾದ್ಯಗಳ ಬಗ್ಗೆ ಕೃತಜ್ಞತೆ ಸಲ್ಲಿಸುವ ದಿನವಿದು. ಕಲಾವಿದರು, ಕರಕುಶಲ ಕರ್ಮಿಗಳು, ಛಾಯಾಗ್ರಾಹಕರು ಹಾಗೂ ಇತರ ಸೃಜನಶೀಲ ವೃತ್ತಿಪರರು ತಮ್ಮ ಆಲೋಚನೆಗಳಿಗೆ ರೂಪ ನೀಡುವ ಸಾಧನಗಳನ್ನು ಪೂಜಿಸುತ್ತಾರೆ.

ಆಧುನಿಕ ಕಾಲಕ್ಕೆ ತಕ್ಕಂತೆ ಕೆಲಸದ ಸ್ಥಳಗಳಲ್ಲಿಯೂ ಈ ಸಂಪ್ರದಾಯ ಬೆಳೆದಿದೆ. ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಕ್ಯಾಮೆರಾಗಳು, ಹೊಲಿಗೆ ಯಂತ್ರಗಳು, ಕೈಗಾರಿಕಾ ಉಪಕರಣಗಳು ಮತ್ತು ವೃತ್ತಿಪರ ಸಾಧನಗಳು ಆಯುಧ ಪೂಜೆಯ ಭಾಗವಾಗಿವೆ.

ಆಯುಧ ಪೂಜೆಯ ಈ ವಿಶಾಲ ಸ್ವರೂಪವು ಸರಳವಾದರೂ ಆಳವಾದ ಸಂದೇಶವನ್ನು ಸಾರುತ್ತದೆ: ಜ್ಞಾನ ಮತ್ತು ಕೌಶಲ ಅಮೂಲ್ಯವಾದವು; ಅವುಗಳನ್ನು ಕಾರ್ಯರೂಪಕ್ಕೆ ತರಲು ನೆರವಾಗುವ ಸಾಧನಗಳನ್ನೂ ಕಾಳಜಿ ಮತ್ತು ಗೌರವದಿಂದ ಕಾಣಬೇಕು.

ಮೈಸೂರು ದಸರಾ ಮತ್ತು ಆಯುಧ ಪೂಜೆಯ ರಾಜವೈಭವದ ಪರಂಪರೆ

ಮೈಸೂರಿನ ಪ್ರಸಿದ್ಧ ದಸರಾ ಉತ್ಸವದಲ್ಲಿ ಆಯುಧ ಪೂಜೆಗೆ ಅವಿಭಾಜ್ಯ ಸ್ಥಾನವಿದೆ. ಇಲ್ಲಿನ ರಾಜಪರಂಪರೆಯ ಹಿನ್ನೆಲೆ ಈ ಆಚರಣೆಗೆ ವಿಶಿಷ್ಟ ಮೆರುಗು ನೀಡುತ್ತದೆ.

ಮೈಸೂರು ದಸರಾವನ್ನು ಸಂಪ್ರದಾಯ, ವಿಧಿವಿಧಾನ ಮತ್ತು ಭಕ್ತಿಯ ವೈಭವದ ಹಬ್ಬವಾಗಿ ರೂಪಿಸುವಲ್ಲಿ ಒಡೆಯರ್ ರಾಜವಂಶ ಮಹತ್ವದ ಪಾತ್ರ ವಹಿಸಿದೆ. ಆಯುಧಗಳು ಮತ್ತು ರಾಜಪರಂಪರೆಯ ಸಲಕರಣೆಗಳ ಪೂಜೆಯೂ ಐತಿಹಾಸಿಕವಾಗಿ ಈ ಸಂಪ್ರದಾಯದ ಭಾಗವಾಗಿತ್ತು. ಇದು ಹಬ್ಬ, ರಾಜಾಧಿಕಾರ ಮತ್ತು ರಾಜ್ಯದ ರಕ್ಷಣೆಯ ನಡುವಿನ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಕಂಡುಬರುವ ಸಾಂಪ್ರದಾಯಿಕ ವಾತಾವರಣವು ಆಯುಧ ಪೂಜೆ ಕೇವಲ ಮನೆಮನೆಯ ಆಚರಣೆಯಲ್ಲ ಎಂಬುದನ್ನು ನೆನಪಿಸುತ್ತದೆ. ತಲೆಮಾರುಗಳಿಂದ ಬೆಳೆದು ಬಂದಿರುವ ವಿಶಾಲ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಈ ಆಚರಣೆ, ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಅಳವಡಿಸಿಕೊಂಡರೂ ತನ್ನ ಆಧ್ಯಾತ್ಮಿಕ ಮಹತ್ವವನ್ನು ಉಳಿಸಿಕೊಂಡಿದೆ.

ಇಂದು ಪ್ರಸಿದ್ಧ ದಸರಾ ಉತ್ಸವವನ್ನು ಕಣ್ತುಂಬಿಕೊಳ್ಳಲು ಮೈಸೂರು ನಗರಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಆಯುಧ ಪೂಜೆಯು ನಗರದ ಸಾಂಸ್ಕೃತಿಕ ಅಸ್ಮಿತೆ ಮತ್ತು ಐತಿಹಾಸಿಕ ಪರಂಪರೆಯ ಪ್ರಮುಖ ಅಭಿವ್ಯಕ್ತಿಯಾಗಿ ಮುಂದುವರಿದಿದೆ.

ಬನ್ನಿ ಮತ್ತು ಶಮಿ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ

ಕರ್ನಾಟಕದ ಕೆಲವು ಸಮುದಾಯಗಳಲ್ಲಿ ವಿಜಯದಶಮಿಯಂದು ಬನ್ನಿ ಅಥವಾ ಶಮಿ ಮರದ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವ ಸಂಪ್ರದಾಯವೂ ಇದೆ. ಈ ಎಲೆಗಳನ್ನು ಶುಭ, ಸಮೃದ್ಧಿ ಮತ್ತು ಸೌಹಾರ್ದದ ಸಂಕೇತಗಳೆಂದು ಪರಿಗಣಿಸಲಾಗುತ್ತದೆ.

ಹಿಂದೂ ಪುರಾಣಗಳಲ್ಲಿ ಶಮಿ ವೃಕ್ಷದ ಮಹತ್ವಕ್ಕೆ ಸಂಬಂಧಿಸಿದ ಕಥೆಗಳು ಮತ್ತು ನಂಬಿಕೆಗಳೊಂದಿಗೆ ಈ ಸಂಪ್ರದಾಯ ಬೆಸೆದುಕೊಂಡಿದೆ. ಬಂಧುಗಳು, ಸ್ನೇಹಿತರು ಪರಸ್ಪರ ಎಲೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಮೃದ್ಧಿ, ಯಶಸ್ಸು ಮತ್ತು ಉತ್ತಮ ಸಂಬಂಧಗಳಿಗಾಗಿ ಶುಭ ಹಾರೈಸುತ್ತಾರೆ.

ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ಕುಟುಂಬದಿಂದ ಕುಟುಂಬಕ್ಕೆ ಆಚರಣೆಗಳು ಬದಲಾಗಬಹುದು. ಆದರೂ ಇಂತಹ ಸಂಪ್ರದಾಯಗಳು ಆಯುಧ ಪೂಜೆ ಮತ್ತು ವಿಜಯದಶಮಿಯ ನಡುವಿನ ಸಂಬಂಧವನ್ನು ತೋರಿಸುತ್ತವೆ. ಕೃತಜ್ಞತೆ, ಹೊಸತನ ಮತ್ತು ಭರವಸೆಯಂತಹ ಮೌಲ್ಯಗಳು ಈ ಆಚರಣೆಗಳ ಮೂಲಕ ಅಭಿವ್ಯಕ್ತಗೊಳ್ಳುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾ ವೇಳೆ ಬಲೂನ್ ಮಾರುತ್ತಿದ್ದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ-ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ..!

‘ನ್ಯಾಯಕ್ಕಾಗಿ ಹೋರಾಡುವ ಧೈರ್ಯವಿರಲಿ, ಕೇಳಿಸದ ಧ್ವನಿಗಳಿಗೂ ಕಿವಿಯಾಗಿ’: ಕಾನೂನು ಪದವೀಧರರಿಗೆ CJI ಸೂರ್ಯಕಾಂತ್‌ ಕರೆ

ದೇವರಾಯನದುರ್ಗ ಟ್ರೆಕ್ಕಿಂಗ್‌ ಹೋಗಿ ವಾಪಸ್‌ ಆಗುವಾಗ ದುರಂತ; ನೆಲಮಂಗಲ ಬಳಿ ಲಾರಿ ಡಿಕ್ಕಿಗೆ ಕೇರಳ ಮೂಲದ ಯುವತಿ ಬಲಿ

ರಷ್ಯಾ ವಸ್ತುಗಳ ಸುಂಕಗಳಿಗೆ ಡೊನಾಲ್ಡ್ ಟ್ರಂಪ್ ವಿನಾಯಿತಿ; ತೈಲ ಆಮದಿಗೆ ಭಾರತ ನಿಟ್ಟುಸಿರು

'ಕೊಹ್ಲಿ ಅಹಂಕಾರಿ, ಜಂಬದ ವ್ಯಕ್ತಿ ಎನಿಸಿದ್ದರು': ಬದಲಾವಣೆಯ ಗುಟ್ಟು ಬಿಚ್ಚಿಟ್ಟ AB de Villiers