ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಪವಿತ್ರವಾದ ಸ್ಥಾನವಿದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಹದಿನೈದು ದಿನಗಳನ್ನು ಪಿತೃ ಪಕ್ಷ ಅಥವಾ ಮಹಾಲಯ ಪಕ್ಷ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ನಮ್ಮನ್ನಗಲಿದ ಹಿರಿಯರನ್ನು ಅಥವಾ ಪಿತೃಗಳನ್ನು ಶ್ರದ್ಧಾಭಕ್ತಿಯಿಂದ ಸ್ಮರಿಸಿ, ಅವರಿಗೆ ತರ್ಪಣ ಹಾಗೂ ಪಿಂಡ ಪ್ರದಾನ ಮಾಡುವುದು ಹಿಂದೂ ಸಂಪ್ರದಾಯದ ಪ್ರಮುಖ ಆಚರಣೆಯಾಗಿದೆ.
ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣಪಕ್ಷದ ಪಾಡ್ಯದಿಂದ ಆರಂಭವಾಗಿ ಮಹಾಲಯ ಅಮಾವಾಸ್ಯೆಯಂದು ಮುಕ್ತಾಯಗೊಳ್ಳುತ್ತದೆ. 2026ರಲ್ಲಿ ಇದು ಸೆಪ್ಟೆಂಬರ್ 26ರಿಂದ ಅಕ್ಟೋಬರ್ 10ರವರೆಗೆ ನಡೆಯಲಿದೆ. ಈ ದಿನಗಳಲ್ಲಿ ಮೃತಪಟ್ಟ ಹಿರಿಯರಿಗೆ ತಿಥಿಯ ಪ್ರಕಾರ ಶ್ರಾದ್ಧ ನೀಡುವುದು, ಕಾಗೆಗಳಿಗೆ ಹಾಗೂ ನಿರ್ಗತಿಕರಿಗೆ ಆಹಾರ ನೀಡುವುದು ಮತ್ತು ತಿಲ ತರ್ಪಣ ಬಿಡುವುದು ವಾಡಿಕೆ.
ಪಿತೃಪಕ್ಷದ ಅವಧಿಯಲ್ಲಿ ಹೊಸ ವಸ್ತುಗಳ ಖರೀದಿ, ಮದುವೆ, ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ
ಪಿತೃಪಕ್ಷದ ಪ್ರಾರಂಭದಲ್ಲಿ ಸೂರ್ಯನು ಕನ್ಯಾರಾಶಿ ಪ್ರವೇಶಿಸಿ ನಂತರದ ರಾಶಿಗೆ ಹೋಗುವವರೆಗಿನ ಸಮಯದಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ಸಂಚರಿಸುತ್ತವೆ ಎಂಬ ನಂಬಿಕೆಯಿದೆ.
ಪಿತೃ ಪಕ್ಷದ ಆಚರಣೆಯಲ್ಲಿ ಕಾಗೆಗಳಿಗೆ ಪ್ರಮುಖ ಪಾತ್ರವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಗೆಗಳನ್ನು ಯಮಧರ್ಮನ ದೂತರು ಹಾಗೂ ನಮ್ಮ ಪಿತೃಗಳ ಪ್ರತಿನಿಧಿಗಳು ಎಂದು ಪರಿಗಣಿಸಲಾಗುತ್ತದೆ. ಶ್ರಾದ್ಧದ ದಿನದಂದು ಸಿದ್ಧಪಡಿಸಿದ ನೈವೇದ್ಯವನ್ನು ಮೊದಲು ಕಾಗೆಗಳಿಗೆ ಇಡುವ ಸಂಪ್ರದಾಯವಿದ್ದು, ಇದನ್ನು ಕಾಕಬಲಿ ಎಂದು ಕರೆಯಲಾಗುತ್ತದೆ. ಕಾಗೆಗಳಿಗೆ ಆಹಾರ ನೀಡದೆ ಶ್ರಾದ್ಧ ಕರ್ಮವು ಪೂರ್ಣಗೊಳ್ಳುವುದಿಲ್ಲ.
ಪಿತೃಪಕ್ಷ ಆಚರಣೆ ಏಕೆ?
ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಲ್ಲೊಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು.
ಈ ದಿನಗಳಲ್ಲಿ ಪಿತೃಗಳ ಆಶೀರ್ವಾದ ಪಡೆಯಲು ಶ್ರಾದ್ಧ ಮಾಡುವುದು, ತರ್ಪಣ ಬಿಡುವುದು, ಪಿಂಡ ಪ್ರದಾನ ಮಾಡುವುದು ಇತ್ಯಾದಿ ಕಾರ್ಯಗಳನ್ನು ನಡೆಸುತ್ತಾರೆ. ಇದರಿಂದ ಪಿತೃಗಳು ಸಂತೃಪ್ತಿ ಹೊಂದಿ, ಆಶೀರ್ವಾದ ನೀಡುವುದಲ್ಲದೆ ಮನೆಯಲ್ಲಿ ಸುಖ - ಸಮೃದ್ಧಿ ನೆಲೆಸಿರುತ್ತದೆ. ಪಿತೃಪಕ್ಷವನ್ನು ಮಹಾಭಾರತದ ಕರ್ಣನ ಕಾರಣದಿಂದ ಸಹ ಆಚರಿಸಲಾಗುತ್ತದೆ.
ಕರ್ಣನಿಗೆ ಸ್ವರ್ಗದಲ್ಲಿ ಸಿಕ್ಕಿದ ಶಿಕ್ಷೆ
ದಾನ–ಧರ್ಮದಲ್ಲಿ ಮೊದಲಿಗನಾದ ಕರ್ಣನು ಮಹಾಭಾರತ ಯುದ್ದದಲ್ಲಿ ಪ್ರಾಣ ತ್ಯಾಗ ಮಾಡುತ್ತಾನೆ. ಕರ್ಣನ ಮರಣದ ನಂತರ ಆತನ ಆತ್ಮವು ಸ್ವರ್ಗಕ್ಕೆ ಹೋಯಿತು. ನಮಗೆಲ್ಲರಿಗೂ ತಿಳಿದಿರುವಂತೆ ಕರ್ಣ ಮಹಾದಾನಿ. ಸ್ವರ್ಗದಲ್ಲಿ ಕರ್ಣನಿಗೆ ದೊಡ್ಡ ಮಟ್ಟದಲ್ಲಿ ಗೌರವ ಲಭಿಸುತ್ತದೆ. ಸ್ವರ್ಗದಲ್ಲಿ ಕರ್ಣನಿಗೆ ಹಸಿವು ಆಗುತ್ತದೆ. ಈ ವಿಚಾರ ತಿಳಿದ ಇಂದ್ರನು ಕರ್ಣನಿಗೆ ಆಹಾರವಾಗಿ ಆಭರಣ ನೀಡುತ್ತಾನೆ. ಇದನ್ನು ಕಂಡು ಬೆಚ್ಚಿದ ಕರ್ಣನು ಇಂದ್ರನನ್ನು ನನಗೆ ಹಸಿವಾಗುತ್ತಿದೆ. ನಾನು ತಿನ್ನಲು ಆಹಾರವನ್ನು ಕೇಳಿದರೆ, ನೀನು ಕೇವಲ ಬಂಗಾರವನ್ನು ನೀಡುತ್ತಿರುವೆ ಏಕೆ ಎಂದು ಕೇಳುತ್ತಾನೆ.
ಆಗ ಇಂದ್ರನು ಭೂಲೋಕದಲ್ಲಿ ನೀನು ಎಂದಿಗೂ ಅನ್ನದಾನ ಮಾಡಿಲ್ಲ. ಕಷ್ಟದಲ್ಲಿದ್ದವರು ನಿನ್ನ ಬಳಿ ಬಂದಾಗಲೆಲ್ಲಾ ಕೇವಲ ಬಂಗಾರವನ್ನೇ ದಾನ ನೀಡಿರುವೆ. ನಿನ್ನ ಪಿತೃಗಳಿಗೆ ಶ್ರಾದ್ಧವನ್ನೂ ಮಾಡಿಲ್ಲ. ಆದ್ದರಿಂದ ನಿನಗೆ ಸ್ವರ್ಗದಲ್ಲಿ ತಿನ್ನಲು ಆಹಾರ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ.
ಆಗ ಕರ್ಣನು ಇದಕ್ಕೆ ಪರಿಹಾರವೇನು ಎಂದು ಕೇಳುತ್ತಾನೆ. ಆಗ ಇಂದ್ರ ಹೇಳಿದಂತೆಯೇ ಕರ್ಣನು ಹದಿನೈದು ದಿನಗಳ ಕಾಲ ಭೂಲೋಕಕ್ಕೆ ಮರಳುತ್ತಾನೆ. ವಿಧಿ ಪೂರ್ವಕವಾಗಿ ತನ್ನ ಪಿತೃ ವರ್ಗಕ್ಕೆ ತರ್ಪಣವನ್ನು ನೀಡುತ್ತಾನೆ. ಹದಿನೈದು ದಿನಗಳ ಕಾಲ ಉಪವಾಸ ಇದ್ದು, ಪಿತೃಗಳ ಶ್ರಾದ್ಧವನ್ನು ಮಾಡಿ ಅನ್ನದಾನ ಮಾಡುತ್ತಾನೆ. ಆ ನಂತರ ಸ್ವರ್ಗಕ್ಕೆ ಮರಳುತ್ತಾನೆ. ಈ ಅವಧಿಯೇ ಆಚರಣೆಯಲ್ಲಿ ಪಿತೃ ಪಕ್ಷ ಅಥವಾ ಮಹಾಲಯ ಪಕ್ಷ ಎಂದು ಕರೆಯಲ್ಪಟ್ಟಿತು.
ಆದ್ದರಿಂದ, ಈ ಸಮಯದಲ್ಲಿ ಪಿತೃ ಕಾರ್ಯವನ್ನು ಮಾಡಿ ಅನ್ನದಾನ ಮಾಡಿದ್ದಲ್ಲಿ ಪುಣ್ಯ ಲಭಿಸುವುದಲ್ಲದೆ, ಪಿತೃವರ್ಗದ ಆಶೀರ್ವಾದವೂ ದೊರೆಯುತ್ತದೆ. ಪಿತೃಪಕ್ಷದಲ್ಲಿ ವಿಶೇಷವಾಗಿ ಆಹಾರ ಅರ್ಪಿಸುವ ಮೂಲಕ ತಮ್ಮ ಪೂರ್ವಜರಿಗೆ ಗೌರವ ನೀಡುವುದು ಪದ್ಧತಿಯಾಗಿದೆ. ಆದರೆ ಆಚರಣೆಯ ವಿಧಗಳು ಬೇರೆ ಬೇರೆ. ಈ ಅವಧಿಯನ್ನು ಪಿತೃಪಕ್ಷ, ಸೋಲಾ ಶ್ರದ್ಧಾ, ಮಹಾಲಯ ಪಕ್ಷ ಹಾಗೂ ಅಪರ ಪಕ್ಷ ಎಂದೂ ಕರೆಯುತ್ತೇವೆ.
ನೀವು ನಿಮ್ಮ ಜೀವನದಲ್ಲಿ ಪದೇ ಪದೇ ನಷ್ಟವನ್ನು, ಹಣಕಾಸಿನ ಅಸ್ಥಿರತೆಯನ್ನು ಎದುರಿಸಿದರೆ ಮತ್ತು ವೃತ್ತಿಜೀವನದಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದರೆ ಅದು ನೀವು ಪಿತೃ ದೋಷಕ್ಕೆ ಗುರಿಯಾಗಿದ್ದೀರಿ ಎಂಬುದರ ಲಕ್ಷಣವಾಗಿದೆ.