ವಾಹನ

ಬಿರುಗಾಳಿ ಬಂತು!

ಇದು ನಿಜಕ್ಕೂ ಬಿರುಗಾಳಿ.
ಅತ್ಯುತ್ತಮ ಎಂಜಿನ್. ಅತ್ಯಂತ ಆರಾಮ. ಬಿರುಗಾಳಿ ಎಬ್ಬಿಸುವ ವೇಗ. ವೇಗಕ್ಕೆ ತಕ್ಕ ನಿಯಂತ್ರಣ. ಎಬಿಎಸ್ ಮತ್ತು ಏರ್‌ಬ್ಯಾಗ್‌ನಂತಹ ಸುರಕ್ಷಾ ವ್ಯವಸ್ಥೆಗಳು.
ಇದು ಟಾಟಾ ಸಫಾರಿ ಸ್ಟಾರ್ಮ್‌ನ ಪ್ರಮುಖ ಆಕರ್ಷಣೆಗಳು. ಇನ್ನು ಟಾಟಾ ಕಂಪನಿ ಕಾರು ಅಂದ ಮೇಲೆ ಗಟ್ಟಿಮುಟ್ಟಾಗಿರುತ್ತದೆ ಎಂಬುದು ಜನರಿಗೆ ಗೊತ್ತು. ಕೊಟ್ಟ ದುಡ್ಡಿಗೆ ಯಾವುದೇ ಮೋಸವಿಲ್ಲ ಎಂಬುದು ಗ್ರಾಹಕರು ಬಲ್ಲ ಸಂಗತಿ.
ಟಾಟಾ ಸಫಾರಿ ಎಂಬುದು ಮೊದಲ ಭಾರತೀಯ ಎಸ್‌ಯುವಿ ಅಂದರೆ ತಪ್ಪಾಗಲಿಕ್ಕಿಲ್ಲ. ಆರಂಭದಿಂದ ಈವರೆಗೆ ಸಫಾರಿ ಹಲವು ಬದಲಾವಣೆಗಳನ್ನು ಕಂಡಿದೆ. ಈಗಷ್ಟೇ ಬಿಡುಗಡೆಯಾಗಿರುವ ಟಾಟಾ ಸಫಾರಿ ಸ್ಟಾರ್ಮ್ ಅತ್ಯುತ್ಕೃಷ್ಟವಾದ ಮಾದರಿ ಎಂದರೆ ತಪ್ಪಿಲ್ಲ. ಈ ಸಫಾರಿ ಸ್ಟಾರ್ಮ್ ವಾಹನವನ್ನು 1,300 ಕಿ.ಮೀ. ಚಲಾಯಿಸಿ ಪರೀಕ್ಷಿಸುವ ಅವಕಾಶ 'ಕನಡಪ್ರಭ'ಕ್ಕೆ ಲಭ್ಯವಾಗಿತ್ತು.
ಹಳೆಯ ಸಫಾರಿಯಲ್ಲಿದ್ದ ಕೆಲವು ನ್ಯೂನತೆಗಳನ್ನು ಸ್ಟಾರ್ಮ್‌ನಲ್ಲಿ ನಿವಾರಿಸಲಾಗಿದೆ. ಆರಾಮದಾಯಕ ಪ್ರಯಾಣಕ್ಕೆ ಉತ್ತಮ ಸಸ್ಪೆನ್ಷನ್ ಅಳವಡಿಸಲಾಗಿದೆ. ವಿಶೇಷವಾಗಿ ತಿರುವುಗಳಲ್ಲಿ ಸಫಾರಿ ಚಾಲಕನ ನಿಯಂತ್ರಣ ತಪ್ಪಿದಂತೆ ವರ್ತಿಸುತ್ತಿತ್ತು. ಸ್ಟಾರ್ಮ್‌ನಲ್ಲಿ ಇದನ್ನು ಸರಿಪಡಿಸಲಾಗಿದೆ. ಪರಿಣಾಮವಾಗಿ ಸಾಕಷ್ಟು ವೇಗವಾಗಿಯೇ ತಿರುವುಗಳಲ್ಲಿ ಚಲಿಸಿದರೂ ಚಾಲಕ ಅಥವಾ ಪ್ರಯಾಣಿಕರು ಭಯಬೀಳುವ ಪ್ರಮೇಯವಿಲ್ಲ.
ಇದರ ಜತೆಗೆ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಸೇರಿದಂತೆ ಸಫಾರಿ ಸ್ಟಾರ್ಮ್ ಸಾಕಷ್ಟು ರೂಪಾಂತರಗೊಂಡಿದೆ. ಮೊದಲ ಸಫಾರಿಗೆ ರಫ್ ಆ್ಯಂಡ್ ಟಫ್ ಲುಕ್ ಇದ್ದರೆ, ಸ್ಟಾರ್ಮ್‌ಗೆ ಕೊಂಚ ಮೃದುವಾದ ಮತ್ತು ಗೌರವಯುತ ಎನಿಸುವಂತಹ ರೂಪ ನೀಡಲಾಗಿದೆ. ಹಿಂದಿನ ಬಾಗಿಲಿಗಿದ್ದ ಟಯರನ್ನು ತೆಗೆದು, ವಾಹನದ ಕೆಳಭಾಗದಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಡೀಸೆಲ್ ಟ್ಯಾಂಕ್ ಕೊಂಚ ಚಿಕ್ಕದಾಗಿದೆ. ಆದರೆ ಹಿಂದಿನ ಬಾಗಿಲಿಗಿದ್ದ ಭಾರ ಕಡಿಮೆಯಾಗಿದೆ. ಇದು ಒಂದು ರೀತಿಯಲ್ಲಿ ಸ್ಟಾರ್ಮ್‌ಗೆ ಹೊಸ ರೂಪವನ್ನೇ ನೀಡಿದೆ. ಹಿಂದೆ ಟಯರ್ ಇದ್ದರೆ ಮಾತ್ರ ಎಸ್‌ಯುವಿ ಎಂದು ಭಾವಿಸುವವರನ್ನು ಹೊರತುಪಡಿಸಿ ಉಳಿದವರಿಗೆ ಇದು ಇಷ್ಟವಾಗಬಹುದು. ಟಾಟಾ ಕಂಪನಿ ಕಾರುಗಳ ಆಂತರಿಕ ಸೌಂದರ್ಯಕ್ಕೆ ಅಷ್ಟು ಮಹತ್ವ ನೀಡುತ್ತಿರಲಿಲ್ಲ. ಆದರೆ ಇಂಡಿಕಾ ವಿಸ್ಟಾದಲ್ಲಿ ಆಂತರಿಕ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಯಶಸ್ವಿಯಾದ ಟಾಟಾ ಕಂಪನಿ, ಈಗ ಸಫಾರಿ ಸ್ಟಾರ್ಮ್‌ನಲ್ಲೂ ಆಂತರಿಕ ಸೌಂದರ್ಯ ಮತ್ತು ಶೈಲಿಗೆ ಹೆಚ್ಚಿನ ಒತ್ತು ನೀಡಿದೆ. ಬಿಜ್ ಇಂಟೀರಿಯರ್ ಜತೆಗೆ ಅಲ್ಲಲ್ಲಿ ವುಡ್ ಫಿನಿಶಿಂಗ್ ಪ್ಲಾಸ್ಟಿಕ್ ಹೊಂದಿದೆ. ಅಲ್ಪೈನ್ ಮ್ಯೂಸಿಕ್ ಸಿಸ್ಟಂ ಇದೆ. 10 ಎಸಿವೆಂಟ್‌ಗಳನ್ನು ಇರಿಸಲಾಗಿದ್ದು, ಹಿಂದಿನ ಪ್ರಯಾಣಿಕರು ಕೂಡ ತಂಪಾಗಿ ಪ್ರಯಾಣಮಾಡಬಹುದು.

ವರಿಕೋ ಎಂಜಿನ್
ಸಫಾರಿ ಸ್ಟಾರ್ಮ್ ಸ್ಟಾರ್ಟ್ ಮಾಡಿದ ತಕ್ಷಣ ನೀವು ಗುರುತಿಸುವ ಮೊದಲ ಅಂಶವೆಂದರೆ ಶಬ್ದ. ಸ್ಟಾರ್ಮ್‌ನಲ್ಲಿರುವ ಹೊಸ ಎಂಜಿನ್ ಹೆಚ್ಚು ಸದ್ದು ಮಾಡದೇ ಸಮರ್ಥವಾಗಿ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಭಾರತೀಯ ಕಂಪನಿಗಳ ಎಸ್‌ಯುವಿಗಳು ಹೆಚ್ಚು ಶಬ್ದ ಮಾಡುತ್ತವೆ ಎಂಬ ಆರೋಪಕ್ಕೆ ಸ್ಟಾರ್ಮ್ ಉತ್ತರ ನೀಡಿದೆ. ಬಿರುಗಾಳಿಯಂತೆ ಚಲಿಸಬಲ್ಲುದಾದರೂ ಅಷ್ಟೇ ನಿಶ್ಶಬ್ದವಾಗಿ ಕೆಲಸ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.
ಸಫಾರಿಯಲ್ಲಿ ಮೊದಲು 3 ಲೀಟರ್ ಎಂಜಿನ್ ಇತ್ತು. ಅದು ಹೋಗಿ ಡಿಕೋರ್ ಎಂಜಿನ್ ಬಂತು. ಈಗ ಸ್ಟಾರ್ಮ್‌ಗೆ ವರಿಕೋ (ವೇರಿಯೆಬಲ್ ಟರ್ಬೈನ್ ಟೆಕಾಲಜಿ) ತಂತ್ರಜ್ಞಾನ ಹೊಂದಿರುವ 2.2 ಲೀಟರ್ ಎಂಜಿನ್ ಅಳವಡಿಸಲಾಗಿದೆ. ಸಂಪೂರ್ಣ ಎಲೆಕ್ಟ್ರಾನಿಕಲ್ ನಿಯಂತ್ರಣ ಹೊಂದಿರುವ ಫ್ಯೂಯೆಲ್ ಇಂಜೆಕ್ಷನ್ ವ್ಯವಸ್ಥೆ ಇದೆ.
ಇವಿಷ್ಟು ಹೆದ್ದಾರಿ ಅಥವಾ ಉತ್ತಮ ರಸ್ತೆಗಳಲ್ಲಿ ಚಲಾಯಿಸುವವರಿಗೆ. ಇನು ಕೆಟ್ಟ ರಸ್ತೆಗಳಲ್ಲಿ ಅಥವಾ ಆಫ್ ರೋಡಿಂಗ್ ಚಾಲನೆ ಇಷ್ಟಪಡುವವರಿಗೆ ಸಫಾರಿ ಸ್ಟಾರ್ಮ್ ಹೇಳಿಮಾಡಿಸಿದಂತಿದೆ. ನೆಲದಿಂದ 200 ಮಿ.ಮೀ. ಎತ್ತರಕ್ಕೆ ವಾಹನದ ಚಾಸಿ ಇರುವುದರಿಂದ ಎಂತಹುದೇ ಹೊಂಡ, ಅಡೆ-ತಡೆ, ಕಲ್ಲು ಕಾರಿಗೆ ತಾಗುವ ಸಂಭವಗಳೇ ಇಲ್ಲ. ಸಸ್ಪೆನ್ಷನ್ ಅತ್ಯುತ್ತಮವಾಗಿರುವುದರಿಂದ ಚಾಲನೆಯೂ ಸುಲಭ. ಎಂತಹ ಕೆಟ್ಟ ರಸ್ತೆಯಲ್ಲೂ ಆರಾಮದಾಯಕ ಮತ್ತು ನಿಶ್ಚಿಂತ ಪ್ರಯಾಣ ನಿಮ್ಮದಾಗುವುದರಲ್ಲಿ ಅನುಮಾನವೇ ಇಲ್ಲ.
ಫೋರ್‌ವ್ಹೀಲ್ ಡ್ರೈವ್ ಅನುಕೂಲ ಇರುವ ವಾಹನದಲ್ಲಿ ನೀವು ಚಲಿಸುತ್ತಿರುವಾಗಲೇ ವಾಹನವನ್ನು ಫೋರ್‌ವ್ಹೀಲ್ ಡ್ರೈವ್‌ಗೆ ವರ್ಗಾಯಿಸುವ ಅವಕಾಶವನ ಸ್ಟಾರ್ಮ್‌ನಲ್ಲಿ ಕಲ್ಪಿಸಲಾಗಿದೆ. ಇದಕ್ಕೆ ಶಿಫ್ಟ್ ಆನ್ ಫ್ಲೈ ತಂತ್ರಜ್ಞಾನ ಎಂದು ಹೆಸರಿಡಲಾಗಿದೆ.
ಇದೇ ಮೊದಲ ಬಾರಿಗೆ ಕೈಗೆಟಕುವ ದರದಲ್ಲಿ ವಿದೇಶಿ ಕಂಪನಿಯ ಎಸ್‌ಯುವಿಗಳಿಗೆ ಪೈಪೋಟಿ ನೀಡುವ ಗುಣಮಟ್ಟದಲ್ಲಿ ಸಫಾರಿ ಸ್ಟಾರ್ಮ್ ಬಿಡುಗಡೆ ಮಾಡಿದ್ದು, ಟಾಟಾ ಕಂಪನಿ ಈ ವಾಹನದ ಮೇಲೆ ಬಹಳ ನಿರೀಕ್ಷೆಗಳನ್ನು ಹೊಂದಿದೆ.

ಬಣ್ಣ ಬಣ್ಣದ ಆಯ್ಕೆ
ಸಫಾರಿ ಸ್ಟಾರ್ಮ್ ನಿಮಗಿಷ್ಟವಾಗಬಹುದಾದ 7 ಬಣ್ಣಗಳಲ್ಲಿ ಲಭ್ಯವಿದೆ. ಆರ್ಕ್‌ಟಿಕ್ ಸಿಲ್ವರ್, ಆಸ್ಟರ್ನ್‌ಬ್ಲ್ಯಾಕ್, ಪರ್ಲ್ ಶಾಂಪೇನ್, ಪರ್ಲ್ ವೈಟ್, ಸರ್ಡಿನಿಯಾ ರೆಡ್, ಅರ್ಬನ್ ಬ್ರಾಂಝ್ ಬಣ್ಣಗಳಲ್ಲಿ ಲಭ್ಯವಿದೆ. ಪರ್ಲ್ ವೈಟ್ ವಾಹನಕ್ಕೆ ಮಾತ್ರ ನೀವು 5000 ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!