ವಾಹನ

ನೀರಿಗೂ ಕನ್ನ!

ಜಲಾಶಯ ತುಂಬಿ ತುಳುಕುತ್ತಿದೆ. ಅಚ್ಚುಕಟ್ಟು ಪ್ರದೇಶದ ಮೇಲ್ಭಾಗ ಉಕ್ಕುತ್ತಿದೆ. ಕೆಳ ಭಾಗ...

ಜಲಾಶಯ ತುಂಬಿ ತುಳುಕುತ್ತಿದೆ. ಅಚ್ಚುಕಟ್ಟು ಪ್ರದೇಶದ ಮೇಲ್ಭಾಗ ಉಕ್ಕುತ್ತಿದೆ. ಕೆಳ ಭಾಗ ಬಿಕ್ಕುತ್ತಿದೆ.
ಕೇಳೋರ್ಯಾರು...?
ಹೊಸಪೇಟೆ ಬಳಿ ನಿರ್ಮಾಣವಾಗಿರುವ ತುಂಗಭದ್ರಾ ಅಣೆಕಟ್ಟೆ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ನೀರಾವರಿ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಈ ಅಣೆಕಟ್ಟೆಯ ಎಡದಂಡೆ ನಾಲೆಗೆ  ರಾಜ್ಯದ ಅತ್ಯಂತ ಉದ್ದನೆ ಕಾಲುವೆ ಎಂಬ ಹೆಗ್ಗಳಿಕೆ. ಎಡದಂಡೆ ಮುಖ್ಯನಾಲೆ ಉದ್ದ 141 (228 ಕಿ.ಮೀ) ಮೈಲು. ನಿತ್ಯ ಕಾಲುವೆಯಲ್ಲಿ 3500 ಕ್ಯುಸೆಕ್ಸ್ ಪೂರೈಕೆ ಸಾಮರ್ಥ್ಯ. ಕೊಪ್ಪಳ-ರಾಯಚೂರು ಜಿಲ್ಲೆಯಲ್ಲಿ 6 ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು. ಆರು ಪಟ್ಟಣ ಮತ್ತು 600ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯಲೂ ಇದೇ ನೀರು.
ಈ ವರ್ಷ ಜುಲೈ 10ರಿಂದಲೇ ಎಡದಂಡೆ ನಾಲೆಗೆ ನೀರು ಹರಿಸಲಾಗುತ್ತಿದೆ. ಸಾಮಾನ್ಯವಾಗಿ ಹತ್ತು ದಿನಗಳಲ್ಲಿ ಕೊನೆಭಾಗಕ್ಕೆ ನೀರು ತಲುಪಬೇಕು. ಒಂದೂವರೆ ತಿಂಗಳು ಸಮೀಪಿಸುತ್ತಿದ್ದರೂ ಇನ್ನೂ ಅಲ್ಲಿ ತಲುಪಿಲ್ಲ! ಆ ಭಾಗದ ರೈತರಿಗೆ ನೀರಿಗಾಗಿ ಹೊಡೆದಾಡುವುದೂ ನಿತ್ಯದ 'ಕೃಷಿ ಕಾಯಕ'. ಕಾರಣ ಏನು ಗೊತ್ತಾ? ನೀರಿನ ಕಳ್ಳತನ!! ಎಡದಂಡೆ ನಾಲೆಯ ಮೇಲ್ಭಾಗದಲ್ಲಿ ನಿರಂತರವಾಗಿ ನಡೆಯುವ ನೀರ್ಗಳವು!!
ಇದು ಅಚ್ಚರಿಯ ವಿಷಯ ಅಲ್ಲವೇ ಅಲ್ಲ. ಮೇಲ್ಭಾಗದ ರೈತರಿಗೆ ನೀರಾವರಿ ನಿಯಮಗಳನ್ನು ಉಲ್ಲಂಘಿಸುವುದು ಹವ್ಯಾಸವಾಗಿ ಬಿಟ್ಟಿದೆ. ಹಾಡು ಹಗಲೇ ಮುಖ್ಯ ಕಾಲುವೆ, ವಿತರಣಾ ಕಾಲುವೆಗಳಿಗೆ ದೊಡ್ಡದೊಡ್ಡ ಪೈಪ್, ಪಂಪ್‌ಸೆಟ್ ಹಾಕಿಕೊಂಡು ಹಾಕಿ ನಿರಂತರವಾಗಿ ಮತ್ತು ನಿರಾತಂಕವಾಗಿ ನೀರು ಕದಿಯುವುದು ಇಲ್ಲಿ ಸಾಮಾನ್ಯ. ಕಾಲುವೆ ನೆಲಮಟ್ಟಕ್ಕೆ ಕೊಳವೆ ಅಳವಡಿಸಿ ಕದ್ದು ನೀರೆತ್ತಿಕೊಳ್ಳುವುದು, ಅಕ್ರಮವಾಗಿ ಹೊಲದಲ್ಲಿ ದೊಡ್ಡದೊಡ್ಡ ಕೆರೆ, ಹೊಂಡಗಳನ್ನು ನಿರ್ಮಿಸಿಕೊಂಡು ನೀರು ತುಂಬಿಸಿಕೊಳ್ಳುವುದು ಎಲ್ಲವೂ ಸಹಜಾತಿಸಹಜ. ಕೊನೆ ಭಾಗಕ್ಕೆ ಹರಿಯಬೇಕಾದ ನೀರು ಸೇರುವುದು ಎಲ್ಲಿಗೆ ತಿಳಿಯಿತಲ್ಲ!
ನೀರು ಬಂದ ತಕ್ಷಣವೇ ನೀರು ಕದಿಯುವ ಕಾಯಕ ಪ್ರಾರಂಭ. ಇದರಿಂದಾಗಿ ವಿತರಣಾ ನಾಲೆಯಿಂದ ಕೊನೆ ಭಾಗಕ್ಕೆ ನೀರು ತಲುಪುವುದು ಅಸಾಧ್ಯ. ಹೀಗಾಗಿ ಮೇಲ್ಭಾಗದ ಬೆಳೆಗಳು ಕೊಯ್ಲಿಗೆ ಬಂದಿದ್ದರೆ, ಕೊನೆ ಭಾಗದಲ್ಲಿ ನಾಟಿ, ಬಿತ್ತನೆಯೂ ಮುಗಿದಿರುವುದಿಲ್ಲ. ಅಲ್ಲಿನವರ ಅಗತ್ಯ ತೀರಿದ ಬಳಿಕ ಇಲ್ಲಿನವರಿಗೆ ನೀರು ಬರಬೇಕಲ್ಲ. ಈ ವ್ಯತ್ಯಾಸ, ಏರುಪೇರು ಪ್ರತಿವರ್ಷ ಇದ್ದದ್ದೇ.
ಹೀಗಾಗಿ ತುಂಗಭದ್ರಾ ಎಡದಂಡೆ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಪರಿಕಲ್ಪನೆ ಹತೋಟಿ ತಪ್ಪಿದೆ. ನಾಲೆಗೆ ನೀರು ಬಿಟ್ಟಾಗಲೆಲ್ಲ ನೀರಿನ ತಂಟೆ ಮಾಮೂಲು ಎಂಬಂತಾಗಿದೆ. ರೈತರು ಮತ್ತು ನೀರಾವರಿ ಅಧಿಕಾರಿಗಳ ಪರಸ್ಪರ ಆರೋಪ ಮತ್ತು ಮಾತಿನ ಚಕಮಕಿ, ಘೇರಾವ್, ಮುತ್ತಿಗೆ, ಹಲ್ಲೆ, ಹಗಲು-ರಾತ್ರಿ ನೀರು ಬಳಕೆಗಾಗಿ ಕಾದಾಟ, ಜಟಾಪಟಿ- ಹೀಗೆ ಏನೆಲ್ಲ ನಡೆಯುತ್ತವೆ ನೀರು ಬಂದಾಗ.ಎಡದಂಡೆ ನಾಲೆಯ ಮೇಲ್ಭಾಗ ಮತ್ತು ಕೆಳ ಭಾಗದ ನಡುವೆ ಕಾಲುವೆ ತೂಬಿನ ಸ್ಥಳ ನಿತ್ಯ ಸಂಘರ್ಷದ ತಾಣ. ಇದರಲ್ಲಿ ನೀರಾವರಿ-ಕಂದಾಯ ಅಧಿಕಾರಿಗಳ ವೈಫಲ್ಯ ಮತ್ತು ಸಮರ್ಪಕ ನೀರು ನಿರ್ವಹಣೆ ಸಾಧ್ಯವಾಗದಿರುವುದಕ್ಕೆ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿವೆ. ಆ ಪೈಕಿ ನೀರುಗಳ್ಳತನ, ದೊಡ್ಡ ರೈತರೊಂದಿಗಿನ ಅಪವಿತ್ರ ಮೈತ್ರಿಯ ಪಾಲೂ ದೊಡ್ಡದು.
ಇನ್ನೊಂದು ಆತಂಕಕಾರಿ ಸಂಗತಿ ಪ್ರಭಾವಿ ರಾಜಕಾರಣಿಗಳು ಹಾಗೂ ಆಂಧ್ರಪ್ರದೇಶದಿಂದ ಬಂದಿರುವ ವಲಸೆಗಾರರು ನಿಯಮಿತ ಅಚ್ಚುಕಟ್ಟು ಪ್ರದೇಶ ಬಿಟ್ಟು, ವ್ಯಾಪ್ತಿಗೆ ಒಳಪಡದ ಜಮೀನು ಅಭಿವೃದ್ಧಿಪಡಿಸಿರುವುದು! ಕೆಲ ಹಳ್ಳಿ-ಕ್ಯಾಂಪ್‌ಗಳಲ್ಲಿ ನೀರು ಉಳ್ಳವರ ಪಾಲಾಗಿದ್ದು, ಬಡರೈತರು ಬಾಯಿ ಮುಚ್ಚಿಕೊಂಡು ಒಕ್ಕಲುತನ ಮಾಡಬೇಕಾದಂಥ ದಯನೀಯ ಸ್ಥಿತಿ.
ಸಮರ್ಪಕ ನೀರು ನಿರ್ವಹಣೆಗೆಂದು ಪ್ರತಿ ಮೈಲ್ ನೀರು ಹರಿಯುವಿಕೆ ಪ್ರಮಾಣ, ಮುಖ್ಯ ಹಾಗೂ ವಿತರಣಾ ಕಾಲುವೆಗಳಿಗೆ ವಾರಾಬಂದಿ ವಿಧಿಸಿದರೂ ಪ್ರಯೋಜವಾಗಿಲ್ಲ. ನೀರು ಪೂರೈಕೆ ಆರಂಭಿಸಿ ತಿಂಗಳುಗಳೇ ಉರುಳಿದರೂ ಗಂಗಾವತಿ, ಸಿಂಧನೂರು ಮಾನ್ವಿ ಮತ್ತು ರಾಯಚೂರು ತಾಲ್ಲೂಕುಗಳ ಕೊನೆ ಭಾಗದ ರೈತರು ಗುಂಪು ಗುಂಪಾಗಿ ಮುಖ್ಯ ಕಾಲುವೆ ತೂಬಿಗೆ ಮುತ್ತಿಗೆ ಹಾಕುವುದೂ ಮಾಮೂಲಾಗಿದೆ.
ಈ ಬಾರಿ ಉತ್ತಮ ಮಳೆ ಬಂದು ಭರ್ತಿ ನೀರಿದೆ. ಆದರೂ ನೀರಿನ ತಂಟೆ ನಿಂತಿಲ್ಲ. ಇದು ಸೋನಾಮಸೂರಿ ಬೆಳೆಯುವ ಪ್ರದೇಶದ ರೈತರ ಮಳೆಗಾಲದ ಪರಿಸ್ಥಿತಿ. ಬೇಸಿಗೆಯದು ಮತ್ತೊಂದು ಕರಾಳ ಅಧ್ಯಾಯ.

- ವೀರೇಂದ್ರ ಪಾಟೀಲ್ ಕಾರಟಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!