ವಾಹನ

ವಿಭೂತಿ ಧಾರೆ

ಮಳೆಗಾಲದಲ್ಲಿ ಹಸಿರುಡುಗೆಯುಟ್ಟ ಪರ್ವತದ ಸಾಲುಗಳು, ಪರ್ವತಗಳಿಗೆ ಮುತ್ತಿಡಲೆಂದೇ...

ಮಳೆಗಾಲದಲ್ಲಿ ಹಸಿರುಡುಗೆಯುಟ್ಟ ಪರ್ವತದ ಸಾಲುಗಳು, ಪರ್ವತಗಳಿಗೆ ಮುತ್ತಿಡಲೆಂದೇ ಬಂದವೇನೋ ಎನಿಸುವ ಸುಂದರ ಮೋಡಗಳು. ಮನಸ್ಸಿಲ್ಲದ ಉಲ್ಲಾಸವನ್ನು ಇಮ್ಮಡಿಗೊಳಿಸಲು ಎತ್ತರದ ಗಿರಿಯಿಂದ ಧುಮ್ಮಿಕ್ಕುವ ಮನೋಹರ ಜಲಪಾತಗಳು... ಇಂಥ ಅಪರೂಪದ ಸುಂದರ ತಾಣವನ್ನು ನೋಡಬೇಕೆಂದರೆ ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕಿನ ಅಚವೆ ಗ್ರಾಮಕ್ಕೆ ಬರಬೇಕು. ಅಲ್ಲಿ 'ವಿಭೂತಿ'ಯೂ ಫಾಲ್ಸ್ ಆಗಿದೆ!

ಹೋಗುವುದು ಹೇಗೆ?
ಅಚವೆ ಬಳಿಯ ದಟ್ಟವಾದ, ನಿತ್ಯಹರಿದ್ವರ್ಣದ ಕಾಡಿನ ಮಧ್ಯ 130 ಅಡಿ ಎತ್ತರಿಂದ ಮೂರು ಹಂತಗಳಲ್ಲಿ ಧುಮ್ಮಿಕ್ಕುವ ವಿಭೂತಿ ಜಲಪಾತ ಮನಮೋಹಕವಾಗಿದೆ. ಮೂಲ ಸೌಕರ್ಯದ ಕೊರತೆ ಈ ಜಲಪಾತಕ್ಕಿದೆ. ಪರಿಣಾಮ ಸ್ಥಳೀಯರಿಗಷ್ಟೇ ಪರಿಚಿತವಾಗಿರುವುದರಿಂದ ಹೆಚ್ಚಿನವರಿಗೆ ಈ ಫಾಲ್ಸ್‌ನ ಸೊಬಗು ಕಣ್ಮನ ತುಂಬಿಲ್ಲವೆಂದರೆ ಅತಿಶಯೋಕ್ತಿಯಲ್ಲ.
ಅಂಕೋಲಾದ ಬಾಳೆಗುಳಿ ಕ್ರಾಸ್‌ನಿಂದ ಹುಬ್ಬಳ್ಳಿ ಮಾರ್ಗವಾಗಿ 20 ಕಿ.ಮೀ. ಚಲಿಸಿದರೆ ಮಾಸ್ತಿಕಟ್ಟೆ ಎಂಬ ಪುಟ್ಟ ಊರು ತಲುಪಬಹುದು. ಇಲ್ಲಿಂದ ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲೇ 3 ಕಿ.ಮೀ. ಚಲಿಸಿದರೆ ರಸ್ತೆಯ ಬಲಭಾಗದಲ್ಲಿ 'ಗೋಕರ್ಣ, ಕುಮಟಾಕ್ಕೆ ಹೋಗುವ ದಾರಿ' ಎಂಬ ನಾಮಫಲಕವಿದೆ. ಅಲ್ಲಿಂದ ಕಿರಿದಾದ ರಸ್ತೆಯಲ್ಲಿ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ದಾಟಿ 3 ಕಿ.ಮೀ. ಮುನ್ನಡೆದರೆ ಹೊಸಕಂಬಿ ಊರು. ಈ ಊರಿನ ಚೆಕ್‌ಪೋಸ್ಟ್‌ನಿಂದ ನೇರವಾಗಿ ಶಿರಸಿ ಕಡೆ ಪ್ರಯಾಣಿಸಿದರೆ 12 ಕಿ.ಮೀ. ದೂರದಲ್ಲಿ ಅಚವೆ. ಊರಿನ ಕನ್ನಡ ಶಾಲೆಯ ಪಕ್ಕದ ಮಣ್ಣಿನ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದ ತನಕ ಬೈಕ್ ಅಥವಾ ಕಾರು ಚಾಲನೆ ಮಾಡಿಕೊಂಡ ಹೋಗಬಹುದು. ಅಲ್ಲಿಂದ ದಟ್ಟ ಕಾನನದಲ್ಲಿ ಎತ್ತರದ ಪ್ರದೇಶವನ್ನು ಕಾಲ್ನಡಿಗೆಯಲ್ಲಿ ಹೆಚ್ಚು ಕಡಿಮೆ 1 ಕಿ.ಮೀ. ಚಲಿಸಿದರೆ ವಿಭೂತಿ ಜಲಪಾತದ ರಮ್ಯತೆಯನ್ನು ಆಸ್ವಾದಿಸಬಹುದು.

ಇಲ್ಲಿನ ವಿಶೇಷವೇನು?
ನಾಡಿನ ಸರ್ವಋತು ಜಲಪಾತಗಳಲ್ಲಿ ಇದೂ ಒಂದು. ಅಪರೂಪದ ಸಸ್ಯಗಳು ಈ ಪ್ರದೇಶವನ್ನು ವಿಶೇಷ ಜೀವವೈವಿಧ್ಯತೆಯ ತಾಣವನ್ನಾಗಿಸಿವೆ. ಈ ಕಾಡಿನ ಒಂದಂಚಿನಲ್ಲಿ ಕೇವಲ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ, ವಿನಾಶದ ಅಂಚಿನಲ್ಲಿರುವ ಅಶೋಕ ಮರಗಳಿವೆ. ಕಾಡಿನ ಒಡಲು ಹಲವು ಬಗೆಯ ಅಪರೂಪದ ಆರ್ಕಿಡ್ ಸಸ್ಯಗಳ, ಝರಿಸಸ್ಯಗಳ ಆಗರವಾಗಿದೆ.
ಅಚವೆಯಿಂದ ವಿಭೂತಿ ಜಲಪಾತದತ್ತ ಹೆಜ್ಜೆ ಇಡುವಾಗ ಗುಡ್ಡದ ಬುಡದಲ್ಲಿಯೇ ಮಳೆಗಾಲದಲ್ಲಿ ಮಾತ್ರ ಹರಿಯುವ ಚಿಕ್ಕ ಅನಾಮಿಕ ಜಲಪಾತ ಸಿಗುತ್ತದೆ. ಈ ನೀರು ಅತ್ಯಂತ ಶುಭ್ರ. ಇಲ್ಲಿಂದ ಮುಂದೆ ಕಾಡಿನ ಕಾಲುದಾರಿಯ ಬದಿಯಲ್ಲಿ ಮುಳ್ಳಿನಿಂದ ಕೂಡಿದ ಸೀಗೆಬಳ್ಳಿ ಹರಡಿದ ದಾರಿ ಇದೆ. ಈ ದುರ್ಗಮ ದಾರಿಯಲ್ಲಿ ಸಾಗುವಾಗ ಮಳೆಗಾಲದಲ್ಲಿ ರಕ್ತಹೀರುವ ಇಂಬಳಗಳ ಕಾಟವಿದೆ. ಇವೆಲ್ಲವನ್ನೂ ದಾಟಿ ಕೊನೆಗೆ ಜಲಧಾರೆಯ ಎದುರು ಬಂದಾಗ ಆಯಾಸವೆಲ್ಲ ಮಾಯವಾಗುವುದು ಗ್ಯಾರೆಂಟಿ. 130 ಅಡಿ ಎತ್ತರದ ಬಂಡೆಗಳ ಮೇಲಿಂದ ಪ್ರಪಾತಕ್ಕೆ ಧುಮ್ಮಿಕ್ಕುವ ಜಲವೈಭವ ಅತ್ಯದ್ಭುತ. 3 ಹಂತಗಳಲ್ಲಿ ಜಲಪಾತವಾಗಿ ಭೋರ್ಗರೆಯುವ ಹಾಲುಬಿಳುಪಿನ ವಿಭೂತಿ ಜಲಧಾರೆಯನ್ನು ಧ್ಯಾನಿಸುತ್ತ ಇದ್ದಲ್ಲೇ ಇದ್ದುಬಿಡುವಂಥ ಮನಸ್ಸು ತರುವಂಥದು. ಗುಡ್ಡದ ನೀರಿನ ಈ ಜಲಪಾತ ಮುಂದೆ ಅಘನಾಶಿನಿ ನದಿ ಸೇರುತ್ತದೆ. ಇಲ್ಲಿಗೆ ಬರುವಾಗ ಯಾವುದೇ ಪ್ರವೇಶ ಶುಲ್ಕ ತೆರಬೇಕಿಲ್ಲ.

ಹೀಗೆಬನ್ನಿ...
ಅಂಕೋಲದಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳುವಾಗ ಸಿಗುವ ಬಾಳೆಗುಳಿ ಕ್ರಾಸ್‌ನಿಂದ 35 ಕಿ.ಮೀ. ಅಂತರದಲ್ಲಿ ಅಚವೆ ಇದೆ. ಅಂಕೋಲ- ಮಾದನಗಿರಿ- ಅಚವೆ ಮಾರ್ಗ (ಗುಂಡಬಾಲ ರಸ್ತೆ)ವಾಗಿಯೂ 34 ಕಿ.ಮೀ. ಸಾಗಿ ತಲುಪಬಹುದು.

- ಚಿತ್ರ-ಲೇಖನ: ಪ್ರೊ. ಶಿವಾನಂದ ಎಸ್. ಭಟ್ಟ
najagarbhat00@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!