ವಾಹನ

ಕೊಕ್ಕರೆಯೋಲೆ

ಮದ್ದೂರು ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಕ್ಕರೆಗಳು ವಾಸಿಸುತ್ತಿರುವುದರಿಂದ ಈ ಗ್ರಾಮ 'ಕೊಕ್ಕರೆ ಬೆಳ್ಳೂರು' ಎಂದೇ ಪ್ರಸಿದ್ಧಿ ಪಡೆದಿದೆ...

ಈ ಊರಿಗೆ ಕಾಲಿಟ್ಟರೆ ಕಾಣುವ ಮರಗಳಲ್ಲೆಲ್ಲಾ ಹಕ್ಕಿಗಳದ್ದೇ ಕಾರುಬಾರು. ಸಣಕಲು ಕಾಲುಗಳಿಂದ ಗರಿ ಕೆದರುತ್ತಲೋ, ಸಂಗಾತಿ ಕೊಕ್ಕಲ್ಲಿ ಆಹಾರವಿಡುತ್ತಲೋ, ಕೊಕ್ಕಲ್ಲೇ ಮೈ ರಮಿಸುವ ಹಲವು ರಂಗಿನ ಹಕ್ಕಿಗಳ ಚಲನವಲನವಂತೂ ಕಣ್ಣಿಗೆ ಹಬ್ಬ. ಇಂಥ ಸಾಕ್ಷಾತ್ಕಾರಕ್ಕೆ ಪ್ರತಿ ವರ್ಷ ಕಾರಣವಾಗುವುದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಭಾರತೀನಗರ ಸಮೀಪದ ಕೊಕ್ಕರೆಬೆಳ್ಳೂರು.
ಹೌದು. ದೇಶದ 21 ತಳಿಯ ಹಕ್ಕಿಗಳು ಇಲ್ಲಿ ವೀಕ್ಷಣೆಗೆ ಲಭ್ಯ. ಬೆಳ್ಳೂರಿನ ಹಕ್ಕಿಗಳೆಂದರೆ ವನ್ಯಜೀವಿ ಛಾಯಾಗ್ರಾಹಕರಿಗಂತೂ ಹಬ್ಬ. ಹಕ್ಕಿಗಳ ಜೀವನ ಅಧ್ಯಯನಕ್ಕೊಂದು ಸೂಕ್ತ ತಾಣ. ಗ್ರಾಮದ ಸುತ್ತಲ ಹುಣಸೆಮರಗಳಲ್ಲಿ ಕಾಯಿಗಳೂ ಕಾಣದಂತೆ ಗುಂಪು ಗುಂಪಾಗಿ ತಂಗುವ ಇಲ್ಲಿನ ಹಕ್ಕಿಗಳ ಕಲರವ ಕರ್ಣಾನಂದ. ರಾಜ್ಯದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಪತ್ನಿ ಸಮೇತರಾಗಿ ಇಲ್ಲಿಗೆ ಆಗಮಿಸಿ ಹಕ್ಕಿಗಳ ಚಲನವಲನ ಕಂಡಿರುವುದು ಇಲ್ಲಿನ ಹೆಮ್ಮೆ.
ಪ್ರತಿವರ್ಷ ನಿಗದಿತ ಸಮಯಕ್ಕೆ ಪೆಲಿಕಾನ್, ಪಾರ್ಕ್‌ಪೇಂಟರ್, ನೈಟ್‌ಎರಾನ್, ವೈಟ್‌ಹೇಬಿಸ್, ಹೆಜ್ಜಾರ್ಲೆ ಪಾಂಡ್‌ಎರಾನ್, ಕಾರ್ಮೋರೆಂಟ್ ಸೇರಿದಂತೆ ವಿವಿಧ ಬಗೆಯ ಕೊಕ್ಕರೆಗಳು ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತಿತರ ದೇಶಗಳಿಂದ ಹಾರಿಬರುತ್ತವೆ. ಮದ್ದೂರು ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಕ್ಕರೆಗಳು ವಾಸಿಸುತ್ತಿರುವುದರಿಂದ ಈ ಗ್ರಾಮ 'ಕೊಕ್ಕರೆ ಬೆಳ್ಳೂರು' ಎಂದೇ ಪ್ರಸಿದ್ಧಿ ಪಡೆದಿದೆ.
ಪ್ರತಿವರ್ಷ ಫೆಬ್ರವರಿಯಲ್ಲಿ ವಿವಿಧೆಡೆಗಳಿಂದ ಹಾರಿಬರುವ ಬಾನಾಡಿಗಳು 6 ತಿಂಗಳು ಬೆಳ್ಳೂರಿನಲ್ಲೇ ನೆಲೆಸುತ್ತವೆ. ವಿಶೇಷವೆಂದರೆ, ಸ್ಥಳೀಯ ಗ್ರಾಮಸ್ಥರು ಈ ಸುಂದರ ಹಕ್ಕಿಗಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಹಲವು ಕಡೆ ಪಕ್ಷಿಧಾಮಗಳಿವೆ ಜೊತೆಗೆ ಶಿಂಷಾನದಿಯ ಪಾತ್ರದಲ್ಲಿ ನೂರಾರು ಹೆಮ್ಮರಗಳಿದ್ದರೂ ಈ ಹಕ್ಕಿಗಳಿಗೆ ಮಾತ್ರ ಶಿಂಷಾನದಿಯ ದಂಡೆಯ ಮೇಲಿನ ವೈದ್ಯನಾಥಶ್ವೇರ ದೇಗುಲ ಸಮೀಪದ ಕೊಕ್ಕರೆ ಬೆಳ್ಳೂರೇ ಇಷ್ಟವೆಂಬಂತೆ ಈ ತಾಣ ಹುಡುಕಿಕೊಂಡು ಬರುತ್ತವೆ.
ಅಭಿವೃದ್ಧಿ ಆಗುವುದೇ?
ರಂಗುರಂಗಿನ ಈ ವಿದೇಶಿ ಹಕ್ಕಿಗಳ ವಂಶಾಭಿವೃದ್ಧಿಗೆ ಇಲ್ಲಿ ಸೂಕ್ತ ರಕ್ಷಣೆಯೇ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದೆಡೆ ಹೈವೋಲ್ಟೇಜ್ ವಿದ್ಯುತ್ ತಂತಿಗಳಿಗೆ ಸಿಲುಕಿ ಪ್ರತಿವರ್ಷ ಪಕ್ಷಿಗಳು ಅಲ್ಲಲ್ಲಿ ಸಾವನ್ನಪ್ಪುತ್ತವೆ. ಮತ್ತೊಂದೆಡೆ ಮೊಬೈಲ್ ಟವರ್‌ಗಳು ಪಕ್ಷಿ ಸಂಕುಲವನ್ನು ಅವನತಿಗೆ ದೂಡುತ್ತಿವೆ. ಶಿಂಷಾ ನದಿಯಲ್ಲಿ ಸರಿಯಾಗಿ ನೀರಿಲ್ಲದ ಕಾರಣ ಪಕ್ಷಿಗಳಿಗೆ ಮೀನುಗಳು ಸಮರ್ಪಕವಾಗಿ ಸಿಗದೆ ಪಕ್ಷಿಗಳು ಪರಿತಪಿಸುವಂತಾಗಿದೆ. ಆಹಾರವಿಲ್ಲದೇ ಅವುಗಳು ಬೇರೆಡೆ ಹಾರಿಹೋಗಲೂ ಕಾರಣವಾಗುತ್ತಿದೆ. ಸರ್ಕಾರ ಎಲ್ಲಾ ಪಕ್ಷಿಧಾಮಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ಧಿಪಡಿಸುತ್ತಿವೆ. ಕೊಕ್ಕರೆ ಬೆಳ್ಳೂರನ್ನು ಮಾತ್ರ ಅಭಿವೃದ್ಧಿ ವಿಷಯದಲ್ಲಿ ಮರೆತಿರುವುದು ವಿಪರ್ಯಾಸ. ಬೆಳ್ಳೂರಿನ ಕೂಗಳತೆ ದೂರದಲ್ಲಷ್ಟೆ 800 ಎಕರೆ ವಿಸ್ತೀರ್ಣದ ಶಿಂಷಾನದಿ ಕೆರೆ ಅಭಿವೃದ್ಧಿಗೂ ಸರ್ಕಾರ ಮುತುವರ್ಜಿ ತೋರುತ್ತಿಲ್ಲ. ಕೊಕ್ಕರೆಗಳ ಹಿತದೃಷ್ಟಿಯಿಂದ ಅಭಿವೃದ್ಧಿ ಅಗತ್ಯ.
ನದಿ ಪಾತ್ರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಮರಳು ದಂಧೆ ಯಥೇಚ್ಛವಾಗಿ ನಡೆಯುತ್ತಿದೆ. ಇದರಿಂದ ಪಕ್ಷಿಗಳು ಆಹಾರಕ್ಕಾಗಿ ನದಿಗೆ ಇಳಿಯಲು ಹೆದರುತ್ತಿವೆ. ಹೀಗಾಗಿ, ದಿನದಿಂದ ದಿನಕ್ಕೆ ಕೊಕ್ಕರೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರವಾಸೋದ್ಯಮ ಇಲಾಖೆ ಇತ್ತ ಗಮನಹರಿಸಿ ಬೆಂಗಳೂರು, ಮೈಸೂರು ಹೆದ್ದಾರಿ ಬಳಿಯ ರುದ್ರಾಕ್ಷಿ ಪುರದಿಂದ ಹಲಗೂರಿಗೆ ತೆರಳುವ ಮಾರ್ಗದಲ್ಲಿ ಮತ್ತು ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಚಿಕ್ಕರಸಿನಕೆರೆ ಮಾರ್ಗದಿಂದ ಗುಂಡಿ ಬಿದ್ದಿರುವ ರಸ್ತೆಗಳಲ್ಲಿ ಸಂಚರಿಸುವ ಪ್ರವಾಸಿಗರ ಪ್ರಯಾಸ ಹೇಳತೀರದು. ಹೀಗೆಬನ್ನಿ...
ಮದ್ದೂರು ತಾಲೂಕು ಕೊಕ್ಕರೆಬೆಳ್ಳೂರಿನ ಈ ಸೀಸನ್ ಪಕ್ಷಿಧಾಮಕ್ಕೆ ಬರಲು ಹಲವು ಮಾರ್ಗಗಳಿವೆ. ಬೆಂಗಳೂರು- ರುದ್ರಾಕ್ಷಿಪುರ ಗೇಟ್ ಮಾರ್ಗದಲ್ಲಿ ಬಂದರೆ 90 ಕಿ.ಮೀ., ಬೆಂಗಳೂರಿಗೆ ಹೋಗದೆ ಮೈಸೂರಿನಿಂದ ಶ್ರೀರಂಗಪಟ್ಟಣ ಮಾರ್ಗವಾಗಿ ಮಂಡ್ಯಕ್ಕೆ ಬಂದು ಮದ್ದೂರಿಗೆ ತಲುಪಬಹುದು. ಈ ಮಾರ್ಗದಲ್ಲಿ ಕೊಕ್ಕರೆಬೆಳ್ಳೂರು 70 ಕಿ.ಮೀ. ದೂರದ ಪಯಣ. ಇನ್ನು ಮಳವಳ್ಳಿ- ಭಾರತೀನಗರ ಮಾರ್ಗವಾಗಿ 18 ಕಿ.ಮೀ. ಸಾಗಿಯೂ ಕೊಕ್ಕರೆಬೆಳ್ಳೂರು ತಲುಪಬಹುದು.

- ಚಿತ್ರ- ಲೇಖನ: ಅಣ್ಣೂರು ಸತೀಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!