ವಾಹನ

ಗಿರಿ ದೇವಿ

ದಟ್ಟ ಕಾನನದ ನಡುವೆ ಬೃಹತ್ ಬೆಟ್ಟ. ಅದರ ಬೆಟ್ಟದ ತುದಿಯಲ್ಲೊಂದು ದೇವಾಲಯ...

ದಟ್ಟ ಕಾನನದ ನಡುವೆ ಬೃಹತ್ ಬೆಟ್ಟ. ಅದರ ಬೆಟ್ಟದ ತುದಿಯಲ್ಲೊಂದು ಸುಂದರ ದೇವಾಲಯ. ಕುಂಜಾರುಗಿರಿಯ ದುರ್ಗಾ ದೇವಾಲಯ ಇರುವುದು ಇಂಥ ಪ್ರಶಾಂತ ಪರಿಸರದಲ್ಲಿ.
ಮಧ್ವಾಚಾರ್ಯರು ಬಾಲ್ಯದಲ್ಲಿ ಪೂಜಿಸುತ್ತಿದ್ದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದುರ್ಗಾದೇವಿ, ಭಗವಂತನ ಅವತಾರ ರೂಪವಾದ ಸಾಕ್ಷಾತ್ ಪರಶುರಾಮರಿಂದಲೇ ಪ್ರತಿಷ್ಠಾಪಿತಳಾಗಿದ್ದಾಳೆ ಎಂಬ ಪ್ರತೀತಿ ಇದೆ.  ಏಕಶಿಲಾ ಬೆಟ್ಟದ ಮೇಲಿರುವ ಪರಶುರಾಮ ಕ್ಷೇತ್ರವೂ ಸನಿಹದಲ್ಲಿದ್ದು, ಕುಂಜಾರುಗಿರಿಯ ಪಾವಿತ್ರ್ಯವನ್ನು ವೃದ್ಧಿಸಿದೆ.

ರಮ್ಯ ವನಸಿರಿ
ಕೈಗೆಟಕುವಷ್ಟು ಹತ್ತಿರದಲ್ಲಿ ಸಾಗುವ ಮೋಡಗಳು, ಕಣ್ಣು ಹಾಯಿಸಿದಷ್ಟೂ ಹಚ್ಚ ಹಸಿರನ್ನು ಹೊದ್ದು ಮಲಗಿದಂತೆ ಕಾಣುವ ಭುವಿ, ಗಿರಿಯ ಸುತ್ತ ಹಬ್ಬಿದ ಸುಂದರ ವನರಾಶಿ ನಮ್ಮನ್ನು ಹೊಸದೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ಇಲ್ಲಿನ ಸುಂದರ ಪ್ರಶಾಂತ ಪ್ರದೇಶ  ನಗರ ವಾಸಿಗಳಿಗೆ ಮುದ ನೀಡುವುದರಲ್ಲಿ ಸಂದೇಹವಿಲ್ಲ. ಭೂಮಟ್ಟದಿಂದ ಸುಮಾರು 100 ಅಡಿಗಳಿಂತಲೂ ಎತ್ತರದಲ್ಲಿರುವ ಬೆಟ್ಟದ ದೇವಾಲಯವನ್ನು ತಲುಪಲು ಪಶ್ಚಿಮ ಭಾಗದ 257 ಮಟ್ಟಲುಗಳಿವೆ. ಅದನ್ನು ಹತ್ತಿ ದೇವಿ ದರ್ಶನ ಪಡೆಯುವುದೇ ವಿಶಿಷ್ಟ ಅನುಭವ. (ಮೆಟ್ಟಲುಗಳನ್ನು ಏರುವುದು ಕಷ್ಟ ಎನ್ನುವವರಿಗೆ ಇದೀಗ ಉತ್ತರ ದಿಕ್ಕಿನಲ್ಲಿ ರಸ್ತೆಯ ವ್ಯವಸ್ಥೆ ಕಲ್ಪಿಸಲಾಗಿದೆ.) ಪೂರ್ವ ಹಾಗೂ ದಕ್ಷಿಣ ಭಾಗದಿಂದಲೂ ಮೆಟ್ಟಲು ಮೂಲಕ ಏರಿ ದೇವಾಲಯವನ್ನು ತಲುಪಬಹುದು. 

ಮುಂಜಾನೆ ಪಶ್ಚಿಮ ಘಟ್ಟದ ಸೂರ್ಯೋದಯವನ್ನೂ, ಸಂಜೆ ಅರಬ್ಬೀ ಸಮುದ್ರದ ಸೂರ್ಯಾಸ್ತದ ಸೊಬಗನ್ನು ಸವಿಯಬಹುದು. ಬೆಟ್ಟದ ತುದಿಯಲ್ಲಿ ಕಾಣುವ ಸುತ್ತಲ ಪ್ರಕೃತಿಯ ರಮ್ಯ ಮನೋಹರ ದೃಶ್ಯ ಪ್ರವಾಸಿಗರ ಕಣ್ಮನ ತಣಿಸುತ್ತದೆ. ಮುಸ್ಸಂಜೆಯ ತಣ್ಣನೆಯ ತಂಗಾಳಿ ಮೈಮನ ತಂಪಾಗಿಸುತ್ತದೆ. ಸುತ್ತಲ ವನದಲ್ಲಿ ವಿಹರಿಸುತ್ತಿರುವ ವಾನರ ಪಡೆ ನಮ್ಮನ್ನು ಸ್ವಾಗತಿಸಲು ಸದಾ ಅಣಿಯಾಗಿರುತ್ತವೆ. ತಿನ್ನಲು ಏನಾದರೂ ಸಿಗುವುದೋ ಎಂದು ಆಸೆಯಿಂದ ಕುಳಿತಿರುವ ಕಪಿಗಳು, ಕಪಿಚೇಷ್ಟೆಯೊಂದಿಗೆ ಮಕ್ಕಳಿಗೆ ಉತ್ತಮ ಮನರಂಜನೆಯನ್ನು ನೀಡುತ್ತವೆ. 

ಈ ದೇವಾಲಯವು ಉಡುಪಿಯ ಅಷ್ಟ ಮಠಗಳಲ್ಲೊಂದಾದ ಅದಮಾರು ಮಠದ ಆಡಳಿತಕ್ಕೆ ಒಳಪಟ್ಟಿದೆ. ಇತ್ತೀಚೆಗಷ್ಟೇ ಜೀರ್ಣೋದ್ಧಾಗೊಂಡು ವೈಭವದ ಬ್ರಹ್ಮ ಕಲಶೋತ್ಸವ ನೆರವೇರಿದೆ. ನೂತನ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತು ಪೌಳಿ ಹಾಗೂ ಮುಂಭಾಗದ ಚಪ್ಪರಗಳ ವಿನ್ಯಾಸಗಳು ಪ್ರತ್ಯೇಕವಾಗಿದ್ದು, ಮೇಲ್ಛಾವಣಿಗೆ ಸಂಪೂರ್ಣವಾಗಿ ತಾಮ್ರದ ಹೊದಿಕೆ ಮಾಡಲಾಗಿದೆ.

ಶರನ್ನವರಾತ್ರಿಯಲ್ಲಿ ನವದುರ್ಗೆಯರಿಗೆ ಕಲ್ಪೋಕ್ತ ಪೂಜೆಯನ್ನು ಸಲ್ಲಿಸಲಾಗುವುದು. ಕನ್ನಿಕಾ ಪೂಜೆ ವಿಶೇಷವಾಗಿದ್ದು, ಸಿಂಹಮಾಸದ ನಾಲ್ಕೈದು ಶುಕ್ರವಾರಗಳಂದು ಐವತ್ತು ಸಹಸ್ರಕ್ಕೂ ಮಿಕ್ಕಿ ಭಕ್ತರು ಬಂದು ಸೇವೆ ಸಲ್ಲಿಸುವರು.  ಕುಂಕುಮಾರ್ಚನೆ, ಕಾರ್ತೀಕ ಪೂಜೆ ಹೆಚ್ಚಾಗಿ ಸಲ್ಲುವ ಸೇವೆಗಳು. ಹೂವಿನ ಪೂಜೆ, ದುರ್ಗಾ ಪೂಜೆ, ಚಂಡಿಕಾ ಹೋಮ ಅನ್ಯ ಸೇವೆಗಳು. ದೇವಿಗೆ ಕೆಂಪು ಹಾಗೂ ಕಪ್ಪು ಬಣ್ಣದ ಬಳೆ ಹರಕೆ ರೂಪದಲ್ಲಿ ಒಪ್ಪಿಸಿದರೆ, ಮುತ್ತೈದೆ ಭಾಗ್ಯ ನೀಡುತ್ತಾಳೆ ಎಂಬುದು ಭಕ್ತರ ನಂಬಿಕೆ.

ಉಡುಪಿಗೆ ಬರುವ ಪ್ರವಾಸಿಗರು ಕುಂಜಾರುಗಿರಿ ದುರ್ಗಾ ಸನ್ನಿಧಿಗೆ, ಸನಿಹದಲ್ಲೇ ಇರುವ ಆಚಾರ್ಯ ಮಧ್ವರ ಜನ್ಮಸ್ಥಳವಾದ ಪಾಜಕ ಕ್ಷೇತ್ರಕ್ಕೆ ಭೇಟಿ ನೀಡಲು ಸಾಕಷ್ಟು ಬಸ್ಸುಗಳ ಸೌಕರ್ಯವಿದೆ. ಕ್ಷೇತ್ರದಲ್ಲಿ ಮಧ್ಯಾಹ್ನ ಅನ್ನಪ್ರಸಾದದ ವ್ಯವಸ್ಥೆಯೂ ಇದೆ.

ಕೃಷ್ಣನ ಅನುಜೆ
ಭಗವಂತನು ದ್ವಾಪರ ಯುಗದಲ್ಲಿ ಶ್ರೀಕೃಷ್ಣನಾಗಿ ಅವತರಿಸಿದಾಗ ದುರ್ಗಾದೇವಿ ಆತನ ಆದೇಶದಂತೆ ಯೋಗವಾಯೆಯ ರೂಪ ತಾಳಿದ್ದಳು. ಶ್ರೀಕೃಷ್ಣನ ಅನುಜೆಯಾಗಿ ಅವನ ದುಷ್ಟ ಸಂಹಾರ ಹಾಗೂ ಶಿಷ್ಟ ಪರಿಪಾಲನ ಕಾರ್ಯಗಳಲ್ಲಿ ಸಹಭಾಗಿಯಾದ ಯೋಗವಾಯೆಯೇ ಕುಂಜಾರುಗಿರಿಯ ದುರ್ಗಾಲಯದಲ್ಲಿ ವಿರಾಜಿಸುತ್ತಿರುವಳು ಎಂಬುದು ನಂಬಿಕೆ.

ಚತುಸ್ತೀರ್ಥಗಳು
ದೇವಾಲಯದ ಆಸುಪಾಸಿನಲ್ಲಿರುವ ಪರಶುರಾಮ ನಿರ್ಮಿತ ಬಾಣ, ಗದಾ, ಪರಶು, ಧನು ತೀರ್ಥಗಳು ಪಾಪ ನಿವಾರಕಗಳಾಗಿವೆ. ಬಾಣ ತೀರ್ಥವು ದುರ್ಗಾ ಬೆಟ್ಟದಿಂದ ಈಶಾನ್ಯ ಭಾಗದಲ್ಲಿ ಅರ್ಧ ಕಿ.ಮೀ. ದೂರದಲ್ಲಿದೆ. ಪಶ್ಚಿಮದಲ್ಲಿರುವ ಗದಾ ತೀರ್ಥವು ಪರಶುರಾಮರ ಸಾನಿಧ್ಯವನ್ನು ಹೊಂದಿದೆ.  ಪರಶು ತೀರ್ಥವು ಬೆಟ್ಟದಿಂದ ಸುಮಾರು ಎರಡೂವರೆ ಕಿ.ಮೀ. ಪೂರ್ವದಲ್ಲಿದೆ.  ದಕ್ಷಿಣ ಭಾಗದಲ್ಲಿರುವ ಧನುಸ್ತೀರ್ಥವು  ರೆಂಜಪಾದೆಯಲ್ಲಿದೆ.  ದೇವಿಯ ಪೂಜೆಗೆ ಕೆಳಗಿನ ಬಾಣತೀರ್ಥದಿಂದಲೇ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಮಧ್ಯೆ ಎಲ್ಲೂ ಕೆಳಗಿಡದೆ 6 ಕೊಡ ನೀರನ್ನು ಹೊತ್ತು ತರಬೇಕು.

- ಎನ್.ಸ್ವಾತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್