ವಾಹನ

ಶ್ರೀಚಕ್ರ

ತುಮಕೂರಿನ ದಕ್ಷಿಣಕ್ಕೆ 23 ಕಿ.ಮೀ. ದೂರದಲ್ಲಿರುವ ಸಣ್ಣ ಹಳ್ಳಿ ಹೆಬ್ಬೂರು. ಈ ಊರು ಆಧ್ಯಾತ್ಮಿಕವಾಗಿ ಭಾರಿ ಹಿನ್ನೆಲೆ ಹೊಂದಿದೆ. ಇಲ್ಲಿರುವ ಅಪೂರ್ವ ಶ್ರೀಚಕ್ರ ಮತ್ತು ಕಾಮಾಕ್ಷೀ ಶಾರದಾ ದೇವಿ ದೇವಸ್ಥಾನ ದೇಶದ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದು ಎನ್ನುವ ಹಿರಿಮೆಗೆ ಪಾತ್ರವಾಗಿದೆ.
ಸುಮಾರು 6-7ನೇ ಶತಮಾನದ ಗಂಗರಸರ ಕಾಲದಿಂದ ಹೆಬ್ಬುಲಿ ಎಂಬ ಹೆಸರು ಪಡೆದಿದ್ದ ಈ ಊರಿನಲ್ಲಿ 108 ದೇವಾಲಯಗಳು ಇದ್ದವು ಎನ್ನುತ್ತದೆ ಇತಿಹಾಸ. ಕಾಲ ಉರುಳಿದಂತೆ ಜನರಲ್ಲಿ ಶ್ರದ್ಧಾಶಕ್ತಿ ಕಡಿಮೆಯಾಗಿಯೋ, ಸರಿಯಾಗಿ ನಿರ್ವಹಣೆ ಇಲ್ಲದೆಯೋ ಅನೇಕ ದೇವಾಲಯಗಳು ಮುಚ್ಚಿದವು. ಈಗಲೂ ಸುಮಾರು 30 ದೇವಾಲಯಗಳು ಉಳಿದುಕೊಂಡಿವೆ.

ಭಕ್ತರ ಕೋರಿಕೆಯಂತೆ ಪೂಜೆ
ಹೆಬ್ಬೂರಿನಲ್ಲಿರುವ ಶ್ರೀಚಕ್ರ ದೇವಾಲಯ ಮೇರುಪ್ರಸ್ತಾರವಾಗಿದೆ. ಇದರ ಹಿಂದೊಂದು ಕಥೆ ಇದೆ.
ಶ್ರೀರಂಗಪಟ್ಟಣದ ಭಕ್ತರೊಬ್ಬರ ಪ್ರಾರ್ಥನೆಯಂತೆ ಹೆಬ್ಬೂರು ಮಠದ ಶ್ರೀ ಕೋದಂಡಾಶ್ರಮ ಸ್ವಾಮಿಗಳು ಅವರ ಮನೆಗೆ ಭೇಟಿ ನೀಡಿ ಅವರ ಮನೆಯಲ್ಲಿದ್ದ ಅಪೂರ್ವವಾದ ಶ್ರೀಚಕ್ರವನ್ನು ವೀಕ್ಷಿಸಿದರು. ಈ ಶ್ರೀಚಕ್ರಕ್ಕೆ ದಿನವೂ ಪೂಜೆ ಸಲ್ಲುತ್ತಿತ್ತು. ಆದರೂ, ಶಾಸ್ತ್ರೀಯ ಪದ್ಧತಿಯಂತೆ ಅನುಷ್ಠಾನಗಳು ನಡೆಯುತ್ತಿರಲಿಲ್ಲವಾದ್ದರಿಂದ, ಸರಿಯಾದ ಪೂಜೆ ನಡೆಯದೇ ಹೋದರೆ ಸದ್ಗತಿ ಹೊಂದುವುದಿಲ್ಲವೆಂದು ಆ ಗೃಹಸ್ಥರು ತಮ್ಮಲ್ಲಿದ್ದ ಶ್ರೀಚಕ್ರವನ್ನು ಸ್ವಾಮಿಗಳಿಗೆ ಒಪ್ಪಿಸಿದರು. ಅದನ್ನು ಸ್ವಾಮೀಜಿಯವರು ಹೆಬ್ಬೂರಿನ ಶ್ರೀ ಮಠಕ್ಕೆ ತಂದು ಪೂಜೆ ನಡೆಸುತ್ತಿದ್ದರು.

ಇದು ನಡೆದದ್ದು ಸುಮಾರು 150 ವರ್ಷಗಳ ಹಿಂದೆ.
ಈ ಚಕ್ರವು ವಿಶೇಷ ಆಕಾರವುಳ್ಳದ್ದು, ಇದರಲ್ಲಿ ಒಂದು ತ್ರಿಕೋಣ, ಪಂಚಕೋಣ, ಅಷ್ಟಕೋಣ, ದ್ವಾದಶಕೋಣ, ಅಷ್ಟದಶಕೋಣ, ಪಂಚವಿಂಶತಿ ಕೋಣ ಮತ್ತು ಪಂಚತ್ರಿಂಶತ್ ಕೋಣಗಳಿವೆ. ಇವು ಕೋಣಗಳಲ್ಲಿನ ವೈಶಿಷ್ಟ್ಯವಾಗಿದೆ. ಅಲ್ಲದೇ ಇದು ಕೂರ್ಮ ಪೀಠ. ಅದರ ಮೇಲೆ ಅಷ್ಟದಿಗ್ಗಜಗಳೂ, ಅಷ್ಟದಿಗ್‌ನಾಗಗಳೂ, ಅಷ್ಟಶಕ್ತಿಗಳೂ ಇವೆ. ಇದನ್ನು 'ಚಿದಂಬರ ಶ್ರೀ ಚಕ್ರ' ಎಂದೂ ಕರೆಯುತ್ತಾರೆ.

ಬೆಂಗಳೂರಿನ ರಾಗಿಗುಡ್ಡ ದೇವಾಲಯವನ್ನು ಅಭಿವೃದ್ಧಿಪಡಿಸಿದ ಶ್ರೀ ಗಣಪತಿ ಸೋಮಯಾಜಿ (ಹಿಂದೆ ಇದೇ ಮಠದಲ್ಲಿ ಪೀಠಾಧಿಪತಿಗಳಾಗಿದ್ದ ಶ್ರೀ ನಾರಾಯಣಾಶ್ರಮ ಸ್ವಾಮೀಜಿ) ಅವರು 14 ವರ್ಷ ಹಿಂದೆ ಇದೇ ಮಠದಲ್ಲಿ ಚಂಡಿ ಹೋಮ ನಡೆಸುತ್ತಿದ್ದ ಸಂದರ್ಭದಲ್ಲಿ ದೇವಿಯು ಅವರಿಗೆ ಈ ಶ್ರೀಚಕ್ರಾಕಾರದಲ್ಲಿಯೇ ದೇವಾಲಯ ಆಗಬೇಕು ಎಂದು ಆಜ್ಞೆ ನೀಡಿದಳು. ಆ ಪ್ರಕಾರವೇ 1994ರಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ.

ಈಗ ಶ್ರೀ ಚಕ್ರ ದೇವಾಲಯವು ಮೊದಲು ಕೂರ್ಮ ಪೀಠ, ಅದರ ಮೇಲೆ ಅಷ್ಟದಿಗ್ಗಜಗಳು, ದಿಗ್‌ನಾಗಗಳು, ಅಷ್ಟ ಶಕ್ತಿಗಳು; ಗರ್ಭಗುಡಿಯ ಎಡಗಡೆ ಕುಮಾರಸ್ವಾಮಿ, ಬಲಗಡೆ ಮಹಾಗಣಪತಿ ಮತ್ತು 3 ದಿಕ್ಕುಗಳಲ್ಲಿ ದಕ್ಷಿಣಾ ಮೂರ್ತಿ, ದತ್ತಾತ್ರೇಯ, ಕಾಲ ಭೈರವ, ವಿದ್ಯೆಗೆ ಸಂಬಂಧಿಸಿದ ವಿದ್ಯಾ ದೇವತೆಗಳ ಮೂರ್ತಿಗಳಿವೆ. ಪೂಣಿಗೆಯ ಮೇಲೆ ಪಂಚ ಶಕ್ತಿ ದೇವತೆಗಳು, ಅದಾದ ಮೇಲೆ ಭೂಪುರಗಳನ್ನು ಕೆತ್ತಲಾಗಿದೆ. ಶ್ರೀಚಕ್ರದ ಬಿಂದುವೇ ಶಿವ ಶಕ್ತ್ತೈಕ್ಯರೂಪವಾದ ಕಲಶವಾಗಿದೆ. ಇದೇ ದೇವಾಲಯ ವೈಶಿಷ್ಟ.

ಶ್ರೀಚಕ್ರವೇ ವಾಸ್ತು
ಶ್ರೀಚಕ್ರದ ಆಕಾರವೇ ಆಲಯದ ವಾಸ್ತುಶಿಲ್ಪಕ್ಕೆ ರೂಪದರ್ಶಿ. ದೇವಾಲಯವೂ ಅದೇ, ಗರ್ಭಗುಡಿಯೂ ಅದೇ. ಅದರೊಳಗೆ ಕಾಮಾಕ್ಷೀ ಶಾರದಾ ನಾಮಾಂಕಿತ ದೇವಿಯನ್ನು ವೈದಿಕ ವಿಧಿ ಪೂರ್ವಕವಾಗಿ ಪ್ರತಿಷ್ಠಾಪಿಸಲಾಗಿದೆ.

ಶ್ರೀಚಕ್ರಕ್ಕೆ ತ್ರಿಕಾಲ ಅಭಿಷೇಕ, ಪೂಜೆ ನಡೆಯುತ್ತಿದೆ. ದಿನನಿತ್ಯವೂ ಅನ್ನದಾನ ಇರುತ್ತದೆ. ಸಹಸ್ರಾರು ಭಕ್ತಾಧಿಗಲು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಇದು ಭಾರತದಲ್ಲೇ ಒಂದು ಅಪೂರ್ವ ದೇವಾಲಯ ಎಂದು ಹೇಳಬಹುದು.

ಶಕ್ತಿಶಾಲಿ ಯಂತ್ರ
ಶ್ರೀಚಕ್ರದಲ್ಲಿ ಮೂರು ರೀತಿ. ಭೂಪ್ರಸ್ತಾರ, ಮೇರು ಪ್ರಸ್ತಾರ ಮತ್ತು ಆರ್ಧ ಮೇರು ಪ್ರಸ್ತಾರ. ಯಾವುದೇ ಶ್ರೀಚಕ್ರದಲ್ಲಿಯಾದರೂ 9 ಆವರಣಗಳಿರುವುದು ಸಾಮಾನ್ಯವಾಗಿದೆ. ಎಲ್ಲಾ ಆವರಣಗಳನ್ನು ದಳಗಳ ರೂಪದಲ್ಲಿ ಬರೆಯುತ್ತಾರೆ. 4, 5, 6, 7, 8ನೇ ಆವರಣಗಳನ್ನು, 9 ತ್ರಿಕೋನಗಳನ್ನು ಜೋಡಿಸಿ ರಚಿಸುತ್ತಾರೆ. ಒಂದು ತ್ರಿಕೋಣ, ಅಷ್ಟಕೋನದಶದಳ, ಇನ್ನೊಂದು ದಶದಳ, ಹದಿನಾಲ್ಕು ದಳ, ಷೋಡಶದಳ ಭೂಪುರ ಹೀಗೆ ಒಂಭತ್ತು ಆವರಣಗಳಿರುತ್ತವೆ. ದೇವತಾ ವಿಗ್ರಹಗಳೂ, ಮಂತ್ರಗಳೂ ಮತ್ತು ಆಧ್ಯಾತ್ಮಿಕ ಶಕ್ತಿಗಳ ಸಂಜ್ಞೆಯಾಗಿರುವಂತೆ ರೇಖಾಕೃತಿಗಳು ಈ ಶಕ್ತಿಗಳ ಸಂಕೇತವಾಗಿವೆ. ಇವುಗಳಿಗೆ ಯಂತ್ರವೆಂದು ಹೆಸರು. ಇಂತಹ ಯಂತ್ರಗಳಲ್ಲಿ ಶ್ರೀಚಕ್ರಕ್ಕಿಂತ ಶಕ್ತಿಶಾಲಿ ಯಂತ್ರ ಇನ್ನೊಂದಿಲ್ಲ.

- ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!