ವಾಹನ

ಬಂಡಾಜೆ

ಉಜಿರೆಯಿಂದ ಚಾರ್ಮಾಡಿ ಘಾಟಿ ಮಾರ್ಗವಾಗಿ ಸಾಗುವಾಗ ಉದ್ದನೆಯ ನೂಲಿನಂತೆ ಕಾಣುವ ಜಲಪಾತವನ್ನು...

ಉಜಿರೆಯಿಂದ ಚಾರ್ಮಾಡಿ ಘಾಟಿ ಮಾರ್ಗವಾಗಿ ಸಾಗುವಾಗ ಉದ್ದನೆಯ ನೂಲಿನಂತೆ ಕಾಣುವ ಜಲಪಾತವನ್ನು ಕಣ್ತುಂಬಬಹುದು. ಅದುವೇ ಬಂಡಾಜೆ ಜಲಪಾತ. ಜಲಪಾತಕ್ಕಿಂತ ಸೊಗಸು ಅದ ತಲುಪಲು ಕಾಡಿನೊಳಗೆ ಮಾಡುವ ಚಾರಣ.
ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಉಜಿರೆಯಿಂದ ಚಾರ್ಮಡಿ ಮಾರ್ಗವಾಗಿ ಸುಮಾರು ಆರೇಳು ಕಿ.ಮೀ. ಕ್ರಮಿಸಿದರೆ ಸೋಮಂತಡ್ಕ ಎಂಬ ಸಣ್ಣ ಪೇಟೆ ಎದುರಾಗುತ್ತದೆ. ಬಂಡಾಜೆಯ ಸೌಂದರ್ಯ ಕಾಣಲು ಇಲ್ಲಿ ಎಡಕ್ಕೆ ತಿರುಗಿ 16 ಕಿಮೀ. ಸಾಗಬೇಕು. ನಂತರ ಎದುರಾಗುವುದು ಮುಂಡಾಜೆ ಎಂಬ ಗ್ರಾಮ. ಇಲ್ಲಿನ ಸಮೀಪದ ಕಡಿರುದ್ಯಾವರದ ಒಳಂಬ್ರ ನಾರಾಯಣ ಗೌಡರ ಮನೆಯಿಂದ ಚಾರಣದ ಹಾದಿ ಆರಂಭವಾಗುತ್ತದೆ. ಗೌಡರ ಮನೆ ತಲುಪಲು ಉಜಿರೆಯಿಂದ ಜೀಪಿನ ವ್ಯವಸ್ಥೆ ಮಾಡಬಹುದು.
ಜಲಪಾತವು ರಕ್ಷಿತಾರಣ್ಯದಲ್ಲಿರುವುದರಿಂದ 200 ಪ್ರವೇಶ ಶುಲ್ಕ ಪಾವತಿಸಬೇಕು. ಅಲ್ಲದೆ ಗೈಡ್ ಇಲ್ಲದೇ ಸಾಗುವುದು ಅಪಾಯವೇ ಸರಿ. ಸ್ಥಳೀಯರ ನೆರವಿನೊಂದಿಗೆ ಮುನ್ನಡೆಯುವುದೇ ಲೇಸು. ಮಾತ್ರವಲ್ಲ, ಒಂದೇ ದಿನದಲ್ಲಿ ಜಲಪಾತ ನೋಡಿ ಬರಲು ಅಸಾಧ್ಯ.
ಮುಂಡಾಜೆ ಮತ್ತು ಆಸುಪಾಸಿನ ಗ್ರಾಮಗಳಿಗೆ ಜಲಪಾತದ ನೀರು ಜೀವಧಾರೆ. ಅಡವಿಯಲ್ಲಿ ಒಂದೆರಡು ಕಿಮೀ ಮುಂದೆ ಸಾಗುತ್ತಿದ್ದಂತೆಯೇ ಸಣ್ಣ ತೊರೆ ಕಾಣುತ್ತದೆ. ಇದು ಜಲಪಾತದಿಂದ ಬರುವ ನೀರಿನ ಹಾದಿ. ಇದರ ಬಳಿಕ ಹಾದಿ ಇನ್ನಷ್ಟು ಕ್ಲಿಷ್ಟ. ದಟ್ಟಡವಿಯ ನಡುವೆ ಜಾಗರೂಕತೆಯಿಂದ ಏರುದಾರಿ ಸವೆಸಬೇಕು. ಆಯ ತಪ್ಪದಂತೆ ಎಚ್ಚರವಹಿಸಿ ಪ್ರಕೃತಿಯ ಅಂದವನ್ನು ಸವಿಯಬಹುದು. ಜೀರುಂಡೆಗಳ ಝೇಂಕಾರ, ಹಕ್ಕಿಗಳ ಚಿಲಿಪಿಲಿಯೊಂದಿಗೆ ಕಾನನದಲ್ಲಿ ಸಾಗುವ ಗಮ್ಮತ್ತು ಜೀವನದಲ್ಲಿ ಎಂದೆಂದೂ ಅಳಿಯದ ನೆನಪಾಗುವುದು.
ಇಲ್ಲಿಗೆ ಮಳೆಗಾಲದಲ್ಲಿ ಹೋಗಬೇಕಾದರೆ ಎಂಟೆದೆಯೇ ಬೇಕೇನೊ! ಏಕೆಂದರೆ ನಡುವೆ ಸಿಗುವ ತೊರೆಯ ಹರಿವು ತುಂಬಾ ಹೆಚ್ಚಿರುತ್ತದೆ. ಮಾತ್ರವಲ್ಲದೆ, ಇಂಬಳಗಳ ಕಾಟವೂ ಸಹಿಸಲಾಗದಷ್ಟಿರುತ್ತದೆ. ವರ್ಷ ಪೂರ್ತಿ ಈ ಜಲಪಾತದಲ್ಲಿ ನೀರಿರುತ್ತದೆ.
ಸುಮಾರು ಏಳೆಂಟು ಕಿಮೀ ನಡೆದ ಬಳಿಕ ಜಲಪಾತದ ಮೇಲಿನಿಂದ ನೀರು ಬೀಳುವ ಸೌಂದರ್ಯವನ್ನು ಕೆಳಕ್ಕೆ ಇಣುಕಿ ನೋಡಬಹುದು. ಪ್ರಪಾತ ದರ್ಶನ ಭಾಗ್ಯವಾಗುವಾಗ ಅಷ್ಟೇ ಜಾಗರೂಕತೆ ಅಗತ್ಯ. ಸುಮಾರು 300 ಮೀ. ಎತ್ತರದಿಂದ ನೀರು ಹಂತಹಂತವಾಗಿ ಕೆಳಕ್ಕೆ ಬೀಳುವುದು ಕಾಣುತ್ತದೆ. ಇಲ್ಲಿಂದ ಮತ್ತೆ 5 ಕಿಮೀ ಕ್ರಮಿಸಿದರೆ ಬಲ್ಲಾಳರಾಯನ ದುರ್ಗ ಎಂಬ ಕೋಟೆಯನ್ನೂ ನೋಡಬಹುದು.
ಜಲಪಾತವಿರುವ ಬೆಟ್ಟದಲ್ಲಿಯೇ ರಾತ್ರಿ ಕಳೆಯುವುದು ಸೂಕ್ತ. ಬೇಸಿಗೆಗಾಲದಲ್ಲೂ ನೀರು ಮೈ ಮರಗಟ್ಟುವಷ್ಟು ತಂಪಿರುವುದರಿಂದ ಬೇಸಿಗೆಯ ಧಗೆ ಅಲ್ಲಿ ಮಾಯವಾಗಿ ಚಳಿ ಹೆಚ್ಚಿರುತ್ತದೆ. ತಿಂಡಿ ತಿನಿಸು, ಇತ್ಯಾದಿ ಊಟದ ವ್ಯವಸ್ಥೆಯನ್ನು ಮಾಡಿಕೊಂಡು ಹೋಗದಿದ್ದರೆ ಹೊಟ್ಟೆಗೆ ಜಲಪಾತದ ನೀರೊಂದೇ ಗತಿಯಾಗುವುದರಲ್ಲಿ ಸಂಶಯವಿಲ್ಲ.

-ನವೀನ್ ಭಟ್ ಇಳಂತಿಲ
ಚಿತ್ರ :ಅಭೀಷೇಕ ಡಿ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ