ನವದೆಹಲಿ: ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ-ಸುಜುಕಿ ಮುಂದಿನ ವರ್ಷದಿಂದಲೇ ತನ್ನ ಡೀಸೆಲ್ ಕಾರು ತಯಾರಿಕೆ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ.
ಮುಂದಿನ ವರ್ಷದ ಏಪ್ರಿಲ್ 1ರಿಂದ ತನ್ನ ಎಲ್ಲ ಡೀಸೆಲ್ ಕಾರುಗಳ ತಯಾರಿಕೆಯನ್ನು ಮಾರುತಿ ಸುಜುಕಿ ಸ್ಥಗಿತಗೊಳಿಸಲಿದೆ. ಡೀಸೆಲ್ ಕಾರು ಗ್ರಾಹಕರನ್ನು ಪೆಟ್ರೋಲ್ ಅಥವಾ ಸಿಎನ್‌ಜಿ ಕಾರು ಗಳಿಗೆ ಶಿಫ್ಟ್ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ ಎಂದು ಕಂಪನಿಯ ಅಧ್ಯಕ್ಷ ಆರ್.ಸಿ.ಭಾರ್ಗವ ಗುರುವಾರ ಹೇಳಿದ್ದಾರೆ. ಇನ್ನು ಡೀಸೆಲ್ ಕಾರುಗಳನ್ನು ಪೆಟ್ರೋಲ್ ಕಾರುಗಳಾಗಿ ಬದಲಾಯಿಸಲು ಪ್ರತೀ ಯೂನಿಟ್ ಗೆ ಸುಮಾರು 2 ಲಕ್ಷ ವೆಚ್ಚ ತಗುಲುವ ಸಾಧ್ಯತೆ ಇದೆ.
'ಭಾರತ್ ಸ್ಟೇಜ್(ಬಿಎಸ್)-6' ಎಮಿಷನ್ ನಿಯಮಗಳು 2020ರ ಏ.1ರಿಂದ ಜಾರಿಗೆ ಬರಲಿವೆ. ಇದಕ್ಕೆ ಪೂರಕವಾಗಿ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಕಂಪನಿಯ ಒಟ್ಟು ವಹಿವಾಟಿನಲ್ಲಿ ಶೇ.32ರಷ್ಟು ಡೀಸೆಲ್ ಕಾರುಗಳಿವೆ. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು 4.63 ಲಕ್ಷ ಡೀಸೆಲ್ ವಾಹನಗಳನ್ನು ಮಾರಾಟ ಮಾಡಿತ್ತು. ವಿಟಾರಾ ಬ್ರೇಜಾ ಮತ್ತು ಎಸ್-ಕ್ರಾಸ್ ವಾಹನಗಳು ಕೇವಲ ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿವೆ. ಸ್ವಿಫ್ಟ್, ಬಲೆನೋ, ಡಿಜೈರ್, ಸಿಯಾಜ್ ಮತ್ತು ಎರ್ಟಿಕಾ ಮಾಡೆಲ್ ಗಳು ಪೆಟ್ರೋಲ್ ಆವೃತ್ತಿಯನ್ನೂ ಹೊಂದಿವೆ. 2020ರಿಂದ ಕೇವಲ ಪೆಟ್ರೋಲ್/ಸಿಎನ್‌ಜಿ ಆವೃತ್ತಿಯ ವಾಹನಗಳನ್ನಷ್ಟೇ ಮಾರುತಿ ಸುಜುಕಿ ಮಾರಾಟ ಮಾಡಲಿದೆ. ಇತರೆ ಕಂಪನಿಗಳೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದ್ದು, ಬಿಎಸ್-6 ಗುಣಮಟ್ಟಕ್ಕೆ ಹೊಂದುವಂಥ ವಾಹನಗಳು ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿವೆ ಎನ್ನಲಾಗಿದೆ.
ಬಿಎಸ್ 6 ಅಡಿಯಲ್ಲಿ ಮಾರುತಿ ಸುಜುಕಿ ಆಲ್ಟೋ
ಇದೇ ವೇಳೆ ಮಾರುತಿ ಸುಜುಕಿ ತನ್ನ ಜನಪ್ರಿಯ ಮಾಡೆಲ್ ಆದ ಮಾರುತಿ ಸುಜುಕಿ ಆಲ್ಟೋ ಕಾರನ್ನು ಪುನರ್ ನವೀಕರಿಸಿ ಬಿಎಸ್ 6 ನಿಯಮಗಳಿಗೆ ಸಹಿಹೊಂದುವಂತೆ ತಯಾರು ಮಾಡಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದೆ. ಹೊಸ ಮಾರುತಿ ಸುಜುಕಿ ಆಲ್ಟೋ ಕಾರು ಸುಮಾರು 2.93 ಲಕ್ಷ ರೂ ಮೂಲ ದರಗಳಿಂದ 3.71 ಲಕ್ಷ ರೂಗಳಿರುತ್ತವೆ ಎಂದು ಮೂಲಗಳು ತಿಳಿಸಿವೆ.
ಅಂತೆಯೇ ಮೋದಿ ಸರ್ಕಾರವು 2030ರಷ್ಟರಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳು ಮಾತ್ರ ಚಾಲನೆಯಲ್ಲಿರಬೇಕೆಂಬ ಮಹತ್ವಾಕಾಂಕ್ಷಿ ಗುರಿ ಇಟ್ಟುಕೊಂಡಿದೆ. ಈಗಾಗಲೇ ಕೆಲ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಅಸಕ್ತಿ ವಹಿಸುತ್ತಿವೆ. ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ಪವರ್ ಸ್ಟೇಷನ್ ಗಳನ್ನು ನಿರ್ಮಿಸಲಾಗುತ್ತಿದೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ಸಹ ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳುತ್ತಿದ್ದು, ಮುಂದಿನ ದಿನಗಳಲ್ಲಿ ಸುಜುಕಿ ಕಂಪೆನಿಯಿಂದ ಎಲೆಕ್ಟ್ರಿಕ್ ವಾಹನಗಳನ್ನು ನಿರೀಕ್ಷಿಸಬಹುದಾಗಿದೆ.
ದೇಶದಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಡೀಸೆಲ್ ಕಾರುಗಳನ್ನ ನಿಷೇಧಿಸುವ ಕುರಿತು ಚರ್ಚೆಗಳು ಹುಟ್ಟಿಕೊಂಡಿತ್ತು. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ದೊಡ್ಡ ಹೊಗೆ ಮೂಲಕ ಮಾಲಿನ್ಯ ಸೃಷ್ಟಿಯಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕಾರ್ಬನ್ ಮಟ್ಟ ತಗ್ಗಿಸಿ ವಾಯು ಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರವು 'ಭಾರತ್ ಸ್ಟೇಜ್…' ಮಾಲಿನ್ಯ ನಿಯಮಾವಳಿಗಳನ್ನು ರೂಪಿಸಿದೆ. ಸದ್ಯ ಬಿಎಸ್ -4 ಜಾರಿಯಲ್ಲಿದೆ. ಬಿಎಸ್-5 ಬದಲು ನೇರವಾಗಿ ಬಿಎಸ್-6 ಗುಣಮಟ್ಟದ ವಾಹನಗಳ ಮಾರಾಟ ವ್ಯವಸ್ಥೆಯನ್ನು 2020ರ ವೇಳೆಗೆ ಪರಿಚಯಿಸಲಾಗುತ್ತಿದೆ. ಈ ಬಗ್ಗೆ 2016ರಲ್ಲಿಯೇ ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿತ್ತು. ಬಿಎಸ್-6 ನಿಯಮಗಳಿಗೆ ತಕ್ಕಂತ ವಾಹನಗಳನ್ನಷ್ಟೇ ಕಂಪನಿಗಳು ತಯಾರಿಸಬೇಕಾಗಿದೆ.
2020ರ ಏ.1ರಿಂದ ದೇಶಾದ್ಯಂತ ಭಾರತ್ ಸ್ಟೆಜ್ 4(ಬಿಎಸ್-4) ವಾಹನಗಳನ್ನು ಮಾರಾಟ ಹಾಗೂ ನೋಂದಣಿ ಮಾಡದಂತೆ ಸುಪ್ರಿಂ ಕೋರ್ಟ್ ಆದೇಶಿಸಿತ್ತು. ಬಿಎಸ್-4 ವಾಹನಗಳ ಮಾರಾಟಕ್ಕೆ 2020ರ ಮಾರ್ಚ್ 31ರ ನಂತರವೂ ಅವಕಾಶ ನೀಡಬೇಕೆಂದು ವಾಹನ ಕಂಪನಿಗಳು ಮಾಡಿದ್ದ ಮನವಿಯನ್ನು ಕೋರ್ಟ್ ತಳ್ಳಿ ಹಾಕಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos