2014

ಅತ್ತಿ ಹಣ್ಣು ಮತ್ತು ಕಣಜ: ನಿರ್ದೇಶಕ ಪ್ರಕಾಶ್ ಬಾಬು ಅವರಿಗೆ ಸಿನೆಮಾ ಅಂದ್ರೆ ಕಾವ್ಯ

Guruprasad Narayana

ಬೆಂಗಳೂರು: ಎಂ ಎಸ್ ಪ್ರಕಾಶ್ ಬಾಬು ನಿರ್ದೇಶನದ "ಅತ್ತಿ ಹಣ್ಣು ಮತ್ತು ಕಣಜ" ಚಲನಚಿತ್ರ, ಡಿಸೆಂಬರ್ ೪ ರಿಂದ ೧೧ರವರೆಗೆ ನಡೆಯುವ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಹಿಂದೆ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಲನಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು.

ಮೂಲತಃ ಕಲಾವಿದನಾಗಿರುವ ಎಂ ಎಸ್ ಪ್ರಕಾಶ್ ಬಾಬು ಅವರಿಗೆ ಸಿನೆಮಾ ಎಂದರೆ ಕಾವ್ಯ. "ಸಿನೆಮಾ ಕಥೆ ಹೇಳಬೇಕಿಲ್ಲ, ಅಥವಾ ಸಾಹಿತ್ಯ ಕೃತಿಯನ್ನು ಅಳವಡಿಸಿಕೊಳ್ಳಬೇಕಿಲ್ಲ. ಸಿನೆಮಾ ದೃಶ್ಯ ಕಾವ್ಯ. ಸಿನೆಮಾಗೆ ಸಂಗೀತದ ಅವಶ್ಯಕತೆ ಇಲ್ಲ. ಸಿನೆಮಾನೆ ಸಂಗೀತ. ಸಿನೆಮಾ ಸಾಹಿತ್ಯದ ನೆಲೆಯಿಂದ, ಕಥೆ ಹೇಳುವುದರಿಂದ ಆಚೆಗೆ ಜಿಗಿಯಬೇಕು. ಸಿನೆಮಾದಲ್ಲಿ ಘೋಷಣೆಗಳ ಅವಶ್ಯಕತೆ ಇಲ್ಲ. ನಿಜ ಘಟನೆಗಳಷ್ಟೇ ಸಿನೆಮಾ ಅಲ್ಲ. ಸಿನೆಮಾದಲ್ಲಿ ಮೌನ ಮುಖ್ಯ ಆಗುತ್ತೆ. ಅಲ್ಲಮ ಹೇಳುವಂತೆ ಅನುಭವದಿಂದ ಅನುಭಾವಕ್ಕೆ ಸಿನೆಮಾ ಕರೆದೊಯ್ಯಬೇಕು" ಹೀಗೆ ಸಿನೆಮಾದ ಬಗ್ಗೆ ತೀವ್ರ ಪ್ಯಾಶನ್ ನಿಂದ ಪ್ರಕಾಶ್ ಬಾಬು ಹೇಳುತ್ತಾರೆ.

ನಿರ್ದೇಶಕರಾದ ಅಂದ್ರಿ ಟಾರ್ಕೋವಸ್ಕಿ, ಯಾಸುಜಿರೋ ಓಝು ಹಾಗು ರಾಬರ್ಟ್ ಬ್ರೆಸ್ಸೋ ಇವರುಗಳನ್ನು ಬಹಳ ಇಷ್ಟ ಪಡುವ ಎಂ ಎಸ್ ಪ್ರಕಾಶ್ ಬಾಬು ಕುಸಿಯುತ್ತಿರುವ ವಿಮರ್ಶೆಯ ಗುಣಮಟ್ಟದ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾರೆ. "ಸಿನೆಮಾದ ಒಳಹೊಕ್ಕು ದೃಷ್ಯ ಮಾಧ್ಯಮದ ನಿಜ ವಿಮರ್ಶೆ ಮಾಡುತ್ತಿದ್ದ ಟಿ ಜಿ ವೈದ್ಯನಾಥನ್ ಅಂತಹ ವಿಮರ್ಶಕರು ಇಂದು ಕಾಣ ಸಿಗುವುದು ಅಪರೂಪ" ಎನ್ನುತ್ತಾರೆ.

"ಈ ಹಿಂದೆ ಸಂಸ್ಕಾರದಂಥ ಸಿನೆಮಾ ಕೂಡ ಚಿತ್ರಮಂದಿರಗಳಲ್ಲಿ ೧೦೦ ದಿನ ಓಡುತ್ತಿತ್ತು. ಆದರೆ ಜನರ ಇಂದಿನ ಮನಸ್ಥಿತಿ ಹಾಗಿಲ್ಲ ಆದುದರಿಂದ ನಮಗೆ ಸಿನೆಮಾಗಳನ್ನು ಪ್ರದರ್ಶಿಸಲು ಇಂತಹ ಚಲನಚಿತ್ರೋತ್ಸವಗಳೆ ಮುಖ್ಯ" ಎನ್ನುತ್ತಾರೆ ಪ್ರಕಾಶ್.

ಭವಾನಿ ಪ್ರಕಾಶ್, ರಂಜಿತ್ ಭಾಸ್ಕರನ್, ಮಂಜುನಾಥ್ ಬೆಳಕೆರೆ, ಅಚ್ಯುತ್ ಕುಮಾರ್ ಇವರೆಲ್ಲ ಈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ.

SCROLL FOR NEXT