ಬೆಂಗಳೂರು: ಮಂಜುನಾಥ್ ಎಸ್ (ಮಂಸೋರೆ) ನಿರ್ದೇಶನದ 'ಹರಿವು' ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧರಿಸಿದ ಸಿನಿಮಾ. ಸಿನಿಮೋತ್ಸವದಲ್ಲಿ ಇಂದು ಬೆಳಗ್ಗೆ 10.30ಕ್ಕೆ ಪ್ರಸ್ತುತ ಚಿತ್ರ ಪ್ರದರ್ಶನಗೊಳ್ಳಲಿದೆ.
ಕಥಾಹಂದರ: ಮಗನ ಶಸ್ತ್ರಚಿಕಿತ್ಸೆಗಾಗಿ ಹಳ್ಳಿಯಿಂದ ಬರುವ ತಂದೆ. ಬೆಂಗಳೂರಲ್ಲಿ ಆತ ತನ್ನ ಮಗನನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕತೆ ಒಂದೆಡೆಯಾದರೆ, ಬೆಂಗಳೂರಿನ ಬ್ಯುಸಿ ಲೈಫ್‌ನಲ್ಲಿ ಕಳೆದುಹೋಗಿ, ಕೆಲಸದ ಒತ್ತಡದಲ್ಲಿ ಸಿಲುಕಿ ತನ್ನ ತಂದೆಯ ಬಗ್ಗೆ ಚಿಂತಿಸಲೂ ಸಮಯವಿಲ್ಲದ ಮಗ ಇನ್ನೊಂದೆಡೆ.
ಆಸ್ಪತ್ರೆಯಲ್ಲಿರುವ ಅಪ್ಪ ತನ್ನ ಮಗನೊಂದಿಗೆ ಮಾತನಾಡಬೇಕು, ಅವನೊಂದಿಗೆ ಸಮಯ ಕಳೆಯಬೇಕೆಂದು ಬಯಸುತ್ತಿದ್ದರೆ, ಮಗ ತನ್ನ ಕೆಲಸದ ಒತ್ತಡದಲ್ಲಿ ಯಾಂತ್ರಿಕ ಜೀವನ ಸಾಗಿಸುತ್ತಿರುತ್ತಾನೆ.
ಇತ್ತ ಹಳ್ಳಿಯಿಂದ ಬಂದ ಅಪ್ಪ ಮಗನ ಶಸ್ತ್ರ ಚಿಕಿತ್ಸೆಗಾಗಿ ಎಲ್ಲವನ್ನೂ ಮಾರಿ ಬೆಂಗಳೂರಿಗೆ ಬಂದು ಮಗನ ಜೀವ ಉಳಿಸಲು ಹರಸಾಹಸ ಪಡುತ್ತಾನೆ. ಕೊನೆಗೆ ಮಗನ ಶವವನ್ನು ಊರಿಗೆ ಸಾಗಿಸಲು ಕೂಡಾ ಕೈಯಲ್ಲಿ ದುಡ್ಡಿರುವುದಿಲ್ಲ. ಮಗನನ್ನು ಕಳೆದುಕೊಂಡ ನೋವಿನೊಂದಿಗೆ ಭಾರವಾದ ಹೆಜ್ಜೆಯನ್ನಿಟ್ಟು, ಮಗನ ಶವವನ್ನು ಗುಟ್ಟಾಗಿ ತೆಗೆದುಕೊಂಡು ಹೋಗುವುದು...ನಿಜ ಬದುಕಿನ ಎರಡು ಕತೆಗಳು ಒಂದಕ್ಕೊಂದು ಮುಖಾಮುಖಿಯಾಗುತ್ತಾ...
ಕಾಲದ ಹೊಳೆಯಲ್ಲಿ ಶವಗಳಾ ಪಯಣ...
ಮನಸೀನ ಬೆಂಕೀಲಿ ಮೋಹದ ದಹನಾ...
ಹೀಗೆ ಸಾಗುತ್ತದೆ 'ಹರಿವು'.