ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: 2015ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಭಾರತದ ಆರ್ಥಿಕಕತೆ ಶೇ.8ರಷ್ಟು ಪ್ರಗತಿ ಕಾಣುವ ಸಾಧ್ಯತೆ ಇದೆ ಎಂದು ಶುಕ್ರವಾರ ಸಮೀಕ್ಷಾ ವರದಿ ಮಂಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಪ್ರಸಕ್ತ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಪ್ರಕಟಗೊಂಡಿದ್ದು, ದೇಶದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) 2016–17ನೇ ಸಾಲಿನಲ್ಲಿ ಶೇ 8.1 ರಿಂದ ಶೇ 8.5ರ ವರೆಗೆ ಪ್ರಗತಿ ಕಾಣಲಿದೆ ಎಂದು ತಿಳಿಸಿದ್ದಾರೆ.
2018-20ರ ವೇಳೆಗೆ ದೇಶವು ಎರಡಂಕಿ ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ ಎಂದು ಅಂದಾಜಿಸಲಾಗಿದ್ದು, 2013–14ನೇ ಸಾಲಿನಲ್ಲಿ ಇದು ಶೇ 6.9ರಷ್ಟಿದ್ದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 7.4ರಷ್ಟು ಏರಿಕೆ ಕಾಣುವ ನಿರೀಕ್ಷೆ ಇದೆ ಎಂದಿದ್ದಾರೆ.
ಕಚ್ಚಾ ತೈಲದ ಬೆಲೆ ಮತ್ತು ಹಣದುಬ್ಬರವೂ ಗಣನೀಯವಾಗಿ ಇಳಿಕೆಯಾಗಿರುವ ಹಿನ್ನಲೆಯಲ್ಲಿ ಬ್ಯಾಂಕ್‌ಗಳು ಬಡ್ಡಿ ದರ ತಗ್ಗಿಸುವ ಸಾಧ್ಯತೆ ಹೆಚ್ಚಿದ್ದು ಮಾರುಕಟ್ಟೆಗೆ ಹೆಚ್ಚಿನ ಬಂಡವಾಳ ಹರಿವು ನಿರೀಕ್ಷಿಸಲಾಗಿದೆ.
ಅಲ್ಲದೇ ಜಿಡಿಪಿ ಪ್ರಗತಿಗಾಗಿ ಮತ್ತು ರಫ್ತು ಉತ್ತೇಜನಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲು ಸಲಹೆ ನೀಡಲಾಗಿದ್ದು, ಹಣಕಾಸು ಮಾರುಕಟ್ಟೆ ಸ್ಥಿರತೆಗೆ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗವುದು ಎಂದು ಅವರು ಹೇಳಿದ್ದಾರೆ.
ಆರ್ಥಿಕ ಸಮೀಕ್ಷಾ ವರದಿಯ ಪ್ರಮುಖಾಂಶಗಳು....
- ಮುಂಬರುವ ವರ್ಷದಲ್ಲಿ ಶೇ.8ರಷ್ಟು ಆರ್ಥಿಕ ವೃದ್ಧಿ ನಿರೀಕ್ಷೆ
- ಆರ್ಥಿಕ ಬಲವರ್ಧನೆ ಸರ್ಕಾರ ಬದ್ಧ
- ಬಿಗ್ ಬ್ಯಾಂಗ್ ಸುಧಾರಣೆಗೆ ಅವಕಾಶ
- ದೇಶವು ಎರಡಂಕಿ ಪ್ರಗತಿ ಪಥದಲ್ಲಿ ಮುನ್ನಡೆಯಲಿದೆ
- ಕಚ್ಚಾ ತೈಲದ ಬೆಲೆ ತಗ್ಗಿದೆ
- ಹಣದುಬ್ಬರವೂ ಗಣನೀಯವಾಗಿ ಇಳಿಕೆಯಾಗಿದೆ
- 2015–16ನೇ ಸಾಲಿನಲ್ಲಿ ಸಹಜ ಮುಂಗಾರು ಲಭಿಸಿದರೆ ಉತ್ತಮ ಆರ್ಥಿಕ ವೃದ್ಧಿ ದರ ನಿರೀಕ್ಷೆ
- ಬ್ಯಾಂಕ್ ಬಡ್ಡಿ ದರ ಕಡಿತ ಸಾಧ್ಯತೆ ಹೆಚ್ಚಳ
- ಏಪ್ರಿಲ್–ಜನವರಿ ಅವಧಿಯಲ್ಲಿ ಆಹಾರ ಸಬ್ಸಿಡಿ ಮೊತ್ತದಲ್ಲಿ ಶೇ 20 ರಷ್ಟು ಹೆಚ್ಚಳ. 1.08 ಲಕ್ಷ ಕೋಟಿಗೆ ಏರಿಕೆ
- 2015–16ನೇ ಸಾಲಿನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರ ಶೇ 5 ರಿಂದ ಶೇ 5.5ರ ಒಳಗೆ ಸ್ಥಿರಗೊಳ್ಳುವ ಅಂದಾಜು
- 2013–14ರಲ್ಲಿ ರೂ 1.39 ಲಕ್ಷ ಕೋಟಿಯಷ್ಟಿದ್ದ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ನಷ್ಟ 2014–15ರಲ್ಲಿ ರೂ 74,664 ಕೋಟಿಗೆ ಇಳಿಕೆ
- ರೈಲ್ವೆ ಕಾರ್ಯವಿಧಾನದಲ್ಲಿ ಬದಲಾವಣೆ. ಸರಕು ಸಾಗಣೆ ಸೇರಿದಂತೆ ವಾಣಿಜ್ಯ ವ್ಯವಹಾರಗಳಲ್ಲಿ ತಂತ್ರಜ್ಞಾನ ಅಳವಡಿಕೆ
- ಜನ್ ಧನ್ ಯೋಜನಾ, ಆಧಾರ್ ಮೂಲಕ ಬಡವರಿಗೆ ಸೋರಿಕೆ ಇಲ್ಲದೆ ಹಣ ವರ್ಗಾವಣೆ
- ಹೂಡಿಕೆಗಾಗಿ ಮಾತ್ರ ಸಾಲ ಪಡೆಯಲು ಸಲಹೆ
- ಏಪ್ರಿಲ್–ಜನವರಿ ಅವಧಿಯಲ್ಲಿ ಆಹಾರ ಸಬ್ಸಿಡಿ ಮೊತ್ತದಲ್ಲಿ ಶೇ 20 ರಷ್ಟು ಹೆಚ್ಚಳ. 1.08 ಲಕ್ಷ ಕೋಟಿಗೆ ಏರಿಕೆ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos