ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ಎನ್‌ಡಿಎ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತಿದ್ದು, ಸರ್ಕಾರ ನೀಡುತ್ತಿರುವ ಸಬ್ಸಿಡಿಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಗ್ಯಾಸ್, ದಿನಬಳಕೆ ಆಹಾರ ಧಾನ್ಯಗಳಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಸಬ್ಸಿಡಿ ವ್ಯವಸ್ಥಿತವಾದಷ್ಟೂ ಜನ ಜೀವನ ಸುಧಾರಿಸುತ್ತದೆ. ಆದರೆ ಸಬ್ಸಿಡಿಯಲ್ಲಿ ಆಗುತ್ತಿರುವ ನಿರಂತರ ಕಾನೂನು ಬಾಹಿರ ಸೋರಿಕೆಯನ್ನು ತಡೆಯಲು ಮಾತ್ರ ಕೇಂದ್ರ ಸರ್ಕಾರ ಬದ್ಧವಾಗಿದೆ. ಸಬ್ಸಿಡಿಗಳಲ್ಲಿ ಆಗುತ್ತಿರುವ ಸೋರಿಕೆಯನ್ನಷ್ಟೇ ನಾವು ಸರಿಪಡಿಸಲು ಬಯಸಿದ್ದೇವೆಯೇ ಹೊರತು ಸಬ್ಸಿಡಿಗಳನ್ನೇ ತೆಗೆಯುವ ಯೋಚನೆ ಸರ್ಕಾರದ ಮುಂದಿಲ್ಲ.
ಇನ್ನು ಲೋಕಸಭಾ ಸದಸ್ಯರು ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಪಡೆಯುವಂತೆ ನಾವು ಮನವಿ ಮಾಡುತ್ತೇವೆ. ಎಲ್.ಪಿ.ಜಿ. ಸಬ್ಸಿಡಿ ಹಣದ ನೇರ ವರ್ಗಾವಣೆ (ಪಹಲ್) ಯನ್ನು ದೇಶಾದ್ಯಂತ್ಯ ವಿಸ್ತರಿಸಲಾಗುವುದು ಎಂದು ಜೇಟ್ಲಿ ಹೇಳಿದರು.
ಈ ಹಿಂದೆ ಕೇಂದ್ರ ಸರ್ಕಾರ ಪೆಹಲ್ ಯೋಜನೆಯನ್ನು ಜಾರಿಗೆ ತಂದಾಗ ವಿಪಕ್ಷಗಳು ಸಬ್ಸಿಡಿಯನ್ನು ರದ್ದುಗೊಳಿಸಲೆಂದೇ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಟೀಕಿಸಿದ್ದರು. ಅಲ್ಲದೇ ದೇಶಾದ್ಯಂತ ಇದೇ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಎಲ್ಲ ಊಹಾಪೊಹಗಳಿಗೆ ತೆರೆ ಎಳೆದಿದ್ದಾರೆ.