ಉದ್ಯೋಗಗಳ ಉಜ್ವಲ `ಭವಿಷ್ಯ'ಕ್ಕೆ `ಆಯ್ಕೆ' ನೀಡಲಾಗಿದೆ. ಉದ್ಯೋಗ ಭವಿಷ್ಯ ನಿಧಿ (ಇಪಿಎಫ್) ಹಾಗೂ ಇಎಸ್ಐ ಅಡಿ ನೀಡಲಾಗುತ್ತಿದ್ದ ಸೌಲಭ್ಯಕ್ಕೆ ಒತ್ತು ನೀಡಲು ಹಾಗೂ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೊಂಚ ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ. ಇದುವರೆಗೂ ಇದ್ದ ಇಪಿಎಫ್ ಜತೆಗೆ ಎನ್ಪಿಎಸ್ (ನ್ಯೂ ಪೆನ್ಷನ್ ಸ್ಕೀಂ) ಜಾರಿಗೆ ಬರಲಿದೆ.
ಉದ್ಯೋಗಿ ಇಪಿಎಫ್ ಅಥವಾ ಎನ್ ಪಿಎಸ್ ನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಗದಿತ ಮಾಸಿಕ ಸಂಬಳಕ್ಕಿಂತ ಕಡಿಮೆ ಇರುವ ಉದ್ಯೋಗಿ ಇಪಿಎಫ್ ಗೆ ತನ್ನ ಪಾಲಿನ ಹಣ ಪಾವತಿಸಬೇಕೆಂದೇನೂ ಕಡ್ಡಾಯವಿಲ್ಲ. ಆದರೆ, ಉದ್ಯೋಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿ ಮÁತ್ರ ತನ್ನ ಪಾಲಿನ ಇಪಿಎಫ್ ವಂತಿಗೆಯನ್ನು ನಿಯಮಿತವಾಗಿ ನೀಡಲೇಬೇಕು.
ಇನ್ನು ಇದುವರೆಗೆ ಇದ್ದ ಇಎಸ್ಐ ಜತೆಗೆ ಆರೋಗ್ಯ ವಿಮೆ ಸೌಲಭ್ಯದ ಆಯ್ಕೆ ನೀಡಲಾಗಿದೆ. ನಿಗದಿತ ಸಂಬಳ ಪಡೆಯುತ್ತಿದ್ದ ಉದ್ಯೋಗಿ ಪಡೆಯುವ ಇಎಸ್ಐ ಸೇವೆ ಬೇಡ ಎಂದಾದಲ್ಲಿ ಆರೋಗ್ಯ ವಿಮೆ ಆಯ್ಕೆ ಮಾಡಿಕೊಳ್ಳಬಹುದು. ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎ)ದಿಂದ ಮಾನ್ಯತೆ ಪಡೆದ ಆರೋಗ್ಯ ವಿಮೆ ಕಂಪನಿಗಳಿಂದ ಮಾತ್ರ ಸೇವೆ ಪಡೆಯಬಹುದು. ಈ ಕುರಿತು ಆರೋಗ್ಯ ವಿಮೆ ಕ್ಷೇತ್ರದ ಪ್ರಮುಖರ ಜತೆ ಮಾತುಕತೆ ನಡೆಸಿ ಕಾನೂನಿಗೆ ತಿದ್ದುಪಡಿ ಮಾಡಿದ ಬಳಿಕ ಈ ಸೇವೆ ಲಭ್ಯವಾಗಲಿದೆ.
ಜನಧನ ಜತೆಗೆ ಜನ ಸುರಕ್ಷಾ
ಸಾರ್ವಜನಿಕರಿಗೆ ಬ್ಯಾಂಕ್ ವ್ಯವಹಾರದ ಜ್ಞಾನ ಬೆಳೆಸುವುದರ ಜತೆಗೆ ಹಣ ಸಂಗ್ರಹಣೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನ್ಧನ್ ಯೋಜನೆಗೆ ಈಗ `ಜನ ಸುರಕ್ಷಾ ಯೋಜನೆ' ಲೇಪನ ಹಚ್ಚಲಾಗಿದೆ. ಬಡ, ಮಧ್ಯಮ ಹಾಗೂ ನಿವೃತ್ತಿ ವೇತನ ಇಲ್ಲದ ಜನತೆಗೆ ಇದು ಆಧಾರವಾಗಲಿದ್ದು, ಆರೋಗ್ಯ ಹಾಗೂ ಅಪಘಾತ ವಿಮೆ ಸೌಲಭ್ಯ ನೀಡಲಿದೆ. ಭವಿಷ್ಯದ ಬಗ್ಗೆ ಚಿಂತೆಯಲ್ಲಿ ಬಡವರು ಹಾಗೂ ನಿವೃತ್ತಿ ವೇತನ ಇಲ್ಲದವರಿಗೆ ಇದು ಬಹು ದೊಡ್ಡ ಆಶಾಕಿರಣ.