ವೈಯಕ್ತಿಕ ಆದಾಯ ತೆರಿಗೆ ಮೇಲೆ ಯಾವುದೇ ಬದಲಾವಣೆಯನ್ನೂ ಮಾಡುವ ಉಸಾಬರಿಗೆ ಹೋಗಿಲ್ಲ. ಹಾಗೆಯೇ ಸಂಸ್ಥೆಗಳ ಮೇಲೆ ವಿಧಿಸಲಾಗಿರುವ ತೆರಿಗೆಯಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮೇಲ್ತೆರಿಗೆಗೆ ಗಾಳ ಹಾಕಿರುವ ಕೇಂದ್ರ, ಹೆಚ್ಚುವರಿ ಆದಾಯ ಹೊಂದುವ ಕುಟುಂಬಗಳು, ಸಂಸ್ಥೆಗಳ ಮೇಲೆ ಕಣ್ಣಿಟ್ಟಿದೆ. ಈ ಮೂಲಕ ಬೊಕ್ಕಸಕ್ಕೆ ಕಿರುಕಾಣಿಕೆ ಪಡೆಯಲು ಕೈಹಾಕಿದೆ. ಹಿಂದೂ ಅವಿಭಕ್ತ ಕುಟುಂಬ, ವ್ಯಕ್ತಿಗಳ ಒಕ್ಕೂಟ (ಎಒಪಿ), ವೈಯುಕ್ತಿಕ ಒಕ್ಕೂಟ (ಬಿಒಐ), ಸಹಕಾರ ಸಂಘಗಳು, ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ಮಂಡಳಿಗಳ ಮೇಲೆ ಶೇ. 12ರಷ್ಟು ಮೇಲ್ತೆರಿಗೆ ವಿಧಿಸಲಾಗಿದೆ. ಈ ಮೇಲ್ತೆರಿಗೆ ವಿಧಿಸಬೇಕಾದರೆ ನಿಮ್ಮ ಆದಾಯ ರು.1 ಕೋಟಿಯಿಂದ ರು. 10 ಕೋಟಿವರೆಗೆ ಇರಬೇಕು. ಹೀಗೆ ಮೀರಿದ್ದರೆ ಮಾತ್ರ ಶೇ. 12ರಷ್ಟು ಹೆಚ್ಚುವರಿ ತೆರಿಗೆಯನ್ನು ಪಾವತಿಸಬೇಕು. ಈ ಮೊದಲು ಶೇ. 7ರಷ್ಟುಹೆಚ್ಚುವರಿ ತೆರಿಗೆ ವಿಧಿಸಲಾಗುತ್ತಿತ್ತು. ಮೇಲ್ತೆರಿಗೆ ಹೆಚ್ಚಿತು ಈ ಬಾರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ದೃಷ್ಟಿಯಿಂದ ಶೇ.2ರಷ್ಟು ಶಿಕ್ಷಣ ಸೆಸ್ ಅನ್ನು ಈಗಾಗಲೇ ವಿಧಿಸಲಾಗುತ್ತಿದೆ. ಇದೀಗ ಮಧ್ಯಮ ಮತ್ತು ಉನ್ನತ ಶಿಕ್ಷಣದ ಹೆಸರಿನಲ್ಲಿ ಮತ್ತೆ ಹೆಚ್ಚು ವರಿಯಾಗಿ ಶೇ. 1ರಷ್ಟು ಸೆಸ್ ಅನ್ನು ನಿಗದಿಪಡಿಸ ಲಾಗಿದೆ. ಇದು 2015-16ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದ್ದು, ಎಲ್ಲ ತೆರಿಗೆದಾರರಿಗೂ ಅನ್ವಯವಾಗಲಿದೆ. ಈ ನಿಟ್ಟಿನಲ್ಲಿ ಶಿಕ್ಷಣದ ಬಗ್ಗೆಯೂ ಹೆಚ್ಚಿನ ಒತ್ತು ನೀಡಲಾಗಿದೆ. ಹಾಗಂತ ಭಾರಿ ಸೆಸ್ ವಿಧಿಸದೆ ಶೇ. 1ರಷ್ಟನ್ನು ಮಾತ್ರ ವಿಧಿಸಲಾಗಿದೆ. ಈಗಾಗಲೇ ಹೆಚ್ಚುವರಿ ಪಾವತಿ ಮಾಡುತ್ತಿರುವ ಕಂಪನಿಗಳಿಗೆ ಈಮೊದಲು ಇದ್ದ ಶೇ. 10ರಷ್ಟು ಮೇಲ್ತೆರಿಗೆಯನ್ನು ಶೇ. 12ಕ್ಕೆ ಏರಿಸಲಾಗಿದೆ. ಇದು ಕಂಪನಿಗಳು ತಮ್ಮ ಲಾಭಾಂಶ ಹಂಚಿಕೆ, ಶೇರುಗಳ ಮರು ಖರೀದಿ, ಮ್ಯೂಚ್ಯುವಲ್ ಫಂಡ್ ಗಳಮೂಲಕ ಆದಾಯ ಹಂಚಿಕೆ ಮಾಡುವುದಕ್ಕೆ ಈ ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಗುತ್ತದೆ. ಕಾರಣ, ಇಂದು ಹೂಡಿಕೆ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಹಣ ಹರಿವು ಇದೆ. ಹೀಗಾಗಿ ಇವುಗಳ ಮೇಲೆ ಈಗಿರುವ ಮೇಲ್ತೆರಿಗೆಗಿಂತ ಶೇ. 2ರಷ್ಟು ಹೆಚ್ಚಿಸಿದರೂ ಸಹ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ಹರಿದುಬರುತ್ತದೆ. ಇದೂ ಸಹ ತನ್ನ ಆದಾಯ ಮೂಲದಲ್ಲೊಂದಾಗಿದೆ.