ಬೆಂಗಳೂರು: ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ, ಒಂದಷ್ಟು ಆರ್ಥಿಕ ಶಿಸ್ತು ಪಾಲಿಸುವ ದಿಶೆ ಯಲ್ಲಿ ಸಾಗಬೇಕಿದೆ. ಇದರ ಜತೆಗೆ ಇತ್ತೀಚೆಗೆ ವೈಯಕ್ತಿಕವಾಗಿ ಕಳೆಗುಂದಿರುವ ತಮ್ಮ ಇಮೇಜ್ ವೃದ್ಧಿಸಿಕೊಳ್ಳುವ ತುರ್ತು ಇದೆ. ಈ ಎಲ್ಲ ಅಂಶಗಳನ್ನು ಮನದಲ್ಲಿಟ್ಟು ಕೊಂಡು ಮುಖ್ಯಮಂತ್ರಿಯಾಗಿ ನಾಲ್ಕನೆಯ ಹಾಗೂ ಒಟ್ಟಾರೆ 11ನೇ ಬಾರಿಗೆ ಮುಂಗಡ ಪತ್ರವನ್ನು ಶುಕ್ರವಾರ ಬೆಳಗ್ಗೆ 11.30ಕ್ಕೆ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.
ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಕಳೆದ ನಾಲ್ಕು ಬಾರಿ ಅಹಿಂದ, ಕೃಷಿ, ಗ್ರಾಮೀಣ ಭಾಗಗಳಿಗಿದ್ದ ಆದ್ಯತೆಯನ್ನು ತುಸು ಬದಲಾಯಿಸಿ ಅಭಿವೃದ್ಧಿ ಮಂತ್ರ ಪಠಿಸುವರೇ ಎಂಬ ಕುತೂಹಲ ಇದೆ. ಜತೆಗೆ, ಕಳೆದ ಒಂದು ವರ್ಷದಲ್ಲಿ 1,200ಕ್ಕೂ ಹೆಚ್ಚು ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರೈತರಿಗೆ ಸಾಂತ್ವನ ನೀಡುವಂತಹ ಮಹತ್ವದ ನಿರ್ಧಾರಗಳು ಹೊರಬೀಳಲಿವೆಯೇ ಎಂಬ ನಿರೀಕ್ಷೆಯ ಹೂಟೆಯೂ ಇದೆ.
ಇನ್‌ವೆಸ್ಟ್ ಕರ್ನಾಟಕ ನಡೆದು ಒಂದು ತಿಂಗಳ ಅಂತರದಲ್ಲಿ ಮಂಡನೆಯಾಗುತ್ತಿರುವ ಸುಮಾರು ಒಂದೂವರೆ ಲಕ್ಷ ಕೋಟಿ ರೂ. ಗಾತ್ರದ 2016-17ನೇ ಸಾಲಿನ ಮುಂಗಡಪತ್ರದಲ್ಲಿ ಕೈಗಾರಿಕಾ ಸ್ನೇಹಿ, ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ, ಅದಕ್ಕಾಗಿ ಕೌಶಲಾಭಿವೃದ್ಧಿ ಸಹಿತ ಹಲವು ವಲಯಗಳಿಗೆ ಒತ್ತು ನೀಡುವ ನಿರೀಕ್ಷೆ ಇದೆ.
ರಾಹುಕಾಲದಲ್ಲಿ ಬಜೆಟ್ ಮಂಡನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಹುಕಾಲದಲ್ಲಿ ಬಜೆಟ್ ಮಂಡಿಸಲಿದ್ದಾರೆ. ನಿಗದಿಯಂತೆ ಬಜೆಟ್ ಬೆಳಗ್ಗೆ 11.30 ಕ್ಕೆ ಮಂಡನೆಯಾಗಬೇಕು. ಇಂದು ಬೆಳಗ್ಗೆ 10.56 ರಿಂದ ಮಧ್ಯಾಹ್ನ 12.27 ನಡುವೆ ರಾಹುಕಾಲವಿದೆ. ಈ ಸಮಯದಲ್ಲೇ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದು ಮೂಢನಂಬಿಕೆ ಎಲ್ಲಾ ಬರಿ ಸುಳ್ಳು ಎಂಬ ಸಂದೇಶ ಸಾರಲಿದ್ದಾರೆ ಎನ್ನಲಾಗುತ್ತಿದೆ.
ಕೆಲವು ಜ್ಯೋತಿಷಿಗಳು ವಾಸ್ತು, ದೈವಭಕ್ತಿ ಅನ್ನುವ ಹೆಸರಲ್ಲಿ ನನಗೆ ಸಂದೇಶ ನೀಡಲು ಬಂದಿದ್ದರು. ಆದರೆ ನಾನು ಇದಕ್ಕೆಲ್ಲಾ ಕಿವಿಗೊಡಲಿಲ್ಲ ಎಂದಿದ್ದರು. ಸಿದ್ದು ಹೇಳಿದಂತೆ ರಾಹುಕಾಲದಲ್ಲೇ ಬಜೆಟ್ ಮಂಡಿಸಿದರೆ ಅವರ ಮಾತಿಗೆ ಬೆಲೆ ಸಿಕ್ಕಂತೆ ಆಗಲಿದೆ.