ಬೆಂಗಳೂರು:ಹದಿನಾರು ಪ್ರವಾಸಿ ಕೇಂದ್ರಗಳನ್ನು ವಿಶ್ವದರ್ಜೆ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ದಿಪಡಿಸುವುದು, ಮೈಸೂರಿನಲ್ಲಿ ಏರೋ ಸ್ಪೋಟ್ರ್ಸ್ ಕ್ಲಬ್ ನಿರ್ಮಾಣದ ಗುರಿ, ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆಗೆ ಒಟ್ಟಾರೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 572 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
2017-18ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಉತ್ತರ ಕರ್ನಾಟಕದ ಐತಿಹಾಸಿಕ ತಾಣಗಳಾದ ಲಕ್ಕುಂಡಿ, ಹಂಪಿ, ಬಾದಾಮಿ, ಪಟ್ಟದ ಕಲ್ಲು , ಐಹೊಳೆ, ಬನವಾಸಿ, ಮುಂತಾದ ಸ್ಥಳಗಳನ್ನು ಪುನಶ್ಚೇತನಗೊಳಿಸಿ ಆಕರ್ಷಿತಗೊಳಿಸಲು ಕಾರವಾರದಿಂದ ವಿಜಯಪುರದವರೆಗೆ ಹಾಗೂ ಬೆಳಗಾವಿಯಿಂದ ಬಳ್ಳಾರಿವರೆಗೆ ಮತ್ತು ಬೀದರ್‍ನಿಂದ ಕೊಪ್ಪಳದವರೆಗೆ ಬೆಳ್ಳಿ ಶೃಂಗವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ಪ್ರವಾಸೋದ್ಯಮ ಮತ್ತು ಚಾರಣ ರಥಗಳನ್ನು ಜನಪ್ರಿಯಗೊಳಿಸಲು ನಿರ್ಜನ ಕಾಡು ಪ್ರದೇಶ, ವನ್ಯಜೀವಿಯನ್ನು ಅನ್ವೇಷಿಸಲು 2017ನ್ನು ವನ್ಯಜೀವಿ ವರ್ಷ ಎಂದು ಘೋಷಿಸಲಾಗಿದೆ ಎಂದು ಹೇಳಿದರು.
ಹೊಟೇಲ್ ಉದ್ಯಮದಲ್ಲಿ ಪರಿಣಿತ ಮಾನವ ಸಂಪನ್ಮೂಲವನ್ನು ಹೆಚ್ಚಿಸಲು 5 ಕೋಟಿ ವೆಚ್ಚದ ಕಾರ್ಯಕ್ರಮ ರೂಪಿಸಲಾಗಿದೆ. ಕರಾವಳಿ ತೀರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಾರ್ಷಿಕ ಸರ್ಫಿಂಗ್ ಉತ್ಸವ ಏರ್ಪಡಿಸಲಾಗುವುದು ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ದಿಗೆ 385 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.