ಬೆಂಗಳೂರು: 2017-18 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ರೈಲು ಸುರಕ್ಷತೆ ಹಾಗೂ ರೈಲು ಮಾರ್ಗಗಳ ವಿದ್ಯುದೀಕರಣದಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಅನುದಾನ ಘೋಷಿಸಲಾಗಿದೆ.
ದಕ್ಷಿಣ ರೈಲ್ವೆ ವಲಯಕ್ಕೆ ಬಜೆಟ್ ನಲ್ಲಿ ಘೋಷಿಸಲಾಗಿರುವ ಅಂಶಗಳ ಬಗ್ಗೆ ಫೆ.3 ರಂದು ಸಂಸತ್ ನಲ್ಲಿ ಬಿಡುಗಡೆಯಾಗಿರುವ ಪಿಂಕ್ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದ್ದು, ರಾಷ್ಟ್ರೀಯ ರೈಲು ಸಂರಕ್ಷ ಕೋಶದ ಅಡಿಯಲ್ಲಿ ಒಟ್ಟಾರೆ ಘೋಷಿಸಲಾಗಿರುವ 3,174 ಕೋಟಿ ರೂಪಾಯಿಯ ಪೈಕಿ, ಕರ್ನಾಟಕಕ್ಕೆ 724.26 ಕೋಟಿ ರೂಪಾಯಿಗಳ ಅನುದಾನ ಘೋಷಿಸಲಾಗಿದೆ.
2016-17 ರ ರೈಲ್ವೆ ಬಜೆಟ್ ನಲ್ಲಿ ರೈಲು ಸುರಕ್ಷತೆಗೆ 445.15 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿತ್ತು. ಈ ಬಾರಿಯ ಬಜೆಟ್ ನಲ್ಲಿ ಬೆಂಗಳೂರು-ಮೈಸೂರು ಮಾರ್ಗಕ್ಕೆ ಹೊಸ ರೈಲು ಘೋಷಣೆಯಾಗುವ ನಿರೀಕ್ಷೆ ಇತ್ತಾದರೂ ಹೆಚ್ಚಿನ ರೈಲುಗಳನ್ನು ಘೋಷಣೆ ಮಾಡಲಾಗಿಲ್ಲ. ಆದರೆ ರೈಲುಗಳ ವೇಗವನ್ನು ಹೆಚ್ಚಿಸಲು ರೈಲು ಮಾರ್ಗಗಳನ್ನು ವಿದ್ಯುದೀಕರಣ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದ್ದು, 1,211.75 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ.
ಡೀಸೆಲ್ ರೈಲುಗಳು ವಿದ್ಯುತ್ ಚಾಲಿತ ರೈಲುಗಳಾಗಲಿದ್ದು, ರೈಲು ಸಂಚಾರದ ಕ್ಷಮತೆ ಹೆಚ್ಚಲಿದೆ ಎಂದು ದಕ್ಷಿಣ ವಲಯ ರೈಲ್ವೆ ಆಡಳಿತ ಮಂಡಳಿ ಅಧಿಕಾರಿ ಅಶೋಕ್ ಗುಪ್ತಾ ಹೇಳಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಗದಗ್-ಯಾಲ್ವಿಗಿ ಮಾರ್ಗಕ್ಕೆ 640 ಕೋಟಿ ರೂ ವೆಚ್ಚದಲ್ಲಿ ಹೊಸ ರೈಲ್ವೆ ಮಾರ್ಗ ಘೋಷಣೆಯಾಗಿದೆ.
ಜೋಡಿ ಹಳಿ ರೈಲು ಮಾರ್ಗಗಳನ್ನಾಗಿ ಪರಿವರ್ತಿಸುವುದಕ್ಕೆ ಒಟ್ಟು 1,629.6 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ಹೋಟ್ಗಿ-ಕೂಡ್ಗಿ-ಗದಗ್ ಮಾರ್ಗಕ್ಕೆ 344 ಕೋಟಿ ರೂಪಾಯಿ, ಹುಬ್ಬಳ್ಳಿ-ಚಿಕ್ಕಜಾಜೂರು ಮಾರ್ಗಕ್ಕೆ 200 ಕೋಟಿ ರೂಪಾಯಿ, ಅರಸಿಕೆರೆ-ತುಮಕೂರು ಗೆ 140 ಕೋಟಿ, ಯಲಹಂಕ ಪೆನುಕೊಂಡ ಮಾರ್ಗಕ್ಕೆ 120 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
ಬಾದಾಮಿ-ಯಲಬುರ್ಗ(53 ಕಿಮಿ) ಆಲಮಟ್ಟಿ-ಕೊಪ್ಪಳ(125 ಕಿಮೀ), ಧರ್ಮಾವರಂ-ಬಳ್ಳಾರಿ (120 ಕಿಮೀ) ಬೀದರ್-ನಾಂದೇಡ್(157 ಕಿಮೀ), ಸ್ವಾಮಿಹಳ್ಳಿ-ರಾಯದುರ್ಗಾ(45 ಕಿಮೀ) ಹಾಸನ ಬೇಲೂರು-ಚಿಕ್ಕಮಗಳೂರು-ಶೃಂಗೇರಿ-ಶಿವಮೊಗ್ಗ(150 ಕಿಮೀ) ಹಿಂದೂಪುರ-ಚಿತ್ರದುರ್ಗ(132 ಕಿಮೀ); ಚಳ್ಳಕೆರೆ-ಹಿರಿಯೂರು-ಹುಳಿಯಾರ್-ಚಿಕ್ಕನಾಯಕನಹಳ್ಳಿ-ತುರುವೆಕೆರೆ-ಚನ್ನರಾಯಪಟ್ಟಣ(200 ಕಿಮೀ) ತಲಸ್ಸೆರಿ-ಮೈಸೂರು(300 ಕಿಮೀ), ವೈಟ್ ಫೀಲ್ಡ್- ಬಂಗಾರಪೇಟೆ (47 ಕಿಮೀ) ಮಾರ್ಗದಲ್ಲಿ ಹೊಸ ರೈಲ್ವೆ ಮಾರ್ಗಗಳಿಗೆ ಸರ್ವೇ ನಡೆಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.