ಕೇಂದ್ರ ಬಜೆಟ್

ಸಂಸತ್ತು ಕಲಾಪ 'ಮಹಾ ಪಂಚಾಯತ್'ನಂತೆ, ಅದು ಸರಿಯಾಗಿ ಕೆಲಸ ಮಾಡಬೇಕು: ಪ್ರಧಾನಿ ಮೋದಿ

Sumana Upadhyaya
ನವದೆಹಲಿ: ಬಜೆಟ್ ಅಧಿವೇಶನ ಸುಗಮವಾಗಿ ಸಾಗಲು ಎಲ್ಲಾ ಪ್ರತಿಪಕ್ಷಗಳ ಸಹಕಾರ ಕೋರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅದು ಮಹಾಪಂಚಾಯತ್ ಆಗಿದ್ದು ಭಿನ್ನಾಭಿಪ್ರಾಯಗಳ ನಡುವೆಯೂ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಬಜೆಟ್ ಪೂರ್ವ ಸರ್ವಪಕ್ಷ ಸಭೆಯಲ್ಲಿ ಅವರು ಇಂದು ಮಾತನಾಡಿದರು. ನೋಟುಗಳ ಅಮಾನ್ಯತೆಯಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನ ಸಂಪೂರ್ಣ ಗದ್ದಲ, ಪ್ರತಿಭಟನೆಯಲ್ಲಿಯೇ ಕಳೆದುಹೋಯಿತು. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ಫಲಪ್ರದವಾಗಿ ಈ ಬಾರಿಯ ಅಧಿವೇಶನ ಸಾಗಲು ಪ್ರಧಾನಿ ಪ್ರತಿಪಕ್ಷಗಳ ಸಹಕಾರ ಕೋರಿದ್ದಾರೆ.
ಬಜೆಟ್ ನ್ನು ಪೂರ್ವ ನಿಗದಿಯಂತೆ ಫೆಬ್ರವರಿ 1ರಂದು ಮಂಡಿಸಲಾಗುತ್ತಿದೆ ಎಂದು ಹೇಳಿದ ಪ್ರಧಾನಿ, ಇದರಿಂದ ಮುಂಬರುವ 5 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಸಭೆಯಲ್ಲಿ ಪ್ರಧಾನ ಮಂತ್ರಿ ಎಲ್ಲಾ ಪಕ್ಷಗಳ ಸಹಕಾರ ಕೋರಿದ್ದಲ್ಲದೆ ಚುನಾವಣೆ ಸಂದರ್ಭದಲ್ಲಿ ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸಂಸತ್ತು ಮಹಾಪಂಚಾಯತ್ ಇದ್ದಂತೆ. ಅದು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಸಭೆಯಲ್ಲಿ ಹೇಳಿದ್ದಾರೆ. ಇದಕ್ಕೆ ಎಲ್ಲಾ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಐದು ರಾಜ್ಯಗಳ ಚುನಾವಣೆಗಳ ಮೇಲೆ ಪರಿಣಾಮ ಬೀರಲು ಕೇಂದ್ರ ಸರ್ಕಾರ ಚುನಾವಣೆಗೆ ಮುನ್ನ ಬಜೆಟ್ ಮಂಡಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ನಿರಾಕರಿಸಿದ ಸಚಿವ ಅನಂತ ಕುಮಾರ್, ಸುಪ್ರೀಂ ಕೋರ್ಟ್ ಮತ್ತು ಚುನಾವಣಾ ಆಯೋಗ ಈ ವಿಷಯದಲ್ಲಿ ಈಗಾಗಲೇ ತೀರ್ಮಾನ ನೀಡಿದೆ. ಬಜೆಟ್ ನಿಂದ ದೇಶದ ಎಲ್ಲಾ ಜನರಿಗೂ ಸಹಾಯವಾಗಬೇಕೆಂಬುದು ಸರ್ಕಾರದ ಪ್ರಯತ್ನ ಎಂದು ಹೇಳಿದರು.
ನೋಟುಗಳ ಅಮಾನ್ಯತೆ ವಿರೋಧಿಸಿ ತೃಣಮೂಲ ಕಾಂಗ್ರೆಸ್ ಇಂದಿನ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲಿಲ್ಲ.
SCROLL FOR NEXT