ನವದೆಹಲಿ: ಮಾಜಿ ಸಚಿವ ಹಾಗೂ ಹಾಲಿ ಸಂಸದ ಇ ಅಹಮದ್ ಅವರ ಸಾವಿನ ಹಿನ್ನಲೆಯಲ್ಲಿ ಬಜೆಟ್ ಅಧಿವೇಶನವನ್ನು ನಾಳೆಗೆ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗತ್ತಿದೆ.
ಭಾರಿ ನಿರೀಕ್ಷೆ ಹುಟ್ಟಿಸಿರುವ 2017ನೇ ಸಾಲಿನ ಕೇಂದ್ರ ಬಜೆಟ್ ಇಂದು ಮಂಡನೆಯಾಗಬೇಕಿದ್ದು, ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಇ ಅಹಮದ್ ಅವರು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಇಂದಿನ ಬಜೆಟ್ ಮಂಡನೆಯನ್ನು ನಾಳೆಗೆ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಸಂಸತ್ ನ ಶಿಷ್ಟಾಚಾರಗಳ ಅನ್ವಯ ಸಂಸತ್ ಕಲಾಪದ ವೇಳೆ ಯಾವುದೇ ಹಾಲಿ ಸಂಸದರು ಅಕಾಲಿಕ ಮರಣವನ್ನಪ್ಪಿದರೆ ಕಾಲಪವನ್ನು ಒಂದು ದಿನಗಳ ಕಾ ಲ ಮುಂದೂಡಿಕೆ ಮಾಡಬಹುದಾಗಿದೆ. ಆದರೆ ಇದು ಲೋಕಸಭೆ ಸ್ಪೀಕರ್ ಅವರ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿರುತ್ತದೆ. ಸ್ಪೀಕರ್ ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಇಲಾಖೆಯ ರಾಜ್ಯ ಸಚಿವ ಸಂತೋಷ್ ಗಂಗ್ವರ್ ಅವರು, ಶಿಷ್ಟಾಚಾರದ ಅನ್ವಯ ಹಾಲಿ ಸಂಸದರು ಮೃತಪಟ್ಟರೆ ಕಲಾಪವನ್ನು ಒಂದು ದಿನ ಮುಂದೂಡುವ ಅವಕಾಶವಿದೆ. ಆದರೆ ಇದು ಸ್ಪೀಕರ್ ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ. ಹೀಗಾಗಿ ಬಜೆಟ್ ಮಂಡನೆ ನಾಳೆಗೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬೆಳಗ್ಗೆ 10 ಗಂಟೆಗೆ ಸ್ಪೀಕರ್ ನೇತೃತ್ವದಲ್ಲಿ ಚರ್ಚೆ, ಬಳಿಕ ನಿರ್ಧಾರ
ಇನ್ನು ಬಜೆಟ್ ಮಂಡನೆ ಮತ್ತು ಕಲಾಪವನ್ನು ಮುಂದೂಡುವ ಕುರಿತು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂಸತ್ ನ ಅಧಿಕಾರಿಗಳೊಂದಿಗೆ ಹಾಗೂ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ಬಳಿಕ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಸಂಬಂಧ ಇಂದು ಬೆಳಗ್ಗೆ 10 ಗಂಟೆಗೆ ಸಭೆ ಕರೆಯಲಾಗಿದ್ದು, ಸಭೆ ಬಳಿಕ ಅಧಿಕೃತ ಘೋಷಣೆ ಹೊರ ಬೀಳಲಿದೆ.