ನವದೆಹಲಿ: ಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿಯಾಗಿದ್ದು, ನಿಗದಿಯಂತೆ ಬುಧವಾರ ಬೆಳಗ್ಗೆ 11 ಗಂಟೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಇ ಅಹ್ಮದ್ ಅವರು ಸಾವನ್ನಪ್ಪಿರುವ ಹಿನ್ನಲೆಯಲ್ಲಿ 2017ನೇ ಸಾಲಿನ ಬಜೆಟ್ ಅನ್ನು ನಾಳೆಗೆ ಮುಂದೂಡಬೇಕು ಎಂದು ಪ್ರಮುಖ ವಿಪಕ್ಷ ಕಾಂಗ್ರೆಸ್, ಶಿವಸೇನೆ ಹಾಗೂ ಜೆಡಿಯು ಪಕ್ಷಗಳು ಆಗ್ರಹಿಸಿದ್ದವು. ಆದರೆ ಈ ಬಗ್ಗೆ ಇದ್ದ ಎಲ್ಲ ಗೊಂದಲಗಳಿಗೆ ಸ್ವತಃ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಇಂದು ತೆರೆ ಎಳೆದಿದ್ದು, ನಿಗದಿಯಂತೇ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಿದ್ದಾರೆ.
ದೆಹಲಿಯ ಸಂಸತ್ ಭವನದ ಆವರಣದಲ್ಲಿ ಮಾತನಾಡಿದ ಅವರು, ಶಿಷ್ಟಾಚಾರದಂತೆ ಬಜೆಟ್ ಮಂಡನೆಗೆ ರಾಷ್ಟಪತಿಗಳ ಅನುಮೋದನೆ ಪಡೆದು ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭಿಸಲಾಗುತ್ತದೆ. ಬಳಿಕ ಮೃತಪಟ್ಟ ಸಂಸದ ಇ ಅಹ್ಮದ್ ಅವರಿಗೆ ಕಲಾಪದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಬಜೆಟ್ ಮಂಡನೆಗೆ ಅನುವು ಮಾಡಿಕೊಡಲಾಗುತ್ತದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಿದರು.