ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರ ಬಹು ನಿರೀಕ್ಷಿತ ರಾಜ್ಯ ಬಜೆಟ್ 2018ರ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ರಾಜ್ಯದ ನಾನಾ ವಲಯಗಳಿಂದ ಹಲವು ಬೇಡಿಕೆಗಳು ವ್ಯಕ್ತವಾಗುತ್ತಿವೆ.
ಪ್ರಮುಖವಾಗಿ ಕುಮಾರಸ್ವಾಮಿ ಅವರ ಬಹು ನಿರೀಕ್ಷಿತ ಬಜೆಟ್ ಮೇಲೆ ಕಾರ್ಮಿಕ ವಿಭಾಗ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು, ರೈತರ ಸಾಲಮನ್ನಾ ವಿಚಾರ ಎಲ್ಲರ ಕೇಂದ್ರ ಬಿಂದುವಾಗಿದ್ದರೂ ಕಾರ್ಮಿಕರ ಬೇಡಿಕೆಗಳಿಗೆ ಸಿಎಂ ಕುಮಾರಸ್ವಾಮಿ ಮನ್ನಣೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಕಾರ್ಮಿಕರ ಸಂಘ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಎಫ್ ಕೆಸಿಸಿಐ ಅಧ್ಯಕ್ಷ ಕೆ ಸುಧಾಕರ್ ಶೆಟ್ಟಿ ಅವರು, ರೈತರ ಸಾಲ ಮನ್ನ ವಿಚಾರವಾಗಿ ರಾಜ್ಯ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದು ತಿಳಿದಿಲ್ಲ. ಆದರೆ ಕಾರ್ಮಿಕ ಸಂಘಟನೆಗಳು ಮುಂದಿಟ್ಟಿರುವ ಬೇಡಿಕೆಗಳನ್ನು ಸಿಎಂ ಕುಮಾರಸ್ವಾಮಿ ಈಡೇರಿಸಬೇಕಿದೆ. ಸರ್ಕಾರದ ನಿಲುವು ನಮ್ಮ ಪರವಾಗಿರಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
ಇನ್ನು ಕಾರ್ಮಿಕ ವಲಯದಲ್ಲಿ ಪ್ರಮುಖವಾಗಿ ಗಾರ್ಮೆಂಟ್ಸ್ ವಲಯದ ನೌಕರರು ತಮ್ಮ ಪಿಂಚಣಿ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.