ರಾಜ್ಯ ಬಜೆಟ್

ಇದು ರಾಜ್ಯ ಬಜೆಟ್ ಅಲ್ಲ, ಹಾಸನ, ಮಂಡ್ಯ, ರಾಮನಗರ ಬಜೆಟ್: ಕುಮಾರಸ್ವಾಮಿ ಬಜೆಟ್ ಬಗ್ಗೆ ಪ್ರತಿಪಕ್ಷಗಳ ಟೀಕೆ

Srinivas Rao BV
ಬೆಂಗಳೂರು: ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಜೆಟ್ ರಾಜ್ಯ ಬಜೆಟ್ ಅಲ್ಲ, ಹಾಸನ, ಮಂಡ್ಯ, ರಾಮನಗರ ಬಜೆಟ್ ಎಂದು ಪ್ರತಿಪಕ್ಷದ ನಾಯಕರು ಟೀಕಿಸಿದ್ದಾರೆ. 
ಬಜೆಟ್ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆಯೇ ಸದನದಲ್ಲೇ ಪ್ರತಿಭಟನೆ ನಡೆಸಲು ಮುಂದಾದ ಬಿಜೆಪಿ ಶಾಸಕರು, ಬಜೆಟ್ ನಲ್ಲಿ ಕರಾವಳಿ ಭಾಗ, ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗಗಳಿಗೆ ಏನನ್ನೂ ನೀಡಿಲ್ಲ, ಇದು ರಾಜ್ಯ ಬಜೆಟ್ ಅಲ್ಲ ಮಂಡ್ಯ, ಮೈಸೂರು  ರಾಮನಗರ ಬಜೆಟ್ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಬಜೆಟ್ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕುಮಾರಸ್ವಾಮಿ ಬಜೆಟ್ ನಲ್ಲಿ ಕೇವಲ 3-4 ಜಿಲ್ಲೆಗಳಿಗಷ್ಟೇ ಯೋಜನೆ-ಅನುದಾನಗಳನ್ನು ಘೋಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ಆರ್ ಅಶೋಕ್, ಕುಮಾರಸ್ವಾಮಿ ಮಂಡ್ಯ, ರಾಮನಗರ, ಹಾಸನಕ್ಕೆ ಮಾತ್ರ ಮುಖ್ಯಮಂತ್ರಿಗಳಾ? ಎಂದು ಪ್ರಶ್ನಿಸಿದ್ದಾರೆ. 
ನಂತರ ಮಾತನಾಡಿದ ವಿಪಕ್ಷ ನಾಯಕ ಯಡಿಯೂರಪ್ಪ, ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು, ಆದರೆ ಕೇವಲ 34 ಸಾವಿರ ಕೋಟಿ ರೂಪಾಯಿ ಮೊತ್ತದ ಸಾಲ ಮನ್ನಾ ಮಾಡಿದ್ದಾರೆ. ಅದಕ್ಕೂ ಹಣಕಾಸು ಹೊಂದಾಣಿಕೆ ಬಗ್ಗೆ ಮಾಹಿತಿ ನೀಡಿಲ್ಲ. ಕುಮಾರಸ್ವಾಮಿ ಕೊಟ್ಟ ಮಾತಿಗೆ ತಪ್ಪಿ ರೈತರಿಗೆ ಧ್ರೋಹ ಮಾಡಿದ್ದಾರೆ, ಇತ್ತ ಸಾಲ ಮನ್ನಾದ ಹೆಸರಿನಲ್ಲಿ ಪೆಟ್ರೋಲ್ ದರ, ತೆರಿಗೆ ಏರಿಕೆ ಮಾಡಿ ಜನಸಾಮಾನ್ಯರಿಗೂ ಹೊರೆ ಹೊರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಇದು ಹಾಸನ, ಮಂಡ್ಯ, ರಾಮನಗರಕ್ಕೆ ಸೀಮಿತವಾದ ಬಜೆಟ್, ಉತ್ತರ ಕರ್ನಾಟಕ, ಕರಾವಳಿ, ಮಲೆನಾಡಿಗೆ ಅನ್ಯಾಯ ಮಾಡಲಾಗಿದೆ. ಇದು ಅಣ್ತಮ್ಮಂದಿರ ಬಜೆಟ್ ಎಂದು ಲೇವಡಿ ಮಾಡಿದ್ದಾರೆ. 
SCROLL FOR NEXT