ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಮಂಡಿಸಿದ 2018-19ನೇ ಸಾಲಿನ ಬಜೆಟ್ ನಲ್ಲಿ ಸಾರಿಗೆ ಇಲಾಖೆಯ ಉತ್ತೇಜನಕ್ಕೆ ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಪ್ರಮುಖವಾಗಿ ಸಾರಿಗೆ ಇಲಾಖೆಗೆ 4236 ಬಸ್ ಗಳ ಖರೀದಿಗೆ ಸರ್ಕಾರ ಮುಂದಾಗಿದೆ. ಈ ಪೈಕಿ ವಾಯು ಮಾಲಿನ್ಯ ತಡೆಗಾಗಿ ಪರಿಸರ ಸ್ವೇಹಿ 80 ವಿದ್ಯುತ್ ಚಾಲಿತ ಬಸ್ ಗಳ ಖರೀದಿಯೂ ಸೇರಿದೆ. ಇದಲ್ಲದೆ ವಾಹನ ದಟ್ಟಣೆ ತಪ್ಪಿಸಲು 5 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹುಮಹಡಿ ವಾಹನ ನಿಲುಗಡೆ ವ್ಯವಸ್ಥೆ. ಬೆಂಗಳೂರು ನಗರ ಹೊರವಲಯದಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದ್ದು, ಇದಕ್ಕಾಗಿ ಸರ್ಕಾರದಿಂದ ಅಂದಾಜು 11,950 ಕೋಟಿ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗಿದೆ.
ವಾಯ ಮಾಲಿನ್ಯ ತಡೆಗೆ ಎಲೆಕ್ಟ್ರಿಕ್ ವಾಹನ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ 4 ಕೋಟಿ ವೆಚ್ಚದಲ್ಲಿ 100 ಚಾರ್ಜಿಂಗ್ ಘಟಕ ಸ್ಥಾಪನೆ ಮಾಡಲಾಗುತ್ತದೆ. ಏಕೀಕೃತ ಭೂ ಸಾರಿಗೆ ಪ್ರಾಧಿಕಾರ ಸ್ಥಾಪನೆ ಉದ್ದೇಶ ಹೊಂದಲಾಗಿದ್ದು, ಬಿಎಂಆರ್ಸಿಎಲ್, ಬಿಎಂಟಿಸಿ, ಬಿಡಿಎ, ಬಿಬಿಎಂಪಿ ಇತ್ಯಾದಿ ಸಂಸ್ಥೆಗಳ ನಡುವೆ ಸಮನ್ವಯಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
ಇನ್ನು ನಮ್ಮ ಮೆಟ್ರೋ 3ನೇ ಹಂತದ ವಿಸ್ತರಣೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, ಜೆ.ಪಿ.ನಗರದಿಂದ ಕೆ.ಆರ್.ಪುರಂ 42.75 ಕಿ.ಮೀ, ಟೋಲ್ ಗೇಟ್ನಿಂದ ಕಡಬಗೆರೆ 12.5 ಕಿ.ಮೀ, ಗೊಟ್ಟಿಗೆರೆಯಿಂದ ಬಸವಪುರ 3.07 ಕಿ.ಮೀ, ಹೆಗಡೆ ನಗರದಿಂದ ಏರೋಸ್ಪೇಸ್ ಪಾರ್ಕ್ 18.95 ಕಿ.ಮೀ, ಕೋಗಿಲು ಕ್ರಾಸ್ನಿಂದ ರಾಜಾನುಕುಂಟೆ 10.6. ಕಿ.ಮೀ ಹಾಗೂ ಇಬ್ಬಲೂರಿನಿಂದ ಕರ್ಮಲ್ ರಾಮ್ 6.67 ಕಿ.ಮೀ, ಒಟ್ಟು 95 ಕಿ.ಮೀ ಮೆಟ್ರೊ ವಿಸ್ತರಣೆಗೆ ಸಮ್ಮತಿ ನೀಡಲಾಗಿದೆ.
ಅಂತೆಯೇ ಬೆಂಗಳೂರಿನಲ್ಲಿ 6 ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದ್ದು, 15,825 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗುತ್ತದೆ. ಟ್ರಾಫಿಕ್ ಕಂಟ್ರೋಲ್ಗೆ ಸಿಗ್ನಲ್ ಫ್ರೀ ಕಾರಿಡಾರ್. ಬೆಂಗಳೂರು ಹೊರವಲಯದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.