ತಂಜಾವೂರ್: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಮಂಡಿಸಿದ 2018ನೇ ಸಾಲಿನ ಬಜೆಟ್ ಬಗ್ಗೆ ರೈತ ಸಮೂದಾಯದಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ.
ಅರುಣ್ ಜೇಟ್ಲಿ ಅವರು ಬಜೆಟ್ ನಲ್ಲಿ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿರುವುದನ್ನು ರೈತರು ಸ್ವಾಗತಿಸಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡದಿರುವುದರ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಬಜೆಟ್ ಉತ್ತಮವಾಗಿದ್ದು, ಅದನ್ನು ಸ್ವಾಗತಿಸುವುದಾಗಿ ಕಾವೇರಿ ಪ್ರದೇಶದ ರೈತರ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಮನ್ನಾರ್ ಗುಡಿ ಎಸ್ ರಂಗನಾಥನ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಬಜೆಟ್ ಅನ್ನು ತುಂಬಾ ಮುತುವರ್ಜಿ ವಹಿಸಿ ಸಿದ್ಧಪಡಿಸಲಾಗಿದೆ. 22 ಸಾವಿರ ಗ್ರಾಮೀಣ್ ಹಾತ್ ಗಳನ್ನು ಗ್ರಾಮೀಣ ಕೃಷಿ ಮಾರುಕಟ್ಟೆಯಾಗಿ ಬದಲಾವಣೆ ಮಾಡುವುದು ಮತ್ತು ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 2,000 ಕೋಟಿ ರುಪಾಯಿ ‘ಕೃಷಿ ಮಾರುಕಟ್ಟೆ ನಿಧಿ’ ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದಿದ್ದಾರೆ. ಅಲ್ಲದೆ ಬಿದಿರು ಕೃಷಿಗಾಗಿ ಅರುಣ್ ಜೇಟ್ಲಿ 1,290 ಮೊತ್ತದ ನಿಧಿ ಘೋಷಿಸಿರುವುದನ್ನು ರಂಗನಾಥನ್ ಅವರು ಸ್ವಾಗತಿಸಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಚಿತಪಡಿಸುವುದಕ್ಕಾಗಿ ಎಂಎಸ್ ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಇದುವರೆಗೂ ಜಾರಿಗೆ ತಂದಿಲ್ಲ. ಈಗ ಕೇಂದ್ರ ಸರ್ಕಾರ ಆ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ ಮತ್ತೊಂದು ಸಮಿತಿ ರಚಿಸಿದೆ ಎಂದು ತಮಿಳುನಾಡು ರೈತ ಸಂಘದ ರಾಜ್ಯ ಕಾರ್ಯದರ್ಶಿ ಪಿಎಸ್ ಮಸಿಲ್ ಮಣಿ ಅವರು ಹೇಳಿದ್ದಾರೆ.