ನವದೆಹಲಿ: ಗುರುವಾರ ಮಂಡನೆಯಾಗುತ್ತಿರುವ ಕೇಂದ್ರದ ಎನ್ ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದ್ದು, ಈ ನಿಟ್ಟಿನಲ್ಲಿ ಹೇಳುವುದಾದರೆ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಜನರ ಓಲೈಕೆ ಮಾಡುವ ಪ್ರಯತ್ನಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಹಾಗೆಂದ ಮಾತ್ರಕ್ಕೆ ಪೂರ್ಣವಾಗಿ ಜನರನ್ನು ನಿರಾಶರನ್ನಾಗಿ ಮಾಡುವ ಸಾಧ್ಯತೆಯೂ ಇಲ್ಲ. ಮುಂಬರುವ 8 ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಮೋದಿ ಸರ್ಕಾರ ಈ ಬಾರಿ ಬಜೆಟ್ ಅನ್ನು ರೂಪಿಸಿರಲಿದೆ. ಹೀಗಿದ್ದೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಮುಂದೆ ಸಾಕಷ್ಟು ಸವಾಲುಗಳಿದ್ದು, ಕಳೆದೊಂದು ತಿಂಗಳಿನಿಂದ ಗಗನಕ್ಕೇರುತ್ತಿರುವ ತೈಲೆಬೆಲೆ, ವಿತ್ತೀಯ ಕೊರತೆಯ ಸವಾಲುಗಳನ್ನು ಸರಿದೂಗಿಸಿಕೊಂಡು ಆರ್ಥಿಕಾಭಿವೃದ್ಧಿ ಸಾಧಿಸುವ ಗುರಿ ಕೇಂದ್ರ ಸರ್ಕಾರಕ್ಕಿದೆ.
ಈ ನಿಟ್ಟಿನಲ್ಲಿ ಅರುಣ್ ಜೇಟ್ಲಿ ಅವರ ಮುಂದಿರುವ ಪ್ರಮುಖ ಸವಾಲುಗಳ ಪಟ್ಟಿ ಇಲ್ಲಿದೆ.
ಈ ಬಾರಿಯ ವಿತ್ತೀಯ ಕೊರತೆ ಗುರಿ ಶೇ. 3.2 ಆಗಿತ್ತು. ಆದರೆ ಅದನ್ನು ತಲುಪುವ ಸಾಧ್ಯತೆ ಅತ್ಯಂತ ಕಡಿಮೆ ಇದ್ದು, ಮುಂಬರುವ ಚುನಾವಣೆಯ ವೇಳೆ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಒತ್ತಡವೂ ಇದೆ. ಇದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ವಿತ್ತೀಯ ಕೊರತೆ ಹೆಚ್ಚಾಗುವ ಸಂಭವವಿದೆ. ಇವುಗಳ ಮಧ್ಯೆ ಸಮ ತೋಲನ ಕಾಯ್ದುಕೊಳ್ಳುವುದು ಸದ್ಯದ ಸವಾಲಾಗಿದ್ದು, ಇದನ್ನು ಅರುಣ್ ಜೇಟ್ಲಿ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕೇಂದ್ರ ಸರ್ಕಾರದ ಈ ಬಾರಿಯ ಸಾಲದ ಗುರಿ 5.5 ಟ್ರಿಲಿಯನ್ ಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಪ್ರಮುಖವಾಗಿ ವಿತ್ತೀಯ ಕೊರತೆ ನೀಗಿಸಲು ಇದು ನೆರವಾಗಲಿದೆ ಎಂದು ಹೇಳಲಾಗುತ್ತಿದೆ.
ಜಿಎಸ್‌ಟಿ ಪರಿಚಯಿಸಿದ ಅನಂತರದಲ್ಲಿ ಸತತ ಇಳಿಕೆ ಕಾಣುತ್ತಿರುವ ಜಿಎಸ್‌ಟಿ ಸಂಗ್ರಹವನ್ನು ಮೇಲಕ್ಕೆತ್ತುವುದು ಸವಾಲು. ಸದ್ಯ ಡಿಸೆಂಬರ್ ಸಂಗ್ರಹ ಏರಿಕೆ ಕಂಡಿದ್ದು ಸ್ವಲ್ಪ ಮಟ್ಟಿಗೆ ನಿರಾಳವಾಗಿದೆಯಾದರೂ, ಪ್ರಸಕ್ತ ವಿತ್ತೀಯ ವರ್ಷದಲ್ಲಿ 21 ಟ್ರಿಲಿಯನ್ ರೂಪಾಯಿ ಆದಾಯ ಗುರಿ ಹೊಂದಲಾಗಿದೆ.
ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಇಳಿಸುವ ಒತ್ತಡ ಅರುಣ್ ಜೇಟ್ಲಿ ಅವರ ಮೇಲಿದೆದ್ದು, ಈಗಾಗಲೇ ಶೇ. 30ರಿಂದ ಶೇ. 25ಕ್ಕೆ ಕಾರ್ಪೊರೇಟ್ ತೆರಿಗೆ ಇಳಿಕೆಯ ನಿರೀಕ್ಷೆ ಉಂಟಾಗಿದೆ. ಕಳೆದ ವರ್ಷ 50 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಕಂಪೆನಿಗಳಿಗೆ ಶೇ. 25ರಷ್ಟು ಆದಾಯ ತೆರಿಗೆ ಇಳಿಕೆ ಘೋಷಿಸಲಾಗಿತ್ತು. ಇದರ ಹೊರತಾಗಿಯೂ ವಿತ್ತೀಯಕೊರತೆ ನೀಗಿಸುವ ಸವಾಲು ಜೇಟ್ವಿ ಅವರ ಮುಂದಿದೆ. ಅಂತೆಯೇ ಆದಾಯ ತೆರಿಗೆ ಮಿತಿ ಪ್ರಸ್ತುತ 2.5 ಲಕ್ಷ ರೂ.ನಿಂದ 3 ಲಕ್ಷಕ್ಕೆ ಏರಿಕೆ ಮಾಡುವ ನಿರೀಕ್ಷೆಯಿದೆ.
ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತುವ ಸವಾಲು ಅತ್ಯಂತ ಮಹತ್ವದ್ದಾಗಿದ್ದು, 2018ರ ಮಾರ್ಚ್ 31ಕ್ಕೆ ಕೊನೆಯಾಗಲಿರುವ ವಿತ್ತೀಯ ವರ್ಷದ ಆರ್ಥಿಕ ಪ್ರಗತಿಯು ಶೇ. 6.75ಕ್ಕೆ ಕುಸಿಯುವ ಸಾಧ್ಯತೆಯಿದ್ದು, ಮುಂದಿನ ತ್ತೈಮಾಸಿಕಗಳಲ್ಲಿ ಶೇ. 7 ಹಾಗೂ ಶೇ. 7.5ಕ್ಕೆ ಏರುವ ನಿರೀಕ್ಷೆಯಿದೆ.
ಕಳೆದ ಜೂನ್‌ನಿಂದ ಜಾಗತಿಕ ತೈಲ ಬೆಲೆಯಲ್ಲಿ ಶೇ. 40ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಪೆಟ್ರೋಲಿಯಂ ಬೆಲೆ ದಾಖಲೆ ಮಟ್ಟಕ್ಕೆ ಏರಿದ್ದರೂ ಇದನ್ನು ಅವಲಂಬಿಸಿದ ಇತರ ಬೆಲೆಗಳೂ ಏರಿಕೆಯಾಗಿವೆ. ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಇಳಿಸಬೇಕೆಂಬ ಕೂಗು ಇದೆ.