ನವದೆಹಲಿ: 2018–19ರ ಕೇಂದ್ರ ಬಜೆಟನ್ನು ಅಭಿವೃದ್ಧಿ ಕೇಂದ್ರಿತ ಲೆಕ್ಕಾಚಾರವನ್ನಾಗಿ ಮಾಡಲು ಕೇಂದ್ರ ವಿತ್ತ ಅರುಣ್ ಜೇಟ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರಿಯಲ್ ಎಸ್ಟೇಟ್, ತೈಲ, ವಿದ್ಯುತ್ ಅನ್ನು ಕೂಡ ಜಿಎಸ್ ಟಿ ವ್ಯಾಪ್ತಿಗೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆಯ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಪೆಟ್ರೋಲಿಯಂ ಉತ್ಪನ್ನಗಳನ್ನು ಮತ್ತು ರಿಯಲ್ ಎಸ್ಟೇಟ್ ಅನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದ್ದರು. ಹೀಗಾಗಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಇದಲ್ಲದೆ ವಿದ್ಯುತ್ ಅನ್ನು ಕೂಡ ಜಿಎಸ್ ಟಿ ವ್ಯಾಪ್ತಿಗೆ ತರುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಇನ್ನು ದೇಶ ಪ್ರಮುಖ 8 ಮೂಲಸೌಕರ್ಯ ವಲಯಗಳ ಪ್ರಗತಿಯು ಡಿಸೆಂಬರ್ ತಿಂಗಳಲ್ಲಿ ಶೇ 4ಕ್ಕೆ ಕುಸಿದಿದ್ದು, ಐದು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ಇದಕ್ಕೆ ಕಲ್ಲಿದ್ದಲು ಮತ್ತು ಕಚ್ಚಾ ತೈಲ ವಲಯದಲ್ಲಿನ ಉತ್ಪಾದನೆ ಕುಸಿತವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿನ ಈ ವಲಯಗಳ ಉತ್ಪಾದನಾ ಬೆಳವಣಿಗೆಯು 2017ರ ಜುಲೈ ತಿಂಗಳ ನಂತರದ ಅತ್ಯಂತ ಕಡಿಮೆ ಮಟ್ಟದ್ದಾಗಿದ್ದು, ಜುಲೈನಲ್ಲಿ ಈ ವಲಯಗಳ ಪ್ರಗತಿ ಶೇ 2.9ರಷ್ಟಿತ್ತು ಎಂದು ತಿಳಿದುಬಂದಿದೆ.