ರಾಜ್ಯ ಬಜೆಟ್

ಸುದೀರ್ಘ 1 ಗಂಟೆ 46 ನಿಮಿಷ ಬಜೆಟ್ ಮಂಡಿಸಿದ ಸಿಎಂ ಬಿಎಸ್'ವೈ: ಶುಕ್ರವಾರಕ್ಕೆ ಸದನ ಮುಂದೂಡಿಕೆ

Manjula VN

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸದನವನ್ನು ಶುಕ್ರವಾರಕ್ಕೆ ಮುಂದೂಡಿದರು. 

ಯಡಿಯೂರಪ್ಪ ಅವರು, ಸುದೀರ್ಘವಾಗಿ 1 ಗಂಟೆ 46 ನಿಮಿಷಗಳ ಕಾಲ ಪ್ರಸಕ್ತ ಸಾಲಿನ ಆಯವ್ಯಯವನ್ನು ಓದಿ ಮುಗಿಸಿದರು. ಬಳಿಕ ಸ್ಪೀಕರ್ ಕಾಗೇರಿಯವರು ಬಜೆಟ್ ಅಧಿವೇಶನವನ್ನು ನಾಳೆ ಬೆಳಿಗ್ಗೆ 10.30ಕ್ಕೆ ಮುಂದೂಡಿದರು.
 
ಮಲ್ಲೇಶ್ವರಂನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, ಸಕಾಲಕ್ಕೆ ಮಳೆಯಾಗಲಿ, ಉತ್ತಮ ಬೆಳೆ ಬರಲಿ, ರೈತರು ನೆಮ್ಮದಿಯಿಂದ ಬದುಕುವ ಪರಿಸ್ಥಿತಿ ರೂಪುಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಉತ್ತಮ ಬಜೆಟ್ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ರೈತಪರವಾಗ ಬಜೆಟ್‌ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಪ್ರತಿಪಕ್ಷಗಳು ಸಹಕಾರ ಕೊಡಬೇಕು. ಬಜೆಟ್‌ ಮೇಲಿನ ಚರ್ಚೆಗೆ ಒಂದಿಡೀ ತಿಂಗಳು ಅವಕಾಶವಿದೆ. ಕೃಷಿಯ ಅಗತ್ಯಗಳನ್ನು ಪೂರೈಸಲು ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇನೆ ಎಂದು ಹೇಳಿದರು. 

ಈ ಬಾರಿಯ ರಾಜ್ಯ ಬಜೆಟ್ ರೈತರ ಪರವಾಗಿರಲಿದೆ ಎಂಬ ಸಂದೇಶವನ್ನು ಸಾರಲು ಯಡಿಯೂರಪ್ಪ ಅವರು ಸದನಕ್ಕೆ ಹಸಿರು ಶಾಲು ಹೊದ್ದುಕೊಂಡು ಆಗಮಿಸಿದರು, ಬಳಿಕ ಬಜೆಟ್ ಮಂಡನೆ ಆರಂಭಿಸಿದ ಅವರು, ಸರ್ವರಿಗೂ ಸಮಬಾಳು, ಎಲ್ಲರನ್ನೂ ಒಳಗೊಂಡ ಬಜೆಟ್ ಇದಾಗಿದೆ. ರಾಜ್ಯ ಬಜೆಟ್ ಮಂಡನೆಗೆ ಅವಕಾಶ ನೀಡಿದ ರಾಜ್ಯದ ಜನರಿಗೆ ಧನ್ಯವಾದಗಳು ಎಂದು ತಿಳಿಸಿದರು.

SCROLL FOR NEXT