2023-24 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿರುವ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರೈತ ವಿರೋಧಿ ಎಂದು ಹೇಳಿದ್ದು, ರಾಜ್ಯದಲ್ಲಿ ಈ ಕಾಯ್ದೆಯನ್ನು ಹಿಂಪಡೆಯುವುದಾಗಿ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
ರೈತರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಈ ಬಜೆಟ್ ನಲ್ಲಿ ಪ್ರಕಟಿಸಿದ್ದು, ಕೃಷಿಕರಿಗೆ ಶೂನ್ಯ ಬಡ್ಡಿದರದ ಸಾಲವನ್ನು 3-5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡುವುದಾಗಿ ಘೋಷಿಸಿದ್ದಾರೆ.
"ನಮ್ಮ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು. ಈ ಯೋಜನೆಯನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುವುದು" ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೃಷಿ ಕ್ಷೇತ್ರದ ಪ್ರಮುಖ ಘೋಷಗಳ ಬಗ್ಗೆ ಮಾಹಿತಿ ಹೀಗಿದೆ...
- ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ʻನವೋದ್ಯಮʼ ಎಂಬ ಹೊಸ ಯೋಜನೆಯಡಿ 10 ಕೋಟಿ ರೂ. ಒದಗಿಸಲಾಗುವುದು.
- ರೈತರು ಬೆಳೆದ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ʻನಂದಿನಿʼ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು 10 ಕೋಟಿ ರೂ.
- ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ 20 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.4 ರ ಬಡ್ಡಿ ಸಹಾಯಧನ
- ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಗೋದಾಮು, ಶೀತಲಗೃಹ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಸೃಜನೆಗೆ ಯೋಜನಾ ವೆಚ್ಚದ ಗರಿಷ್ಠ ಶೇ. 20ರಷ್ಟು, ಒಂದು ಕೋಟಿ ರೂ. ಮೀರದಂತೆ Seed Capital
- ರಾಜ್ಯದಲ್ಲಿ ಬೆಳೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕೆಪೆಕ್ ಸಂಸ್ಥೆಯ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ನವೋದ್ಯಮಿಗಳು (Startups) ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ನೀಡಲು 5 ಕೋಟಿ ರೂ.
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಿ, ಇವುಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಹಂತಹಂತವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, 2023-24ನೇ ಸಾಲಿನಲ್ಲಿ 100 ಹಬ್‌ಗಳನ್ನು ಸ್ಥಾಪಿಸಲು 50 ಕೋಟಿ ರೂ. ಒದಗಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ತೋಟಗಾರಿಕೆ
ರೈತರ ಆದಾಯವನ್ನು ಹೆಚ್ಚಿಸುವುದರಲ್ಲಿ ತೋಟಗಾರಿಕಾ ಬೆಳೆಗಳು ಪ್ರಮುಖ ಪಾತ್ರ ವಹಿಸುತ್ತವೆ.
- ತೋಟಗಾರಿಕಾ ವಲಯದಲ್ಲಿನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಮಾವು ಮತ್ತಿತರ ಹಣ್ಣು, ತರಕಾರಿ, ಹೂವುಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು.
- 2023-24ನೇ ಸಾಲಿನಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು. ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆಗಾಗಿ ಎಂಟು ಶೀತಲ ಘಟಕಗಳನ್ನು ನಿರ್ಮಾಣ.
- ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು, ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯಗಳು GI Tag ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚುರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೋ ಟೂರಿಸಂ ಅನ್ನು ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರಾಂಡಿಂಗ್ ಮಾಡಲು ಕ್ರಮ
- ವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಜನಮನದಲ್ಲಿ ನೆಲೆಸಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗಳು GI Tag ಗಳನ್ನು ಪಡೆದಿವೆ. ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮವನ್ನು
- ವಾಣಿಜ್ಯ ಹೂವಿನ ರಫ್ತಿನಲ್ಲಿ ಕರ್ನಾಟಕ ಅಗ್ರಸ್ಥಾನ ಹೊಂದುವ ಸಾಮರ್ಥ್ಯ ಹೊಂದಿದ್ದು, ಇವುಗಳ ತಳಿಗಳ ಕೊರತೆ ನಿವಾರಿಸಲು ಅಂತಹ ತಳಿಗಳನ್ನು ಆಮದು ಮಾಡಿಕೊಂಡು ರೈತರಿಗೆ ಕೈಗೆಟಕುವ ದರದಲ್ಲಿ ಒದಗಿಸಲು ಕ್ರಮವಹಿಸಲಾಗುವುದು.
- 50 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ʻವಿದ್ಯಾರ್ಥಿಗಳಿಗಾಗಿ ತೋಟಗಾರಿಕೆʼ ಯೋಜನೆಯನ್ನು ಜಾರಿ
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos