ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದಂದ್ರೆ ಒಂದು ರೀತಿಯ ಜೂಜಾಟದಂತೆ ಎಂಬ ನಂಬಿಕೆ ಇದೆ. ಕೆಲವರು ತಮ್ಮ ವೇತನದಲ್ಲೇ ಹೂಡಿಕೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಏರಿಳಿತ ಇದ್ದದ್ದೇ. ಒಂದು ವೇಳೆ ಮಾರುಕಟ್ಟೆ ಚೇತರಿಕೆ ಕಂಡು ಖರೀದಿಸಿದ ಷೇರುಗಳು ಉತ್ತಮ ದರದಲ್ಲಿ ಮಾರಾಟವಾದರೆ ಅದೃಷ್ಟ ಖುಲಾಯಿಸಿದಂತೆ. ಮಾರುಕಟ್ಟೆ ಕುಸಿತಗೊಂಡರೆ ಹೇಳಬೇಕಿಲ್ಲ ತಾನೆ? ನಷ್ಟ ಖಚಿತ. ಅದಕ್ಕಾಗಿ ಹೂಡಿಕೆ ಮಾಡುವ ಮುನ್ನ ಪೋರ್ಟ್‌ಫೋಲಿಯೋ ಮಾಡಿಸಿಕೊಳ್ಳಿ.
ಪೋರ್ಟ್‌ಫೋಲಿಯೋ ಎಂದರೆ ಹೂಡಿಕೆಯನ್ನು ವರ್ಗೀಕರಿಸಿ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು ಹಾಗೂ ರಿಸ್ಕ್ ಅನ್ನು ಕಡಿತಗೊಳಿಸುವುದು. ಇದರಿಂದ ಷೇರುಮಾರುಕಟ್ಟೆಯಲ್ಲಿ ಉಂಟಾಗುವ ನಷ್ಟವನ್ನು ಕಡಿಮೆಗೊಳಿಸಬಹುದು.
ಈ ಹೂಡಿಕೆ ಹೇಗೆ?
ವಿವಿಧ ಹೂಡಿಕೆ ಕ್ಷೇತ್ರಗಳಿಗೆ ವರ್ಗೀಕರಿಸಿ ಹೂಡಿಕೆ ಮಾಡಬೇಕು ಇಲ್ಲಿ ಮುಖ್ಯ. ಇದಕ್ಕೂ ಮುನ್ನ ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಕಮಾಡಿಟಿ ಕರೆನ್ಸಿ, ಎಸ್.ಪಿ. ಡಿರೈವೇಟಿವ್ಸ್... ಹೀಗೆ ಪ್ರಮುಖ ಕ್ಷೇತ್ರಗಳ ಮೇಲೆ ಹೂಡಿಕೆ ಮಾಡಬಹುದು.
ಏಕೆ ಮುಖ್ಯ?
ಪೋರ್ಟ್‌ಫೋಲಿಯೋ ಮೇಲೆ ಹೂಡಿಕೆ ಮಾಡುವುದರಿಂದ ರಿಸ್ಕ್ ಅನ್ನು ಕಡಿಮೆಗೊಳಿಸಿದಂತಾಗುತ್ತದೆ. ಅದೇ ರೀತಿ ಒಂದು ಕ್ಷೇತ್ರದಲ್ಲಿ ನಷ್ಟ ಹೊಂದಿದರೆ ಮತ್ತೊಂದರಲ್ಲಿ ಲಾಭ ಪಡೆದುಕೊಳ್ಳುವ ಮೂಲಕ ಅದನ್ನು ಸರಿತೂಗಿಸಲು ಅವಕಾಶ ಉಂಟು. ಇದು ಹೂಡಿಕೆದಾರನಿಗೆ ಕೊಂಚ ನೆಮ್ಮದಿ ತರುತ್ತದೆ.
ಏನೇನು ಆಫರ್‌ಗಳು ಇವೆ?
ಬ್ರೋಕರ್ ಕಂಪನಿಗಳು ಹೂಡಿಕೆದಾರನಿಗೆ ಪೋರ್ಟ್‌ಫೋಲಿಯೋ ಆಫರ್ ನೀಡುತ್ತವೆ. ಕಂಪನಿಗಳು ಸ್ವಲ್ಪಮಟ್ಟಿಗೆ ರಿಸ್ಕ್ ತೆಗೆದುಕೊಂಡು ಪೋರ್ಟ್‌ಫೋಲಿಯೋ ನಡೆಸುತ್ತವೆ. ಇಂಥ ಟ್ರೇಡಿಂಗ್‌ಗಳಿಗೆ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಗಮನಿಸಿ ಇಲ್ಲಿ ನಿಮ್ಮ ಹೂಡಿಕೆ ಮಾತ್ರ ರಿಸ್ಕ್; ಅದೃಷ್ಟ ಕಂಪನಿಯದ್ದು. ಉಳಿದ ಎಲ್ಲ ರಿಸ್ಕ್ ಟ್ರೇಡಿಂಗ್ ಅನ್ನು ಕಂಪನಿಯೇ ನಡೆಸುತ್ತದೆ.
ಇದಕ್ಕೊಂದು ಉದಾಹರಣೆ ಇಲ್ಲಿದೆ. ರಾಜು ಮತ್ತು ಸೋಮು ಎಂಬವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ರಾಜು ನೇರವಾಗಿ ರು. 10 ಸಾವಿರವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾನೆ. ಸೋಮು ಪೋರ್ಟ್‌ಫೋಲಿಯೋ ಮಾಡಿ ಷೇರು ಕರೆನ್ಸಿ, ಕಮಾಡಿಟಿ ಮೇಲೆ ತಲಾ ರು. 2 ಸಾವಿರ ಹೂಡಿಕೆ ಮಾಡುತ್ತಾನೆ. ಮಾರುಕಟ್ಟೆ ಕುಸಿತ ಕಂಡಾಗ ರಾಜು ಏಕಾಏಕಿ ರು. 5 ಸಾವಿರ ನಷ್ಟ ಅನುಭವಿಸುತ್ತಾನೆ. ಆದರೆ, ಸೋಮು ಕೇವಲ ರು. 2 ಸಾವಿರ ನಷ್ಟ ಉಂಟಾಗುತ್ತದೆ. ಆತ ಉಳಿದ ಕ್ಷೇತ್ರಗಳಿಂದ ಲಾಭ ಗಳಿಸಿಕೊಂಡು ಉಂಟಾಗಿರುವ ನಷ್ಟವನ್ನು ಸರಿದೂಗಿಸುತ್ತಾನೆ.
-ಆದಿತ್ಯ ವಿ.ಎಸ್.ತೀರ್ಥಹಳ್ಳಿ