'ಸಾಲವನು ಕೊಂಬಾಗ ಹಾಲೋಗರವನುಂಡಂತೆ ಸಾಲಿಗನು ಬಂದು ಎಳೆದಾಗ ಕಿಬ್ಬದಿಯ ಕೀಲು ಮುರಿದಂತೆ...'
- ಹೀಗನ್ನುತ್ತದೆ ವಚನ. ಇದೇನಪ್ಪಾ ಹಣಕಾಸು ವಿಚಾರದಲ್ಲಿ ದೇವರ ನಾಮ, ವಚನ ಪ್ರಸ್ತಾಪವಾಗಿದೆಯಲ್ಲ ಎಂದು ಓದದೆ ಇರಬೇಡಿ. ಆರಂಭದಲ್ಲಿ ಕ್ರೆಡಿಟ್ ಕಾರ್ಡ್ ಬಂದಾಗ ಎಲ್ಲವನ್ನೂ ಕೊಳ್ಳಬೇಕು ಎಂಬ ಗೀಳನ್ನು ಎಲ್ಲರಲ್ಲಿ ತುಂಬುತ್ತದೆ. ಯಾವುದೇ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಇರಲಿ. ಅದರ ಉಪಯೋಗದ ಮೇಲಿನ ನಿಯಂತ್ರಣ ಬಳಕೆದಾರರಾದ ನಮ್ಮ ನಿಮ್ಮೆಲ್ಲರ ಮೇಲೆಯೇ ಇರುತ್ತದೆ ಎಂಬ ಕಠಿಣ ಸತ್ಯ ಕಡ್ಡಾಯವಾಗಿ ಗೊತ್ತಿದ್ದರೆ ಅದರಿಂದ ನಮಗೆ ಸಂತೋಷ ತರಬಲ್ಲದು. ಇಲ್ಲದಿದ್ದರೆ ಅದು ನಿಜಕ್ಕೂ ದುಃಖವನ್ನೇ ತಂದುಕೊಡುತ್ತದೆ. ಹೀಗಾಗಿ ಅದರ ಉಪಯೋಗದ ಮೇಲೆ ನಿಜಕ್ಕೂ ಹಿಡಿತ ಇರಲೇಬೇಕು.
ಇಲ್ಲಿನ ಉದ್ದೇಶವೇನೆಂದರೆ ಸುಲಭದಲ್ಲಿ ನಾವು ಹೊಂದಿರುವ ಕ್ರೆಡಿಟ್ ಕಾರ್ಡ್ ಅನ್ನು ರದ್ದು ಮಾಡುವುದು ಹೇಗೆನ್ನುವುದರ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ನಿಟ್ಟಿನಲ್ಲಿ ನೀವು ಉತ್ಸುಕತೆ ತೋರಿದರೂ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಬರುವುದು, 'ನಿಮ್ಮ ಈ ತಿಂಗಳ ಬ್ಯಾಲೆನ್ಸ್ ಇಷ್ಟು ಬಾಕಿ ಇದೆ' ಎಸ್‌ಎಂಎಸ್, ಇ-ಮೇಲ್, ದೂರವಾಣಿ ಕರೆ ಕಿರಿಕಿರಿ ತಪ್ಪುವುದೇ ಇಲ್ಲ. ಇಂಥ ಒಂದು ಇರಿಸುಮುರಿಸನ್ನು ತಪ್ಪಿಸಲು ಈ ಕೆಳಗಿನ ವಿಚಾರಗಳ ಮೇಲೆ ಗಮನಕೊಡಿ.
ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿ
ಗ್ರಾಹಕರ ಕೇಂದ್ರಕ್ಕೆ ಮಾಡಿ ನೀವು ಅಂತಿಮವಾಗಿ ಪಾವತಿ ಮಾಡಬೇಕಾದ ಮೊತ್ತವನ್ನು ಖಚಿತಪಡಿಸಿಕೊಳ್ಳಿ.
ಮೊತ್ತ ಪಾವತಿ ಮಾಡಿ
- ಸಣ್ಣ ಮೊತ್ತದ ಬಾಕಿ ಇದ್ದಲ್ಲಿ ಅದನ್ನು ಒಂದೇ ಹಂತದಲ್ಲಿ ಪಾವತಿಸಿ. ಒಂದು ವೇಳೆ ಏನಾದರೂ ಕಾರಣದಿಂದ ಭಾರಿ ಮೊತ್ತ ಇದ್ದಲ್ಲಿ ಅದನ್ನು ನಿಯಮಿತವಾಗಿ ಪಾವತಿಸಿ ಚುಕ್ತಾ ಮಾಡಿಬಿಡಿ.
- ಇದಕ್ಕಾಗಿ ನೀವು ಪ್ರತಿ ವಾರ ಅಥವಾ ತಿಂಗಳನ್ನು ನಿಗದಿ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಇನ್ನು ಎಷ್ಟು ಮೊತ್ತ ಪಾವತಿ ಮಾಡಬೇಕು ಎಂಬುದನ್ನು ಬ್ಯಾಂಕಿನಿಂದ ಖಚಿತಪಡಿಸಿಕೊಳ್ಳಿ. ಇದರಿಂದಾಗಿ ಹೆಚ್ಚು ಮೊತ್ತವನ್ನು ದಂಡವಾಗಿ ಪಾವತಿ ಮಾಡುವುದು ತಪ್ಪುತ್ತದೆ. ಮಾತ್ರವಲ್ಲದೆ ನೀವು ಪಾವತಿ ಮಾಡಿದ್ದಕ್ಕೆ ತಕ್ಕ ದಾಖಲೆಗಳನ್ನು ಇರಿಸಿಕೊಳ್ಳಬೇಕು.
ಮತ್ತೊಮ್ಮೆ ಸಂಪರ್ಕಿಸಿ
ಬ್ಯಾಂಕ್‌ಗೆ ಮನವಿ ಮಾಡಿ
- ಗ್ರಾಹಕ ಸೇವಾ ಕೇಂದ್ರಕ್ಕೆ ಮನವಿ ಮಾಡಿದ ಬಳಿಕ ಕ್ರೆಡಿಟ್ ಕಾರ್ಡ್ ನೀಡಿದ ಬ್ಯಾಂಕ್ ಅನ್ನು ಸಂಪರ್ಕಿಸಿ. ಕ್ರೆಡಿಟ್ ಕಾರ್ಡ್ ರದ್ದಾಗಿ ನಿಮ್ಮ ಖಾತೆಯ ವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
- ಗ್ರಾಹಕ ಸೇವಾ ಕೇಂದ್ರದಲ್ಲಿ ನಡೆಸಿದ ಮಾತುಕತೆ ವಿವರ, ರೆಫರೆನ್ಸ್ ಸಂಖ್ಯೆ ಮತ್ತು ಇತರ ವಿಚಾರಗಳನ್ನು ಬ್ಯಾಂಕ್‌ಗೆ ನೀಡಬೇಕು. ಇದರಿಂದಾಗಿ ಅವರಿಗೆ ನಿಮ್ಮ ಖಾತೆಯ ಬಗ್ಗೆ ಶೀಘ್ರ ದೃಷ್ಟಿ ಹಾಯಿಸಿ, ಅದು ರದ್ದಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ.
ಬ್ಯಾಂಕ್‌ನಿಂದ ಮಾಹಿತಿ
ಮರೆತೀರಿ ಜೋಕೆ
- ರದ್ದು ಮಾಡಿ ಎಂದು ಸಂಬಂಧಿಸಿದ ಬ್ಯಾಂಕ್‌ಗೆ ಹೇಳಿದ ತಕ್ಷಣ ನಮ್ಮ ನಿಮ್ಮ ಕ್ರೆಡಿಟ್ ಕಾರ್ಡ್ ರದ್ದಾಗುವುದಿಲ್ಲ. ಬಾಕಿ ಮೊತ್ತವನ್ನು ಸಂಪೂರ್ಣ ಪಾವತಿ ಮಾಡದ ಹೊರತು ಅದು ರದ್ದಾಗುವುದಿಲ್ಲ.
- ಬಾಕಿ ಮೊತ್ತವು ಪಾವತಿ ಮಾಡಬೇಕಾದ ಬಡ್ಡಿ, ಸೇವಾ ಶುಲ್ಕಗಳನ್ನೂ ಒಳಗೊಂಡಿರುತ್ತದೆ.
- ಒಂದು ವೇಳೆ ಕೊನೆಯ ಬಿಲ್ ನಂತರ ಕಾರ್ಡ್ ರದ್ದಾಗಿದ್ದರೆ, ಬಾಕಿ ನೀಡಬೇಕಾಗಿರುವ ಮೊತ್ತದತ್ತ ಗಮನ ಹರಿಸಿ.
- ಕ್ರೆಡಿಟ್ ಕಾರ್ಡ್‌ಗಳು ಸೇವಾ ಶುಲ್ಕ ಹೆಚ್ಚು ವಿಧಿಸುತ್ತವೆ ಎಂದು ಅದನ್ನು ಪಾವತಿಸದೆ ರದ್ದು ಮಾಡಲು ಹೇಳುತ್ತಾರೆ. ನೆನಪಿಡಿ. ಬ್ಯಾಂಕ್‌ಗೆ ಪಾವತಿಸಬೇಕಾಗಿರುವ ಎಲ್ಲ ಶುಲ್ಕಗಳನ್ನು ನೀಡಿದ ಬಳಿಕವೇ ಅದು ರದ್ದಾಗುತ್ತದೆ. ಇಲ್ಲದಿದ್ದರೆ ಮೊತ್ತದ ಮೇಲೆ ದಂಡ, ಅದರ ಮೇಲೆ ಬಡ್ಡಿ... ಹೀಗೆ ಬೆಳೆಯುತ್ತಾ ಹೋಗುತ್ತದೆ. ಅದನ್ನು ನಿವಾರಿಸಿಕೊಳ್ಳಬೇಕು.
- ನನ್ನ ಕ್ರೆಡಿಟ್ ಕಾರ್ಡ್ ರದ್ದು ಮಾಡಿ ಎಂದು ಬ್ಯಾಂಕ್‌ಗೆ ಮನವಿ ಮಾಡಿ ಸುಮ್ಮನೆ ಕುಳಿತರೆ ಸಾಲದು. ಎಲ್ಲ ಮೊತ್ತ ಪಾವತಿ ಮಾಡಿ ಬ್ಯಾಂಕ್ ವತಿಯಿಂದ ಅಧಿಕೃತವಾಗಿ ಕಾರ್ಡ್ ರದ್ದಾಗಿದೆ ಎಂದು ಲಿಖಿತವಾಗಿ ಬರೆದುಕೊಡುವಂತೆ ತಿಳಿಸಿ.
- ಸದಾಶಿವ ಕೆ.
khandige29@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics