ಮೈಸೂರು ದೊಡ್ಡ ಊರು; ಸುಂದರವಾದ ಊರು. ಮಹಾರಾಜರು ಇರುವ ಊರು ಎಂದು ನಾನು ಕೇಳಿದ್ದೆ. ಆದರೆ ಅದನ್ನು ನೋಡಿರಲಿಲ್ಲ. ಆದ್ದರಿಂದ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಸ್ವಲ್ಪ ಹೊತ್ತು ನಿಲ್ದಾಣದಲ್ಲಿಯೇ ನಿಂತೆ. ನಂತರ ನಮ್ಮ ದೂರದ ಸಂಬಂಧಿ ರಾಜಾ ಎಂಬವರು ಮೈಸೂರು ಕಾಲೇಜಿನಲ್ಲಿ ಓದುತ್ತಿರುವುದು ಜ್ಞಾಪಕಕ್ಕೆ ಬಂದಿತು. ಮೈಸೂರಿನಲ್ಲಿ ರಾಮಕೃಷ್ಣಾಶ್ರಮ ಎಂಬುದಿದ್ದು, ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಸಹಾಯ ಸಿಗುವುದೆಂದು ಕೇಳಿದ್ದೆ. ಅದೂ ಜ್ಞಾಪಕಕ್ಕೆ ಬಂದು, ಎರಡೂ ವಿಳಾಸಗಳನ್ನು ಕೇಳುತ್ತಾ ಇಡೀ ದಿನ ಮೈಸೂರಿನ ಅನೇಕ ಬೀದಿಗಳಲ್ಲಿ ಅಲೆದೆ. ಆದರೆ ವಿಳಾಸ ಮಾತ್ರ ಸಿಗಲಿಲ್ಲ. ರಾತ್ರಿಯವರೆಗೂ ಅಲೆದು ಸುಸ್ತಾಗಿ ಕೊನೆಗೆ ರೇಲ್ವೆ ಸ್ಟೇಷನ್ನಿಗೆ ಹತ್ತಿರದಲ್ಲಿಯೇ ನಂಜರಾಜ ಬಹದ್ದೂರ್ ಛತ್ರಕ್ಕೆ ಬಂದು, ಅದರ ಕಟ್ಟೆಯ ಮೇಲೆ ಕುಳಿತೆ. ಬೆಳಗಿನಿಂದ ಏನೂ ತಿಂದಿರಲಿಲ್ಲ. ಹತ್ತಿರದಲ್ಲಿಯೇ ಇದ್ದ ಒಂದು ಅಂಗಡಿಯಲ್ಲಿ ಒಂದಾಣೆ ಮಂಡಕ್ಕಿ ತಿಂದು, ಹೊಟ್ಟೆ ತುಂಬಾ ನೀರು ಕುಡಿದು ಮಲಗಿದೆ. ಛತ್ರದ ಕಟ್ಟೆಯ ಮೇಲೆ ಮಲಗಿದ್ದರೂ ಗಾಢ ನಿದ್ರೆ ಬಂದಿತ್ತು.
ಎಚ್ಚರವಾದಾಗ ಬೆಳಗ್ಗೆ ಏಳು ಗಂಟೆಯಾಗಿತ್ತು. ಛತ್ರದಲ್ಲಿ ಏನೋ ಗಡಿಬಿಡಿ ನಡೆಯುತ್ತಿತ್ತು. ಒಳಗೆ ಹೋಗಿ ವಿಚಾರಿಸಿದಾಗ, ಅಂದು ಅಲ್ಲಿ ಮೈಸೂರು ಕಾಂಗ್ರೆಸ್ಸಿನ ಒಂದು ರಾಜಕೀಯ ಸಮ್ಮೇಳನ ನಡೆಯುವುದೆಂದೂ, ಮೈಸೂರು ಸಂಸ್ಥಾನದ ಅನೇಕ ಊರುಗಳಿಂದ ನೂರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಬರುವರೆಂದೂ ಗೊತ್ತಾಯಿತು. ಎಲ್ಲರಿಗೂ ಕಾಫಿ, ತಿಂಡಿ ಮತ್ತು ಊಟದ ವ್ಯವಸ್ಥೆಯೂ ಇತ್ತು. ನಾನೂ ಆ ಸಮ್ಮೇಳನದಲ್ಲಿ ಇಡೀ ದಿನ ಕಳೆದೆ. ಬೆಳಗ್ಗೆ ಕಾಫಿ, ತಿಂಡಿ ಆಯಿತು. ಮಧ್ಯಾಹ್ನ ಊಟವೂ ಆಯಿತು. ಆ ಸಮ್ಮೇಳನದಲ್ಲಿ ಸಾಹುಕಾರ್ ಚನ್ನಯ್ಯ, ಕೆ.ಸಿ. ರೆಡ್ಡಿ, ಕೆ.ಟಿ. ಭಾಷ್ಯಂ, ಎಚ್. ಸಿದ್ದಯ್ಯ, ಟಿ. ಸಿದ್ದಲಿಂಗಯ್ಯ ಮೊದಲಾದ ಮೈಸೂರು ಕಾಂಗ್ರೆಸ್ ಮುಖಂಡರನ್ನು ಮೊಟ್ಟ ಮೊದಲನೇ ಬಾರಿ ನೋಡುವ ಅವಕಾಶ ಸಿಕ್ಕಿತು. ಮೈಸೂರು ಸಂಸ್ಥಾನದ ಇನ್ನೊಂದು ರಾಜಕೀಯ ಪಕ್ಷ- ಪ್ರಜಾಪಕ್ಷ - ಮೈಸೂರು ಕಾಂಗ್ರೆಸ್ನಲ್ಲಿ ವಿಲೀನವಾಗುವುದಿತ್ತು. ಅದಕ್ಕಾಗಿ ಈ ಸಮ್ಮೇಳನ ಏರ್ಪಡಿಸಲಾಗಿತ್ತು. ಪ್ರಜಾಪಕ್ಷಕ್ಕೆ ಎಚ್.ಸಿ. ದಾಸಪ್ಪ ಅಧ್ಯಕ್ಷರಾಗಿದ್ದರು. ಆ ಪಕ್ಷ ಮಹಾರಾಜರ ಸರ್ಕಾರದೊಡನೆ ಸ್ವಲ್ಪ ಮಟ್ಟಿಗೆ ಸಹಕರಿಸುತ್ತಿತ್ತು. ಮೈಸೂರು ಕಾಂಗ್ರೆಸ್ ಎಂಬ ಪಕ್ಷ ಮಾತ್ರ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯಾಗಬೇಕೆಂದು ಚಳವಳಿ ನಡೆಸುತ್ತಿತ್ತು. ಸಂಸ್ಥಾನದ ಆಗಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಈ ಚಳವಳಿ ಯಾವ ರೀತಿಯಿಂದಲೂ ತಲೆ ಎತ್ತದಂತೆ ತುಳಿಯುತ್ತಿದ್ದರು. ಹಲವು ಸಾರ್ವಜನಿಕ ಮುಖಂಡರಿಗೆ ಮಹಾರಾಜರಿಂದ ಬಿರುದುಗಳನ್ನು, ಉನ್ನತ ಹುದ್ದೆಗಳನ್ನು ಕೊಡಿಸಿ ಒಲಿಸಿಕೊಂಡಿದ್ದರು. ಆದರೆ ತಮಗೆ ವಿರೋಧವಾಗಿ ನಡೆದುಕೊಂಡವರ ಬಗ್ಗೆ ಅಷ್ಟೇ ಕಠಿಣವಾಗಿ ವರ್ತಿಸಿ, ಜೈಲಿಗೆ ಕಳಿಸಿದರು. ಕೆಲವರನ್ನು ಸಂಸ್ಥಾನದಿಂದ ಗಡಿಪಾರು ಸಹ ಮಾಡಿದ್ದರು. ಪತ್ರಿಕೆಗಳನ್ನು ನಿಲ್ಲಿಸಿದ್ದರು.
ಡಿ.ವಿ. ಗುಂಡಪ್ಪ, ವೆಂಕಟಕೃಷ್ಣಯ್ಯ, ತಿ.ತಾ. ಶರ್ಮ, ಸಿದ್ಧವನಹಳ್ಳಿ ಕೃಷ್ಣಶರ್ಮ, ಬಿ.ಎನ್. ಗುಪ್ತ, ಪಿ.ಆರ್. ರಾಮಯ್ಯ ಮತ್ತು ವೀರಕೇಸರಿ ಸೀತಾರಾಮಶಾಸ್ತ್ರಿ ಮೊದಲಾದವರು ಆ ಕಾಲದ ಸುಪ್ರಸಿದ್ಧ ಪತ್ರಕರ್ತರು. ಅವರು ಮತ್ತು ಅವರ ಪತ್ರಿಕೆಗಳು ಭಾರತ ರಾಷ್ಟ್ರೀಯ ಕಾಂಗ್ರೆಸ್ಸು ಇಡೀ ದೇಶದಲ್ಲಿ ನಡೆಸುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಪೂರ್ಣ ಬೆಂಬಲ ಕೊಡುತ್ತಿದ್ದವಲ್ಲದೆ, ಸಂಸ್ಥಾನದಲ್ಲಿ ದಿವಾನರ ಆಡಳಿತ ಕೊನೆಗೊಂಡು, ಜವಾಬ್ದಾರಿ ಸರ್ಕಾರ ಅಂದರೆ ಪ್ರಜೆಗಳ ಸರ್ಕಾರ ಸ್ಥಾಪನೆಯಾಗಬೇಕೆಂದೂ ಒತ್ತಾಯಿಸುತ್ತಿದ್ದವು. ದಿವಾನರಿಗೆ ಇದರಿಂದ ಬಹಳ ಸಿಟ್ಟು ಬಂದು, ನೂರಾರು ಮುಖಂಡರನ್ನು ದಸ್ತಗಿರಿ ಮಾಡಿಸಿದರು. ಆದರೆ ಇದರಿಂದ ಚಳವಳಿ ಮಾತ್ರ ನಿಲ್ಲಲಿಲ್ಲ. ಇಷ್ಟೇ ಅಲ್ಲ, ದಿನ ದಿನಕ್ಕೆ ಅದು ಉಗ್ರವಾಗುತ್ತಿತ್ತು. ಮೈಸೂರಿನಲ್ಲಿ ರಾಜಕೀಯ ಸಮ್ಮೇಳನ ನಡೆದದ್ದೂ ಇದೇ ಸಮಯದಲ್ಲಿ, ಇದೇ ಹಿನ್ನೆಲೆಯಲ್ಲಿ.
ನಿಜಲಿಂಗಪ್ಪನವರ ಪರಿಚಯ
ಕಾಂಗ್ರೆಸ್ಸಿನ ಹಿರಿಯ ನಾಯಕರೂ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಆದ ಎಸ್. ನಿಜಲಿಂಗಪ್ಪನವರ ಪರಿಚಯ ಸಾಕಷ್ಟಿತ್ತು. ಅವರೂ ಚಿತ್ರದುರ್ಗದವರು. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ (ಅಂದರೆ 1931- 34) ಅವರು ಚಿತ್ರದುರ್ಗದಲ್ಲಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದರು. ನಮ್ಮ ದೊಡ್ಡಪ್ಪ ಕೆ. ಭೀಮರಾಯರೂ ವಕೀಲರಾಗಿದ್ದರು. ಚಿತ್ರದುರ್ಗದ ವಕೀಲರಲ್ಲಿ ಹಿರಿಯರೆನಿಸಿದ ನಮ್ಮ ದೊಡ್ಡಪ್ಪನವರೊಂದಿಗೆ ಚರ್ಚಿಸಲು, ಸಲಹೆಗಳನ್ನು ಕೇಳಲು ನಿಜಲಿಂಗಪ್ಪನವರು ಆಗಾಗ್ಗೆ ನಮ್ಮ ಮನೆಗೆ ಬರುತ್ತಿದ್ದರು. ಇಷ್ಟೇ ಅಲ್ಲ, ಒಂದೊಂದು ದಿನ ಸಾಯಂಕಾಲ ಊರಿನ ಅನೇಕ ವಕೀಲರು ನಮ್ಮ ಮನೆಯಲ್ಲಿಯೇ ಇಸ್ಪೀಟು ಆಡುತ್ತಿದ್ದರು. ಆ ಸಮಯದಲ್ಲಿ ಅವರಿಗೆಲ್ಲ ಹೋಟೆಲಿನಿಂದ ಕಾಫಿ, ತಿಂಡಿ ತರಿಸಿಕೊಡುವ ಜವಾಬ್ದಾರಿ ನನ್ನದಾಗಿತ್ತು. ಇದಕ್ಕಾಗಿ ಸ್ವಲ್ಪ 'ಕಮೀಷನ್' ತೆಗೆದುಕೊಳ್ಳುತ್ತಿದ್ದೆ. ಆದರೆ ಅದಕ್ಕಿಂತ ಹೆಚ್ಚಾಗಿ ಜನರೊಡನೆ ಮಾತನಾಡುವ, ಪರಿಚಯ ಮಾಡಿಕೊಳ್ಳುವ ಅವಕಾಶ ಒದಗಿತ್ತು. ಈ ಅವಕಾಶವನ್ನು ನಾನು ಸಂಪೂರ್ಣವಾಗಿ ಉಪಯೋಗಿಸಿಕೊಂಡೆ.
ಮುಂದೆ ನಿಜಲಿಂಗಪ್ಪನವರು ಮೈಸೂರು ಕಾಂಗ್ರೆಸ್ಸಿಗೆ ಸೇರಿ, ಅದರ ಮುಖಂಡರಾದರು. ಬೇರೆ ಅನೇಕ ಮುಖಂಡರ ಪರಿಚಯವೂ ನನಗಾಯಿತು. ಅವರ ಪರಿಚಯದಿಂದ ನನಗೆ ಪ್ರಯೋಜನವೂ ಆಯಿತು. ಮೈಸೂರು ಕಾಂಗ್ರೆಸ್ ಮುಖಂಡರಾದ ಸಾಹುಕಾರ್ ಚನ್ನಯ್ಯ, ಟಿ. ಸಿದ್ದಲಿಂಗಯ್ಯ, ಕೆ.ಟಿ. ಭಾಷ್ಯಂ, ಎಚ್. ಸಿದ್ದಯ್ಯ, ಎಚ್.ಸಿ. ದಾಸಪ್ಪ, ಕೆ. ಚಂಗಲರಾಯರೆಡ್ಡಿ, ಟಿ. ಮರಿಯಪ್ಪ, ಕೋಲಾರದ ಪಟ್ಟಾಭಿರಾಮನ್ ಮೊದಲಾದವರ ಪರಿಚಯವಾಯಿತು. ಮುಂದೆ ನಿಜಲಿಂಗಪ್ಪನವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಅಷ್ಟು ಹೊತ್ತಿಗೆ ನಾನು 'ಸಂಯುಕ್ತ ಕರ್ನಾಟಕ' ಪತ್ರಿಕೆ ಸೇರಿ, ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಈ ರಾಜಕೀಯ ಮುಖಂಡರ ಪರಿಚಯ, ಸ್ನೇಹ ಬಹಳ ಸಹಾಯ ಮಾಡಿತು. ನಿಜಲಿಂಗಪ್ಪನವರಷ್ಟೇ ಅಲ್ಲ, ಕೆ.ಟಿ. ಭಾಷ್ಯಂ, ಮೈಸೂರು ಸಂಸ್ಥಾನದ ಮಾಜಿ ಮುಖ್ಯಮಂತ್ರಿಗಳಾದ ಕೆ.ಸಿ. ರೆಡ್ಡಿ, ಕೆ. ಹನುಮಂತಯ್ಯ, ಎಚ್. ಸಿದ್ದಯ್ಯ, ವೀರಣ್ಣಗೌಡ, ಎಚ್.ಸಿ. ದಾಸಪ್ಪ, ಕೆ. ಚನ್ನಿಗರಾಮಯ್ಯ, ಕಡಿದಾಳ ಮಂಜಪ್ಪ ಮೊದಲಾದವರ ಪರಿಚಯವೂ ನನಗೆ ಸಾಕಷ್ಟಿತ್ತು. ಮೈಸೂರು ಸಂಸ್ಥಾನದಲ್ಲಿ ನಡೆದ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ಹೋರಾಟಗಳನ್ನು ತೀರಾ ಹತ್ತಿರದಿಂದ ನೋಡುವ, ವರದಿ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ. ಸುಲ್ತಾನಪೇಟೆ ಗಣಪತಿ ಗಲಭೆ, ಶಿವಪುರ ಧ್ವಜಸತ್ಯಾಗ್ರಹ, ವಿದುರಾಶ್ವತ್ಥ ಗಲಾಟೆ ಮೊದಲಾದ ಪ್ರಕರಣಗಳನ್ನು ನಾನು ಪತ್ರಿಕೆಗಳಿಗೆ ವರದಿ ಮಾಡಿದ್ದೇನೆ. ಇದರ ಜೊತೆಗೆ ನಾನು ಮೈಸೂರು ಹೈಕೋರ್ಟು ನ್ಯಾಯಮೂರ್ತಿ ಮೇದಪ್ಪನವರಿಗೂ, ಆ ಕಾಲದ ಕಾಂಗ್ರೆಸ್ ಮುಖಂಡರೂ, ಸಿವಿಲ್ ಲಿಬರ್ಟಿ ಯೂನಿಯನ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಎಲ್.ಎಸ್. ರಾಜೂ ಅವರಿಗೂ ನಡೆಯುತ್ತಿದ್ದ ಶೀತಲ ಸಮರ, ಅನಂತರದ ವಿಷಪ್ರಾಶನ ಮೊಕದ್ದಮೆಗಳ ಬಗ್ಗೆ ನಾನು ವಿಶೇಷ ವರದಿಗಳನ್ನು ಬರೆದಿದ್ದೇನೆ. ಈ ಸಮಯದಲ್ಲಿ ನನಗೆ ಬೆಂಗಳೂರು - ಮೈಸೂರು ನಗರಗಳ ಅನೇಕ ವರದಿಗಾರರ ಪರಿಚಯವಾಯಿತು. ಅವರೊಡನೆ ಆತ್ಮೀಯ ಸ್ನೇಹವೂ ಇತ್ತು. ಇವರಲ್ಲಿ 'ಹಿಂದೂ' ಪತ್ರಿಕೆಯ ಕೆ. ರಾಮಸ್ವಾಮಿ, 'ಟೈಮ್ಸ್ ಆಫ್ ಇಂಡಿಯಾ'ದ ನಂಜುಂಡರಾವ್, 'ಮದ್ರಾಸ್ ಮೇಲ್'ನ ಪ್ರತಿನಿಧಿ ಕೃಷ್ಣಸ್ವಾಮಿ, 'ತಾಯಿನಾಡು' ಪಿ.ಆರ್. ರಾಮಯ್ಯನವರು, 'ವಿಶ್ವಕರ್ನಾಟಕ'ದ ಸಂಪಾದಕರಾಗಿದ್ದ ತಿ.ತಾ. ಶರ್ಮ ಮತ್ತು ಸಿದ್ಧವನಹಳ್ಳಿ ಕೃಷ್ಣಶರ್ಮ, ಮೈಸೂರಿನ 'ಸಾಧ್ವಿ' ಪತ್ರಿಕೆಯ ಅಗರಂ ರಂಗಯ್ಯ, 'ಮೈಸೂರು' ಪತ್ರಿಕೆಯ ಟಿ. ನಾರಾಯಣ ಮೊದಲಾದವರನ್ನು ನಾನು ಖಂಡಿತ ಮರೆಯಲಾರೆ. ಅವರ ಒಡನಾಟ, ಕಾರ್ಯಸಾಧನೆ, ಜನಸಂಪರ್ಕ, ರೀತಿ ನೀತಿಗಳು ನನ್ನ ವೃತ್ತಿ ಜೀವನದ ಮೇಲೆ ವಿಶೇಷ ಪರಿಣಾಮ ಬೀರಿದವು. ಜನಸಂಪರ್ಕ- ಪತ್ರಕರ್ತನ ಯಶಸ್ಸಿನ ಗುಟ್ಟು ಎಂಬುದನ್ನು ನಾನು ಈ ಮೇಲಿನ ಹಿರಿಯರಿಂದ ಮತ್ತು ಪತ್ರಿಕೋದ್ಯೋಗಿ ಮಿತ್ರರಿಂದ ಕಲಿತೆ. ಇಂದಿಗೂ ಇದೇ ನನ್ನ ಬಂಡವಾಳ.
ಸರ್ ಮಿರ್ಜಾರ ದಿವಾನಗಿರಿ
ಸರ್ ಮಿರ್ಜಾ ಇಸ್ಮಾಯಿಲ್ರ ದಿವಾನಗಿರಿಯ ಬಗ್ಗೆ ಮೈಸೂರು ಸಂಸ್ಥಾನದಲ್ಲಿಯೇ ಬೇರೆ ಬೇರೆ ಅಭಿಪ್ರಾಯಗಳಿದ್ದವು. ಆದರೆ ಅವರ ಆಡಳಿತವನ್ನು ಟೀಕಿಸುವವರಿಗಿಂತ ಅವರನ್ನು ಮೆಚ್ಚಿಕೊಂಡಿದ್ದವರೇ ಹೆಚ್ಚು. ಏಕೆಂದರೆ ಅವರು ಮೇಧಾವಿಗಳಷ್ಟೇ ಅಲ್ಲ, ಸಂಸ್ಥಾನದ ಉತ್ತಮ ಆಡಳಿತಗಾರರೂ ಆಗಿದ್ದರೆಂದು ಅನೇಕರ ಅಭಿಪ್ರಾಯ. ಸರ್.ಎಂ. ವಿಶ್ವೇಶ್ವರಯ್ಯನವರಂತೆ ಸರ್ ಮಿರ್ಜಾ ಇಸ್ಮಾಯಿಲ್ರವರೂ ಮೈಸೂರು ಮಾದರಿ ಸಂಸ್ಥಾನವಾಗುವುದಕ್ಕೆ ತುಂಬಾ ಶ್ರಮಿಸಿದರು. ಮಿರ್ಜಾ ಇಸ್ಮಾಯಿಲ್ ಕಾಲದಲ್ಲಿ ಕೇವಲ ಬೆಂಗಳೂರು ಮತ್ತು ಮೈಸೂರು ನಗರಗಳಷ್ಟೇ ಅಲ್ಲ, ಸಂಸ್ಥಾನದ ಎಲ್ಲಾ ಮುಖ್ಯ ಪಟ್ಟಣಗಳು ಸಹ ಸುಂದರವಾಗಿ ಬೆಳೆಯುವುದಕ್ಕೆ ಅವಕಾಶವಾಯಿತು. ಇಷ್ಟೇ ಅಲ್ಲ, ದಿವಾನರು ಸಂಸ್ಥಾನದ ಅನೇಕ ಶ್ರೀಮಂತರನ್ನು ಪ್ರೋತ್ಸಾಹಿಸಿ ಹಲವು ಬಗೆಯ ಧರ್ಮಕಾರ್ಯಗಳು ಮಾಡುವುದಕ್ಕೆ ಅವರನ್ನು ಪ್ರೋತ್ಸಾಹಿಸಿದರು. ಕುಡಿಯುವ ನೀರಿನ ವ್ಯವಸ್ಥೆ, ಸ್ಕೂಲ್ ಕಾಲೇಜು ಕಟ್ಟಡಗಳು, ದೇವಸ್ಥಾನಗಳು, ರಸ್ತೆಗಳು, ಸೇತುವೆಗಳು ಆಯಿತು ಮತ್ತು ಗ್ರಾಮ ಪಂಚಾಯಿತಿ ಕಟ್ಟಡಗಳು ಸರ್ ಮಿರ್ಜಾರವರ ಕಾಲದಲ್ಲಿ ಆದಷ್ಟು ಬೇರೆ ಯಾವ ಕಾಲದಲ್ಲೂ ಆಗಲಿಲ್ಲ. ಈ ಧರ್ಮ ಕಾರ್ಯಗಳಿಗೆ ಸಹಾಯ ಮಾಡಿದ ಶ್ರೀಮಂತರನ್ನು ಅವರು ದಸರಾ ಉತ್ಸವಕ್ಕೆ ಆಮಂತ್ರಿಸುತ್ತಿದ್ದರು. ಸನ್ಮಾನ ಮಾಡುತ್ತಿದ್ದರು, ಬಿರುದು ಕೊಡುತ್ತಿದ್ದರು.
ಕೇವಲ ಜನೋಪಕಾರಿ ಕೆಲಸಗಳಿಗಷ್ಟೇ ಅಲ್ಲ, ರಾಜಕೀಯ ಸುಧಾರಣೆಗಳಿಗೂ ಮಿರ್ಜಾರವರು ಗಮನ ಕೊಟ್ಟಿದ್ದರು. ಮಹಾತ್ಮಾಗಾಂಧಿ, ಸರದಾರ್ ಪಟೇಲ್ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಮೊದಲಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮುಖಂಡರೊಡನೆಯೂ ಸಂಪರ್ಕವನ್ನಿಟ್ಟಿಕೊಂಡಿದ್ದರು. ಒಮ್ಮೆ ಮಹಾತ್ಮಾಗಾಂಧಿಯವರನ್ನು ನಂದಿಬೆಟ್ಟಕ್ಕೆ ಆಮಂತ್ರಿಸಿ, ಅಲ್ಲಿ ಅವರು ವಿಶ್ರಾಂತಿ ಪಡೆಯುವುದಕ್ಕೆ ವ್ಯವಸ್ಥೆ ಮಾಡಿದ್ದರು. ಬಹುಶಃ ಇದೇ ಕಾರಣದಿಂದ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ಚಳವಳಿ ಅಷ್ಟೊಂದು ಉಗ್ರವಾಗಲಿಲ್ಲ. ಸರ್ ಮಿರ್ಜಾರವರ ಸಲಹೆಯಂತೆ ಮಹಾರಾಜರು ಆಡಳಿತ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದರು. ಜಿಲ್ಲಾ ಬೋರ್ಡ್ಗಳು ಅಸ್ತಿತ್ವಕ್ಕೆ ಬಂದವು. ಪ್ರಜಾ ಪ್ರತಿನಿಧಿ ಸಭೆ ಎಂಬ ಹೆಸರಿನ ವಿಧಾನಸಭೆ ಮೊದಲೇ ಸ್ಥಾಪನೆಯಾಗಿತ್ತು. ಅಂತೂ ಮೈಸೂರು ಸಂಸ್ಥಾನದ ಆಡಳಿತವನ್ನು, ಅದರಲ್ಲಿಯೂ ಸರ್ ಮಿರ್ಜಾರವರ ಉದಾರ ನೀತಿಯನ್ನು ಅನೇಕ ಕಾಂಗ್ರೆಸ್ ಮುಖಂಡರೂ ಮೆಚ್ಚಿಕೊಂಡಿದ್ದರು.
ಮೈಸೂರು ಕಾಂಗ್ರೆಸ್ ರಾಜಕೀಯ ಸಮ್ಮೇಳನದ ಪರಿಣಾಮ ಏನೇ ಆಗಲಿ, ನನ್ನ ಮಟ್ಟಿಗೆ ಒಂದೆರಡು ದಿನಗಳ ಊಟ ವ್ಯವಸ್ಥೆಗಳ ಚಿಂತನೆಯನ್ನು ನಿವಾರಿಸಿತ್ತು. ಆದರೆ ಮಾರನೆಯ ದಿನ ಆ ಚಿಂತೆ ಪುನಃ ಕಾಡಲಾರಂಭಿಸಿತು. ರಾಮಕೃಷ್ಣಾಶ್ರಮ ನನ್ನ ಸಮಸ್ಯೆಗಳನ್ನೆಲ್ಲ ಬಗೆಹರಿಸಬಹುದೆಂದು ಅಲ್ಲಿಗೆ ಹೋಗಲು ನಿರ್ಧರಿಸಿದೆ. ಆದರೆ ಅದು ಎಲ್ಲಿದೆಯೆಂಬುದು ನನಗೆ ಗೊತ್ತಿರಲಿಲ್ಲ. ಯಾರನ್ನೋ ಕೇಳಿ ದಾರಿ ತಿಳಿದುಕೊಂಡೆ. ಒಂಟಿಕೊಪ್ಪಲು ಎಂಬ ಬಡಾವಣೆಯಲ್ಲಿರುವುದಾಗಿ ಗೊತ್ತಾಯಿತು. ಸುಮಾರು ನಾಲ್ಕು ಮೈಲಿ ದೂರವಿದ್ದ ಆ ಆಶ್ರಮಕ್ಕೆ ನಡೆದುಕೊಂಡೇ ಹೋದೆ. ಅದರ ಕಚೇರಿಯಲ್ಲಿ ವಿಚಾರಿಸಿದೆ. ಬಡವಿದ್ಯಾರ್ಥಿಗಳಿಗೆ ಅವಕಾಶವಿಲ್ಲವೆಂದು, ಪ್ರತಿ ತಿಂಗಳು ಹಣ ಕೊಟ್ಟರೆ ಮಾತ್ರ ಪ್ರವೇಶ ಸಿಗುವುದಾಗಿ ತಿಳಿಸಿದರು. ನಿರಾಸೆಯಿಂದ ಹಿಂತಿರುಗಿದೆ. ನಂಜರಾಜ ಬಹದ್ದೂರ್ ಛತ್ರದ ಕಟ್ಟೆಯೇ ಪುನಃ ನನ್ನ ವಾಸ ಸ್ಥಳವಾಯಿತು.
(ಮುಂದುವರಿಯುವುದು)