ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಸೇವಿಂಗ್ಸ್

Lingaraj Badiger
Updated On : 13 Jan 2014, 4:19 am

ಉಳಿತಾಯಕ್ಕೂ ಭಾರತೀಯರಿಗೂ ಅವಿನಾಭಾವ ನಂಟು. ಯಾವುದೇ ವಸ್ತು ಇದ್ದರೂ ಅದರ ಸಂಪೂರ್ಣ ಉಪಯೋಗವನ್ನು ಮಾಡುವುದಕ್ಕೆ ಅವರು ಹಿಂದೇಟು ಹಾಕುತ್ತಾರೆ. ಕೊಟ್ಟ ವಸ್ತುವಿನಲ್ಲಿ ಕೊಂಚವನ್ನಾದರೂ ಉಳಿಸಿಯೇ ಉಳಿಸುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ದೇಶದ ಜನರಲ್ಲಿ ಉಳಿತಾಯ ಮಾಡಬೇಕು ಎಂಬ ಮನೋಭಾವ ಹೆಚ್ಚುತ್ತಿದೆ.

ಉಳಿತಾಯ ಎನ್ನುವುದು ನಮ್ಮವರಿಗೆ ಹಿಂದಿನಿಂದಲೂ ಬಂದಿದ್ದೇ. ಆದರೂ 1990ರ ದಶಕದಲ್ಲಿ ಆರ್ಥಿಕ ಉದಾರೀಕರಣ ಅನುಷ್ಠಾನಗೊಂಡ ಬಳಿಕ ಈ ಪದಕ್ಕೆ ಕೊಂಚ ಮಂಕು ಬಡಿದಂತಾಗಿತ್ತು. ಅದಕ್ಕೂ ಒಂದು ಕಾರಣವಿತ್ತು. ಉದಾರೀಕರಣದ ಪ್ರಭಾವದಿಂದಾಗಿ ಯುವ ಜನತೆಗೆ ಹೆಚ್ಚಿನ ಪ್ರಮಾಣದಲ್ಲಿ ಎಂಜಿನಿಯರಿಂಗ್ ಮತ್ತು ಇತರ ತಾಂತ್ರಿಕ ಶಿಕ್ಷಣ ಹೆಚ್ಚಾಗಿ ಲಭಿಸಲು ಆರಂಭವಾಯಿತು. ಅಂತೆಯೇ ಐದರಿಂದ ಆರಂಕಿಯ ಸಂಬಳ ಕೂಡ ಶಿಕ್ಷಣ ಮುಗಿದ ತಕ್ಷಣವೇ ಸಿಗಲಾರಂಭಿಸಿತ್ತು. ಹೀಗಾಗಿ, ದುಡಿದದ್ದೆಲ್ಲವನ್ನೂ ಖರ್ಚು ಮಾಡುವ 'ತುಡಿತ'ವೂ ಹೆಚ್ಚಾಗಿಯೇ ಇತ್ತು.

ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿ ಮತ್ತು ಕೆಲ ವರ್ಷಗಳ ಹಿಂದೆ ವಿಶ್ವದ ದೊಡ್ಡಣ್ಣನನ್ನು ಕಾಡಿದ ಆರ್ಥಿಕ ಹಿಂಜರಿತದಿಂದಾಗಿ ವಿಶ್ವದ ಎಲ್ಲ ರಾಷ್ಟ್ರಗಳ ಅರ್ಥ ವ್ಯವಸ್ಥೆಗಳು ಮುಟ್ಟಿ ನೋಡಿಕೊಳ್ಳುವಂಥ  ಪೆಟ್ಟು ನೀಡಿತು. ಇದರಿಂದಾಗಿ ನಮ್ಮ ದೇಶವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿನ ಜನರಿಗೆ ಖರ್ಚು ಮಾಡುವ ವೇಳೆ ಕೊಂಚ ಹಿಂದೆ ಮುಂದೆ ನೋಡುವಂಥ ಪರಿಸ್ಥಿತಿ ಬಂದೊದಗಿತು.

ನಮ್ಮ ಆರ್ಥಿಕ ಪರಿಸ್ಥಿತಿ ಅಮೆರಿಕದ ಕುಸಿತ ನೇರವಾಗಿ ತಟ್ಟದಿದ್ದರೂ ಅದರ ಪಶ್ಚಾತ್ ಕಂಪನಗಳು ಹಲವು ಪಾಠಗಳನ್ನು ಕಲಿಸಿಕೊಟ್ಟವು. ಇದು ಅವರವರ ಹಣಕಾಸು ಸಾಮರ್ಥ್ಯಕ್ಕೆ ಅನುಗುಣವಾಗಿ ಉಳಿತಾಯ ಮಾಡುವ ಅನಿವಾರ್ಯತೆಯನ್ನು ತಂದೊಡ್ಡಿತು.

ಆರೋಗ್ಯ
ಸದ್ಯದ ಪರಿಸ್ಥಿತಿಯಲ್ಲಿ ಪ್ರಸ್ತಾಪಿಸಬೇಕಾದ ವಿಶೇಷ ಅಂಶವೆಂದರೆ ಆರೋಗ್ಯ. ಹಲವು ಕಾರಣಗಳಿಂದಾಗಿ ಸದ್ಯದ ದಿನಮಾನಗಳಲ್ಲಿ ಅನಾರೋಗ್ಯ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಚಿಕಿತ್ಸಾ ವೆಚ್ಚವೂ ಹೆಚ್ಚುತ್ತಿದೆ. ಸಣ್ಣಮಟ್ಟದ ಅನಾರೋಗ್ಯ ಸಮಸ್ಯೆಗೇ ಹೆಚ್ಚು ವೆಚ್ಚ ಮಾಡಬೇಕಾಗಿದೆ. ಇನ್ನು ದೊಡ್ಡ ಮಟ್ಟದ ಅನಾರೋಗ್ಯ ಸಮಸ್ಯೆ ಬಂದರೆ ಮುಗಿದೇ ಹೋಯಿತು. ಹೀಗಾಗಿ, ಈ ಕ್ಷೇತ್ರಕ್ಕೆ ಹಣವನ್ನು ಆದ್ಯತೆಯ ಪ್ರಮಾಣದಲ್ಲಿ ಕೂಡಿಡಬೇಕಾದ ಅನಿವಾರ್ಯತೆ ಉಂಟಾಗಿದೆ. ಹೀಗಾಗಿ, ವೈದ್ಯರ ಆಶ್ರಯವಿಲ್ಲದೆ ಜೀವನವಂತೂ ಅಸಾಧ್ಯ. ಈ ದುಬಾರಿ ದುನಿಯಾದಲ್ಲಿ ಆಸ್ಪತ್ರೆ ವೆಚ್ಚವೂ ಹೆಚ್ಚಿದೆ. ಅದಕ್ಕೆಂದೇ ಈಗ ಹಲವು ರೀತಿಯ ಆರೋಗ್ಯ ವಿಮೆ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಶಿಕ್ಷಣ
ಇತ್ತೀಚಿನ ವರ್ರ್ಷಗಳಲ್ಲಿ ಎಲ್ಲರ ಕಿಸೆಗೆ ಕತ್ತರಿ ಬೀಳುವ ಪ್ರಮುಖ ಅಂಶವೆಂದರೆ ಶಿಕ್ಷಣ. ಈಗೀಗ ಸ್ನಾತಕೋತ್ತರ ಪದವಿ ಪಡೆಯುವದಕ್ಕಿಂತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಿಕ್ಷಣ ಪಡೆಯುವುದೇ ದುಬಾರಿಯಾಗಿದೆ. ಶಾಲೆಗಳಲ್ಲಿನ ಶುಲ್ಕವೇ ಎಲ್ಲರನ್ನೂ ದಂಗುಬಡಿಸುತ್ತದೆ. ಹೀಗಾಗಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವವರು ಶಿಕ್ಷಣಕ್ಕಾಗಿ ತಮ್ಮ ಆದಾಯದಲ್ಲಿ ಮೊತ್ತ ಕಾಯ್ದಿಡಬೇಕಾಗಿದೆ.

ವಸತಿ ಮತ್ತು ಆಹಾರ
ಪ್ರತಿಯೊಬ್ಬರಿಗೂ ಸ್ವಂತ ಸೂರು ಹೊಂದುವುದು ಆದ್ಯತೆಯ ವಿಚಾರವಾಗಿದೆ. ಸೂಕ್ತವಾದ ಹಣಕಾಸಿನ ವ್ಯವಸ್ಥೆಇರುವವರಿಗೆ ಜಮೀನು ಖರೀದಿಸಿ, ಮನೆ ಕಟ್ಟಿಕೊಳ್ಳುವುದು ಒಂದು ಸವಾಲಿನ ವಿಚಾರವೇ ಅಲ್ಲ. ಆದರೆ ಎಲ್ಲರಿಗೂ ಇಂಥ ಒಂದು ಅದೃಷ್ಟ ಬೇಕಲ್ಲ? ಅದಕ್ಕಾಗಿ ಉಳಿತಾಯ ಮಾಡಲೇಬೇಕು. ಆದರೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳಬೇಕು. ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಗೃಹ ಸಾಲ ಲಭ್ಯವಾಗುತ್ತಿರುವುದರಿಂದ ಮನೆ ಕಟ್ಟಿಕೊಳ್ಳುವ ಕನಸು ನನಸು ಮಾಡಲು ತೀರಾ ಒದ್ದಾಡುವ ಅಗತ್ಯವಿಲ್ಲ. ವಸತಿ ಜತೆಗೆ ಈಗ ಆಹಾರಕ್ಕೂ ಹೇರಳವಾಗಿ ವೆಚ್ಚ ಮಾಡಬೇಕಾಗಿದೆ. ಏಕೆಂದರೆ ಬದುಕಬೇಕಲ್ಲ!!

ಷೇರುಗಳ ಮೇಲೂ ಮಮಕಾರ
ಹೀಗಿದ್ದರೂ ಷೇರುಗಳ ಮೇಲಿನ ಪ್ರೀತಿ ಜನರಿಗೇನೂ ಕಡಿಮೆಯಾಗಿಲ್ಲ. ಆದರೆ ಬ್ಯಾಂಕ್ ಠೇವಣಿ, ಮ್ಯೂಚುವಲ್ ಫಂಡ್ ಕ್ಷೇತ್ರಗಳಲ್ಲಿ ಹೂಡಿಕೆ ಆದಷ್ಟು ಧಾರಾಳವಾಗಿ ಹೂಡಿಕೆಯಾಗಿಲ್ಲ. 10, 600 ಕೋಟಿ ಇದ್ದ ಮೊತ್ತ 27, 400 ಕೋಟಿಗೆ ತಲುಪಿದೆ. ವಿಮಾ ಕ್ಷೇತ್ರ ಮತ್ತೊಂದು ಸಾಂಪ್ರದಾಯಿಕ ಹೂಡಿಕೆ ಕ್ಷೇತ್ರ. ಆದರೆ 2011-12 ಮತ್ತು 2012-13ನೇ ಸಾಲಿಗೆ ಹೋಲಿಸಿಕೊಂಡಾಗ ಕ್ರಮವಾಗಿ 1.90 ಲಕ್ಷ ಕೋಟಿಯಿಂದ 1.80 ಲಕ್ಷ ಕೋಟಿಗೆ ಇಳಿಕೆಯಾಗಿದೆ. ವಿಮಾ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ ಮತ್ತು ಇತರ ಮಾರುಕಟ್ಟೆ ಸಂಬಂಧಿ ವಿಚಾರಗಳಿಂದಾಗಿ ಈ ಕ್ಷೇತ್ರದಲ್ಲಿ ಹೂಡಿಕೆ ಕೊಂಚ ಮಂಕಾಗಿದೆ ಎಂದು ವ್ಯಾಖ್ಯಾನಿಸಬಹುದು. ಹೀಗಾಗಿ ಕಳೆದ ಎರಡು ಹಣಕಾಸು ವರ್ಷಗಳಲ್ಲಿ ವಿಮಾ ಕಂಪನಿಗಳು ಸಂಗ್ರಹಿಸಿದ ಪ್ರೀಮಿಯಂ ಮೊತ್ತದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ನೋ ರಿಸ್ಕ್ ಪ್ಲೀಸ್
ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವಂತೆ ಹಣಕಾಸು ಸಲಹೆಗಾರರ ಹತ್ತಿರ ಬರುವವರು ಕೇಳುವುದು ಒಂದೇ ಮಾತು- 'ಹೆಚ್ಚು ಲಾಭ ಆಗದಿದ್ದರೂ ಚಿಂತೆಯಿಲ್ಲ. ಹೂಡಿಕೆ ಮಾಡಿದ ಹಣ ಬರುವ ಖಾತರಿ ನೀಡುವ ಯೋಜನೆಗಳನ್ನು ಹೇಳಿ'. ಏಕೆಂದರೆ, ಸದ್ಯದ ದಿನಮಾನಗಳಲ್ಲಿ ಹಣಕಾಸು ಕ್ಷೇತ್ರದ ಮಾರುಕಟ್ಟೆ ಏರಿಳಿತ ಸಾಮಾನ್ಯ. ಹೀಗಾಗಿ ಹೆಚ್ಚು ಲಾಭದ ಆಸೆಗೆ ಬಿದ್ದು ಇದ್ದ ಹಣವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ತಂದುಕೊಳ್ಳುವುದು ಯಾಕೆ ಎನ್ನುವುದು ಹೆಚ್ಚಿನ ಜನರ ವಾದ.

ಬ್ಯಾಂಕ್ ಠೇವಣಿಯೇ ಪ್ರೀತಿ
ಹೇಳಿ ಕೇಳಿ, ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವುದೆಂದರೆ ಭಾರತೀಯರಿಗೆ ಅತಿ ಪ್ರಿಯ ವಿಚಾರ. ಏಕೆಂದರೆ, ದೇಶದ ಹೆಚ್ಚಿನ ಹಣಕಾಸು ವ್ಯವಹಾರ ನಡೆಯುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ. ಇದರಿಂದಾಗಿ ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳಲ್ಲಿ ಇರಿಸಲಾಗಿದ್ದ ಠೇವಣಿ ಮೊತ್ತ ಶೇ.12ರಷ್ಟು ಏರಿಕೆಯಾಗಿದೆ. ಅಂದರೆ ರು. 6.2 ಲಕ್ಷ ಕೋಟಿಗೆ ತಲುಪಿದೆ. ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ 2011-12ನೇ ಹಣಕಾಸು ವರ್ಷದಲ್ಲಿದ್ದದ್ದು ರು. 4,500 ಕೋಟಿ. ಆದರೆ, 2012-13ನೇ ಹಣಕಾಸು ವರ್ಷದಲ್ಲಿ ಆ ಮೊತ್ತ ರು. 34,400 ಕೋಟಿಗೆ ಹೆಚ್ಚಿತು.
-ಸದಾಶಿವ ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement